ನವ ಶತಮಾನದ ಭಾರತ ಹೆಮ್ಮೆಯಿಂದ ಎದೆಯುಬ್ಬಿಸಿ ನಿಲ್ಲಬಹುದಾದ ಒಂದು ಕ್ಷೇತ್ರ ಎಂದರೆ ಬಾಹ್ಯಾಕಾಶ ವಿಜ್ಞಾನ. 1960-70ರ ದಶಕದ ನೆಹರೂ-ಇಂದಿರಾ ಯುಗದ ಸುಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈಗ ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ಇದರ ಶ್ರೇಯಸ್ಸು ಸಲ್ಲಬೇಕಿರುವುದು ಹಗಲು ರಾತ್ರಿ ದುಡಿದಿರುವ ಭಾರತೀಯ ವಿಜ್ಞಾನಿಗಳಿಗೆ ಮತ್ತು ಸಾಧನೆಯ ಹಾದಿಯಲ್ಲಿ ಶ್ರಮಿಸಿರುವ ಸಾವಿರಾರು ಸಿಬ್ಬಂದಿಗಳಿಗೆ. 2023ರಲ್ಲಿ ಚಂದ್ರಯಾನದ ಯಶಸ್ವಿ ಪ್ರಯೋಗದ ನಂತರ ವಿಶ್ವ ಭೂಪಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಾಗಿರುವುದು ವಾಸ್ತವ. ಕಳೆದ 25 ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳಿಗೆ ಅವಕಾಶ ದೊರೆಯಲಿದೆ.

ಈ ಅವಧಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ..(IISER) ಏಳು ಶಾಖೆಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT) ಏಳು ಶಾಖೆಗಳು ಆರಂಭವಾಗಿವೆ. ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) 19 ಶಾಖೆಗಳನ್ನು ಸ್ಥಾಪಿಸಲಾಗಿದ್ದು ಹಲವು ಇನ್ನೂ ನಿರ್ಮಾಣ ಹಂತದಲ್ಲಿವೆ. ಈ ಎಲ್ಲ ಸಂಸ್ಥೆಗಳ ಮೂಲ ಅಡಿಪಾಯ ಇರುವುದು ನೆಹರೂ ಯುಗದಲ್ಲಿ ಸ್ಥಾಪಿಸಲಾದ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT), ಭಾರತೀಯ ನಿರ್ವಹಣಾ ಸಂಸ್ಥೆ (IIM) ಮತ್ತಿತರ ಬೌದ್ಧಿಕ ವಲಯದ ಉನ್ನತ ಸಂಸ್ಥೆಗಳಲ್ಲಿ. ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಅಭಿವೃದ್ಧಿಪಡಿಸುವ ನೆಹರೂ ಅವರ ಕನಸು ಸಾಂಸ್ಥಿಕವಾಗಿ ಈಡೇರುತ್ತಿದೆ. ಸ್ಥಾವರಗಳ ಸಂಖ್ಯೆ ಹೆಚ್ಚಾಗಿದೆ. ಆದರೆ 1947ರಲ್ಲಿ ಕನಸು ಕಂಡ ಹಾಗೆ ಎಲ್ಲ ಸ್ತರಗಳ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗುತ್ತಿದೆಯೇ ? ಬಹುಶಃ ನಮ್ಮ ಉತ್ತರ ನಕಾರಾತ್ಮಕವಾಗಿರಲು ಮಾತ್ರ ಸಾಧ್ಯ.
