ಬಿಜೆಪಿ ವಕ್ತಾರರಂತೆ ಎಚ್ ಡಿಕೆ ಕಾಂಗ್ರೆಸ್ ವಿರುದ್ಧ ಮುಗಿಬಿದ್ದದ್ದು ಯಾಕೆ?

ರಾಜ್ಯ ಬಿಜೆಪಿ ಸರ್ಕಾರದ ಕೋವಿಡ್ ಪರಿಸ್ಥಿತಿ ನಿರ್ವಹಣೆ, ಲಸಿಕೆ ಅಭಾವ, ಕೋವಿಡ್ ಲಾಕ್ ಡೌನ್ ಪರಿಹಾರ ಪ್ಯಾಕೇಜ್ ಸೇರಿದಂತೆ ಹಲವು ವಿಷಯಗಳಲ್ಲಿ ಕಳೆದ ಒಂದು ವಾರದಿಂದ ಭಾರೀ ವಾಕ್ಸಮರವೇ ನಡೆಯುತ್ತಿದೆ.

ಕುತೂಹಲದ ವಿಷಯವೆಂದರೆ, ಈ ವಾಕ್ಸಮರ ನಡೆಯುತ್ತಿರುವುದು ನಿರೀಕ್ಷೆಯಂತೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಅಲ್ಲ! ಬದಲಾಗಿ, ಎರಡು ಪ್ರತಿಪಕ್ಷಗಳ ನಡುವೆ ಈ ವಾಕ್ಸಮರ ನಡೆಯುತ್ತಿದೆ ಮತ್ತು ಆ ಪೈಕಿ ಪ್ರಾದೇಶಿಕ ಪಕ್ಷ ಆಡಳಿತರೂಢ ಬಿಜೆಪಿ ವಕ್ತಾರನಂತೆ ಪ್ರಮುಖ ಪ್ರತಿಪಕ್ಷವಾದ ರಾಷ್ಟ್ರೀಯ ಪಕ್ಷದ ವಿರುದ್ಧ ಭಾರೀ ವಾಗ್ದಾಳಿ ನಡೆಸುತ್ತಿದೆ ಎಂಬುದು!

ವಿಶೇಷವಾಗಿ ಲಸಿಕೆಯ ಅಭಾವದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಕಳೆದ ಕೆಲವು ದಿನಗಳಿಂದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಿರಂತರ ಟೀಕೆ ಮತ್ತು ಪ್ರತಿಭಟನೆ ನಡೆಸುತ್ತಿದೆ. ಲಸಿಕೆ ನೀಡಿಕೆಯ ವಿಷಯದಲ್ಲಿ ಸರಿಯಾದ ಯೋಜನೆ ಮತ್ತು ಕಾರ್ಯಸೂಚಿಯೇ ಇಲ್ಲದೆ, ವಿವಿಧ ವಯೋಮಾನದವರಿಗೆ ಒಂದರ ಮೇಲೊಂದರಂತೆ ದಿಢೀರ್ ಲಸಿಕೆ ಅಭಿಯಾನಗಳನ್ನು ಆರಂಭಿಸಿದ ಬಿಜೆಪಿ ಸರ್ಕಾರ, ಜನರನ್ನು ಸತಾಯಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ, ಕೋವಿಡ್ ಪ್ರಕರಣಗಳು ರಾಜ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ವರದಿಯಾಗುತ್ತಿರುವ ಗುಜರಾತ್ ಮತ್ತಿತರ ರಾಜ್ಯಗಳಿಗೆ ಭಾರೀ ಪ್ರಮಾಣದ ಲಸಿಕೆ ನೀಡಿ, ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಕರ್ನಾಟಕಕ್ಕೆ ತೀರಾ ಕಡಿಮೆ ಲಸಿಕೆ ನೀಡಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಕೃಷ್ಣಭೈರೇಗೌಡ ಸೇರಿದಂತೆ ಹಲವರು ಬಿಜೆಪಿ ಆಡಳಿತದ ವಿರುದ್ಧ ತೀವ್ರ ಟೀಕೆ ಮಾಡಿದ್ದರು.

ಪ್ರತಿಪಕ್ಷಗಳ ಟೀಕೆಗೆ ಸಹಜವಾಗೇ ಆಡಳಿತ ಪಕ್ಷದ ಕಡೆಯಿಂದ ಪ್ರತಿದಾಳಿಗಳೂ ನಡೆದಿದ್ದವು. ಲಸಿಕೆಯ ವಿಷಯದಲ್ಲಿ ಆರಂಭದಲ್ಲಿ ಅಪಪ್ರಚಾರ ನಡೆಸಿ ಜನರನ್ನು ದಿಕ್ಕುತಪ್ಪಿಸಿದ್ದ ಕಾಂಗ್ರೆಸ್, ಇದೀಗ ಲಸಿಕೆಗಾಗಿ ಹೋರಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ನಾಯಕರ ವಿರುದ್ದ ವ್ಯಂಗ್ಯವಾಡಿದ್ದರು. ಲಸಿಕೆ ಅಭಾವ ದೇಶಾದ್ಯಂತ ಇದೆ, ರಾಜ್ಯಕ್ಕೆ ಅಗತ್ಯ ಲಸಿಕೆ ನೀಡುವ ಭರವಸೆ ಕೇಂದ್ರ ಸರ್ಕಾರ ನೀಡಿದೆ ಎಂದೂ ಕೇಂದ್ರದ ಪರ ರಾಜ್ಯ ಬಿಜೆಪಿ ನಾಯಕರು ವಕಾಲತು ವಹಿಸಿದ್ದರು ಕೂಡ!

ಲಸಿಕೆಯಂತಹ ಕರೋನಾ ವಿರುದ್ಧದ ಜೀವ ರಕ್ಷಣೆಯ ನಿಟ್ಟಿನಲ್ಲಿ ಏಕಮಾತ್ರ ಪ್ರಬಲ ಅಸ್ತ್ರದ ವಿಷಯದಲ್ಲಿ ಹೀಗೆ ಆಡಳಿತ ಪಕ್ಷದ ಯೋಜನಾರಹಿತ ವರಸೆ ಮತ್ತು ಅದನ್ನು ಟೀಕಿಸುವ ಪ್ರತಿಪಕ್ಷದ ನಡೆಗಳು ಜನಹಿತ ಮತ್ತು ರಾಜಕಾರಣದ ಸಹಜ ಬೆಳವಣಿಗೆಗಳೇ. ಅದರಲ್ಲಿ ವಿಪರೀತವಾಗಲೀ, ಅಸಹಜವಾಗಲೀ ಇಲ್ಲ. ಆದರೆ, ಈ ವಿಷಯದಲ್ಲಿ ಸರ್ಕಾರದ ಲೋಪಗಳನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ಆಡಳಿತ ಪಕ್ಷಕ್ಕಿಂತ ತೀವ್ರ ರೀತಿಯಲ್ಲಿ ದಾಳಿ ನಡೆಸುತ್ತಿರುವ ಮತ್ತೊಂದು ಪ್ರತಿಪಕ್ಷ ಜೆಡಿಎಸ್ ನಡೆ ಮಾತ್ರ ತೀರಾ ಕುತೂಹಲ ಕೆರಳಿಸಿದೆ!

“ಲಸಿಕೆಯ ವಿಷಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ಮತ್ತು ವಾಗ್ದಾಳಿ ನಡೆಸುತ್ತಿರುವಾಗ, ಮತ್ತೊಂದು ಪ್ರತಿಪಕ್ಷವಾದ ಜೆಡಿಎಸ್ ಆಡಳಿತ ಪಕ್ಷದ ಪರ ವಕಾಲತು ವಹಿಸಿ ಕಾಂಗ್ರೆಸ್ ವಿರುದ್ಧವೇ ನಿರಂತರ ವಾಗ್ದಾಳಿ ನಡೆಸುತ್ತಿರುವುದು ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾಕಷ್ಟು ಬಗೆಯ ವ್ಯಾಖ್ಯಾನಗಳಿಗೂ ಕಾರಣವಾಗಿದೆ.

