ಒಂದೂವರೆ ವರ್ಷದಲ್ಲೇ ‘ಕೊರೋನಾ’ ವಿರುದ್ಧ ಗೆಲುವು ಸಾಧ್ಯವಾಗುತ್ತಿದ್ದರೂ 40 ವರ್ಷಗಳಿಂದಲೂ ‘ಏಡ್ಸ್’ ವಿರುದ್ಧದ ಹೋರಾಟದ‍ಲ್ಲಿ ಕೈಸೋಲುತ್ತಿರುವುದೇಕೆ?

ದೇಶವೀಗ ಕೋವಿಡ್ 19 ಎಂಬ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿದೆ. ಈಗಾಗಲೇ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, ತನ್ನ ಕೆನ್ನಾಲಿಗೆಯನ್ನು ಇನ್ನೂ ಚಾಚುತ್ತಿರುವ ರಕ್ತಪಿಪಾಸು ವೈರಸ್ ಗೆ ಅಂತ್ಯ ಕಾಣಿಸಿ, ಕೊರೋನಾ ಎಂಬ ಸಾಂಕ್ರಾಮಿಕ ಕಾಯಿಲೆಯಿಂದ ಮುಕ್ತವಾಗಲು ನಮ್ಮ ದೇಶ ಅಹೋರಾತ್ರಿ ಶ್ರಮಿಸುತ್ತಿದೆ.

ಇದೆಲ್ಲದರ ನಡುವೆಯೇ ಮೇ 27 ಸದ್ದಿಲ್ಲದೆ ಸರಿದು ಹೋಗಿದೆ. 40 ವರ್ಷಗಳ ಹಿಂದೆ ಭಾರತದಲ್ಲಿ ಮೊದಲ ಬಾರಿಗೆ ಆ ದಿನದಂದು ಏಡ್ಸ್ ಎನ್ನುವ ಮಹಾಮಾರಿ ಪತ್ತೆಯಾಗಿತ್ತು. ಅದು ಎಚ್.ಐ.ವಿ. ಎಂಬ ವೈರಸ್ ನಿಂದ ಹರಡುವ ಕಾಯಿಲೆಯಾಗಿದೆ. ಮುಂದೆ ದಶಕಗಳ ಕಾಲ ಅದು ಭಾರತೀಯರನ್ನು ದುಃಸ್ವಪ್ನವಾಗಿಯೇ ಕಾಡಿಸುತ್ತಿದೆ. ಅದು ಸಂಪೂರ್ಣವಾಗಿ ನಿರ್ನಾಮವಾಗಿದೆ ಎಂದು ಘೋಷಿಸಲು ವೈದ್ಯ ಲೋಕಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಹಾಗೆ ನೋಡಿದರೆ, ಕೊರೋನಾ ಆಗಲಿ, ಏಡ್ಸ್ ಆಗಲಿ ಭಾರತವನ್ನು ಮಾತ್ರ ಪೀಡಿಸಿಲ್ಲ. ಅವೆರಡೂ ವೈರಸ್ ಗಳೂ ಜಗತ್ತಿನ ಹಲವಾರು ದೇಶಗಳ ಪಾಲಿಗೆ ಈಗಲೂ ದುಃಸ್ವಪ್ನವೇ. ಅವೆರಡನ್ನೂ ಭೂಮಿಯಿಂದಲೇ ಅಳಿಸಿ ಹಾಕಲು, ಭಾರತ ಮಾತ್ರವಲ್ಲ, ಜಗತ್ತಿನ ಹಲವಾರು ದೇಶಗಳ ವಿಜ್ಞಾನಿಗಳು ಇಂದಿಗೂ ಶ್ರಮಿಸುತ್ತಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಏಡ್ಸ್ ಮೇ 27 ರಂದು ಪತ್ತೆಯಾಗಿದ್ದರೆ, ಅಮೆರಿಕದಲ್ಲಿ ಅದರ ಮರುದಿನ ಅಂದರೆ ಮೇ 28ರಂದು ಪತ್ತೆಯಾಗಿತ್ತು.

