ಕಳೆದ ವಾರ ಅಮೆರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನಲ್ಲಿ ಪ್ರಜಾಪ್ರಭುತ್ವ ಹುಟ್ಟಿದ ರಾಷ್ಟ್ರ ಭಾರತ ಎಂದು ಹೇಳಿದ್ದರು. ಆದರೆ ಅದು ಹುಟ್ಟಿದ ಸ್ಥಳದಲ್ಲಿ ಇಂದು ಪ್ರಜಾಪ್ರಭುತ್ವ ಪ್ರವರ್ಧಮಾನಕ್ಕೆ ಬರುತ್ತಿದೆಯೇ ಎಂದು ಕೇಳಲು ಯಾರೂ ಈ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಈ ಪ್ರಶ್ನೆಯನ್ನು ಕೇಳಬೇಕಾಗಿದ್ದುದು ಅತ್ಯಂತ ಮಹತ್ವದ್ದಾಗಿತ್ತು. ಏಕೆಂದರೆ ಇತ್ತೀಚೆಗೆ ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ಮಟ್ಟವನ್ನು ಅಳೆಯುವ ಎಲ್ಲಾ ಸಂಸ್ಥೆಗಳು ಭಾರತವು ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವಕ್ಕೆ ಜಾರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿವೆ.
ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿರುವುದನ್ನು ಹಲವು ಸಮೀಕ್ಷೆಗಳು ಸಾಬೀತುಪಡಿಸಿವೆ. 2018 ರಲ್ಲಿ, ‘ವೆರೈಟಿ ಆಫ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್’ ಭಾರತವನ್ನು ‘ಚುನಾವಣಾ ಪ್ರಜಾಪ್ರಭುತ್ವ ( ‘ಲಿಬರಲ್ ಪ್ರಜಾಪ್ರಭುತ್ವ’ ಅಲ್ಲ) ಎಂದು ಹೇಳಿತ್ತು. ‘ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್’ನ 2019 ರ ಪ್ರಜಾಪ್ರಭುತ್ವ ಸೂಚ್ಯಂಕವು ಜಾಗತಿಕ ಶ್ರೇಯಾಂಕದಲ್ಲಿ ಭಾರತ 10 ಸ್ಥಾನ ಕೆಳಗಿಳಿದು 51 ನೇ ಸ್ಥಾನಕ್ಕೆ ಕುಸಿದಿದೆ ಎಂದು ತೋರಿಸಿದೆ. ಆ ಸಮೀಕ್ಷೆಯ ಪ್ರಕಾರ ಭಾರತವು ದಕ್ಷಿಣ ಆಫ್ರಿಕಾ, ಮಲೇಷ್ಯಾ, ಕೊಲಂಬಿಯಾ ಮತ್ತು ಅರ್ಜೆಂಟೀನಾದ ನಂತರದ ಸ್ಥಾನದಲ್ಲಿದೆ. ದೇಶದೊಳಗಿನ ನಾಗರಿಕ ಸ್ವಾತಂತ್ರ್ಯದ ಕುಸಿತದ ಆಧಾರದ ಮೇಲೆ ಈ ರೇಟಿಂಗ್ ನೀಡಲಾಗಿತ್ತು.
2020 ರಲ್ಲಿ, ‘ಫ್ರೀಡಂ ಹೌಸ್’ ತನ್ನ ವಾರ್ಷಿಕ ವರದಿಯಲ್ಲಿ, “ವಿಶ್ವದ 25 ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವಗಳಲ್ಲಿ ಭಾರತವು ಅತಿದೊಡ್ಡ ಕುಸಿತವನ್ನು ಅನುಭವಿಸಿದೆ” ಎಂದು ಹೇಳಿತ್ತು. ಇದರ ಪರಿಣಾಮವಾಗಿ, ಭಾರತವು ಈಗ ಹೈಟಿ, ಇರಾನ್, ನೈಜೀರಿಯಾ, ಸುಡಾನ್, ಟುನೀಶಿಯಾ, ಟರ್ಕಿ, ಹಾಂಗ್ ಕಾಂಗ್ ಮತ್ತು ಉಕ್ರೇನ್‌ಗಳಂತಹ ದೇಶಗಳ ಸಾಲಿಗೆ ಸೇರಿದಂತಾಗಿದೆ.