ಲಸಿಕೆಯ ವಿಷಯದಲ್ಲಿ ಈ ಮೊದಲು ಅಪಪ್ರಚಾರ ಮಾಡಿ, ಜನರು ಲಸಿಕೆ ಪಡೆಯದಂತೆ ಮಾಡಿದ ಕಾಂಗ್ರೆಸ್, ಈಗ ಲಸಿಕೆ ಕೊರತೆ ಎಂದು ಪ್ರತಿಭಟನೆಯ ನಾಟಕ ಮಾಡುತ್ತಿದೆ. ಕಾಂಗ್ರೆಸ್ ಅಪಪ್ರಚಾರದಿಂದಲೇ ಜನ ಲಸಿಕೆಯಿಂದ ದೂರ ಉಳಿದರು. ಲಸಿಕೆ ಪಡೆಯಲು ಯಾರೂ ಮುಂದೆ ಬರದೇ ಇದ್ದುದರಿಂದ ಲಸಿಕೆ ಉತ್ಪಾದಕರು ಲಸಿಕೆಗಳನ್ನು ಬೇರೆ ದೇಶಗಳಿಗೆ ಮಾರಿದರು. ಹಾಗಾಗಿಯೇ ದೇಶದ ಜನ ಸಂಕಷ್ಟಕ್ಕೆ ಸಿಲುಕಿದರು. ಈಗ ಅದೇ ಕಾಂಗ್ರೆಸ್ ಲಸಿಕೆಗಾಗಿ ಕೋವಿಡ್ ನಡುವೆ ಬೀದಿ ಹೋರಾಟದ ನಾಟಕ ಮಾಡುತ್ತಿದೆ” ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟ್ವೀಟ್ ಸಮರಕ್ಕೆ ಚಾಲನೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಜನರೆಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು ಎಂದು ಪ್ರಧಾನಿ ಮೋದಿಯವರಿಗೆ ನಿಮ್ಮ ಪಕ್ಷದ ಎಚ್ ಡಿ ದೇವೇಗೌಡರು ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಪತ್ರ ಬರೆದಿದ್ದಾರೆ. ಜನಪರ ರಾಜಕಾರಣವೆಂದರೆ ಏನು ಎಂದು ದೇವೇಗೌಡರನ್ನು ನೋಡಿ ಕಲಿಯಿರಿ ಎಂಬರ್ಥದಲ್ಲಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದರು.

ಆ ಬಳಿಕ ಕೂಡ ನಿರಂತರವಾಗಿ ಕಳೆದ ಒಂದು ವಾರದಿಂದ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ಟ್ವೀಟ್ ಸಮರ ಮುಂದುವರಿದಿದ್ದು, ಸಿದ್ದರಾಮಯ್ಯ ಬಿಜೆಪಿಯ ಕೋವಿಡ್ ನಿರ್ವಹಣೆ ವೈಫಲ್ಯ, ಲಸಿಕೆ ವೈಫಲ್ಯ, ಲಾಕ್ ಡೌನ್ ಪರಿಹಾರ ಪ್ಯಾಕೇಜ್ ಲೋಪಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಜೆ ಡಿಎಸ್ ನಾಯಕ ಕುಮಾರಸ್ವಾಮಿ ಅವರು, ಅವರ ಟ್ವೀಟ್ ಗಳಿಗೆ ಪ್ರತಿಯಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಕೋವಿಡ್ ನಿರ್ವಹಣೆಯ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಎಡವಿ, ಚುನಾವಣಾ ರ್ಯಾಲಿಗಳಂತಹ ಸ್ವಯಂಕೃತ ಅಪರಾಧಗಳನ್ನು ಎಸಗಿ ರಾಜ್ಯದ ಜನತೆಯ ಜೀವ ಮತ್ತು ಜೀವನ ಎರಡನ್ನೂ ಅಪಾಯಕ್ಕೆ ಸಿಲುಕಿಸಿರುವ ಸರ್ಕಾರದ ಹೊಣೆಗೇಡಿತನವನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷ, ಅದರಲ್ಲೂ ಕನ್ನಡಿಗರ ಪರ ರಾಜಕಾರಣ ಮಾಡುವ ಮಾತನಾಡುವ ಪ್ರಾದೇಶಿಕ ಪಕ್ಷ ಜೆಡಿಎಸ್, ಹೀಗೆ ಆಡಳಿತರೂಢ ಬಿಜೆಪಿಯ ವಕ್ತಾರನಂತೆ ಅದರ ಪರ ವಕಾಲತು ವಹಿಸಿ ಕಾಂಗ್ರೆಸ್ ನಾಯಕರ ವಿರುದ್ಧದ ತನ್ನ ರಾಜಕೀಯ ಸೇಡನ್ನು ತೀರಿಸಿಕೊಳ್ಳುತ್ತಿರುವುದು ವಿಪರ್ಯಾಸಕರ.

ಆದರೆ, ಕುಮಾರಸ್ವಾಮಿ ಅವರ ಬಿಜೆಪಿ ಮತ್ತು ಅದರ ಸರ್ಕಾರದ ಪರವಾದ ಈ ನಿರಂತರ ದಣಿವರಿಯದ ಹೋರಾಟದ ಹಿಂದೆ ಬೇರೆ ರಾಜಕೀಯ ಲೆಕ್ಕಾಚಾರಗಳಿವೆ. ತಮ್ಮದೇ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ ಅಧಿಕಾರಕ್ಕೆ ಬಂದ ಸರ್ಕಾರದ ಪರ, ಅಧಿಕಾರ ಕಳೆದುಕೊಂಡವರೇ, ಅಧಿಕಾರದ ಕಳೆದವರ ಪರ ವಕಾಲತು ವಹಿಸುತ್ತಿರುವುದರ ಹಿಂದೆ ಜೆಡಿಎಸ್ ನ ಎಂದಿನ ಅನುಕೂಲಸಿಂಧು ರಾಜಕಾರಣದ ವಾಸನೆ ಬಡಿಯುತ್ತಿದೆ. ಬಿ ಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಎಚ್ ಡಿ ಕುಮಾರಸ್ವಾಮಿ ಅವರು ಅವರ ಸರ್ಕಾರದ ಪರ ಆಗಾಗ ಬ್ಯಾಟಿಂಗ್ ಬೀಸುತ್ತಲೇ ಇದ್ದಾರೆ.

ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ದಿನವೇ ಯಡಿಯೂರಪ್ಪ ಪರ ನಿಂತಿದ್ದ ಕುಮಾರಸ್ವಾಮಿ, ನಿಮ್ಮ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಸದನದಲ್ಲೇ ಘೋಷಿಸಿದ್ದರು. ಬಳಿಕ ಕೂಡ ವಿವಾದಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯ ವಿಷಯದಲ್ಲಿರಬಹುದು, ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಷಯದಲ್ಲಿರಬಹುದು, ಮತ್ತು ಗ್ರಾಮ ಪಂಚಾಯ್ತಿ ಚುನಾವಣೆಗೆ ಮುನ್ನ ಬಿಜೆಪಿ ನಡೆಸಿದ ಗ್ರಾಮ ಸ್ವರಾಜ್ಯ ಸಮಾವೇಶಗಳ ವಿಷಯದಲ್ಲಿರಬಹುದು, ಪ್ರತಿ ನಿರ್ಣಾಯಕ ಹೊತ್ತಿನಲ್ಲೂ ಜೆಡಿಎಸ್ ನಾಯಕರು, ತಾವೊಂದು ಪ್ರತಿಪಕ್ಷ ಎಂಬುದನ್ನೂ ಮರೆತು ಆಡಳಿತ ಪಕ್ಷದ ಪರ ನಿಂತಿದ್ದು ಮಾತ್ರವಲ್ಲ; ಲಸಿಕೆ ವಿಷಯದಲ್ಲಿ ಈಗ ತೋರುತ್ತಿರುವ ವರಸೆಯಂತೆಯೇ ಸಾರ್ವಜನಿಕವಾಗಿಯೇ ಆಡಳಿತ ಪಕ್ಷದ ಪರ ವಕಾಲತು ವಹಿಸಿದ್ದರು!  

