‘ಟಿಪ್ಪು ಸುಲ್ತಾನ್ ವೀರನಲ್ಲ’ ನಿಮ್ಮ ವಾದ ಎಷ್ಟು ಸರಿ..? ಇಲ್ಲಿದೆ ನೋಡಿ..
‘ಮೈಸೂರು ಹುಲಿ ಟಿಪ್ಪು ಸುಲ್ತಾನ್’ ಎನ್ನುವುದನ್ನು ಓದುತ್ತಿರುವ ನಿಮಗೆ ರಕ್ತ ಕುದಿಯುತ್ತ ಇರಬಹುದು. ಅಥವಾ ಟಿಪ್ಪು ಸುಲ್ತಾನ್ ಬಗ್ಗೆ ಹೆಮ್ಮೆ ಆಗುತ್ತಲೂ ಇರಬಹುದು. ಕರ್ನಾಟಕದಲ್ಲಿ ಮೈಸೂರು ಸಂಸ್ಥಾನವನ್ನು ಕೆಚ್ಚೆದೆಯಿಂದ ಆಳಿದವರ ಸಾಲಿನಲ್ಲಿ ಟಿಪ್ಪು ಸುಲ್ತಾನ್ ಇದ್ದನು ಎನ್ನುವುನ್ನ ಇತಿಹಾಸದ ಪುಟಗಳಲ್ಲಿ ಅಚ್ಚೊತ್ತಲಾಗಿದೆ. ಇತಿಹಾಸವನ್ನು ಸೃಷ್ಟಿಸಬಹುದೇ ಹೊರತು ಇತಿಹಾಸವನ್ನು ಅಳಿಸಲು ಸಾಧ್ಯವೇ ಇಲ್ಲ. ಆದರೆ ರಾಜಕೀಯ ಕಾರಣಗಳಿಗಾಗಿ ಟಿಪ್ಪು ಸುಲ್ತಾನ್ ಧರ್ಮಾಂದ, ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ ಎಂದು ಮತ ವಿಭಜನೆ ಮಾಡಬಹುದು. ಆದರೆ ಇತ್ತೀಚಿಗೆ ನಡೆದ ಚುನಾವಣೆ ಮತವಿಭಜನೆಯೂ ಸಾಧ್ಯವಿಲ್ಲ. ಕನ್ನಡಿಗರೂ ಕೂಡ ಬುದ್ಧಿವಂತರು ಎಂದು ಸಾರಿ ಸಾರಿ ಹೇಳುವಂತಿದೆ ಫಲಿತಾಂಶ. ಟಿಪ್ಪು ಸುಲ್ತಾನ್ ಏನು..? ಆತನ ಸಾಧನೆ ಏನು ಅನ್ನೋದಕ್ಕೆ ಇದೀಗ ಒಂದು ಘಟನೆ ನಡೆದಿದೆ.

143 ಕೋಟಿಗೆ ಟಿಪ್ಪು ಖಡ್ಗ ಲಂಡನ್ನಲ್ಲಿ ಹರಾಜು..!
ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ಟಿಪ್ಪು ಸುಲ್ತಾನ್, ಹಾಳು ರಾಜಕೀಯಕ್ಕಾಗಿ ಕರುನಾಡಿಯ ಹೆಮ್ಮೆಯ ಕುವರನನ್ನು ಅವಮಾನಿಸಲಾಗ್ತಿದೆ. ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಲಾಗ್ತಿದೆ. ಆದರೂ ಜಾಗತಿಕ ಮಟ್ಟದಲ್ಲಿ ಟಿಪ್ಪುವಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಲೇ ಇದೆ. ಮೇ 23ರಂದು ಲಂಡನ್ನ ಬೋನ್ಹಾಮ್ಸ್ನಲ್ಲಿ ಟಿಪ್ಪು ಸುಲ್ತಾನ ಬಳಸಿದ ಖಡ್ಗವೊಂದನ್ನು ಹರಾಜು ಹಾಕಲಾಗಿದ್ದು, 14 ಮಿಲಿಯನ್ ಪೌಂಡ್ಸ್ (143 ಕೋಟಿ ರೂಪಾಯಿ)ಗೆ ಮಾರಾಟ ಆಗಿದೆ. ಈ ಖಡ್ಗವನ್ನು ಮೊಘಲ್ ಕಾಲದಲ್ಲಿ ತಯಾರು ಮಾಡಲಾಗಿದ್ದು, ಜರ್ಮನ್ ಮೂಲದ ಬ್ಲೇಡ್ ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಟಿಪ್ಪು ಮಲಗುವ ಕೋಣೆಯಿಂದ ಕದ್ದಿದ್ದ ಖಡ್ಗ..!
ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸಾವನ್ನಪ್ಪಿದ ಬಳಿಕ ಬ್ರಿಟೀಷರು ಮೈಸೂರು ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದರು. ಈ ವೇಳೆ ಟಿಪ್ಪು ಸುಲ್ತಾನ್ ಮಲಗುವ ಕೋಣೆಯಲ್ಲಿದ್ದ ಈ ಖಡ್ಗವನ್ನು ಮೇ 04, 1799ರಲ್ಲಿ ತೆಗೆದುಕೊಂಡು ಹೋಗಲಾಗಿತ್ತು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ. ಶ್ರೀರಂಗಪಟ್ಟಣದ ಮೈಸೂರು ಲಯನ್ಸ್ ಪ್ಯಾಲೇಸ್ನಿಂದ ತೆಗೆದುಕೊಂಡು ಬರಲಾಗಿದ್ದು, ಇದರ ಮೇಲೆ ‘ಆಡಳಿತಗಾರನ ಖಡ್ಗ’ ಎಂದು ಬರೆಯಲಾಗಿದೆ. 3 ಬಾರಿ ಟಿಪ್ಪು ಸುಲ್ತಾನ್ ವಿರುದ್ಧ ಯುದ್ಧದಲ್ಲಿ ಸೋತಿದ್ದ ಬ್ರಿಟೀಷರು ನಾಲ್ಕನೇ ಬಾರಿ ಆತನನ್ನು ಹತ್ಯೆ ಮಾಡಲು ಯಶಸ್ವಿಯಾಗಿದ್ದರು. ಧೈರ್ಯ ಮತ್ತು ಉತ್ಸಾಹದಿಂದ ಸೇನೆಯನ್ನು ಮುನ್ನಡೆಸಿದ್ದ ಮೇಜರ್ ಜನರಲ್ ಡೇವಿಡ್ ಬೈರ್ಡ್ಗೆ ಈ ಖಡ್ಗವನ್ನು ಬ್ರಿಟೀಷರು ಉಡುಗೊರೆಯಾಗಿ ನೀಡಿದ್ದರು ಎಂದು ವರದಿಯಾಗಿದೆ.

ಕಾಂಗ್ರೆಸ್ ಕೂಡ ವಿರೋಧ ಮಾಡಬಹುದು.. ಇತಿಹಾಸ ಅಳಿಯಲ್ಲ..
ಟಿಪ್ಪು ಸುಲ್ತಾನ್ಗೆ ಗೌರವ ಕಡಿಮೆ ಆಗಲು ಕಾಂಗ್ರೆಸ್ ಪಕ್ಷವೇ ಪರೋಕ್ಷವಾಗಿ ಕಾರಣವಾಯ್ತು. ಟಿಪ್ಪು ಜಯಂತಿ ಆಚರಣೆ ಮಾಡದೆ ಇದ್ದಿದ್ದರೆ ಟಿಪ್ಪು ಸುಲ್ತಾನ್ ಕರ್ನಾಟಕದಲ್ಲಿ ಅಜರಾಮರ ಆಗಿ ಉಳಿಯುತ್ತಿದ್ದನು. ಆದರೆ ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದರಿಂದಲೇ ಇಂದು ಟಿಪ್ಪು ದೇಶದ್ರೋಹಿ ಆಗಿಬಿಟ್ಟಿದ್ದಾನೆ. ಟಿಪ್ಪುವನ್ನು ವಿರೋಧ ಮಾಡುವವರ ವಾದ ಏನು ಅಂದರೆ ಟಿಪ್ಪು ರಾಜ್ಯ ವಿಸ್ತರಣೆಗಾಗಿ ಅಕ್ಕಪಕ್ಕದ ಹಿಂದೂ ರಾಜರುಗಳ ಮೇಲೆ ದಾಳಿ ಮಾಡಿದ್ದಾನೆ ಎನ್ನುವುದು. ಇದು ಸತ್ಯ ಕೂಡ ಹೌದು. ಅಂದಿನ ಕಾಲದಲ್ಲಿ ಸಣ್ಣ ಸಣ್ಣ ರಾಜ್ಯಗಳಾಗಿ ಆಳ್ವಿಕೆ ಮಾಡುತ್ತಿದ್ದಾಗ, ಹಿಂದೂ ಮುಸ್ಲಿಂ ಅನ್ನೋ ಬೇಧ ಇರಲಿಲ್ಲ. ಅಕ್ಕ ಪಕ್ಕದ ರಾಜ್ಯಗಳನ್ನು ಸೋಲಿಸಿ ಕೈವಶ ಮಾಡಿಕೊಳ್ಳುತ್ತಿದ್ದರು. ಇನ್ನು ಬ್ರಿಟೀಷರ ಜೊತೆಗೆ 4 ಯುದ್ಧ ಮಾಡಿದ ವೀರ, ಸ್ವಾತಂತ್ರ್ಯ ಹೋರಾಟಗಾರ ಎಂದಾಗ ಆತ ತನ್ನ ರಾಜ್ಯ ರಕ್ಷಣೆಗಾಗಿ ಮಾಡಿದ್ದಾನೆ. ಅದರಲ್ಲಿ ಏನು ವಿಶೇಷ ಎನ್ನುತ್ತಾರೆ. ಒಂದು ವೇಳೆ ತನ್ನ ರಾಜ್ಯವನ್ನು ರಕ್ಷಣೆ ಮಾಡಿಕೊಳ್ಳದಿದ್ದರೆ ಹೇಡಿ ಎಂದು ಇತಿಹಾಸ ಪುಟಗಳಲ್ಲಿ ಉಲ್ಲೇಖ ಆಗುತ್ತಿತ್ತು.

ಚಿನ್ನದ ಹಿಡಿಕೆಯ ಬೆಳ್ಳಿಯ ಖಡ್ಗ ಇಂದು 143 ಕೋಟಿ ರೂಪಾಯಿಗೆ ಹರಾಜು ಆಗಿದೆ ಎನ್ನುವ ವರದಿಗಳನ್ನು ಓದಿದ ಮೇಲೆ ಇತಿಹಾಸದಲ್ಲಿ ಟಿಪ್ಪು ಹೇಗೆ ಆಳ್ವಿಕೆ ಮಾಡಿದ ಅನ್ನೋದನ್ನು ಊಹಿಸಿಕೊಂಡರೆ ಮೈ ಜುಂ ಎನ್ನುತ್ತದೆ. ಇಡೀ ಭಾರತದಲ್ಲಿ ಆರ್ಥಿಕವಾಗಿ ಸದೃಢವಾಗಿದ್ದ ಏಕೈಕ ರಾಜ್ಯ ಎಂದರೆ ಮೈಸೂರು ರಾಜ್ಯವಾಗಿತ್ತು ಎಂದು ಬ್ರಿಟೀಷರು ಉಲ್ಲೇಖಿಸಿದ್ದಾರೆ. ರಾಜಸ್ಥಾನ ಮೂಲದ ಬುಡಕಟ್ಟು ಜನಾಂಗ ತಯಾರಿಸಿರುವ ಈ ಖಡ್ಗವನ್ನು, ಟಿಪ್ಪು ಸುಲ್ತಾನನು 1782 ರಿಂದ 1799ರ ಅವಧಿಯಲ್ಲಿ ಬಳಸಿದ್ದನು ಎಂದು ತಿಳಿಸಲಾಗಿದೆ. ರಾಜಕೀಯ ಏನೇ ಇರಲಿ, ಟಿಪ್ಪು ರೀತಿಯಲ್ಲಿ ನಮ್ಮ ಮೈಸೂರನ್ನು ಆಳಿದ ರಾಜ ಮತ್ತೊಬ್ಬರಿಲ್ಲ ಎಂದೇ ಹೇಳಬಹುದು. ಹಿಂದೂ ದ್ವೇಷಿ ಆಗಿದ್ದರೆ ಶ್ರೀರಂಗನ ದೇವಸ್ಥಾನ ಉಳಿಯುತ್ತಿತ್ತೇ..? ಎನ್ನುವುದನ್ನು ಒಮ್ಮೆ ಮನಸ್ಸಿನಲ್ಲಿ ಕೇಳಿಕೊಳ್ಳಿ ಸಾಕು..
ಕೃಷ್ಣಮಣಿ