3.3 ಕೋಟಿಗೂ ಅಧಿಕ ಮಂದಿ ಪ್ರಾಣ ತೆಗೆದ ಏಡ್ಸ್:

ನಿಮಗೆ ಆಶ್ಚರ್ಯವಾಗಬಹುದು. ಜಗತ್ತಿನಲ್ಲಿ ಏಡ್ಸ್ ಎಂಬ ಮಹಾಮಾರಿ ಪತ್ತೆಯಾದಾಗಿನಿಂದ ಈವರೆಗೆ ಸುಮಾರು 3.3 ಕೋಟಿಗೂ ಅಧಿಕ ಮಂದಿಯನ್ನು ಎಚ್.ಐ.ವಿ. ಎಂಬ ವೈರಸ್ ಬಲಿ ಪಡೆದುಕೊಂಡಿದೆ ಎಂದು ಅಂಕಿಅಂಶ ಹೇಳುತ್ತದೆ. ಕೋವಿಡ್ 19 ಈವರೆಗೆ ಈ ಭೂಮಿಯ ಮೇಲಿನ ಸುಮಾರು 37 ಲಕ್ಷ ಮಂದಿಯನ್ನು ಮಾತ್ರ ಆಪೋಷಣ ತೆಗೆದುಕೊಂಡಿದೆ. ಅಬ್ಬರವಿನ್ನೂ ನಿಂತಿಲ್ಲವಾದರೂ ಏಡ್ಸ್ ನಷ್ಟು ಜನರ ಪ್ರಾಣ ತೆಗೆಯುವ ಸಾಧ್ಯತೆ ಇದಕ್ಕಿಲ್ಲ. ಅಷ್ಟಾದರೂ ಇವೆರಡೂ ವೈರಸ್ ಗಳು ಮಾನವ ಜೀವಕೋಟಿಗೆ ಸಂಚಕಾರ ತರುವಲ್ಲಿ ಈಗಲೂ ಪೈಪೋಟಿ ನಡೆಸುತ್ತಿರುವುದಂತೂ ಸತ್ಯ.

ಅಂದಹಾಗೆ ವಿಶ್ವ ಏಡ್ಸ್ ಲಸಿಕಾ ದಿನವನ್ನು ಮೇ 18ರಂದು ಆಚರಿಸಲಾಗುತ್ತದೆ. ವಿಶೇಷವೆಂದರೆ, ಈವರೆಗೂ ಎಚ್‍.ಐ.ವಿ. ವೈರಸ್ ಗಿದು ರಾಮಬಾಣ ಅನ್ನುವ ಥರದ ಔಷಧವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಮಾತ್ರವಲ್ಲ ಈ ವೈರಸ್ ವಿರುದ್ಧ ಲಸಿಕೆಯನ್ನೂ ಕಂಡುಹಿಡಿಯಲಾಗಿಲ್ಲ. ಆದರೂ ‘ವಿಶ್ವ ಏಡ್ಸ್ ಲಸಿಕಾ ದಿನ’ವನ್ನು ಆಚರಿಸಲಾಗುತ್ತದೆ. ಅದೇಕೆ ಎನ್ನುವುದೇ ಇಂಟರೆಸ್ಟಿಂಗ್ ವಿಚಾರ.

ವೈದ್ಯ ವಿಜ್ಞಾನಿಗಳ ಹುರಿದುಂಬಿಸುವ ವಿಶ್ವ ಏಡ್ಸ್ ಲಸಿಕಾ ದಿನ:

ಏಡ್ಸ್ ಎಂಬ ಕಾಯಿಲೆ ಪತ್ತೆಯಾದಾಗಿನಿಂದ ಈವರೆಗೂ ಸಾವಿರಾರು ವೈದ್ಯ ವಿಜ್ಞಾನಿಗಳು, ಸಂಶೋಧಕರು ಈ ರೋಗವನ್ನು ಹರಡುವ ಎಚ್.ಐ.ವಿ. ಎಂಬ ವೈರಸ್‍ವಿರುದ್ಧ ಔಷಧ, ಲಸಿಕೆ ತಯಾರಿಸಲು ಶ್ರಮಿಸುತ್ತಿದ್ದಾರೆ. ಅಲ್ಪಸ್ವಲ್ಪ ಜಯ ಸಿಕ್ಕಿದ್ದರೂ ದೊಡ್ಡ ಮಟ್ಟದ ಯಶಸ್ಸು ನಾಲ್ಕು ದಶಕಗಳಾದರೂ ಸಿಕ್ಕಿಲ್ಲ.