ಸಾಂಸ್ಕೃತಿಕ ರಾಜಕೀಯದ ಅಡ್ಡಗೋಡೆ
ಏಕೆಂದರೆ 21ನೆಯ ಶತಮಾನದ ಭಾರತವನ್ನು ಸಾಂಸ್ಕೃತಿಕ ರಾಜಕಾರಣ ಆವರಿಸಿಕೊಂಡಿದ್ದು, ಹಿಂದುತ್ವದ ಬಲಪಂಥೀಯ ರಾಜಕೀಯ ಸಂಕಥನಗಳಲ್ಲಿ ಇತಿಹಾಸವನ್ನು ವಿಕೃತಗೊಳಿಸುವುದೇ ಅಲ್ಲದೆ, ವೈಜ್ಞಾನಿಕ ಸಂಶೋಧನೆಗಳನ್ನೂ ಅಪಮಾನಿಸುವ ʼ ವಿದ್ವಾಂಸರನ್ನು ʼ ಸೃಷ್ಟಿಸಲಾಗಿದೆ. ನವ ಶತಮಾನದಲ್ಲಿ 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದರೂ ಅಲ್ಲಿ ಉತ್ಪಾದನೆಯಾಗುವ ವಿದ್ವತ್ತು ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಿದೆ. ಪ್ರಾಥಮಿಕ ಶಾಲಾ ಹಂತದಿಂದಲೂ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ ಬೋಧಿಸಲಾಗುತ್ತದೆ ಆದರೆ ಮಕ್ಕಳಲ್ಲಿ ವೈಚಾರಿಕ ಅರಿವು, ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನಗಳನ್ನು ಕಾಣಲಾಗುವುದಿಲ್ಲ. ಹಾಗಾಗಿಯೇ ಬಾಹ್ಯಾಕಾಶ ವಿಜ್ಞಾನಿಗಳೂ ಸಹ ರಾಕೆಟ್ ಲಾಂಛನಕ್ಕೆ ಮುನ್ನ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮನೋಭಾವವೇ ಮಕ್ಕಳಲ್ಲಿ ಸ್ವಯಂ ನಿಷ್ಕರ್ಷೆಯ, ಆತ್ಮವಿಶ್ವಾಸವನ್ನು ಕುಂದಿಸುತ್ತಾ ಹೋಗುತ್ತದೆ.

ಕಳೆದ 25 ವರ್ಷಗಳ ಸಾರ್ವಜನಿಕ ಸಂಕಥನಗಳನ್ನು ಗಮನಿಸಿದಾಗ ಭಾರತದ ಪ್ರಧಾನಿಗಳನ್ನೂ ಸೇರಿದಂತೆ ರಾಜಕೀಯ ನಾಯಕರು, ಸಾಂಸ್ಥಿಕವಾಗಿ ಉನ್ನತ ಹುದ್ದೆಯಲ್ಲಿರುವ ವಿಜ್ಞಾನಿಗಳು ವೈಜ್ಞಾನಿಕತೆಯನ್ನು ಹೇಗೆ ಅಪಮಾನಗೊಳಿಸಿದ್ದಾರೆ ಎಂದು ಅರಿವಾಗುತ್ತದೆ. ಮಹಾಭಾರತದ ಕರ್ಣನ ಜನ್ಮದಲ್ಲಿ ಅನುವಂಶಿಕ ಅವಿಷ್ಕಾರವನ್ನು ಕಾಣುತ್ತೇವೆ, ಅರ್ಜುನನ ಬಾಣಗಳಲ್ಲಿ ಅಣುಶಕ್ತಿಯನ್ನು ಗುರುತಿಸುತ್ತೇವೆ, ಪುರಾಣದ ಗಣೇಶನಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಗುರುತಿಸುತ್ತೇವೆ, ಡಾರ್ವಿನ್ನ ವಿಕಾಸವಾದ, ನ್ಯೂಟನ್ನ ಗುರುತ್ವಾಕರ್ಷಣ ಪ್ರಮೇಯ ಇವೆಲ್ಲವನ್ನೂ ಅಲ್ಲಗಳೆಯುತ್ತಿದ್ದೇವೆ, ವಿಮಾನದ ಅವಿಷ್ಕಾರವನ್ನು ಪ್ರಾಚೀನ ಭಾರದ್ವಾಜ ಋಷಿಯಲ್ಲಿ ಕಾಣುತ್ತೇವೆ, ಮಹಾಭಾರತದ ರಥಗಳು ಗಾಳಿಯಲ್ಲಿ ಚಲಿಸುತ್ತಿದ್ದವು ಎಂದು ಹೇಳುತ್ತೇವೆ. ಇಂತಹ ವ್ಯಾಖ್ಯಾನಗಳು ಜ್ಞಾನ ಶಿಸ್ತಿನ ಕೇಂದ್ರಗಳನ್ನು ಮೌಢ್ಯದ ಬಯಲುಗಳಾಗಿ ಪರಿವರ್ತಿಸುತ್ತವೆ. “ ಪ್ರಾಚೀನ ಭಾರತದಲ್ಲಿ ಎಲ್ಲ ಜ್ಞಾನಪ್ರಕಾರಗಳೂ ಇದ್ದವು ” ಎಂಬ ವಿತಂಡವಾದ ಇಲ್ಲಿ ವಿಜೃಂಭಿಸುತ್ತದೆ.