2014 ರಿಂದ ಭಾರತವು ಪತ್ರಿಕಾ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತಿದೆ. ದೇಶದ ಬಹುತೇಕ ಮಾಧ್ಯಮಗಳು ಒಂದೇ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಿದ್ದು ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತವೆ. 2016 ರ ಮತ್ತು 2020 ರ ನಡುವೆ ವಾರ್ಷಿಕ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಒಂಬತ್ತು ಸ್ಥಾನಗಳಷ್ಟು ಕುಸಿದಿದೆ. ಪರಿಗಣನೆಗೆ ತೆಗೆದುಕೊಂಡಿರುವ 180 ರಾಷ್ಟ್ರಗಳಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ‘ಫ್ರೀಡಂ ಹೌಸ್’ ಭಾರತಕ್ಕೆ ತಾನು ನೀಡಿರುವ ಶ್ರೇಯಾಂಕವನ್ನು ಸಮರ್ಥಿಸಿಕೊಂಡಿದ್ದು ತನ್ನ ರ‌್ಯಾಕಿಂಗ್ ಕೇವಲ ಪತ್ರಿಕಾ ಸ್ವಾತಂತ್ರ್ಯವನ್ನು ಮಾತ್ರ ಆಧರಿಸಿದೆ ಎಂದಿದೆ. “ಮಾಧ್ಯಮಗಳಲ್ಲಿನ ನಿರ್ಣಾಯಕ ಧ್ವನಿಗಳನ್ನು ನಿಗ್ರಹಿಸಲು ಅಧಿಕಾರಿಗಳು ಭದ್ರತೆ, ಮಾನನಷ್ಟ, ದೇಶದ್ರೋಹ ಮತ್ತು ದ್ವೇಷದ ಭಾಷಣ ಕಾನೂನುಗಳನ್ನು ಬಳಸಿದ್ದಾರೆ. ಅಭಿವ್ಯಕ್ತಿಯ ರೂಪಗಳನ್ನು ನಿರುತ್ಸಾಹಗೊಳಿಸುವ ಗುರಿಯನ್ನು ಹೊಂದಿರುವ ಹಿಂದೂ ರಾಷ್ಟ್ರೀಯವಾದಿ ಅಭಿಯಾನಗಳು ಸ್ವಯಂ ಸೆನ್ಸಾರ್ಶಿಪ್ ಅನ್ನು ಉಲ್ಬಣಗೊಳಿಸಿ ಸರ್ಕಾರವನ್ನು ಪ್ರಶ್ನಿಸುವ ಮಾಧ್ಯಮಗಳನ್ನು ‘ರಾಷ್ಟ್ರ ವಿರೋಧಿ’ ಎಂದು ಬಿಂಬಿಸಲಾಗುತ್ತಿದೆ “ ಎಂದಿದೆ.
ಈ ಒಮ್ಮುಖ ಅಭಿಪ್ರಾಯಗಳ ಹೊರತಾಗಿಯೂ, ಯಾವುದೇ ಪಾಶ್ಚಿಮಾತ್ಯ ಸರ್ಕಾರವು ನರೇಂದ್ರ ಮೋದಿಯವರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ. ಕಮಲಾ ಹ್ಯಾರಿಸ್ ಅವರು ಪ್ರಜಾಪ್ರಭುತ್ವವು ಮಾನವ ಹಕ್ಕುಗಳ ವಿಷಯದಲ್ಲಿ ಏನನ್ನು ಸೂಚಿಸುತ್ತದೆ ಎಂಬುವುದನ್ನು ಸರಳವಾಗಿ ಹೇಳಿದ್ದರಾದರೂ, ಆಂಥೋನಿ ಬ್ಲಿಂಕನ್ ಅವರು ಜುಲೈನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಬಳಸಿದ ಪದಗಳಿಗಿಂತಲೂ ಸೌಮ್ಯವಾದ ಪದಗಳನ್ನು ಬಳಸಲಾಗಿದೆ.