1997ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರು ಮಾರ್ಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಾಡಿದ್ದ ಭಾಷಣದಲ್ಲಿ, ಏಡ್ಸ್ ವಿರುದ್ಧದ ಹೋರಾಟಕ್ಕೆ ಲಸಿಕಾ ದಿನಾಚರಣೆ ಮೂಲಕ ಬಲ ತುಂಬಬಹುದು ಎಂಬ ಸಲಹೆ ನೀಡಿದ್ದರು. ಈ ದಿನಾಚರಣೆಯ ಮೂಲಕ ಎಚ್.ಐ.ವಿ. ಹರಡುವುದನ್ನು ತಡೆಯಲು ಮತ್ತು ಆ ಮೂಲಕ ಈ ವೈರಸ್ ಅನ್ನು ಅಳಿಸಿಹಾಕಲು ಜಾಗೃತಿ ಮೂಡಿಸಬಹುದು. ಈ ರೋಗದ ವಿರುದ್ಧದ ಹೋರಾಟಕ್ಕೆ ಔಷಧ ಎಷ್ಟು ಮುಖ್ಯವೋ ಜಾಗೃತಿ ಅಷ್ಟೇ ಮುಖ್ಯ ಎಂಬುದು ಕ್ಲಿಂಟನ್ ಅವರ ಸಲಹೆಯ ಹಿಂದಿನ ಮರ್ಮವಾಗಿತ್ತು. 

ಸಾವಿರಾರು ವೈದ್ಯ ವಿಜ್ಞಾನಿಗಳು, ಆರೋಗ್ಯ ಕ್ಷೇತ್ರದ ವೃತ್ತಿಪರರು, ಸ್ವಯಂಸೇವಕರು ನಡೆಸುತ್ತಿರುವ ತ್ಯಾಗ, ಬಲಿದಾನ ಹಾಗೂ ಪ್ರಯತ್ನಗಳನ್ನು ಗುರುತಿಸುವ ಸಲುವಾಗಿ, ಹಾಗೂ ಔಷಧ, ಲಸಿಕೆ ಕಂಡುಹಿಡಿಯಲು ಅವರು ಪಡುತ್ತಿರುವ ಶ್ರಮವನ್ನು ಪರಿಗಣಿಸಿ 1998 ರಲ್ಲಿ ಮೊದಲ ಬಾರಿಗೆ ಮೇ 18ರಂದು ವಿಶ್ವ ಏಡ್ಸ್ ಲಸಿಕಾ ದಿನವನ್ನು ಆಚರಿಸಲಾಯಿತು. ಅದು ಇಂದಿಗೂ ನಡೆದುಕೊಂಡು ಬರುತ್ತಿದೆ.

40 ವರ್ಷಗಳಾದರೂ ಲಸಿಕೆ ಏಕೆ ಬರಲಿಲ್ಲ?

ಒಂದೂವರೆ ವರ್ಷಗಳ ಹಿಂದೆ ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡ ಕೋವಿಡ್-19 ವೈರಸ್ ಇಡೀ ಪ್ರಪಂಚಕ್ಕೆ ಸವಾಲು ಹಾಕಿತ್ತು. ಹೀಗಾಗಿ ಇದರ ವಿರುದ್ಧ ಜಗತ್ತೇ ಒಂದಾಗಿ ಸಮರ ಸಾರಿತ್ತು. ಈ ವೈರಸ್ ವಿರುದ್ಧ ಲಸಿಕೆ ಸಂಶೋಧಿಸಲು ಜಗತ್ತಿನ ಬಹಳ ದೇಶಗಳು ಪೈಪೋಟಿಗೆ ಬಿದ್ದಿದ್ದವು. ಭಾರತ, ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಸೇರಿದಂತೆ ಬೆರಳೆಣಿಕೆಯ ದೇಶಗಳು ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾದವು. ಮಾತ್ರವಲ್ಲ ತಮ್ಮ ತಮ್ಮ ದೇಶಗಳಲ್ಲಿ ತಮ್ಮ ಪ್ರಜೆಗಳಿಗೆ ಲಸಿಕೀಕರಣವನ್ನೂ  ಆರಂಭಿಸಿದವು. ಈ ನಡುವೆ ಭಾರತದಲ್ಲಿ ಕೋವಿಡ್ 19 ಅನ್ನು ಗುಣಪಡಿಸಬಲ್ಲ 2 ಡಿಜಿ ಎಂಬ ಔಷಧವನ್ನು ಡಿ.ಆರ್.ಡಿ.ಒ. ಸಿದ್ಧಪಡಿಸಿ 900 ರೂ. ಬೆಲೆಗೆ ಮಾರುಕಟ್ಟೆಗೂ ಬಿಡುಗಡೆ ಮಾಡಿದೆ.