ಅವೈಜ್ಞಾನಿಕ ಚಿಂತನಾವಾಹಕಗಳು
ಈ ಅವೈಜ್ಞಾನಿಕ ಆಲೋಚನಾ ಕ್ರಮದ ಫಲವಾಗಿಯೇ ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಶಿಸ್ತಿಗೆ ಒಳಪಡಿಸಲಾಗಿದ್ದು, ವಿಶ್ವವಿದ್ಯಾಲಯಗಳೂ ಅಳವಡಿಸಿಕೊಂಡಿವೆ. ನವಗ್ರಹದ ಸುತ್ತ ಸುತ್ತು ಹಾಕುವ ಜನಸಾಮಾನ್ಯರಿಗೆ ತಾವು ಜಪಿಸುವ ʼ ನವಗ್ರಹ ʼಗಳಲ್ಲಿ ನಾಲ್ಕು ಗ್ರಹಗಳೇ ಅಲ್ಲ ಎಂಬ ಅರಿವೂ ಇರುವುದಿಲ್ಲ. ಅಥವಾ ಅಲ್ಲಿ ಭೂಮಿಯ ಪ್ರಸ್ತಾಪವೇ ಬರುವುದಿಲ್ಲ ಹಾಗಾದರೆ ನಾವು ಜೀವಿಸುತ್ತಿರುವ ಭೂಮಿಯ ಅಸ್ತಿತ್ವ/ಗುರುತು ಏನು ಎಂಬ ಜಿಜ್ಞಾಸೆಯೂ ಮೂಡುವುದಿಲ್ಲ. ಸೂರ್ಯ-ಚಂದ್ರರನ್ನು ಗ್ರಹಗಳೆಂದು ನಂಬುವುದರಿಂದಲೇ ಗ್ರಹಣಗಳು ನಮ್ಮಲ್ಲಿ ಕುತೂಹಲಕ್ಕಿಂತಲೂ ಹೆಚ್ಚು ಭೀತಿ ಮೂಡಿಸುತ್ತವೆ. ಅಸ್ತಿತ್ವದಲ್ಲೇ ಇಲ್ಲದ ರಾಹು-ಕೇತುಗಳು ಭಯ ಸೃಷ್ಟಿಸುವ ವಾಹಕಗಳಾಗುತ್ತವೆ. ಶನಿಗ್ರಹ ಅತ್ಯಂತ ಹೆಚ್ಚಿನ ಬೇಡಿಕೆ ಇರುವ ದೈವರೂಪ ಪಡೆದುಕೊಂಡಿದೆ. ಈ ಚಿಂತನಾಧಾರೆಗಳ ನಡುವೆ ಹುಟ್ಟಿಕೊಳ್ಳುವ ಅಂಧ ಶ್ರದ್ಧೆಗಳೇ ಮೂಢ ನಂಬಿಕೆಗಳ ಜಗತ್ತನ್ನು ವಿಸ್ತರಿಸುತ್ತದೆ. ಚಂದ್ರನ ಮೇಲೆ ಕಾಲಿಟ್ಟು ಬಂದಮೇಲಾದರೂ, ಗ್ರಹಣದ ವೈಜ್ಞಾನಿಕ ಪ್ರಕ್ರಿಯೆ ಅರಿವಾಗಬೇಕಲ್ಲವೇ ? ಆಗಿಲ್ಲ ಎನ್ನುವುದೇ ದುರಂತ.

