
ಜೆಡಿಎಸ್ ಅಪ್ಪ ಮಕ್ಕಳ ಪಕ್ಷ.. ಜೆಡಿಎಸ್ ಪಕ್ಷದಲ್ಲಿ ತಮ್ಮ ಮನೆಯವರಿಗೆ ಮಾತ್ರವೇ ಟಿಕೆಟ್ ಕೊಟ್ಟುಕೊಳ್ತಾರೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಆರೋಪ, ಸದಾ ಕಾಲ ಕೇಳಿ ಬರುವಂತಹ ಎವರ್ ಗ್ರೀನ್ ಆರೋಪ ಅಂದರೆ ಸುಳ್ಳಲ್ಲ. ಆದರೆ ಈ ಬಾರಿ ಜೆಡಿಎಸ್ ಪಕ್ಷ ಮತ್ತೆ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಅಭ್ಯರ್ಥಿ ಆಗಿದ್ದಾರೆ. ಈ ಬಗ್ಗೆ ಸೋಮವಾರ – ಮಂಗಳವಾರ ಶಿಗ್ಗಾವಿಯಲ್ಲಿ ಪ್ರಚಾರ ಮಾಡಿದ ಸಿಎಂ ಸಿದ್ದರಾಮಯ್ಯ ಜೆಡಿಎಸ್, ಬಿಜೆಪಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾವೇರಿಯ ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿ ಭರತ್ ಬೊಮ್ಮಾಯಿಗೆ ಟಿಕೆಟ್ ಘೋಷಣೆ ಮಾಡಿದೆ. ಕುಟುಂಬ ರಾಜಕಾರಣ ವಿರೋಧಿಸುವ ನರೇಂದ್ರ ಮೋದಿ ಅವರಿಗೆ ಇದು ಗೊತ್ತಿಲ್ವಾ..? ಕೇವಲ ಇವರು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾ..? ಬೇರೆ ಯಾರು ಇರಲಿಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದ್ದಾರೆ. ಯಾಕೆ ಚನ್ನಪಟ್ಟಣದಲ್ಲಿ ಯಾರೂ ಸಾಮಾನ್ಯ ಕಾರ್ಯಕರ್ತರು ಇರಲಿಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ. ಸತ್ಯ, ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳು ತಮ್ಮ ಮಕ್ಕಳಿಗೆ ಮಣೆ ಹಾಕುವ ಬದಲು ಸಾಮಾನ್ಯ ಕಾರ್ಯಕರ್ತರನ್ನು ಅಖಾಡಕ್ಕೆ ಇಳಿಸಿ ಚುನಾವಣೆ ಮಾಡಬಹುದಿತ್ತು.

ಆದರೆ ಈ ಪ್ರಶ್ನೆಯನ್ನು ಸಿಎಂ ಸಿದ್ದರಾಮಯ್ಯ ಕೇಳುವ ಬದಲು ಸಾಮಾನ್ಯ ಜನರು ಹೇಳಿದ್ದರೆ, ಈ ಮಾತಿಗೆ ಇನ್ನಷ್ಟು ಬೆಲೆ ಬರುತ್ತಿತ್ತು. ಯಾಕಂದ್ರೆ ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಹಾಲಿ ಸಂಸದರೂ ಆಗಿರುವ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲಿ ಬೇರೆ ನಾಯಕರು ಸಾಕಷ್ಟು ಜನರಿದ್ದರೂ ತಮ್ಮ ಪತ್ನಿಗೇ ಟಿಕೆಟ್ ತೆಗೆದುಕೊಂಡಿರುವುದು ಕುಟುಂಬ ರಾಜಕಾರಣ ಎನಿಸಿಕೊಳ್ಳುವುದಿಲ್ಲವೇ..? ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಕಡೆಯಿಂದ ಉತ್ತರ ಬರುವುದು ಅಸಾಧ್ಯ.
ಅದೇ ರೀತಿ ಉತ್ತರ ಪ್ರದೇಶದಲ್ಲಿ ಸೋಲುವ ಭಯದಲ್ಲಿ ಕೇರಳದ ವಯನಾಡಿಗೆ ಬಂದು ಗೆದ್ದಿದ್ದ ರಾಹುಲ್ ಗಾಂಧಿ, ಈ ಬಾರಿ ಅಮೇಥಿಯಲ್ಲಿ ಗೆಲುವು ಸಾಧಿಸಿದ ಬಳಿಕ ಕೇರಳದ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ರಾಹುಲ್ ಗಾಂಧಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ M.I ಶಹನವಾಜ್ ಅವರಿಗೆ ಯಾಕೆ ಬಿಟ್ಟುಕೊಡಲಿಲ್ಲ..? ತನ್ನ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನು ಯಾಕೆ ಉತ್ತರ ಪ್ರದೇಶದಿಂದ ಕೇರಳಕ್ಕೆ ಕರೆದುಕೊಂಡು ಬಂದು ಸ್ಪರ್ಧೆ ಮಾಡಿಸಿದ್ದಾರೆ..? ಇದು ಕುಟುಂಬ ರಾಜಕಾರಣ ಅಲ್ಲವೇ..? ಎಂದರೆ ಕಾಂಗ್ರೆಸ್ನಿಂದ ಉತ್ತರ ನಿರೀಕ್ಷೆ ತಪ್ಪಾಗುತ್ತದೆ.

ಎಲ್ಲಾ ರಾಜಕಾರಣಿಗಳಿಗೂ ತಮ್ಮ ಮಕ್ಕಳನ್ನು ಒಮ್ಮೆ ರಾಜಕಾರಣಕ್ಕೆ ತರಬೇಕು, ಗೆಲುವಿನ ಮೂಲಕ ಶಾಸನ ಸಭೆಗೆ ಆಯ್ಕೆ ಮಾಡಿ ಕಳುಹಿಸಿದರೆ ಮುಂದಿನ ದಿನಗಳನ್ನು ತಾವು ರೂಪಿಸಿಕೊಳ್ತಾರೆ ಅನ್ನೋ ಹಂಬಲ ಇದ್ದೇ ಇರುತ್ತದೆ. ಸಿಎಂ ಸಿದ್ದರಾಮಯ್ಯ ಹಾಗು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ತಮ್ಮ ರಾಜಕೀಯ ಚತುರತೆಯಿಂದ ಹೊಂದಾಣಿಕೆ ರಾಜಕಾರಣ ಮಾಡಿ ಶಾಸಕ ಸಭೆಗೆ ಕಳುಹಿಸಿದ್ದಾರೆ. ಆದರೆ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿಯನ್ನು ಒಮ್ಮೆಯಾದರೂ ಆಯ್ಕೆ ಮಾಡಿ ಕಳುಹಿಸುವ ಕನಸು ಕನಸಾಗಿಯೇ ಉಳಿದಿದೆ. ಈ ಬಾರಿ ಆದರೂ ಅವಕಾಶ ಕೊಡಿ ಅಂತಾ ಕಣ್ಣೀರು ಹಾಕುತ್ತಿದ್ದಾರೆ. ಕುಟುಂಬ ರಾಜಕಾರಣ ತಪ್ಪು ಅನ್ನೋದು ಸರಿ. ಆದರೆ ಈ ಬಗ್ಗೆ ಯಾವುದೇ ರಾಜಕಾರಣಿಗಳುನ ಮಾತನಾಡಲು ನೈತಿಕತೆ ಉಳಿಸಿಕೊಂಡಿಲ್ಲ ಅಷ್ಟೆ.