ಕೊವಿಡ್ ವಿರುದ್ಧದ ಈ ಲಸಿಕೆಗಳು, ಔಷಧಗಳು ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕಾಲವೇ ಹೇಳಬಲ್ಲುದು. ಆದರೆ 40 ವರ್ಷಗಳಾದರೂ ಏಡ್ಸ್ ಗೆ ಜಗತ್ತಿನ ವಿಜ್ಞಾನಿಗಳಿಗೆ ಮದ್ದು ಕಂಡುಹಿಡಿಯಲಾಗಿಲ್ಲ. ಅದನ್ನು ತಡೆಗಟ್ಟಲು ಇಷ್ಟೆಲ್ಲ ಹಣ ಖರ್ಚು ಮಾಡಿದ್ದರೂ ಇಷ್ಟು ದೀರ್ಘ ಕಾಲಾವಧಿಯಲ್ಲೂ ಲಸಿಕೆ ಸಂಶೋಧಿಸಲಾಗಿಲ್ಲವೇಕೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.

ಏಡ್ಸ್ ಮತ್ತು ಕೊರೋನಾದ ಸಾಮ್ಯತೆ ಮತ್ತು ವೈರುಧ್ಯ:

ಏಡ್ಸ್ ಹರಡುವ ಎಚ್.ಐ.ವಿ. ಎನ್ನುವ ವೈರಸ್ ಕೂಡ ಕೋವಿಡ್ 19 ನಂತೆ ಸೊಳ್ಳೆ ಇತ್ಯಾದಿ ಕೀಟಗಳಿಂದ ಹರಡುವುದಿಲ್ಲ. ಇವೆರಡೂ ವೈರಸ್ ಗಳು ಪುರುಷರು ಮತ್ತು ಮಹಿಳೆಯರಿಗೆ ಮಾತ್ರವಲ್ಲ ಮಕ್ಕಳಿಗೂ ಹರಡಬಲ್ಲವು. ಇವೆರಡೂ ವೈರಸ್‍ಗಳು ವಯಸ್ಸಿನ ಭೇದವಿಲ್ಲದೆ ಮಾನವ ಕುಲವನ್ನು ಬಾಧಿಸಬಲ್ಲವು.

ಎದೆಹಾಲು, ರಕ್ತ, ಗುಪ್ತಾಂಗಗಳ ದ್ರವ, ಅಸುರಕ್ಷಿತ ಲೈಂಗಿಕತೆಯಿಂದ ಎಚ್.ಐ.ವಿ. ಹರಡುತ್ತದೆ. ಆದರೆ ಪರಸ್ಪರ ಮುಟ್ಟುವುದರಿಂದ, ಜೊಲ್ಲು, ಬೆವರು, ಕಣ್ಣೀರಿನಿಂದ ಅದು ಹರಡುವುದಿಲ್ಲ. ಕೋವಿಡ್ 19 ಇದಕ್ಕೆ ಭಿನ್ನ. ಈ ವೈರಸ್ ಗಾಳಿಯಲ್ಲೂ ಹರಡುತ್ತದೆ. ಮುಟ್ಟುವುದು, ಜೊಲ್ಲು, ಬೆವರು, ಕಣ್ಣೀರಿನಿಂದ ಕೋವಿಡ್ 19 ಹರಡುವುದಿಲ್ಲ ಎನ್ನುವುದು ಇನ್ನೂ ಸಾಬೀತಾಗಿಲ್ಲ.

3.8 ಕೋಟಿ ಮಂದಿಯೊಳಗೆ ಎಚ್.ಐ.ವಿ. ಇನ್ನೂ ಜೀವಂತ:

2019 ನೇ ವರ್ಷ ಮುಗಿದಾಗ ಎಚ್.ಐ.ವಿ.ಯು ಜಗತ್ತಿನಲ್ಲಿ 3.8 ಕೋಟಿ ಮಂದಿಯೊಳಗೆ ಸದ್ದಿಲ್ಲದೆ ಅವಿತಿರುವುದಲ್ಲದೆ, 6.90 ಲಕ್ಷ ಜನರ ಪ್ರಾಣ ತೆಗೆದಿತ್ತು. ಈಗಲೂ ಇದೊಂದು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕರ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ. ಜಗತ್ತಿನಲ್ಲಿ ಪ್ರತಿ ವಾರ 15ರಿಂದ 24 ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಎಚ್.ಐ.ವಿ. ವೈರಸ್ ನಿಂದ ಸೋಂಕಿತರಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಎಚ್.ಐ.ವಿ./ ಏಡ್ಸ್ ಯೋಜನೆ (ಯು.ಎನ್.ಎ.ಐ.ಡಿ.ಎಸ್) ಅಧಿಕಾರಿಗಳು ಹೇಳಿದ್ದಾರೆ.

