ರಾಜ್ಯ ಬಿಜೆಪಿ ಹೊಸ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆ ಆರಂಭವಾಗಿದೆ. ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದಿಳಿದಿದ್ದಾರೆ.ಸ್ವತಃ ಅವರೇ ಹೇಳಿರುವಂತೆ ವರಿಷ್ಠರ ಮುಂದೆ ಕೆಲವು ಹೆಸರುಗಳಿವೆ. ಆ ಪೈಕಿ ಒಬ್ಬರನ್ನು ಆಯ್ಕೆ ಮಾಡಲು ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುವುದು.
ಕಳೆದ ಎರಡೂವರೆ ಮೂರು ತಿಂಗಳುಗಳಿಂದ ಪರ್ಯಾಯ ನಾಯಕ ಯಾರು ಎಂಬ ಪ್ರಶ್ನೆ, ಬಿಜೆಪಿಯ ನಾಯಕತ್ವ ಬದಲಾವಣೆಯ ಕೂಗಿನೊಂದಿಗೇ ಮತ್ತೆ ಮತ್ತೆ ಕೇಳಿಬರುತ್ತಲೇ ಇದೆ.ಇದೀಗ ಬಿಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಸಂಭಾವ್ಯ ಮುಖ್ಯಮಂತ್ರಿ ಕುರಿತ ಚರ್ಚೆಗಳು ಇನ್ನಷ್ಟು ಬಿರುಸಾಗಿದೆ. ಜಾತಿವಾರು, ಪ್ರದೇಶವಾರು ಕೋಟಾಗಳಡಿ ಹಲವು ಹೆಸರುಗಳು ಓಡಾಡುತ್ತಿವೆ.

ಮುಖ್ಯವಾಗಿ ರಾಜ್ಯದ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎನಿಸಿಕೊಂಡಿರುವ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆಯಿಂದಾಗಿ ಆ ಸಮುದಾಯ ಬಿಜೆಪಿಯ ವರಿಷ್ಠರ ನಿರ್ಧಾರ ವಿರುದ್ಧ ತಿರುಗಿ ಬೀಳಬಹುದು. ಅದು ರಾಜ್ಯ ಬಿಜೆಪಿಗೆ ಭರಿಸಲಾಗದ ಪೆಟ್ಟು ಕೊಡಬಹುದು ಎಂಬ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಅದೇ ಸಮುದಾಯದಿಂದ ಮುಂದಿನ ಸಿಎಂ ಆರಿಸಬಹುದು ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿಬರುತ್ತಿವೆ.
Also Read: ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿ.ಎಲ್ ಸಂತೋಷ್?
ಹಾಗಾಗಿ ವೀರಶೈವ ಲಿಂಗಾಯತ ಸಮುದಾಯದ ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಜಗದೀಶ್ ಶೆಟ್ಟರ್ ಮತ್ತು ಶಿವಕುಮಾರ ಉದಾಸಿ ಮುಂತಾದವರ ಹೆಸರುಗಳು ಚಾಲ್ತಿಯಲ್ಲಿವೆ. ಆದರೆ, ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ತಮ್ಮ ಹೆಸರು ಭಾವಿ ಸಿಎಂ ಪಟ್ಟಿಯಲ್ಲಿರುವುದು ಕೇವಲ ಊಹಾಪೋಹ. ತಾವು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಮುಂದಿನ ಸಿಎಂ ಯಾರು ಎಂಬುದನ್ನು ನಿರ್ಧರಿಸುವುದು ಪಕ್ಷದ ವರಿಷ್ಠರು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಶಿವಕುಮಾರ ಉದಾಸಿ ಮತ್ತು ಜಗದೀಶ್ ಶೆಟ್ಟರ್ ಹೆಸರು ಪ್ರಸ್ತಾಪವಾಗಿದ್ದರೂ ಬೇರೆ-ಬೇರೆ ಕಾರಣಕ್ಕಾಗಿ ಆ ಇಬ್ಬರ ಆಯ್ಕೆಯ ಸಾಧ್ಯತೆಗಳು ಕ್ಷೀಣ ಎನ್ನಲಾಗಿದೆ. ಹಾಗಾಗಿ ಅಂತಿಮವಾಗಿ ಯಡಿಯೂರಪ್ಪ ವಿರೋಧಿ ಬಣದ ನೇತೃತ್ವವಹಿಸಿ ಮತ್ತೆ ಮತ್ತೆ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಚರ್ಚಿಸಿ ಸುದ್ದಿಯಾಗಿದ್ದ ಆರೆಸ್ಸೆಸ್ ಮತ್ತು ಸಂಘಪರಿವಾರ ಹಿನ್ನೆಲೆಯ ಅರವಿಂದ ಬೆಲ್ಲದ ಮತ್ತು ಅತ್ತ ಯಡಿಯೂರಪ್ಪ ಬಣದೊಂದಿಗೂ, ಇತ್ತ ಸಂಘಪರಿವಾರದೊಂದಿಗೂ ಸಮಾನ ನಂಟು ಹೊಂದಿರುವ ಉದ್ಯಮಿ ಮುರುಗೇಶ್ ನಿರಾಣಿ ಹೆಸರುಗಳು ಮುಂಚೂಣಿಯಲ್ಲಿವೆ.