ಹಾಗಾಗಿಯೇ ಇಡೀ ವಿಶ್ವದಲ್ಲಿ ಕೊರೋನಾ ವೈರಾಣು ವಿರುದ್ಧ ಹೋರಾಡಲು ವೈಜ್ಞಾನಿಕ ಚಿಂತನೆಗಳು ನಡೆಯುತ್ತಿದ್ದಾಗ ಭಾರತದಲ್ಲಿ ಸುಶಿಕ್ಷಿತ ವರ್ಗಗಳೂ ಸಹ ವೈರಾಣು ಓಡಿಸಲು ಜಾಗಟೆ ಬಡಿಯುತ್ತಿದ್ದರು, ತಟ್ಟೆ ಬಾರಿಸುತ್ತಿದ್ದರು, ಸಾಮಾಹಿಕ ಚಪ್ಪಾಳೆ ಹೊಡೆಯುತ್ತಿದ್ದರು, ಮೋಂಬತ್ತಿ ಬೆಳಗುತ್ತಿದ್ದರು, ಗೋ ಕೊರೋನಾ ಎಂದು ಕೂಗಿ ಹೇಳುತ್ತಿದ್ದರು. ಆದರೆ ಅಂತಿಮವಾಗಿ ಕೊರೋನಾ ನಿವಾರಣೆಯಾಗಿದ್ದು ವಿಜ್ಞಾನದ ಮುಖಾಂತರವೇ, ಭಾರತೀಯ ವಿಜ್ಞಾನಿಗಳ ಪರಿಶ್ರಮದಿಂದ. ಗೋಮೂತ್ರ,, ಸಗಣಿಯಲ್ಲಿ ಔಷಧೀಯ ಗುಣಗಳನ್ನು ಸಂಶೋಧಿಸುವ, ಅದಕ್ಕಾಗಿಯೇ ಸ್ಥಾಪಿಸಲ್ಪಟ್ಟ ಸಂಸ್ಥೆಗಳಿಗೆ ನವ ಶತಮಾನದ ಭಾರತ ನೆಲೆಯಾಗಿದೆ. ಈ ಬೆಳವಣಿಗೆಗಳು ಸಾಮಾನ್ಯ ಜನರಲ್ಲಿ, ಸುಶಿಕ್ಷಿತ-ಉನ್ನತ ಶಿಕ್ಷಣ ಪಡೆದವರಲ್ಲೂ ಹುಟ್ಟಿಸುವ ಅಂಧ ಶ್ರದ್ಧೆ-ನಂಬಿಕೆಯೇ, ರಾಜಕೀಯವನ್ನೂ ಪ್ರವೇಶಿಸಿ, ನಾಯಕರ ಅಂಧಾನುಕರಣೆ ಸ್ವಾಭಾವಿಕ ಎನಿಸಿಬಿಡುತ್ತದೆ. ವಿಜ್ಞಾನ ಕೇವಲ ಅಧ್ಯಯನ ಶಿಸ್ತು ಆಗಕೂಡದು, ಬದಲಾಗಿ ಅರಿವಿನ ತಂತು ಆಗಬೇಕು. ಆಗ ಸಮಾಜದಲ್ಲಿ ಚಿಂತನ-ಮಂಥನ ಕ್ರಿಯಾಶೀಲವಾಗಿ ನಡೆಯಲು ಸಾಧ್ಯ. ನವ ಶತಮಾನದ ಭಾರತ ಇದನ್ನು ಕಳೆದುಕೊಂಡಿದೆ.
2047ರಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಘೋಷಿಸುವಾಗ ನಮ್ಮ ಗಮನ ರಕ್ಷಣಾ ವ್ಯವಸ್ಥೆಯ ಕಡೆಗೆ ಹರಿಯುತ್ತದೆ. ಇದು ಭೌಗೋಳಿಕ ಕಲ್ಪನೆ. ಆದರೆ ಒಂದು ದೇಶ ಬಲಿಷ್ಠವಾಗುವುದು ಕೇವಲ ಯುದ್ಧ ಸಲಕರಣೆಗಳು ಅಥವಾ ಅತ್ಯಾಧುನಿಕ ಯುದ್ಧಾಸ್ತ್ರಗಳಿಂದ, ಪರಮಾಣು ಶಕ್ತಿಯಿಂದ ಅಲ್ಲ. ಇಡೀ ದೇಶವನ್ನು ಗಟ್ಟಿಯಾಗಿ ರೂಪಿಸುವುದು ಜನಸಾಮಾನ್ಯರಲ್ಲಿ ಇರುವ ಅರಿವು, ಜ್ಞಾನ ಮತ್ತು ಚಿಂತನಾ ಸಾಮರ್ಥ್ಯಗಳು. ಈ ದೃಷ್ಟಿಯಿಂದ ನೋಡಿದಾಗ ವಿಕಸಿತ ಭಾರತ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ 94 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಅಂದರೆ ಅಷ್ಟು ಮಕ್ಕಳು ಖಾಸಗಿ ಶಾಲೆಯ ಸರಕುಗಳಾಗಿದ್ದಾರೆ ಎಂದರ್ಥ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ 2.88 ಲಕ್ಷದಿಂದ 3.39 ಲಕ್ಷಕ್ಕೆ ಏರಿದೆ. ಸಾರ್ವಜನಿಕ ಶಾಲೆಗಳ ಪ್ರವೇಶಾತಿಯ ಪ್ರಮಾಣ 2.26 ರಷ್ಟು ಕಡಿಮೆಯಾಗಿದೆ. ವಿಶ್ವವಿದ್ಯಾಲಯಗಳೂ ಕಾರ್ಪೋರೇಟೀಕರಣಕ್ಕೆ ಒಳಗಾಗುತ್ತಿದ್ದು ಈ ಅವಧಿಯಲ್ಲಿ ಸ್ಥಾಪಿಸಿದ ವಿಜ್ಞಾನ ಸಂಸ್ಥೆಗಳೆಲ್ಲವೂ ಖಾಸಗಿ ಸಹಭಾಗಿತ್ವ ಹೊಂದಿವೆ.

