ಬಿಜೆಪಿಗರಿಗೆ ‘ಉತ್ಸವ’, ಜನರಿಗೆ ಸಂಕಷ್ಟವಾದ ಮೋದಿ ಲಸಿಕಾ ಅಭಿಯಾನ!

ಲಸಿಕೆ ಕೊರತೆಯ ಹಾಹಾಕಾರದ ಹಂತದಿಂದ ದೇಶದ ಟೀಕಾ ಉತ್ಸವ, ಆಡಳಿತ ಪಕ್ಷವೇ ಪ್ರಾಯೋಜಿತ ವ್ಯಾಕ್ಸಿನ್ ಬ್ಲ್ಯಾಕಿಂಗ್ ದಂಧೆಗೆ ಬಂದು ನಿಂತಿದೆ. ಅಷ್ಟರಮಟ್ಟಿಗೆ ಟೀಕಾ ಉತ್ಸವ ಬಿಜೆಪಿ ಮತ್ತು ಅದರ ಸರ್ಕಾರಗಳಿಗೆ ‘ಉತ್ಸವ’ವಾಗಿಯೂ, ಜನಸಾಮಾನ್ಯರ ಪಾಲಿಗೆ ‘ಉಭಯಸಂಕಟ’ವಾಗಿಯೂ ಈಗ ಬದಲಾಗಿದೆ.

ಒಂದು ಕಡೆ 60 ಮತ್ತು 45 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನ ಮೊದಲ ಲಸಿಕೆ ಪಡೆದವರಿಗೆ ಸಕಾಲದಲ್ಲಿ ಎರಡನೇ ಲಸಿಕೆ ಕೊಡಲು ಕೂಡ ಲಸಿಕೆ ಇಲ್ಲದೆ ವಯೋವೃದ್ಧರು, ವಿವಿಧ ಅಪಾಯಕಾರಿ ಆರೋಗ್ಯ ಸಮಸ್ಯೆ ಹೊಂದಿರುವವರು ಲಸಿಕಾ ಕೇಂದ್ರಗಳ ಮುಂದೆ ತಾಸುಗಟ್ಟಲೆ ಸರತಿಸಾಲು ನಿಂತು ಬರಿಗೈಲಿಗೆ ವಾಪಸು ಹೋಗುತ್ತಿದ್ದಾರೆ. ಮತ್ತೊಂದು ಕಡೆ ಆರೋಗ್ಯ ಇಲಾಖೆ, ಪೊಲೀಸ್, ಪೌರ ಕಾರ್ಮಿಕರು ಮತ್ತು ನೌಕರರು, ಅಗತ್ಯ ಸೇವಾ ವಲಯದ ಕೆಲಸಗಾರರಿಗೆ ಕೂಡ ಜೀವರಕ್ಷಕ ಲಸಿಕೆ ನೀಡಲು ಕೂಡ ಲಸಿಕೆ ಲಭ್ಯವಿಲ್ಲ.

ಜನವರಿ 16ರಂದು ಭಾರೀ ಪ್ರಚಾರದೊಂದಿಗೆ ಆರಂಭವಾದ ಲಸಿಕೆ ಅಭಿಯಾನದಲ್ಲಿ ಈವರೆಗೆ(ಮೇ 28ರವರೆಗೆ), ಈ ಐದು ತಿಂಗಳಲ್ಲಿ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರ ಪ್ರಮಾಣ ಕೇವಲ ನಾಲ್ಕು ಕೋಟಿ 26 ಲಕ್ಷ! ಅಂದರೆ, ಆರಂಭದಲ್ಲಿ ಜಗತ್ತಿನ ‘ವ್ಯಾಕ್ಸಿನ್ ಗುರು’ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ದೇಶದಲ್ಲಿ, ಬರೋಬ್ಬರಿ ಐದು ತಿಂಗಳು ಗತಿಸಿದರೂ, ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.3ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ! ಇದು ವ್ಯಾಕ್ಸಿನ್ ಡಿಪ್ಲೊಮಸಿ(ಲಸಿಕೆ ರಾಜತಾಂತ್ರಿಕತೆ)ಯ ಮಾತುಗಳನ್ನಾಡಿದ, ಕಳೆದ ವರ್ಷದ ಆಗಸ್ಟ್ ಹೊತ್ತಿಗೇ ದೇಶದ ಪ್ರತಿ ನಾಗರಿಕರಿಗೂ ಉಚಿತ ಲಸಿಕೆ ನೀಡುವ ಕುರಿತು ಸಂಪೂರ್ಣ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಬಿಜೆಪಿ ಸರ್ಕಾರದ ಲಸಿಕೆ ಅಭಿಯಾನದ ಪ್ರಗತಿ!

