ಮೈಸೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆರು ತಿಂಗಳ ಅವಧಿಯಲ್ಲಿಯೇ ಎರಡನೇ ಬಾರಿಗೆ ಪಾಲಿಕೆ ಮೇಯರ್ ಸ್ಥಾನಕ್ಕೆ 2ನೇ ಬಾರಿ ಚುನಾವಣೆ ನಡೆಯುತ್ತಿದ್ದು,ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯುವ ಸಾಧ್ಯತೆ ಗೋಚರಿಸಿದೆ.ಕಳೆದ ಫೆಬ್ರವರಿಯಲ್ಲಿ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಕ್ಕೆ 3ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಭಾರೀ ಕಸರತ್ತಿನ ನಡುವೆಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿತ್ತು. ಪಾಲಿಕೆ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಜೆಡಿಎಸ್ ಸಫಲವಾಗಿತ್ತು. ಆದರೆ,ಆಸ್ತಿ ವಿವರ ಸರಿಯಾಗಿ ನೀಡದ ಕಾರಣ ಹೈಕೋರ್ಟ್ ತೀರ್ಪಿನಿಂದ ಮೇಯರ್ ಆಗಿದ್ದ ರುಕ್ಮಿಣಿ ಸದಸ್ಯತ್ವ ರದ್ದಾಗಿತ್ತು. ಅವರಿಂದ ತೆರವಾಗಿರುವ ಮೇಯರ್ ಸ್ಥಾನಕ್ಕೆ ಇದೇ ಜೂನ್ 11ಕ್ಕೆ ಚುನಾವಣೆ ನಡೆಯಲಿದ್ದು, ಕಳೆದ ಚುನಾವಣೆಯಲ್ಲಿದ್ದ ಮೀಸಲಾತಿಯೇ ಮುಂದುವರಿಯಲಿದೆ.
ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದು ಉಭಯ ಪಕ್ಷಗಳ ಮುಖಂಡರು ಹೇಳಿಕೆ ನೀಡುತ್ತಿದ್ದು,8 ತಿಂಗಳ ಅವಧಿಗೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುವುದು ಎಂದು ಒಪ್ಪಂದವಾದರೆ,ಕಳೆದ ಬಾರಿ ಆಕಾಂಕ್ಷಿಯಾಗಿದ್ದ ಶಾಂತಕುಮಾರಿ ಅವರನ್ನು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ನೀಡುವ ವಿಶ್ವಾಸದ ಮೇಲೆ ಬಿಜೆಪಿ ಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿಗೆ ಜೆಡಿಎಸ್ ಕೈ ಕೊಟ್ಟಿತ್ತು. ಇದರಿಂದ ಪಾಠ ಕಲಿತ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆಯನ್ನಿಟ್ಟಿದ್ದು, ಜೆಡಿಎಸ್ ತಾನಾಗಿಯೇ ಮೈತ್ರಿ ಕೇಳಿಕೊಂಡು ಬಂದರಷ್ಟೇ ಮುಂದುವರಿಯುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಕೊನೆ ಹಂತದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೈಗೂಡದಿದ್ದಲ್ಲಿ, ಬಿಜೆಪಿ ತನ್ನ ದಾಳ ಉರುಳಿಸಲು ಕಾದು ನೋಡುವ ತಂತ್ರಕ್ಕೆ ಜಾರಿದೆ. ಜೊತೆಗೆ ತನ್ನ ಅಭ್ಯರ್ಥಿಯಾಗಿ ಸುನಂದ ಪಾಲನೇತ್ರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ರುಕ್ಮಿಣಿ ಸದಸ್ಯತ್ವ ರದ್ದಾದ ಹಿನ್ನೆಲೆ ತೆರವಾಗಿರುವ ಮೇಯರ್ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಷರತ್ತಿನ ಮೇಲೆ ಜೆಡಿಎಸ್ ಒಪ್ಪಿಗೆ ಸೂಚಿಸಿದೆ.ಒಂದು ವೇಳೆ ಈ ಒಪ್ಪಂದ ಮುಂದುವರಿದರೆ ಕಳೆದ ಬಾರಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಎಂ.ಶಾಂತಕುಮಾರಿ ಅವರಿಗೆ ಮೇಯರ್ ಪಟ್ಟ ದೊರೆಯುವ ಸಾಧ್ಯತೆಗಳಿವೆ. ಇವರ ಜತೆಗೆ ಶೋಭಾ ಸುನಿಲ್, ಹಾಜೀರಾ ಸೀಮಾ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿಗೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟು, ನಂತರದ ಅವಧಿಗೆ ಮೇಯರ್, ಉಪಮೇಯರ್, ವರ್ಕ್ ಕಮಿಟಿ ಎಲ್ಲವನ್ನೂ ಜೆಡಿಎಸ್ಗೆ ಬಿಟ್ಟುಕೊಡಬೇಕು. ಕೊನೆಯ ಅವಧಿಗೂ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ಕಾಂಗ್ರೆಸ್ ಒಪ್ಪಿದರೆ ಮಾತ್ರಮೇಯರ್ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಜೆಡಿಎಸ್ ಹೇಳಿದೆ.
