ದೆಹಲಿಯಲ್ಲಿ ನಡೆದ ಹಗ್ಗಾಜಗ್ಗಾಟದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲುಗೈ ಸಾಧಿಸಿದ್ದಾರೆ. ಸಿದ್ದರಾಮಯ್ಯ ಯಾರಿಗೆಲ್ಲಾ ಮಂತ್ರಿಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದರೋ ಅವರಿಗೆ ಸಚಿವ ಸ್ಥಾನ ಸಿಗದಂತೆ ಮಾಡುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಆದರೂ ಬಹುತೇಕ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಸಿಎಂ, ಡಿಸಿಎಂ ಸೇರಿ 10 ಜನರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇನ್ನು ಶನಿವಾರ 24 ಜನ ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಪ್ರತಿಧ್ವನಿಗೆ ತಿಳಿಸಿವೆ.

ಯಾರೆಲ್ಲಾ ಮಂತ್ರಿಗಳಾಗಿ ಅಧಿಕಾರ ಹಿಡಿಯುತ್ತಾರೆ..?
ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಗಿದ್ದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಲಿಂಗಾಯತ ಕೋಟಾದಲ್ಲಿ ಈಶ್ವರ್ ಖಂಡ್ರೆ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಇನ್ನು ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಕೋಟಾದಲ್ಲಿ ಸಚಿವೆ ಆಗಲಿದ್ದಾರೆ. ಲಿಂಗಾಯತ ಸಮುದಾಯದ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ರೆಡ್ಡಿ ಲಿಂಗಾಯತ ಸಮುದಾಯದ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಲಿಂಗಾಯತ ಸಮುದಾಯದ ಮತ್ತೋರ್ವ ನಾಯಕ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ S.S.ಮಲ್ಲಿಕಾರ್ಜುನ ಸಚಿವರಾಗಿ ಪ್ರದಗ್ರಹಣ ಸ್ವೀಕಾರ ಮಾಡಲಿದ್ದಾರೆ.
ಹಿಂದುಳಿದ ವರ್ಗಕ್ಕೂ ಮಣೆ ಹಾಕಿದ ಹೈಕಮಾಂಡ್..
ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಗಮಂಗಲ ಕ್ಷೇತ್ರದ ಶಾಸಕ ಎನ್. ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಚಿಂತಾಮಣಿ ಶಾಸಕ ಡಾ.ಎಂ.ಸಿ ಸುಧಾಕರ್‌ಗೂ ಸಚಿವ ಸ್ಥಾನ ಫಿಕ್ಸ್ ಆಗಿದೆ. ಇನ್ನು ಕುರುಬ ಸಮುದಾಯದ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಮುಸ್ಲಿಂ ಧರ್ಮದ ರಹೀಂ ಖಾನ್, ರಜಪೂತ ಸಮುದಾಯಕ್ಕೆ ಸೇರಿದ ಜೇವರ್ಗಿ ಶಾಸಕ ಅಜಯ್ ಸಿಂಗ್, ಉಪ್ಪಾರ ಸಮುದಾಯದ ಚಾಮರಾಜನಗರ ಶಾಸಕ ಸಿ. ಪುಟ್ಟರಂಗ ಶೆಟ್ಟಿ, ಎಸ್ಸಿ ಸಮುದಾಯದ ಮಳವಳ್ಳಿ ಶಾಸಕ ಪಿ. ನರೇಂದ್ರ ಸ್ವಾಮಿ, ಎಸ್ಟಿ ಸಮುದಾಯದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ , ಜೈನ ಧರ್ಮದ ಹಿರಿಯೂರು ಶಾಸಕ ಡಿ.ಸುಧಾಕರ್, ಮೊಗವೀರ ಸಮುದಾಯದ ಭಟ್ಕಳ ಶಾಸಕ ಮಂಕಾಳ್ ವೈದ್ಯ, ಬೋವಿ ಸಮುದಾಯದ ಕನಕಗಿರಿ ಶಿವರಾಜ್ ತಂಗಡಗಿ ಅವರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಬರುವಂತೆ ಕರೆ ಬಂದಿದೆ ಎನ್ನಲಾಗಿದೆ.
ಸಚಿವಗಿರಿ ತಪ್ಪಿದ್ದು ಯಾರಿಗೆ ಮತ್ತು ಯಾಕೆ..?
ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಹೆಚ್.ಸಿ ಬಾಲಕೃಷ್ಣ, ಹೆಚ್.ಸಿ ಮಹದೇವಪ್ಪ, ಕೆ.ಎನ್ ರಾಜಣ್ಣ ಸೇರಿದಂತೆ ಪ್ರಮುಖ ನಾಯಕರಿಗೆ ಸಚಿವ ಸ್ಥಾನ ತಪ್ಪಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ನಾಳೆ ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಇನ್ನು ಕೂಡ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಯುತ್ತಲೇ ಇದೆ. ದೆಹಲಿಯಿಂದ ವಾಪಸ್ ಬೆಂಗಳೂರಿಗೆ ಬಂದಿದ್ದ ಡಿ.ಕೆ ಶಿವಕುಮಾರ್ ಮತ್ತೆ ಇಂದು ದೆಹಲಿಗೆ ತೆರಳಲಿದ್ದು, ಕೊನೇ ಕ್ಷಣದಲ್ಲಿ ಕೆಲವೊಂದು ಹೆಸರಲು ಅದಲು ಬದಲಾದರೂ ಅಚ್ಚರಿಯೇನಿಲ್ಲ ಎಂದು ಕಾಂಗ್ರೆಸ್ ನಾಯಕರೇ ಮಾತನಾಡಿದ್ದಾರೆ.
ಕೃಷ್ಣಮಣಿ