ಈ ನಡುವೆ ಕರ್ನಾಟಕದ ಲಸಿಕೆ ಕಾರ್ಯಕ್ರಮದ ಅವ್ಯವಸ್ಥೆಯಂತೂ ಸ್ವತಃ ರಾಜ್ಯ ಹೈಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿದೆ. ಪದೇ ಪದೇ ನ್ಯಾಯಾಂಗದ ಚಾಟಿ ಬೀಸಿಯೂ ಲಸಿಕೆ ಅವ್ಯವಸ್ಥೆಯನ್ನು ಸರಿಪಡಿಸಿ ಕನಿಷ್ಟ ವ್ಯವಸ್ಥೆಯನ್ನು ಖಾತರಿಪಡಿಸುವುದು ಕೂಡ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ನಡುವೆ, ಬೆಡ್ ಬ್ಲ್ಯಾಕಿಂಗ್ ದಂಧೆಯ ಹೆಸರು ಹೇಳಿಕೊಂಡು ಪ್ರಚಾರದ ವರಸೆ ತೋರಿ, ಸ್ವತಃ ತಮ್ಮ ಆಪ್ತರ ಆ ಪ್ರಕರಣದಲ್ಲಿ ಆರೋಪಿಗಳಾಗಿರುವುದು ಬಹಿರಂಗವಾಗುತ್ತಲೇ ತೀವ್ರ ಮುಜುಗರಕ್ಕೆ ಈಡಾದ ಬಿಜೆಪಿಯ ಯೂತ್ ಐಕಾನ್, ಸಂಸದ ತೇಜಸ್ವಿ ಸೂರ್ಯ ಚಿಕ್ಕಪ್ಪ ರವಿಸುಬ್ರಹ್ಮಣ್ಯ ಅವರೇ ಇದೀಗ ವ್ಯಾಕ್ಸಿನ್ ಬ್ಲ್ಯಾಕಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ಅವರು ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿಯೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಸ್ವತಃ ಬಿಬಿಎಂಪಿಯಿಂದ ಉಚಿತ ಲಸಿಕೆ ಪಡೆದು ಅದನ್ನು ಖಾಸಗಿ ಆಸ್ಪತ್ರೆ ಮೂಲಕ ತಲಾ 900 ರೂ.ಗೆ ಮಾರಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.