ಅಂತಹ ಎಲ್ಲಾ ನಡೆಗಳ ಹಿಂದೆ ಆಡಳಿತ ಪಕ್ಷದ ಆಂತರಿಕ ಬಣಗಳ ನಡುವಿನ ಅಧಿಕಾರದ ಹಗ್ಗಜಗ್ಗಾಟ ಮತ್ತು ಅದರ ಪರಿಣಾಮವಾಗಿ ಯಾವ ಸಂದರ್ಭದಲ್ಲಿ ಬೇಕಾದರೂ ಎದುರಾಗಬಹುದಾದ ರಾಜಕೀಯ ಅಧಿಕಾರ ಹಂಚಿಕೆಯ ಅವಕಾಶದ ಲೆಕ್ಕಾಚಾರಗಳಿವೆ. ಈಗಾಗಲೇ ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನಗಳು ತೆರೆಮರೆಯಲ್ಲಿ ಬಿರುಸುಗೊಂಡಿವೆ ಎನ್ನಲಾಗುತ್ತಿದೆ. ಅಂತಹ ಸಂದರ್ಭ ಬಂದು, ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ವಿರೋಧಿ ಬಣಗಳ ನಡುವೆ ತೀವ್ರ ಬಿಕ್ಕಟ್ಟು ತಲೆದೋರಿ ಯಾವುದೇ ಬಣ ಸಿಡಿದುಹೋದಲ್ಲಿ ಮತ್ತು ಮತ್ತೊಂದು ಬಣ ಅಧಿಕಾರ ಉಳಿಸಿಕೊಳ್ಳಲು ತಮ್ಮ ಬಾಹ್ಯ ಬೆಂಬಲ ಕೋರಿದಲ್ಲಿ, ಮತ್ತೊಂದು ಸುತ್ತಿನ ಸಮ್ಮಿಶ್ರ ಸರ್ಕಾರದ ಅವಕಾಶವಿದೆ ಎಂಬ ದೂರಗಾಮಿ ಯೋಚನೆ ಮತ್ತು ತಂತ್ರಗಾರಿಕೆಯ ಭಾಗವಾಗಿಯೇ ಜೆಡಿಎಸ್ ನಾಯಕರು ಹೀಗೆ ಬಿಜೆಪಿ ಪರ ಬ್ಯಾಟಿಂಗ್ ಬಿರುಸುಗೊಳಿಸಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ!

ಸದ್ಯ ಎಚ್ ಡಿ ಕುಮಾರಸ್ವಾಮಿಯವರು, ಸಾಮಾನ್ಯವಾಗಿ ಟೀಕೆ, ತಿರುಗೇಟುಗಳಲ್ಲಿ ಪ್ರವೀಣರಾದ ಬಿಜೆಪಿ ವಕ್ತಾರರೇ ನಾಚಿಕೊಳ್ಳುವಂತೆ ಸರ್ಕಾರವನ್ನು ಸಮರ್ಥಿಸಿಕೊಂಡು, ಬಿಜೆಪಿಯನ್ನು ಸಮರ್ಥಿಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ದಣಿವರಿಯದ ವಾಗ್ದಾಳಿ ನಡೆಸುತ್ತಿರುವುದನ್ನು ನೋಡಿದರೆ, ಅಂತಹ ರಾಜಕೀಯ ಮುಂದಾಲೋಚನೆ ಬಹಳ ಪ್ರಬಲವಾಗಿ ಕೆಲಸ ಮಾಡುತ್ತಿರುವಂತಿದೆ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...