ನವ ಉದಾರವಾದದ ಬೌದ್ಧಿಕ ಅತಿಕ್ರಮಣ
ನವ ಉದಾರವಾದದ ಈ ವಾಣಿಜ್ಯೀಕರಣ ಪ್ರಕ್ರಿಯೆ ಈಗ ಪ್ರಾಥಮಿಕ ಹಂತದಿಂದ ಅತ್ಯುನ್ನತ ವಿಶ್ವವಿದ್ಯಾಲಯದವರೆಗೂ ಹರಡಿದೆ. ಕಾರ್ಪೋರೇಟ್ ನಿಯಂತ್ರಣಕ್ಕೊಳಪಡುತ್ತಿರುವ ದೇಶದ ವಿಶ್ವವಿದ್ಯಾಲಯಗಳು ತಮ್ಮ ಬೌದ್ಧಿಕ ಅಂತಃಸತ್ವವನ್ನೇ ಕಳೆದುಕೊಂಡು, ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಕೌಶಲ ಭರಿತ ಭೌತಿಕ ಸರಕುಗಳನ್ನು ವಿದ್ಯಾರ್ಥಿಗಳ ರೂಪದಲ್ಲಿ ಉತ್ಪಾದಿಸತೊಡಗಿವೆ. ಖಾಸಗೀಕರಣ ಮತ್ತು ವಾಣಿಜ್ಯೀಕರಣದ ಪರಿಣಾಮವಾಗಿ ಬಹುತೇಕ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಕುಲಪತಿಗಳ ಹುದ್ದೆಯಿಂದ, ಪಿಎಚ್ಡಿ ಪದವಿಯವರೆಗೂ ಎಲ್ಲವೂ ಬಿಕರಿಯಾಗುವ ಮಾರುಕಟ್ಟೆ ವಸ್ತುಗಳಾಗಿವೆ. ಇಲ್ಲಿ ಉತ್ಪಾದನೆಯಾಗುವ ಪದವೀಧರರು ಉದ್ಯೋಗ ಮಾರುಕಟ್ಟೆಯ ಸರಕುಗಳಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಉನ್ನತ ಹುದ್ದೆಗಳು ಬಿಕರಿಯಾಗುತ್ತಿರುವುದರಿಂದ, ಹಣಕೊಟ್ಟು ಅಧಿಕಾರ ವಹಿಸಿಕೊಳ್ಳುವವರು ಲಾಭ ಸಹಿತ ಮರಳಿ ಗಳಿಸುವ ಯತ್ನದಲ್ಲಿರುತ್ತಾರೆ. ಇದು ಇಡೀ ಶಿಕ್ಷಣ ವ್ಯವಸ್ಥೆಯನ್ನು ಸಂತೆಮಾಳವಾಗಿ ಪರಿವರ್ತಿಸಿದೆ.