ಆ ಆರೋಪಗಳ ಸತ್ಯಾಸತ್ಯತೆ ಏನೇ ಇರಬಹುದು. ಆದರೆ, ಈ ಪ್ರಕರಣ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಲಸಿಕೆ ದುಬಾರಿ ಬೆಲೆಗೆ ಮಾರಾಟ ದಂಧೆ ಸಾರ್ವಜನಿಕ ಚರ್ಚೆಗೆ ಬಂದಿದೆ. ಒಂದು ಕಡೆ ಜೀವ ಪಣಕ್ಕಿಟ್ಟು ಕರೋನಾ ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ಗಳಿಗೆ, ಅಪಾಯಕಾರಿ ವಲಯದಲ್ಲಿರುವ ವಯಸ್ಕರು ಮತ್ತು ವಿವಿಧ ಗಂಭೀರ ಕಾಯಿಲೆಪೀಡಿತರ ಜೀವ ಉಳಿಸಲು ಲಸಿಕೆ ಕೊರತೆ, ಹಾಹಾಕಾರ. ಮತ್ತೊಂದು ಕಡೆ ರಾಜ್ಯದಾದ್ಯಂತ ಖಾಸಗೀ ಆಸ್ಪತ್ರೆಗಳಲ್ಲಿ, ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡ್ಡು ಕೊಟ್ಟರೆ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಲಸಿಕೆ ದೊರೆಯುತ್ತಿದೆ! ಅಂದರೆ; ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಸರ್ಕಾರಕ್ಕೆ ತಿಂಗಳುಗಟ್ಟಲೆ ಸಿಗದ ಲಸಿಕೆ, ಖಾಸಗೀ ಆಸ್ಪತ್ರೆಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಅವರಿಗೆ ಬೇಕಾದಷ್ಟು ಬೇಕಾದಾಗ ಸಿಗುತ್ತಿರುವುದು ಹೇಗೆ? ಎಂಬ ಪ್ರಶ್ನೆ ಎದ್ದಿದೆ. ಅದರಲ್ಲೂ ಆಡಳಿತರೂಢ ಬಿಜೆಪಿ ನಾಯಕರು ಮತ್ತು ಅವರ ಆಪ್ತರು, ಆರ್ ಎಸ್ ಎಸ್ ಮತ್ತು ಅದರ ಪರಿವಾರದ ಮಂದಿಗೆ ಸಂಬಂಧಿಸಿದ ಆಸ್ಪತ್ರೆ, ಕಾರ್ಪೊರೇಟ್ ಕಂಪನಿಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಯಾವ ಅಡೆತಡೆಯೂ ಇಲ್ಲದೆ ಲಸಿಕೆ ನೀಡಿಕೆ ಮುಂದುವರಿದಿರುವಾಗ, ಸರ್ಕಾರಿ ಆಸ್ಪತ್ರೆಗಳಲ್ಲಿ, ಉಚಿತ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಕನಿಷ್ಟ ಕೋವಿಡ್ ವಾರಿಯರ್ಸ್ ಗೆ ಹಾಕಲೂ ಲಸಿಕೆ ಲಭ್ಯವಿಲ್ಲ ಎಂದರೆ, ಇದನ್ನು ಸರ್ಕಾರ ಮತ್ತು ಆಡಳಿತ ಪಕ್ಷ ಪ್ರಾಯೋಜಿಕ ವ್ಯಾಕ್ಸಿನ್ ಬ್ಲ್ಯಾಕಿಂಗ್ ಎನ್ನದೆ ಇನ್ನೇನು ಹೇಳಲು ಸಾಧ್ಯ?

ಡಬ್ಲ್ಯೂಎಚ್ ಒ ಸೇರಿದಂತೆ ವಿವಿಧ ಜಾಗತಿಕ ಸಂಸ್ಥೆಗಳು ಮತ್ತು ತಜ್ಞರು ಭಾರತದ ಕೋವಿಡ್ ಸಾವು-ನೋವುಗಳಿಗೆ ಕಡಿವಾಣ ಹಾಕಲು ಇರುವ ಏಕೈಕ ಮಾರ್ಗ ಲಸಿಕೆ. ದೇಶದವ18 ವರ್ಷ ಮೇಲ್ಪಟ್ಟವರ ಪೈಕಿ ಕನಿಷ್ಟ ಅರ್ಧದಷ್ಟು ಮಂದಿಗಾದರೂ ಲಸಿಕೆ ಹಾಕದೆ, ಕರೋನಾ ನಿಯಂತ್ರಣ ದುಃಸಾಧ್ಯ ಎಂದು ಹೇಳಿವೆ. ಆದರೆ, ದೇಶದ ಸುಮಾರು 80 ಕೋಟಿ 18 ವರ್ಷ ಮೇಲ್ಪಟ್ಟ ಜನಸಂಖ್ಯೆಗೆ ಲಸಿಕೆ ನೀಡಲು ಅಗತ್ಯ ಲಸಿಕೆ ದಾಸ್ತಾನು ಮಾಡುವ ಮುನ್ನವೇ ಬರೋಬ್ಬರಿ 6 ಕೋಟಿ ಲಸಿಕೆಯನ್ನು ವಿದೇಶಗಳಿಗೆ ಕಳಿಸಿದ ಪ್ರಧಾನಿ ಮೋದಿಯವರು, ತಮ್ಮ ವಿಶ್ವ ನಾಯಕ, ವಿಶ್ವಗುರು ವರ್ಚಸ್ಸು ವೃದ್ಧಿಗೆ ಕೊಟ್ಟ ಆದ್ಯತೆಯನ್ನು ದೇಶದ ಜನರ ಜೀವ ಉಳಿಸಲು ಕೊಡಲಿಲ್ಲ. ಪರಿಣಾಮವಾಗಿ ಈಗ ದೇಶದ ಶೇ.3ರಷ್ಟು ಜನರಿಗೆ ಲಸಿಕೆ ಕೊಡಲು ಬರೋಬ್ಬರಿ ಐದು ತಿಂಗಳ ಸುದೀರ್ಘ ಸಮಯ ಹಿಡಿದಿದೆ. ತಜ್ಞರ ಪ್ರಕಾರ ಕನಿಷ್ಟ 40 ಕೋಟಿ ಮಂದಿಗೆ ಲಸಿಕೆ ನೀಡಲು, ಲಸಿಕೆ ಕಾರ್ಯಕ್ರಮದ ಸದ್ಯದ ವೇಗದ ಲೆಕ್ಕದಲ್ಲಿ ಕನಿಷ್ಟ ಐದಾರು ವರ್ಷಗಳೇ ಬೇಕಾಗಬಹುದು! ಅಲ್ಲಿಯವರೆಗೆ ಕರೋನಾಕ್ಕೆ ಬಲಿಯಾಗುವವರ ದೇಶದ ಜನರ ಸಂಖ್ಯೆಗಿಂತ ಕರೋನಾ ನಿಯಂತ್ರಣದ ಲಾಕ್ ಡೌನ್ ಗಳಿಂದಾಗಿ ಕೆಲಸವಿಲ್ಲದೆ, ದುಡಿಮೆ ಇಲ್ಲದೆ, ಹಸಿವಿನಿಂದ, ಮರ್ಯಾದೆಗೆ ಅಂಜಿ ಜೀವ ಬಿಡುವರ ಸಂಖ್ಯೆಯೇ ಅಧಿಕವಾಗಲಿದೆ.