ಪಶ್ಚಿಮದ ರಾಷ್ಟ್ರಗಳು ಭಾರತದ ಬಗ್ಗೆ ಮೌನವಾಗಿರಲು ಮುಖ್ಯ ಕಾರಣ ಇಂಡೋ-ಪೆಸಿಫಿಕ್‌ನಲ್ಲಿ ಚೀನಾವನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಆ ದೇಶಗಳಿಗೆ ಭಾರತದ ಅಗತ್ಯವಿದೆ. ಸರಳವಾಗಿ ಹೇಳುವುದಾದರೆ ಈಗ ಚೀನಾ ಮತ್ತು ರಷ್ಯಾ ಒಂದು ದೊಡ್ಡ ಒಕ್ಕೂಟವನ್ನು ರಚಿಸುತ್ತಿದೆ ಮತ್ತದನ್ನು ದುಷ್ಟ ಕೂಟ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪಾಶ್ಚಿಮಾತ್ಯರು ಭಾರತವನ್ನು ಒಂದು ವಹಿವಾಟಿನ ರೀತಿಯಲ್ಲಿ ಪ್ರಮುಖ ರಾಷ್ಟ್ರವಾಗಿ ನೋಡುತ್ತಿವೆ ಎನ್ನುವುದು ಸ್ಪಷ್ಟ.
ಆದರೆ ಇಂತಹ ವಿಚಾರಗಳು ಪ್ರಪಂಚದ ಅತ್ಯಂತ ಹಳೆಯ ಆಧುನಿಕ ಪ್ರಜಾಪ್ರಭುತ್ವದ ವಾಸ್ತವಿಕತೆಯನ್ನು, ವಾಸ್ತವಿಕ ರಾಜಕೀಯವನ್ನು ಮತ್ತು ಅದರ ಹೆಚ್ಚಿನ ಯುರೋಪಿಯನ್ ಮಿತ್ರರ ಇಂಗಿತಗಳನ್ನು ಬಹಿರಂಗಪಡಿಸುತ್ತವೆ. ಅನಿವಾರ್ಯ ಎಂದು ಕರೆಸಿಕೊಳ್ಳುವ ಅಂತಾರಾಷ್ಟ್ರೀಯ ಸಂಬಂಧಗಳ ಇಂತಹ ಸಿನಿಕತನದ ದೃಷ್ಟಿಕೋನವು ಪ್ರಜಾಪ್ರಭುತ್ವಕ್ಕೆ ಮಾರಕ. ಪಾಶ್ಚಿಮಾತ್ಯ ರಾಷ್ಟ್ರಗಳ ಬದ್ಧತೆಯು ಅವುಗಳ ಲಾಭಕ್ಕೆ ಮಾತ್ರ ಸೀಮಿತ ಎಂಬುವುದು ಪದೇ ಪದೇ ಸಾಬೀತಾಗುತ್ತಿವೆ. ಆದರೆ ಈ ರಾಷ್ಟ್ರಗಳ ತಮ್ಮ ಸ್ವಹಿತವನ್ನು ಮಾತ್ರ ಕಾಪಾಡಿಕೊಳ್ಳುವ ತತ್ವವು ಮುಂದೊಂದು ದಿನ ಅವರಿಗೇ ಮುಳುವಾಗಲಿದೆ ಎಂಬುವುದು ಮಾತ್ರ ಸತ್ಯ.