ಈ ಕುರಿತು ಪ್ರಕ್ರಿಯಿಸಿದ ನಗರ ಕಾಂಗ್ರೆಸ್ ಅಧ್ಯಕ್ಷ ಪಿ ಆರ್ ಮೂರ್ತಿ ಅವರು ಮೇಯರ್ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಜೆಡಿಎಸ್ ಒಪ್ಪಿದೆ. ಕಾಂಗ್ರೆಸ್ಗೆ ಉಳಿದ 8 ತಿಂಗಳ ಅವಧಿಗೆ ಮೇಯರ್ ಸ್ಥಾನ ಬಿಟ್ಟುಕೊಡುವುದು. ಇಲ್ಲವೇ ಜೆಡಿಎಸ್ ಮೇಯರ್ ಸ್ಥಾನ ಉಳಿಸಿಕೊಳ್ಳುವುದು ಎಂಬ 2 ಆಯ್ಕೆಯನ್ನು ಸಾ. ರಾ.ಮಹೇಶ್ ನೀಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದಾಗ, ಮೇಯರ್ ಸ್ಥಾನ ಕಾಂಗ್ರೆಸ್ಗೆ ಬೇಕು ಎಂದಿದ್ದಾರೆ. ಅದರಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಕಳೆದ ಬಾರಿಯೇ ಮೇಯರ್ ಸ್ಥಾನ ಬಿಟ್ಟುಕೊಡಲು ನಿರ್ಧರಿಸಿದ್ದೆವು. ಆದರೆ, ಜೆಡಿಎಸ್ ಎಲ್ಲಿದೆ ಎಂದು ಸಿದ್ದರಾಮಯ್ಯ ಟೀಕಿಸಿದ ಕಾರಣ ನಾವು ಪಟ್ಟು ಬಿಡಲಿಲ್ಲ. ಈಗಲೂ ಮೇಯರ್ ಸ್ಥಾನಬಿಟ್ಟುಕೊಡಲು ತಕರಾರೇನಿಲ್ಲ. ಆದರೆ, ಮುಂದಿನ ಬಾರಿಗೆ ಮೇಯರ್, ಉಪಮೇಯರ್, ವರ್ಕ್ ಕಮಿಟಿ ಎಲ್ಲವನ್ನೂ ಜೆಡಿಎಸ್ಗೆ ಬಿಟ್ಟುಕೊಡಬೇಕು. ನಂತರದ ಅವಧಿಗೂ ಮೇಯರ್ ಸ್ಥಾನ ಬೇಕು ಎಂದು ಜೆಡಿಎಸ್ ಮುಖಂಡ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಮುಂದಿನ 24ಗಂಟೆಯಲ್ಲಿ ಮೈಸೂರು ನಗರದ ಮೊದಲ ಪ್ರಜೆ ಆಯ್ಕೆಯಾಗಲಿದ್ದಾರೆ. ಪಕ್ಷ ಹೊಂದಾಣಿಕೆ ಪ್ರಕ್ರಿಯೆ ಕುತೂಹಲ ಮೂಡಿಸಿದೆ. ಮೇಯರ್ ಹುದ್ದೆ ಕಾಂಗ್ರೆಸ್ ಗೆ ಆಫರ್ ಮಾಡಿದ್ದ ಜೆಡಿಎಸ್ ನಿಲುವು ಇನ್ನೂ ನಿಗೂಢವಾಗಿದ್ದು, ಕೊನೆಯ ಗಳಿಗೆಯಲ್ಲಿ ಮೇಯರ್ ಸ್ಥಾನ ತಾವೇ ಉಳಿಸಿಕೊಳ್ಳಲು ಜೆಡಿಎಸ್ ಸದಸ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜೆಡಿಎಸ್ ನ ಜಿಲ್ಲಾ ವರಿಷ್ಠರು ಇನ್ನೂ ಸ್ಪಷ್ಟನೆ ನೀಡಿಲ್ಲ.ಈ ಬಗ್ಗೆ ಇಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಬಹುತೇಕ ನಿರ್ಣಯಗಳು ಇಂದು ಸ್ಪಷ್ಟಪಡಿಸುವ ಸಾಧ್ಯತೆ ಇದ್ದು, ಜೆಡಿಎಸ್ನ ನಾಲ್ಕು ಮಂದಿ ಅಭ್ಯರ್ಥಿಗಳಿಂದ ಅಂತಿಮ ಕಸರತ್ತು ನಡೆಯಲಿದೆ. ಜೆಡಿಎಸ್ನ ಸದಸ್ಯರಿಗೆ ಇಂದೇ ವಿಪ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಆರ್.