ಈ ಖಾಸಗೀಕರಣ-ವಾಣಿಜ್ಯೀಕರಣದ ನೇರ ಫಲಾನುಭವಿಗಳನ್ನು ಕಾರ್ಪೋರೇಟ್ ಉದ್ಯಮಿಗಳಲ್ಲಿ ಹಾಗೂ ಪ್ರಾಚೀನ ನಂಬಿಕೆಗಳನ್ನು ಪುನರ್ಸ್ಥಾಪಿಸುವ ಸಂಪ್ರದಾಯವಾದಿ ಗುಂಪುಗಳಲ್ಲಿ ಗುರುತಿಸಬಹುದು. ಗುರುಕುಲಗಳಲ್ಲಿ, ಮದರಸಾಗಳಲ್ಲಿ, ಮಠ ನಿಯಂತ್ರಿತ ಶಾಲೆಗಳಲ್ಲಿ ಮೂಲ ವಿಜ್ಞಾನ ಬೋಧನೆ ಇದ್ದರೂ, ವೈಜ್ಞಾನಿಕ ಅರಿವು ಬೆಳೆಸುವ ಪಠ್ಯಕ್ರಮ ಇರುವುದಿಲ್ಲ. ವ್ಯತಿರಿಕ್ತವಾಗಿ ಧರ್ಮರಕ್ಷಣೆಯ ನೆಪದಲ್ಲಿ ಅತೀತ ಶಕ್ರಿಗಳಲ್ಲಿ ನಂಬಿಕೆ ಮೂಡಿಸುವ, ಅಂಧಶ್ರದ್ಧೆಯನ್ನು ಬಲಪಡಿಸುವ ಹಾಗೂ ಅವೈಜ್ಞಾನಿಕ ಚಿಂತನೆಗಳನ್ನು ಉದ್ಧೀಪನಗೊಳಿಸುವ ಪಠ್ಯಗಳನ್ನು ಅಳವಡಿಸಲಾಗುತ್ತದೆ. ಇಂತಹ ಸಾಂಸ್ಥಿಕ ಮೌಢ್ಯ ಕೇಂದ್ರಗಳಿಂದ ಹೊರಬರುತ್ತಿರುವ/ಹೊರಬರಲಿರುವ ಮಕ್ಕಳೇ 2047ರ ವಿಕಸಿತ ಭಾರತವನ್ನು ಪ್ರತಿನಿಧಿಸುವ ಪ್ರೌಢ ಪ್ರಜೆಗಳಾಗಲಿದ್ದಾರೆ. ಈ ಬೆಳವಣಿಗೆ ಕಳೆದ ಶತಮಾನದ ಶಿಶುವೇ ಆದರೂ, ನವ ಶತಮಾನದಲ್ಲಿ ವ್ಯವಸ್ಥಿತವಾದ ಸಾಂಸ್ಥಿಕ ಲಾಲನೆ, ಪೋಷಣೆ ಪಡೆಯುತ್ತಿರುವುದು ಚಿಂತೆಗೀಡುಮಾಡುವ ವಿಚಾರ.

ನವಯುಗದ ಪ್ರಾಚೀನ ಚಿಂತನೆಗಳು
ಭಾರತದ ದುರಂತ ಎಂದರೆ ಶಿಕ್ಷಣ-ವಿಜ್ಞಾನ ಕ್ಷೇತ್ರದ ಖಾಸಗೀಕರಣ-ಕಾರ್ಪೋರೇಟೀಕರಣ ಆರಂಭವಾದ ನವ ಶತಮಾನದ ಆರಂಭದ ದಿನಗಳಲ್ಲೇ , ಶೈಕ್ಷಣಿಕ ಪಠ್ಯಗಳ ಹಾಗೂ ಸಾಂಸ್ಥಿಕ ಸಂರಚನೆಗಳ ಕೇಸರೀಕರಣವೂ ಆರಂಭವಾಗಿತ್ತು.ಭಾರತೀಯ ಪರಂಪರೆಯನ್ನು ಹಿಂದೂ ಪರಂಪರೆಗೆ ಸಮೀಕರಿಸಿ, ಈ ಪರಂಪರೆಯನ್ನು ಕಾಪಾಡುವ ಅಥವಾ ಪುನರ್ ಸ್ಥಾಪಿಸುವ ನೆಪದಲ್ಲಿ ಎನ್ಸಿಇಆರ್ಟಿ (NCERT) ಪಠ್ಯಗಳಲ್ಲಿ ನೈಜ ವಿಜ್ಞಾನದ ಪರಂಪರೆಯನ್ನೂ ಅಳಿಸಿಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇತಿಹಾಸವನ್ನು ತಿರುಚುವ ರಾಜಕೀಯ ಪ್ರಕ್ರಿಯೆಯಿಂದ ಶೈಕ್ಷಣಿಕವಾಗಿ ಚರಿತ್ರೆಯನ್ನು ವಿಕೃತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಕಳೆದ 12 ವರ್ಷಗಳಲ್ಲಿ ಈ ಎರಡೂ ಬೆಳವಣಿಗೆಗಳು ಸಮಾನಾಂತರವಾಗಿ ನಡೆಯುತ್ತಿದ್ದು, ಮುಂದಿನ ದಶಕಗಳಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಹೊರಬರಲಿರುವ ಮಕ್ಕಳು ಇದೇ ಅರೆ-ವೈಜ್ಞಾನಿಕ, ಅವೈಜ್ಞಾನಿಕ ಜ್ಞಾನವನ್ನು ಹಾಗೂ ವಿಕೃತ ಚರಿತ್ರೆಯ ಅರಿವನ್ನು ಹೊತ್ತು ಬರಲಿದ್ದಾರೆ.