ಏಡ್ಸ್ ಗೆ ಚಿಕಿತ್ಸೆಯು ಜೀವನಪೂರ್ತಿ ತೆಗೆದುಕೊಳ‍್ಳಬೇಕಾದ ಚಿಕಿತ್ಸೆಗಳು ಮಾತ್ರ ಇವೆ. ಏಡ್ಸ್ ಪೀಡಿತರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಈ ವೈರಸ್ ಈಗಲೂ ಸವಾಲು ಎಸೆಯುತ್ತಲೇ ಇದೆ. ಹೀಗಾಗಿ ಈಗಲೂ ಕೆಲವು ದೇಶಗಳಲ್ಲಿ ಈ ವೈರಸ್ ಸೋಂಕಿತರ ಸಂಖ್ಯೆಯನ್ನು ವೃದ್ಧಿಸುತ್ತ, ಪ್ರತಿ ವರ್ಷ ಸಾವಿರಾರು ಜನರನ್ನು ಬಲಿ ಪಡೆಯುತ್ತಲೇ ಇದೆ.

ಕೋವಿಡ್ ಗೆ ಈಗಾಗಲೇ ಪ್ರಭಾವಶಾಲಿ ಔಷಧ, ಲಸಿಕೆಗಳು ಲಭ್ಯವಿವೆ. ಆದರೆ ಏಡ್ಸ್ ವಿರುದ್ಧ ಅಂಥ ಪರಿಣಾಮಕಾರಿ ಔಷಧ, ಲಸಿಕೆಗಳು ಲಭ್ಯವಿಲ್ಲ. ಆದರೆ ಎಚ್.ಐ.ವಿ. ಪತ್ತೆ ಪರೀಕ್ಷೆ, ಚಿಕಿತ್ಸೆಗೆ ಪೂರಕವಾದ ಒಂದಿಷ್ಟು ಆಂಟಿವೈರಲ್ ಔಷಧ, ಚಿಕಿತ್ಸೋಪಾಯಗಳು ಮಾತ್ರ ಲಭ್ಯವಿವೆ. ಎಚ್.ಐ.ವಿ. ಸೋಂಕಿತರಾದವರೆ ಅಂಥವರ ಆರೋಗ್ಯ ಸ್ಥಿತಿ ನಿಯಂತ್ರಿಸಬಲ್ಲ, ಈ ವೈರಸ್ ಜತೆಗೇ ದೀರ್ಘ ಕಾಲ ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುವಂತೆ ಮಾಡಬಲ್ಲಷ್ಟು ಬೆಳವಣಿಗೆ ವೈದ್ಯಲೋಕದಲ್ಲಿ ನಡೆದಿದೆ. ಆದರೆ ಲಸಿಕೆ ಮಾತ್ರ ಈಗಲೂ ಸಿದ್ಧವಾಗಿಲ್ಲ. ಹೀಗಾಗಿ ಏಡ್ಸ್ ಬರದಂತೆ ಜಾಗೃತೆ ವಹಿಸುವುದೇ ಈಗಲೂ ಏಡ್ಸ್ ವಿರುದ್ಧದ ಹೋರಾಟದಲ್ಲಿ ಅತೀ ಪ್ರಬಲ ಅಸ್ತ್ರವಾಗಿದೆ.

ಏಡ್ಸ್ ಗೆ ಲಸಿಕೆ ಏಕೆ ಕಂಡು ಹಿಡಿಯಲಾಗಿಲ್ಲ?

ಏಡ್ಸ್ ಗೆ ಈವರೆಗೆ ಲಸಿಕೆ ಕಂಡುಹಿಡಿಯಲಾಗಿಲ್ಲ ಎನ್ನುವುದು ಎಷ್ಟು ಸತ್ಯವೋ, ಅದಕ್ಕೆ ಎಚ್.ಐ.ವಿ. ವೈರಸ್ ನ ಗುಣ ಸ್ವಭಾವ ಕಾರಣ ಎನ್ನುವುದೂ ಅಷ್ಟೇ ಸತ್ಯ. ಈ ವೈರಸ್ ನ ಮೇಲ್ಮೈನ ಬಹುತೇಕ ಭಾಗ ಸಕ್ಕರೆಯ ಅಣುಗಳಿಂದ ಲೇಪಿತವಾಗಿದೆ. ಇದು ರೋಗನಿರೋಧಕತೆಯನ್ನು ಪ್ರಚೋದಿಸದಂತೆ ತಡೆಯತ್ತಿದೆ ಮತ್ತು ಲಸಿಕೆಯನ್ನು ರೂಪಿಸಲು ಪರಿಸ್ಥಿತಿಯನ್ನು ಸಂಕೀರ್ಣವಾಗಿಸುತ್ತದೆ.