ಧ್ರುವನಾರಾಯಣ, ಜೂ.11ರಂದು ನಡೆಯಲಿರುವ ಮಹಾಪೌರರ ಚುನಾವಣೆಗೆ ಸಂಬಂಧಿಸಿದಂತೆ ಶಾಸಕರು,ಮಾಜಿ ಶಾಸಕರು,ಪಕ್ಷದ ಪ್ರಮುಖರೊಂದಿಗೆ ಚರ್ಚಿಸಲಾಗಿದೆ. ಕಾಂಗ್ರೆಸ್-ಜೆಡಿಎಸ್ ನಡುವೆ ಆಗಿರುವ ಒಪ್ಪಂದವನ್ನು ಒಡಂಬಡಿಕೆಯಂತೆ ಮುಂದುವರಿಸುತ್ತೇವೆ ಎಂದರು. ಶಾಸಕ ಸಾ.ರಾ.ಮಹೇಶ್ ಅವರು ದೂರವಾಣಿ ಮೂಲಕ ನಗರಾಧ್ಯಕ್ಷ ಆರ್.ಮೂರ್ತಿ,ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಮಾತನಾಡಿದ್ದಾರೆ. ನನ್ನೊಂದಿಗೆ ಸಾ.ರಾ.ಮಹೇಶ್ ಅವರು ದೂರವಾಣಿ ಮೂಲಕ ಮಾತನಾಡಿ, ಈ ಬಾರಿ ಮಹಾಪೌರ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುತ್ತೇವೆ. ನಾಲ್ಕನೇ ಅವಧಿಯಲ್ಲಿ ಮಹಾಪೌರ, ಉಪ ಮಹಾಪೌರ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ ಎನ್ನುವ ಮಾತನ್ನು ಹೇಳಿದ್ದರು.ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೆ. ಮಂಗಳವಾರ ಖುದ್ದು ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ್ದಾಗಲೂ ಚರ್ಚೆ ನಡೆದಿದ್ದರಿಂದ ಈ ಬಾರಿ ಕಾಂಗ್ರೆಸ್ಗೆ ಪಡೆದುಕೊಳ್ಳಿ. ಒಪ್ಪಂದದಂತೆ ನಮಗೆ ಜೆಡಿಎಸ್ ಬಿಡಬೇಕಾಗಿತ್ತು. ಈಗ ಕೊಟ್ಟರೆ ತೆಗೆದುಕೊಳ್ಳಿ, ಮುಂದಿನ ಅವಧಿಗೆ ಮಹಾಪೌರ, ಉಪ ಮಹಾಪೌರರ ಸ್ಥಾನವನ್ನು ಬಿಟ್ಟುಕೊಟ್ಟರೆ ಆಯ್ತು ಎನ್ನುವ ಮಾತನ್ನು ಹೇಳಿದ್ದಾರೆ. ಹಾಗಾಗಿ, ಮುಂದಿನ ಬಾರಿ ಎರಡು ಸ್ಥಾನಗಳನ್ನು ಜೆಡಿಎಸ್ಗೆ ಬಿಡಲು ಕಾಂಗ್ರೆಸ್ ಹೈಕಮಾಂಡ್ ಬದ್ಧವಾಗಿದೆ ಎಂದು ವಿವರಿಸಿದರು.

ಮಹಾಪೌರರ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 8.30ಕ್ಕೆ ಹೈಕಮಾಂಡ್ ನಾಯಕರು ಕಳುಹಿಸುವ ಪಟ್ಟಿಯ ಹೆಸರಿನವರು ನಾಮಪತ್ರ ಸಲ್ಲಿಸಲಿದ್ದಾರೆ. ಸ್ಥಳೀಯವಾಗಿ ಅಭ್ಯರ್ಥಿಯನ್ನಾಗಿ ಯಾರನ್ನೂ ನೇಮಕ ಮಾಡಿಲ್ಲವೆಂದು ಹೇಳಿದರು. ಜೂನ್ 11ರಂದು ನಡೆಯಲಿರುವ ಮಹಾಪೌರ ಚುನಾವಣೆಯಲ್ಲಿ ಕಡ್ಡಾಯವಾಗಿ ಸದಸ್ಯರು ಹಾಜರಿರಬೇಕು. ಪಕ್ಷದ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಎಲ್ಲ ಕಾಂಗ್ರೆಸ್ ಸದಸ್ಯರಿಗೂ ವಿಪ್ ಜಾರಿಗೊಳಿಸಲಾಗಿದೆ ಎಂದೂ ಅವರು ಹೇಳಿದರು.