ಭಾರತಕ್ಕೆ ಸೇರಿದ ಪ್ರದೇಶವನ್ನು ಚೀನೀಯರಿಗೆ ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಲಡಾಖ್ ಗಡಿ ಘರ್ಷಣೆಗೆ ಅಂತ್ಯ ಹಾಡುವ ಉದ್ದೇಶದಿಂದ ಚೀನಾ ಮತ್ತು ಭಾರತದ ನಡುವೆ 9 ನೇ ಸುತ್ತಿನ ಮಾತುಕತೆಯಲ್ಲಿ ಮಾಡಿಕೊಂಡ ಒಪ್ಪಂದದ ಕುರಿತು ಫೆಬ್ರವರಿ 11 ರಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ಸಿಂಗ್ ಅವರು ಮಾಹಿತಿ ನೀಡಿದ್ದರು. ಉಭಯ ದೇಶಗಳ ನಡುವೆ ನಡೆದ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಪತ್ರಿಕಾ ಗೋಷ್ಠಿ ನಡೆಸಿ ಪ್ರಧಾನಿ ಮೋದಿ, ರಕ್ಷಣಾ ಸಚಿವರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಭಾರತ-ಚೀನಾ ಮಿಲಿಟರಿ ಒಪ್ಪಂದದಲ್ಲಿ ಭಾರತಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ.
ನಮ್ಮ ಸೇನೆಯನ್ನು ಫಿಂಗರ್ ಪಾಯಿಂಟ್ 4 ರಿಂದ ಹಿಂದೆ ಕರೆಸಿಕೊಂಡು, ಫಿಂಗರ್ ಪಾಯಿಂಟ್ 3 ರಲ್ಲಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಫಿಂಗರ್ ಪಾಯಿಂಟ್ 4 ಕೂಡ ಭಾರತದ ಭೂಭಾಗವಾಗಿದ್ದು, ಇಲ್ಲಿ ನಮ್ಮ ಪ್ರದೇಶವನ್ನು ಚೀನಾ ದೇಶಕ್ಕೆ ಬಿಟ್ಟುಕೊಡಲಾಗಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
2020 ರಲ್ಲಿ ಭಾರತೀಯ ಸೇನೆ ಪೂರ್ವ ಲಡಾಖ್ನಲ್ಲಿ ಯಾಥಾಸ್ಥಿತಿಯಲ್ಲಿತ್ತು. ಇದೀಗ ಭಾರತೀಯ ಪಡೆ ಫಿಂಗರ್ 3ನಲ್ಲಿ ನಿಲುಗಡೆಯಾಗಲಿದೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವರು ಹೇಳಿದ್ದರು. ಇಲ್ಲಿ ಫಿಂಗರ್ 4 ಕೂಡ ಭಾರತಕ್ಕೆ ಸೇರಿದ ಪ್ರದೇಶವಾಗಿದೆ. ಭಾರತೀಯ ಸೇನೆ ಅಲ್ಲಿ ನೆಲೆಯೂರಬೇಕಿತ್ತು. ಇಲ್ಲಿ ಪ್ರಧಾನಿ ಮೋದಿಯವರು ಭಾರತಕ್ಕೆ ಸೇರಿದ ಪ್ರದೇಶವನ್ನು ಚೀನಾಕ್ಕೆ ಏಕೆ ಬಿಟ್ಟುಕೊಟ್ಟಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ದೇಶಕ್ಕೆ ಸೇರಿದ ಇಂಚಿಂಚೂ ಜಾಗವನ್ನು ರಕ್ಷಿಸುವ ಕರ್ತವ್ಯ ಪ್ರಧಾನಿಯವರದ್ದು. ಇಲ್ಲಿ ಮೋದಿ ಚೀನಾದ ಎದುರು ತಲೆತಗ್ಗಿಸಿನಿಂತು, ನಮ್ಮ ಸೇನೆಯ ತ್ಯಾಗ, ಬಲಿದಾನವನ್ನು ಅವಮಾನ ಮಾಡುತ್ತಿದ್ದಾರೆ. ಚೀನಾದ ಮುಂದೆ ತಲೆಯೆತ್ತಿ ನಿಲ್ಲುವ ತಾಕತ್ತಿಲ್ಲ, ಯಾರೊಬ್ಬ ಭಾರತೀಯರು ಈ ರೀತಿಯ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.