ಕಳೆದೆರಡು ದಿನಗಳ ಹಿಂದೆ ಕಾರ್ಯಕರ್ತರ ಸಭೆಯಲ್ಲಿ ಏಕಾಏಕಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ(BJP) ಸಂಸದ ಅನಂತ್‌ಕುಮಾರ್ ಹೆಗಡೆ (Ananthkumar Hegde) ಅಬ್ಬರಿಸಿ, ಬೊಬ್ಬೆರಿದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ರಾಜ್ಯ ರಾಜಕಾರಣದಲ್ಲಿ, ಲೋಕಸಭಾ (Lokasabha election) ಚುನಾವಣೆಯ ಹೊಸ್ತಿಲಿನಲ್ಲಿ ಹೀಗೆ ಏಕಾಏಕಿ ಅನಂತ್‌ಕುಮಾರ್ ಹೆಗಡೆ ಅಬ್ಬರಿಸಿದ್ದೇಕೆ? ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಸಾಲು ಸಾಲು ಕಾರಣಗಳನ್ನು ಮುಂದಿಟ್ಟುಕೊಂಡು ಸಂಸದ ಅನಂತ್‌ಕುಮಾರ್ ಹೆಗಡೆ ಅಬ್ಬರಿಸಿ ಬೊಬ್ಬೆರೆದಿಲ್ಲ. ಕೇವಲ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ (BJP)ಟಿಕೆಟ್ ತಮ್ಮ ಕೈ ತಪ್ಪಿ ಹೋಗಬಾರದೆಂಬ ಏಕೈಕ ಕಾರಣದಿಂದ ಹೀಗೆ ಅಯೋಧ್ಯೆಯ ವಿಚಾರವನ್ನು ಇಟ್ಟುಕೊಂಡು ಸಿಎಂ ಸಿದ್ಧರಾಮಯ್ಯರ (Siddaramiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಸಿಎಂ ಸಿದ್ಧರಾಮಯ್ಯರ ವಿರುದ್ಧ ಏಕವಚನ ಪದ ಪ್ರಯೋಗ
ಕಳೆದ ನಾಲ್ಕುವರೆ ವರ್ಷಗಳಿಂದಲೂ ಕ್ಷೇತ್ರದ ಅಭಿವೃದ್ಧಿಯತ್ತ ಗಮನವನ್ನೇ ಹರಿಸಿದೇ, 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ಸಕ್ರಿಯರಾಗದೇ ಜಿಲ್ಲೆಯಲ್ಲಿ ಹಾಗೂ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಪಕ್ಷ ಸಂಘಟನೆಗೂ ಆಗಮಿಸದೇ, ಆರೋಗ್ಯದ ಕಾರಣವೊಡ್ಡಿ, ಖುದ್ದು ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬಂದಾಗಲೂ ಗೈರಾಗಿದ್ದ ಅನಂತ್‌ಕುಮಾರ್ ಹೆಗಡೆ, ಇದೀಗ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿದ್ರೆ, ಕಳೆದ ನಾಲ್ಕುವರೆ ವರ್ಷಗಳಿಂದಲೂ ಕ್ಷೇತ್ರದಲ್ಲಿ ಒಂದೇ ಒಂದು ದಿನ ಕಾರ್ಯಕರ್ತರ ಸಭೆಯನ್ನು ಅನಂತ್‌ಕುಮಾರ್ ಹೆಗಡೆ ಮಾಡಿಲ್ಲ ಎಂಬುದು ಇಲ್ಲಿ ನೆನಪಿಸಿಕೊಳ್ಳಲೇಬೇಕಾದ ವಿಚಾರ.
ಇದು ಚುನಾವಣೆಯ ಗಿಮ್ಮಿಕ್ಕಾ?
ಬಹುತೇಕ ಅನಂತ್‌ಕುಮಾರ್ ಹೆಗಡೆ ಅಬ್ಬರಿಸಿದ್ದನ್ನು ನೋಡಿದ್ರೆ, ಇದು ಪಕ್ಕಾ ಚುನಾವಣೆಯ ಗಿಮ್ಮಿಕ್ಕು ಎನ್ನಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಅಧಿಕಾರದಲ್ಲಿದೆ. 2023 ಕ್ಕೂ ಮುನ್ನಾ ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಈಗ ಭಟ್ಕಳದ ಚಿನ್ನದಪಳ್ಳಿಯಲ್ಲಿನ ಮಸೀದಿ ಮಾರುತಿ ದೇವಾಲಯವಾಗಿತ್ತು. ಅದನ್ನು ಒಡೆದೇ ತೀರುತ್ತೇವೆ ಎಂದು ಅನಂತ್‌ಕುಮಾರ್ ಹೆಗಡೆ ಕೊಟ್ಟಿರುವ ಹೇಳಿಕೆ ಗಿಮ್ಮಿಕ್ ಅಲ್ಲದೇ ಬೇರೇನು?
ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದಾಗ ಮಸೀದಿ ಕೆಡವಿ, ಮಂದಿರ ಕಟ್ಟಬಹುದಿತ್ತಲ್ಲವೇ? ಇದನ್ನು ಅನಂತ್‌ಕುಮಾರ್ ಹೆಗಡೆ ಯಾರನ್ನು ಪ್ರಶ್ನಿಸಿಲ್ಲ. ಆದ್ರೆ, ಇದೀಗ ಕಾರ್ಯಕರ್ತರ ಸಭೆಯಲ್ಲಿ ಅನಂತ್‌ಕುಮಾರ್ ಹೆಗಡೆ ಅವರ ಮಾತಿಗೆ ಶಿಳ್ಳೆ ಚಪ್ಪಾಳೆ ಮಾತ್ರ ಹೊಡೆಯುತ್ತಿದ್ದು, ಇದೊಂದು ಪಕ್ಕಾ ಚುನಾವಣೆಯ ಗಿಮ್ಮಿಕ್ ಎಂದು ಬಣ್ಣಿಸಲಾಗುತ್ತಿದೆ.
ಉತ್ತರ ಕನ್ನಡ ಕ್ಷೇತ್ರಕ್ಕೆ ಬೇಕಾಗಿದ್ದ ಹೈಟೆಕ್ ಆಸ್ಪತ್ರೆ ವಿಚಾರದಲ್ಲಿ ಅನಂತ್‌ಕುಮಾರ್ ಹೆಗಡೆ ಜಾಣಮೌನ!
ಇಷ್ಟು ಮಾತ್ರವಲ್ಲದೇ, ಕಳೆದ ಸರ್ಕಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಬಹು ದೊಡ್ಡ ಕೂಗು ಕೇಳಿ ಬಂದಿತ್ತು. ಆಗ ಇದೇ ಸಂಸದ ಅನಂತ್‌ಕುಮಾರ್ ಹೆಗಡೆ ಒಂದೇ ಒಂದು ಶಬ್ದವನ್ನು ತುಟಿಬಿಚ್ಚಿ ಮಾತನ್ನಾಡಿಲ್ಲ. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತ ಅನಂತ್‌ಕುಮಾರ್ ಹೆಗಡೆ, ಟಿಕೆಟ್ ಕೈ ತಪ್ಪಬಾರದೆಂಬ ಕಾರಣಕ್ಕೆ ಮೈ ಕೊಡವಿ ಎದ್ದು ನಿಂತಿದ್ದು, ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯರ ವಿರುದ್ಧ ಹರಿಹಾಯ್ದಿದ್ದಾರೆ ಎಂಬ ಚರ್ಚೆಗಳು ಬಹಳ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ.