ತಾಕತ್ತಿದ್ದರೆ ಡಿಸಿ ವರ್ಗಾವಣೆ ಮಾಡಿಸು: ಸಂಸದ ಸಿಂಹಗೆ ಜಿಟಿಡಿ ಸವಾಲು

ಇಡೀ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಕಾಣುತ್ತಿದೆ.  ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಪಂಚಸೂತ್ರ ಮತ್ತು  ಕೋವಿಡ್ ಮಿತ್ರ ಜಾರಿಗೊಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ತಮ್ಮದೇ ಆದ ಟಾಸ್ಕ್ಫೋರ್ಸ್ ರಚಿಸಿ ಕಾರ್ಯಾಚರಣೆಗೆ ಇಳಿಸಿದ್ದಾರೆ.  ಆದರೆ ಮೈಸೂರು ಜಿಲ್ಲೆಯಲ್ಲಿ ಮಾತ್ರ ಸೋಂಕು  ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಕೋವಿಡ್ ಪರೀಕ್ಷೆಯನ್ನು ಕಡಿಮೆಗೊಳಿಸಿದ ನಂತರವೂ ಮೈಸೂರಿನಲ್ಲಿ ನಿತ್ಯವೂ 2 ಸಾವಿರದ ಆಸುಪಾಸು ಪ್ರಕರಣಗಳು ದಾಖಲಾಗುತ್ತಿವೆ. 

ಒಂದೆಡೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರಣಿ ಸಭೆ. ಮತ್ತೊಂದೆಡೆ ಟಾಸ್ಕ್ಫೋರ್ಸ್ ಅಧ್ಯಕ್ಷರ ಸಭೆ ಹಾಗೂ ವಿವಿಧೆಡೆ ಭೇಟಿ. ಇದು ನಿತ್ಯವೂ ತಪ್ಪದ ವೇಳಾಪಟ್ಟಿ. ಎರಡೂ ಕಡೆಯೂ ಹಾಜರಿರಬೇಕಾದ ಅನಿವಾರ್ಯತೆ ಅಧಿಕಾರಿ ವರ್ಗದ್ದು. ಇದರಿಂದ ಹೈರಾಣಾಗಿರುವ ಅಧಿಕಾರಿಗಳು, ತಮಗೆ ಸಮರ್ಪಕವಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ‘ರಾಜ್ಯದ ಬೇರಾವ ಜಿಲ್ಲೆಯಲ್ಲೂ ಇರದ ಇಂತಹ ವ್ಯವಸ್ಥೆ ಇಲ್ಲಿಯೇ ಏಕೆ?’ ಎಂದು ಪ್ರಶ್ನಿಸುತಿದ್ದಾರೆ. ಮತ್ತೊಂದೆಡೆ  ಜಿಲ್ಲಾಡಳಿತ ಹಾಗೂ  ಜನಪ್ರತಿನಿಧಿಗಳ  ನಡುವೆ ಸಮನ್ವಯತೆ ಇಲ್ಲದಿರುವುದರಿಂದಲೇ ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಬಂದಿಲ್ಲ. ಅವರ ನಡುವಿನ ವೈಯಕ್ತಿಕ ಪ್ರತಿಷ್ಠೆ, ಪ್ರಚಾರದ ಹಪಾಹಪಿತನ, ದುಡ್ಡು ಮಾಡುವ ದಂಧೆ ಇದ್ಯಾವುದೂ ನಮಗೆ ಬೇಕಿಲ್ಲ. ಮೊದಲು ಕೋವಿಡ್ನ ದುಷ್ಪರಿಣಾಮ ತಪ್ಪಿಸಿ. ಸಾವಿನ ಸರಣಿಗೆ  ಫುಲ್ ಸ್ಟಾಪ್ ಹಾಕಿ ಎಂದು ಜನತೆ ಆಗ್ರಹಿಸುತಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೊರೋಣ ನಿಯಂತ್ರಣಕ್ಕೆ ಒಂದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮೊದಲು ಇವರನ್ನು ಬೆಂಬಲಿಸುತಿದ್ದ  ಆಳುವ ಪಕ್ಷದ ಜನಪ್ರತಿನಿಧಿಗಳೇ ಇವರ ವಿರುದ್ದ ಈಗ ತಿರುಗಿ ಬಿದ್ದಿರುವುದು ಗುಟ್ಟಾಗೇನೂ ಉಳಿದಿಲ್ಲ.    ಸಚಿವರು, ಸಂಸದರು, ಜಿಲ್ಲಾಧಿಕಾರಿ ನಡುವಿನ ಗುದ್ದಾಟ–ತಿಕ್ಕಾಟಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಪ್ರಚಾರಪ್ರಿಯತೆ, ಪ್ರತಿಷ್ಠೆಯೂ ಸೇರಿಕೊಂಡಿದೆ ಎಂಬುದು ಅವರ ಆಪ್ತ ವಲಯದಿಂದಲೇ ಗೊತ್ತಾಗಿದೆ. ಉಸ್ತುವಾರಿ ಸಚಿವರು ಘೋಷಿಸಲು ಉದ್ದೇಶಿಸಿದ್ದ ಕೋವಿಡ್ ಮಿತ್ರ ಯೋಜನೆಯನ್ನು ಜಿಲ್ಲಾಧಿಕಾರಿಯೇ ತರಾತುರಿಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಪ್ರಕಟಿಸಿದ್ದು, ಕೊರೊನಾ ಜಾಗೃತಿ ಮೂಡಿಸುವ ಪ್ರಚಾರ ಫಲಕದಿಂದ ಭಾವಚಿತ್ರ ತೆಗೆಯುವಂತೆ ಸೂಚಿಸಿದ್ದು, ಟಾಸ್ಕ್ಫೋರ್ಸ್ಗೆ ಯಾವೊಂದು ಮಾನ್ಯತೆ ಇಲ್ಲ ಎಂದು ತಮ್ಮ ಆಪ್ತ ಅಧಿಕಾರಿ ವಲಯದಲ್ಲೇ ಹೇಳಿಕೊಂಡಿದ್ದು ತಿಕ್ಕಾಟ ಆರಂಭವಾಗಲು ಕಾರಣವಾಗಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು   ತಿಳಿಸಿದರು. ಚಾಮರಾಜ ನಗರದಲ್ಲಿ ನಡೆದ ಆಮ್ಲಜನಕ ದುರಂತ ಘಟನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಸುರೇಶ್ಕುಮಾರ್ ಅವರು ಜಿಲ್ಲಾಧಿಕಾರಿ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಏನೊಂದು ಮಾತನಾಡಿರಲಿಲ್ಲ. ಈ ವಿದ್ಯಮಾನದ ಬಳಿಕ, ಜಿಲ್ಲಾಧಿಕಾರಿ ಬದಲಾವಣೆಗಾಗಿ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ನಿಯೋಗವೊಂದನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ಯಲು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್  ಚಿಂತನೆ ನಡೆಸಿದ್ದರು. ಇದುವೇ ಆಡಳಿತಾರೂಢರ ನಡುವೆ ಸಮನ್ವಯ ತಪ್ಪಲು, ತಿಕ್ಕಾಟ ನಡೆಯಲು ಪ್ರಮುಖ ಕಾರಣ’ ಎಂಬುದು ಉನ್ನತ ಮೂಲಗಳು ತಿಳಿಸಿವೆ.    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಬಗ್ಗೆ ಸಂಸದ ಪ್ರತಾಪ ಸಿಂಹ ಅವರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಬೆನ್ನಿಗೆ ನಿಂತಿರುವ ಶಾಸಕ ಜಿ.ಟಿ. ದೇವೇಗೌಡ, ನಿನಗೆ ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸು ಎಂದು ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಖಾಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡಿ, ದಿನ ಬೆಳಗಾದರೆ ಪೇಪರ್ ಸ್ಟೇಟ್ಮೆಂಟ್ ಮಾಡಿದರೆ ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿನಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯ ಹೇಳು? ಎಂದು ಪ್ರಶ್ನಿಸಿದ್ದಾರೆ. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ. ನೀನು ಪವರ್ಫುರ್ ಎಂಪಿ, ಪಿಎಂ, ಸಿಎಂ ನೀನು ಹೇಳಿದಂತೆ ಕೇಳ್ತಾರೆ? ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್ ಸ್ಟೇಟ್ಮೆಂಟ್ ಕೊಟ್ಟು ಗೊಂದಲ ಯಾಕೆ ಮೂಡಿಸ್ತೀಯಾ? ಎಂದು ಪ್ರಶ್ನಿಸಿರುವ ಅವರು,  ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನಸಾಮಾನ್ಯರಲ್ಲಿ ಅನುಮಾನ ಸೃಷ್ಟಿಸಿವೆ ಎಂದರು.  ಶಾಸಕ ಸಾ.ರಾ.ಮಹೇಶ್ ಮಾತ್ರ ಮೈಸೂರು ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಜಿಟಿಡಿ, ಒಬ್ಬ ಮಾತ್ರ ಹೀರೋ, ನಾವೆಲ್ಲಾ ಜೀರೋನಾ? ನಾವೆಲ್ಲ ನಮ್ಮ ಸ್ವಂತ ಹಣ ಖರ್ಚು ಮಾಡ್ತಿದ್ದೀವಿ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯ ಹೇಳು ಎಂದು ಪ್ರಶ್ನಿಸಿದರು.