ಇನ್ನು ಬ್ರಾಹ್ಮಣ ಸಮುದಾಯದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರುಗಳು ಕೇಳಿಬರುತ್ತಿವೆ. ಆ ಪೈಕಿ ಕಾಗೇರಿ ಸಾಧ್ಯತೆಗಳು ತುಂಬಾ ಕಡಿಮೆ. ಹಾಗಾಗಿ ಬಿಜೆಪಿ ಬಿಎಸ್ ವೈ ವಿರೋಧಿ ಬಣದ ಸೂತ್ರದಾರ ಎಂದೇ ಗುರುತಿಸಿಕೊಂಡಿರುವ ಮತ್ತು ಹೈಕಮಾಂಡ್ ಭಾಗವಾಗಿರುವ ಬಿಎಲ್ ಸಂತೋಷ್ ಹೆಸರು ಹೆಚ್ಚು ಚಾಲ್ತಿಯಲ್ಲಿದೆ.
Also Read: ಲಿಂಗಾಯತರ ಕಡೆಗಣಿಸಿ ಸಿಎಂ ಪಟ್ಟ ಇತರೆ ಸಮುದಾಯಕ್ಕೆ ಕಟ್ಟುವ ಧೈರ್ಯ ಕೇಂದ್ರ ಬಿಜೆಪಿಗೆ ಇದೆಯೇ.!?
ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಅಪ್ತರಾಗಿರೋದ್ರಿಂದ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಖಾತೆ ಹೊಂದಿರುವುದರಿಂದ ಅವರು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ಇನ್ನೂ ಒಕ್ಕಲಿಗ ಸಮುದಾಯದ ಸಿ ಟಿ ರವಿ, ಡಾ. ಅಶ್ವಥ್ ನಾರಾಯಣ, ಅರ್ ಅಶೋಕ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಅಶೋಕ್ ಯಡಿಯೂರಪ್ಪ ಬಣದವರು ಅನ್ನುವುದನ್ನು ಹೊರತುಪಡಿಸಿ ಉಳಿದ ಯಾವುದೇ ಅರ್ಹತೆಗಳು ಇಲ್ಲ.
ಇನ್ನು ಅಶ್ವಥ್ ನಾರಾಯಣ್ ಅವರು ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ರೀತಿಯ ಹಿನ್ನೆಲೆಯಲ್ಲಿ ಗಮನಿಸಿದರೆ ಅವರಿಗೆ ಸಿಎಂ ರಾಜ್ಯದ ಅಧಿಕಾರದ ಸೂತ್ರವನ್ನು ನಿಭಾಯಿಸುವ ಶಕ್ತಿ ಇದೆಯೇ ಎಂಬ ಅನುಮಾನ ಸ್ವತಃ ಹೈಕಮಾಂಡ್ ಇದೆ ಎನ್ನಲಾಗಿದೆ. ಹಾಗಾಗಿ ಒಕ್ಕಲಿಗ ಕೋಟಾದಲ್ಲಿ ಅಂತಿಮವಾಗಿ ಸಿಟಿ ರವಿ ಹೆಸರು ಮುಂಚೂಣಿಯಲ್ಲಿದೆ. ಆದರೆ, ಅವರ ಸಂಘಟನಾ ಚತುರತೆ, ಮಾತುಗಾರಿಕೆ,..ಇದೆಲ್ಲ ಸರಿ. ಆದರೆ ಮುಖ್ಯಮಂತ್ರಿಯಂತಹ ಸ್ಥಾನದಲ್ಲಿ ಇರುವಾಗ ಒಂದಿಷ್ಟು ಪ್ರಬುದ್ಧತೆ ಅಗತ್ಯ. ಕರ್ನಾಟಕದಂತಹ ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ಕನಿಷ್ಠ ಘನತೆಯ ವ್ಯಕ್ತಿತ್ವ ಬೇಕಾಗುತ್ತೆ. ಅನ್ನೋ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಈ ಮೂವರು ಒಕ್ಕಲಿಗ ಸಮುದಾಯದ ಅಯ್ಕೆಗಳ ವಿಷಯದಲ್ಲಿ ಹಲವು ಮಿತಿಗಳಿವೆ.