ಹಾಗಂತ ನಿರಾಶರಾಗಬೇಕಿಲ್ಲ. ಆದರೆ ಭವಿಷ್ಯದಲ್ಲಿ ಲಸಿಕೆ ಖಂಡಿತ ಸಿದ್ಧವಾಗಬಹುದು. ಅದಕ್ಕಾಗಿ ವಿಜ್ಞಾನಿಗಳು ತಮ್ಮ ಸಂಶೋಧನೆ ಮತ್ತು ತನಿಖೆಯನ್ನು ಈಗಲೂ ಮುಂದುವರಿಸಿದ್ದಾರೆ. ವಿವಿಧ ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಗಳು ಈಗಲೂ ನಡೆಯುತ್ತಿವೆ. ಇದು ದೀರ್ಘಕಾಲಿಕ ಕಾಯಿಲೆ ಆಗಿರುವುದರಿಂದ ಲಸಿಕೆಯನ್ನು ಕಂಡುಹಿಡಿದು ಅದರ ಯಶಸ್ಸು ಪತ್ತೆ ಹಚ್ಚುವುದು ಕೂಡ ತುಂಬ ಹೆಚ್ಚು ಸಮಯವನ್ನು ಬೇಡುವ ಪ್ರಕ್ರಿಯೆಯೇ ಆಗಿದೆ.

 “ದಿನಕ್ಕೆ ಒಂದು ಮಾತ್ರೆ ತೆಗೆದುಕೊಳ್ಳುತ್ತಾ ಜೀವಮಾನವಿಡೀ ಈ ವೈರಸ್ ನೊಂದಿಗೆ ಬದುಕಬಹುದು ಎಂಬಷ್ಟು ಏಡ್ಸ್ ಗೆ ಚಿಕಿತ್ಸೆ ಬೆಳೆದಿದೆ. ಈ ಕ್ಷೇತ್ರದಲ್ಲಿ ನಾವು ಸಾಕಷ್ಟು ಮುನ್ನಡೆದಿದ್ದೇವೆ. ಆದರೆ ಅಂತಿಮ ಹೋರಾಟ ಇನ್ನೂ ಬಾಕಿ ಇದೆ. ಅದು ಕೂಡ ಶೀಘ್ರದಲ್ಲೇ ಯಶಸ್ಸು ತಂದುಕೊಡಬಹುದು” ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ ಎಚ್.ಐ.ವಿ. ವಿರುದ್ಧದ ಔಷಧ ತಯಾರಿಸಲು ಪ್ರಯೋಗಗಳನ್ನು ನಡೆಸುತ್ತಿರುವ ವಿವಿಂಟ್ ಹೆಲ್ತ್ ಸಂಸ್ಥೆಯ ಡಾ.ಲೆಸ್ಲೀ ಕಾಕೆರ್ಹೆಮ್.

ಇನ್ನೊಂದೆಡೆ ಕೋವಿಡ್ 19 ವಿರುದ್ಧದಲ್ಲಿ ವೈದ್ಯ ವಿಜ್ಞಾನಿಗಳ ಹೋರಾಟ ಮತ್ತು ಅದಕ್ಕೆ ಸಿಕ್ಕಿರುವ ಯಶಸ್ಸು, ಎಚ್.ಐ.ವಿ. ವೈರಸ್ ವಿರುದ್ಧದ ಹೋರಾಟದಲ್ಲಿ ನಿರತರಾದವರಿಗೆ ಸ್ಫೂರ್ತಿಯಾಗಬಹುದು. ಏಡ್ಸ್ ನ ಸಂಪೂರ್ಣ ನಿರ್ನಾಮ ಸಾಧ್ಯವಾಗುವಂಥ ಲಸಿಕೆ ಕೂಡ ಅದೇ ಸ್ಫೂರ್ತಿಯಲ್ಲಿ ರೂಪುಗೊಳ್ಳಬಹುದು ಎಂಬುದು ಸದ್ಯ ವೈದ್ಯ ಜಗತ್ತಿನ ಅತೀ ದೊಡ್ಡ ಆಶಾವಾದವಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...