ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದಕ್ಕೆ ನಾವು ಸಾಯಬೇಕೇ ಬದುಕಬೇಕೇ ಎಂದು ಕೇಳಿದ್ದಕ್ಕೆ ಆಹಾರ ಮತ್ತು ನಾಗರೀಕ ಖಾತೆ ಸಚಿವ ಉಮೇಶ್ ಕತ್ತಿ ಅವರು, ಸಾಯಿ ಎಂದು ಹೇಳಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದು, ಇತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಇತರೆ ನಾಯಕರು ಉಮೇಶ್ ಕತ್ತಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅಕ್ಕಿ ಕೇಳಿದವರಿಗೆ ಸಾಯಲು ಹೇಳಿದ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಅಚ್ಚರಿಪಡಬೇಕಾಗಿಲ್ಲ. ಅನ್ನಭಾಗ್ಯ,ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಯೋಜನೆಗಳನ್ನು ರದ್ದುಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಅಭಿಪ್ರಾಯವನ್ನೇ ಕತ್ತಿ ಹೇಳಿದ್ದಾರೆ. ಹಾಗಿಲ್ಲದಿದ್ದರೆ ಮೊದಲು ಈ ಬಡವರ ವಿರೋಧಿ ಸಚಿವನನ್ನು ಕಿತ್ತು ಹಾಕಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಅಕ್ಕಿ ಕೇಳಿದ ರೈತನಿಗೆ ಆಹಾರ ಸಚಿವರು ಕೊಟ್ಟ ಉತ್ತರ ಬಿಜೆಪಿ ಸರ್ಕಾರದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಂಥವರು ಸಚಿವರಾಗಿ ಮುಂದುವರಿಯಬೇಕೆ ಎಂದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೇ ಇದಕ್ಕೆ ಉತ್ತರಿಸಬೇಕು. ಸಿಎಂ ಯಡಿಯೂರಪ್ಪ ಅವರು ಕೂಡಲೇ ಸಚಿವ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿದ್ದಾರೆ. ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವುದು ಅತ್ಯಂತ ಅಮಾನವೀಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಉಮೇಶ್ ಕತ್ತಿ ಅವರು, ಸಾಯಿ ಎಂಬ ಹೇಳಿಕೆ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡುತ್ತೇವೆ. ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಮೇಶ್ ಕತ್ತಿಯವರ ಹೇಳಿಕೆ ಮಾಧ್ಯಮದಲ್ಲಿ ಪ್ರಚಾರವಾಗುತ್ತಿದ್ದಂತೆ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ರೈತರಿಗೆ, ಫಲಾನುಭವಿಗಳಿಗೆ ಹಾಗು ರಾಜ್ಯದ ಜನತೆಗೆ ನೋವಾಗಿದ್ದರೆ ಕ್ಷಮೆಕೇಳುತ್ತೇನೆಂದು ಕ್ಷಮೆ ಕೇಳಿದ್ದಾರೆ.