Also Read: ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ; ಶ್ರೀರಾಮುಲು, ರಮೇಶ್ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ
ಒಟ್ಟಾರೆ ಬಿಜೆಪಿಯ ಆಂತರಿಕ ವಲಯದ ಚರ್ಚೆಗಳ ಪ್ರಕಾರ, ಈವರಗೆ ಯಡಿಯೂರಪ್ಪ ಅವರ ಸ್ಥಾನವನ್ನು ತುಂಬುವ ಹೆಸರುಗಳು ಬರುತ್ತಿರುವುದು ರಾಜ್ಯದ ಪ್ರಮುಖ ಮೂರು ಪ್ರಭಾವಿ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯಗಳಿಂದಲೇ. ಆ ಮೂರು ಸಮುದಾಯ ಹೊರತುಪಡಿಸಿ ಮತ್ತೊಂದು ಸಮುದಾಯದ ಯಾವ ನಾಯಕರ ಹೆಸರೂ ಕೇಳಿಬರುತ್ತಿಲ್ಲ. ಕೆಎಸ್ ಈಶ್ವರಪ್ಪ ಅವರಂತಹ ಬಹಳ ಹಿರಿಯ ನಾಯಕರು, ಸ್ವತಃ ಬಿಎಸ್ ಯಡಿಯೂರಪ್ಪ ಅವರ ಹೆಗಲಿಗೆ ಹೆಗಲು ಕೊಟ್ಟು ಪಕ್ಷವನ್ನು ಕಟ್ಟಿದಂತಹ ನಾಯಕರು ಬಿಜೆಪಿಯಲ್ಲಿದ್ದರೂ ಅವರ ಹೆಸರು ಮುಖ್ಯಮಂತ್ರಿಗಳ ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಇದು ಹಿಂದುಳಿದ ವರ್ಗಗಳ ವಿಷಯದಲ್ಲಿ ಬಿಜೆಪಿ ಮತ್ತು ಅದರ ವರಿಷ್ಠರು ಯೋಚಿಸುವ ರೀತಿಗೆ ಒಂದು ನಿದರ್ಶನ.ಈ ನಡುವೆ, ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಭಾವಿ ಮುಖ್ಯಮಂತ್ರಿ ಕುರಿತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರ ನಡುವಿನ ವಾಗ್ವಾದದ ವೇಳೆ ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತಿತರು ದಲಿತ ಸಿಎಂ ವಿಷಯವನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ಸಿಗೆ ದಲಿತರು ಕೇವಲ ವೋಟ್ ಬ್ಯಾಂಕ್ ಅಲ್ಲ; ಅವರ ಬಗ್ಗೆ ನಿಜವಾದ ಕಾಳಜಿ ಇದೆ ಅನ್ನೋದಾದ್ರೆ ನಿಮ್ಮ ಮುಂದಿನ ಸಿಎಂ ದಲಿತ ಸಮುದಾಯದವರು ಎಂದು ಘೋಷಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಕಟೀಲು ಸವಾಲು ಹಾಕಿದ್ದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಡಾ ಜಿ ಪರಮೇಶ್ವರ್ ಮತ್ತು ಕೆ ಎಚ್ ಮುನಿಯಪ್ಪ ಅವರ ಪ್ರಸ್ತಾಪದೊಂದಿಗೆ ದಲಿತ ಸಿಎಂ ವಿಷಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಸಾಕಷ್ಟು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. “ನಾವು ಮುಂದಿನ ಬಾರಿ ಅಧಿಕಾರಕ್ಕೆ ಬಂದಲ್ಲಿ ಯಾರನ್ನ ಸಿಎಂ ಮಾಡಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತೆ. ಆದರೆ ಈಗ ನಿಮ್ಮಲ್ಲಿ ನಾಯಕತ್ವ ಬದಲಾವಣೆಯ ಕೂಗು ಭುಗಿಲೆದ್ದಿದೆ. ನೀವು ನಿಮ್ಮಲ್ಲಿನ ದಲಿತ ನಾಯಕರನ್ನು ಯಾಕೆ ಮುಖ್ಯಮಂತ್ರಿ ಮಾಡಬಾರದು ಕಟೀಲ್ ಅವರೇ?” ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದ್ದರು.
Also Read: ಹೊಸ ಸಿಎಂ ಘೋಷಣೆಗೆ ಬಿಜೆಪಿ ವರಿಷ್ಠರ ಮೀನಾಮೇಷ ಏಕೆ?