  ಜಿಲ್ಲಾಧಿಕಾರಿ ವರ್ಗಾವಣೆ ವಿಚಾರವಾಗಿ ಸವಾಲು ಹಾಕಿದ್ದ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಇಂದು  ಮಾತನಾಡಿದ  ಅವರು  ಅಧಿಕಾರಿಗಳನ್ನ ಟ್ರಾನ್ಸಫರ್ ಮಾಡೋದೇ ತಾಕತ್ತಾದ್ರೆ ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೆನೆ. ಮೈಸೂರಿಗೆ ನಾನು ಹೊರಗಿನವನು. ಆದರು ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ 30 ಸಾವಿರ ಅಂತರದ ಮತಗಳಿಂದ ಗೆಲ್ಲಿಸಿದರು. ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದ್ದರಿಂದಾಗಿ, 2ನೇ ಬಾರಿ  1.4 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು ಎಂದು ಟಾಂಗ್ ನೀಡಿದ್ದಾರೆ. ಡಿಸಿ ಅಥವಾ ಇನ್ನಾವುದೋ ಅಧಿಕಾರಿಯನ್ನ ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

  ಜಿಟಿಡಿ ಅವರು ನನಗೆ ತಂದೆ ಇದ್ದಂತೆ. ಅವರು ಹರೀಶ್ಗೌಡರನ್ನ ಹೇಗೆ ನೋಡಿಕೊಂಡಿದ್ದಾರೋ ಹಾಗೇ ನನ್ನನ್ನು ನೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗೆ ಇದೆ. ಅವರು ಬೈಯುವುದನ್ನ ನಾನು ಪ್ರೀತಿಯಿಂದ ಸ್ವೀಕರಿಸಿಸುತ್ತೇನೆ ಎಂದರು. ಒಟ್ಟಿನಲ್ಲಿ ಕರೋನಾ ಸಂಕಷ್ಟದ ನಡುವೆ ಜನನಾಯಕರು ಹೀಗೆ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿರುವುದು ನಾಚಿಕೆಗೇಡಿನ ಸಂಗತಿ..

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...