ಆದರೆ, ಲಸಿಕೆಗಿಂತ ತಮ್ಮ ಐಷಾರಾಮಿ ಅರಮನೆ ಮತ್ತು ಸಂಸತ್ ಭವನದ ನಿರ್ಮಾಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಪ್ರಧಾನಿಗಳು, ಸದ್ಯ ಆ ದಿಸೆಯಲ್ಲಿ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ದೇಶದ ಜನರ ಜೀವದ ವಿಷಯದಲ್ಲಿ ತಳೆದಿರುವ ಉಪೇಕ್ಷೆ ಮತ್ತು ಲಸಿಕೆ ವಿಷಯದಲ್ಲಿ ತಳೆದಿರುವ ನಿರ್ಲಕ್ಷ್ಯದ ಪರಿಣಾಮವಾಗಿ ಇಂದು ಭಾರತವಷ್ಟೇ ಅಲ್ಲ, ಜಗತ್ತಿನ ಬಹುತೇಕ ಬಡ ರಾಷ್ಟ್ರಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ ಎಂದು ಜಾಗತಿಕ ಖ್ಯಾತಿಯ ಮಾಧ್ಯಮ  ‘ಟೈಮ್’ ಹೇಳಿದೆ.

‘ಟೈಮ್ಸ್’ ನಿಯತಕಾಲಿಕದ ವರದಿಯ ಪ್ರಕಾರ, ಭಾರತದ ಲಸಿಕೆ ಅಭಿಯಾನ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಕಳೆದ ಏಪ್ರಿಲ್ ನಲ್ಲಿ ದೇಶದಲ್ಲಿ ನೀಡಲಾದ ಲಸಿಕೆಗಳ ಪ್ರಮಾಣಕ್ಕೆ ಹೋಲಿಸಿದರೆ, ಮೇ ನಲ್ಲಿ ಅರ್ಧದಷ್ಟು ಕುಸಿತ ಕಂಡಿದೆ. ಕಳೆದ 2020ರ ಆಗಸ್ಟ್ ಹೊತ್ತಿಗೆ ‘ಭಾರತ ಲಸಿಕೆ ವಿತರಣೆ ಕಾರ್ಯಯೋಜನೆ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಆ ಯೋಜನೆಯನ್ನು ಎಷ್ಟು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂಬುದಕ್ಕೆ ಲಸಿಕೆ ಅಭಿಯಾನದ ಈ ಅವ್ಯವಸ್ಥೆಯೇ ಸಾಕ್ಷಿ. 2020ರ ಆಗಸ್ಟ್ ನಲ್ಲಿ ಲಸಿಕಾ ಕಾರ್ಯಯೋಜನೆ ಸಿದ್ಧಪಡಿಸಿದ್ದ ಸರ್ಕಾರ, ಲಸಿಕೆಗೆ ಮೊದಲ ಬೇಡಿಕೆ ಸಲ್ಲಿಸಿದ್ದು ಬರೋಬ್ಬರಿ ನಾಲ್ಕು ತಿಂಗಳ ಬಳಿಕ 2021ರ ಜನವರಿಯಲ್ಲಿ! ಅದೂ ಕೂಡ ತೀರಾ ಅತ್ಯಲ್ಪ ಪ್ರಮಾಣದ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಲಸಿಕೆಯ ಮೊದಲ ಬ್ಯಾಚ್ ಸರಬರಾಜಾಗುತ್ತಿದ್ದಂತೆ ಜನವರಿ 16ರಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಹೀಗೆ ತಯಾರಿ ಇಲ್ಲದೆ, ಸೂಕ್ತ ಕಾರ್ಯಯೋಜನೆ ಇಲ್ಲದೆ, ಅಗತ್ಯ ದಾಸ್ತಾನು ಇಲ್ಲದೆ ಆರಂಭಿಸಿದ ತರಾತುರಿಯ ಅಭಿಯಾನದ ಪರಿಣಾಮವಾಗಿ, ಒಂದು ಕಡೆ ಮಾರ್ಚ್- ಏಪ್ರಿಲ್ ಹೊತ್ತಿಗೆ ಕರೋನಾ ಎರಡನೇ ಅಲೆ ದೇಶದಲ್ಲಿ ಭಾರೀ ಸಾವುನೋವಿನ ರುದ್ರನರ್ತನ ನಡೆಸಿರುವಾಗ, ಕೇವಲ ಶೇ.0.5ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡುವಂತಹ ತೀರಾ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ದೇಶದ ಜನತೆ ಜೀವ ಉಳಿಸಿಕೊಳ್ಳಲು ಕಷ್ಟದ ದಿನಗಳ ನಡುವೆಯೂ ಮೂರು ನಾಲ್ಕು ಪಟ್ಟು ಹಣ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬೇಕಾಗಿದೆ.

ಭಾರತದ ಅವಿವೇಕಿ ಲಸಿಕೆ ನೀತಿಯ ಕಾರಣದಿಂದಾಗಿ, ಸೂಕ್ತ ಲಸಿಕೆ ದಾಸ್ತಾನು ಮಾಡಿಕೊಳ್ಳದ ಹೊಣೆಗೇಡಿತನದಿಂದಾಗಿ ದೇಶದ ಜನ ಮಾತ್ರವಲ್ಲ; ಇತರ ದೇಶಗಳ ಜನ ಕೂಡ ಕರೋನಾದ ದವಡೆಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಲಸಿಕೆ ಕೊರತೆಯ ಕಾರಣದಿಂದ ಹೇರಿರುವ ಲಸಿಕೆ ರಫ್ತು ನಿರ್ಬಂಧದಿಂದಾಗಿ ಭಾರತದ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳನ್ನೇ ನಂಬಿಕೊಂಡಿದ್ದ ದೇಶಗಳೂ ಈಗ ಲಸಿಕೆ ಇಲ್ಲದೆ ಆತಂಕಕ್ಕೆ ಸಿಲುಕಿವೆ. ತನ್ನದೇ ಜನರಿಗೆ ಉಚಿತ ಲಸಿಕೆ ನೀಡಲು ಪ್ರಧಾನಿ ಮೋದಿ ಸರ್ಕಾರ ತೋರಿದ ಜನದ್ರೋಹಿ ಜಿಪುಣತನದ ಪ್ರತಿಫಲವಾಗಿ ಈಗ ಭಾರತೀಯರು ಮಾತ್ರವಲ್ಲದೆ, 90 ಕ್ಕೂ ಹೆಚ್ಚು ದೇಶಗಳ ಬಡ ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ!

ಈ ನಡುವೆ, ಮೊನ್ನೆ ಲಸಿಕೆ ಸರಬರಾಜು ಕುರಿತು ಮಾತುಕತೆಗೆ ಹೋಗಿದ್ದ ವಿದೇಶಾಂಗ ಸಚಿವ ಜೈಶಂಕರ್, “ದೇಶಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಮೀರಿ ಜಾಗತಿಕ ಒಳಿತಿಗಾಗಿ ಕೆಲಸ ಮಾಡಬೇಕು” ಎಂದು ಹೂವರ್ ಇನ್ ಸ್ಟಿಟ್ಯೂಟ್ ನಲ್ಲಿ ಭಾಷಣ ಬಿಗಿದಿದ್ದಾರೆ!.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...