ಇದೀಗ ನಾಯಕತ್ವ ಬದಲಾವಣೆಯ ಚರ್ಚೆಯ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಹಾಗಾಗಿ ಈಗ ಬಿಜೆಪಿ ಹೊಸ ಮುಖ್ಯಮಂತ್ರಿ ಅಭ್ಯರ್ಥಿಯ ತಲಾಶ್ ನಲ್ಲಿ ತೊಡಗಿದೆ. ಇಂತಹ ಹೊತ್ತಲ್ಲಿ ಆ ಪಕ್ಷದಲ್ಲಿ ಈಗಾಗಲೇ ಉಪಮುಖ್ಯಮಂತ್ರಿಯಾಗಿರುವ ಹಿರಿಯ ನಾಯಕ ಗೋವಿಂದ ಕಾರಜೋಳ, ಸಚಿವರಾಗಿರುವ ಶ್ರೀರಾಮುಲು, ಅರವಿಂದ್ ಲಿಂಬಾವಳಿ ಸೇರಿದಂತೆ ಹಲವು ದಲಿತ ನಾಯಕರು ಇದ್ದಾರೆ. ಆದರೆ ಸಂಭಾವ್ಯ ಸಿಎಂ ಪಟ್ಟಿಯಲ್ಲಿ ಆ ಯಾವ ದಲಿತ ನಾಯಕರ ಯಾವ ಹೆಸರೂ ಕಾಣಿಸಿಕೊಂಡಿಲ್ಲ ಯಾಕೆ?
ಗೋವಿಂದ ಕಾರಜೋಳ ಅನುಭವ ಮತ್ತು ಹಿರಿತನದ ದೃಷ್ಟಿಯಲ್ಲಿ ಒಬ್ಬ ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ನಾಯಕರಾದರೆ, ಅರವಿಂದ ಲಿಂಬಾವಳಿ ಅನುಭವದ ಜೊತೆಗೆ ಸಾಕಷ್ಟು ತಿಳಿವಳಿಕೆ, ರಾಜಕೀಯ ಪ್ರಜ್ಞೆ ಇರುವ ನಾಯಕ ಕೂಡ. ಇನ್ನು ಶ್ರೀರಾಮುಲು ಸಚಿವರಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಜೊತೆಗೆ ಒಂದು ದೊಡ್ಡ ಸಮುದಾಯ ಅವರ ಬೆನ್ನಿಗಿದೆ.
Also Read: ನಾಯಕತ್ವ ಬದಲಾವಣೆ; ಲಿಂಗಾಯತರು, ಬ್ರಾಹ್ಮಣರ ನಡುವೆ ತೀವ್ರ ಪೈಪೋಟಿ; ಚುನಾವಣೆ ಅಸ್ತ್ರವಾಗಿ ದಲಿತ ಸಿಎಂ
ದಲಿತರು ಮತ್ತು ಹಿಂದುಳಿದ ಸಮುದಾಯಗಳು ತನಗೆ ಕೇವಲ ಓಟ್ ಬ್ಯಾಂಕ್ ಮೇಲಾಟದ ದಾಳಗಳಲ್ಲ. ಬಿಜೆಪಿ ಎಂಬುದು ಬ್ರಾಹ್ಮಣ, ಲಿಂಗಾಯಿತ ಮತ್ತು ಒಕ್ಕಲಿಗ ಮುಂತಾದ ಪ್ರಭಾವಿ ಸಮುದಾಯಗಳ ಪಕ್ಷ ಮಾತ್ರವಲ್ಲ ಅನ್ನೋದನ್ನು ಸಾಬೀತು ಮಾಡಲಿಕ್ಕಾದರೂ ಒಬ್ಬ ದಲಿತ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುವ ಮೂಲಕ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಅವಕಾಶ ಈಗ ಬಿಜೆಪಿಯ ಮುಂದಿದೆ.ಆದರೆ, ಬಿಜೆಪಿಯ ಹೈಕಮಾಂಡ್ ಮತ್ತು ಅದರ ಸೂತ್ರಧಾರನಾದ ಆರೆಸ್ಸೆಸ್ ನಿಜವಾಗಿಯೂ ಈ ದೇಶದ ಹಿಂದುಳಿದವರು, ದಲಿತರನ್ನು ಅಧಿಕಾರದ ಕುರ್ಚಿಯಲ್ಲಿ ಕೂರಿಸಲು, ಅವರ ಕೈಗೆ ಅಧಿಕಾರದ ಸೂತ್ರ ಕೊಡಲು ಸಿದ್ಧವಿದೆಯೇ ಅನ್ನೋದು ಪ್ರಶ್ನೆ.ಆ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಬಿಜೆಪಿ ಎಂಬುದು ಬ್ರಾಹ್ಮಣರು, ಲಿಂಗಾಯತರು ಮತ್ತು ಒಕ್ಕಲಿಗರಂಥ ಪ್ರಭಾವಿ ಸಮುದಾಯಗಳ ಪಕ್ಷವೇ ಅಥವಾ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಶೂದ್ರರು ದಲಿತರಿಗೆ ಅಧಿಕಾರ ಸಮಪಾಲು ಸಿಗುತ್ತದೆಯೇ ಎಂಬುದಕ್ಕೆ ಆ ಐತಿಹಾಸಿಕ ಕ್ಷಣ ಸಾಕ್ಷಿಯಾಗಲಿದೆ.