ಈ ಮಕ್ಕಳಲ್ಲಿ, ಯುವ ಸಮೂಹಗಳಲ್ಲಿ ವೈಜ್ಞಾನಿಕ ಚಿಂತನಾ ಕ್ರಮವನ್ನೇ ಅಳಿಸಿಹಾಕುವುದರಿಂದ, ಕ್ರಿಯಾಶೀಲ ಆಲೋಚನೆ ಮತ್ತು ಸೃಜನಶೀಲ ಅಭಿವ್ಯಕ್ತಿ ಎರಡೂ ಸಹ ಇಲ್ಲವಾಗುತ್ತದೆ. ಭಾರತ ತನ್ನ 80 ವರ್ಷಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದರೆ ಅದಕ್ಕೆ ಕಾರಣ, ಈ ಎರಡೂ ಉನ್ನತ ಚಿಂತನಾ ವಿಧಾನಗಳಿಗೆ ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳಲ್ಲಿ ಹಾಕಲಾಗಿದ್ದ ಸುಭದ್ರ ಅಡಿಪಾಯ. ಈ ಅಡಿಪಾಯವನ್ನು ಸಾಂಸ್ಥಿಕವಾಗಿ ಹಾಗೂ ಬೌದ್ಧಿಕವಾಗಿ ಹಂತಹಂತವಾಗಿ ಶಿಥಿಲಗೊಳಿಸಲಾಗುತ್ತಿದೆ. ತಮ್ಮ ಧಾರ್ಮಿಕ, ಸಾಂಪ್ರದಾಯಿಕ, ತಾತ್ವಿಕ ನಿಲುವುಗಳಿಗೆ ಬದ್ಧರಾಗಿ ದೇಶದ ಮೇಲ್ವರ್ಗದ, ಮೇಲ್ಜಾತಿಯ ಹಾಗೂ ಮೇಲ್ಪದರದ ವರ್ಗಗಳು ಈ ಮಾರುಕಟ್ಟೆ-ಶಿಕ್ಷಣದ ಸಂಯೋಜನೆಯನ್ನು ಬೆಂಬಲಿಸುತ್ತಿವೆ.

ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಶಕ್ತಿಗಳು ಈ ಬೆಳವಣಿಗೆಗಳ ಮೂಲ ಫಲಾನುಭವಿಗಳಾಗಿದ್ದು ಎಲ್ಲ ಹಂತಗಳಲ್ಲೂ ಶಿಕ್ಷಣವನ್ನು ಸರಕೀಕರಣಗೊಳಿಸುತ್ತಿವೆ (Commodification).. ಇದರ ನೇರ ಪರಿಣಾಮವನ್ನು NEET ಪರೀಕ್ಷೆಯ ಹಗರಣಗಳಲ್ಲಿ, ಪೇಪರ್ ಸೋರಿಕೆಯಲ್ಲಿ ಮತ್ತು ಇದಕ್ಕೆ ಕಾರಣವಾದ ಖಾಸಗಿ ಕೋಚಿಂಗ್ ಕ್ಷೇತ್ರದ ಮಾಫಿಯಾಗಳಲ್ಲಿ ಕಾಣುತ್ತಿದ್ದೇವೆ. ಈ ಸಂತೆಮಾಳದಲ್ಲಿ ಈಗಾಗಲೇ ಅಂಚಿಗೆ ತಳ್ಳಲ್ಪಟ್ಟಿರುವ (Marginalised) ಸಮಾಜಗಳು ಮತ್ತಷ್ಟು ವಂಚಿತರಾಗುತ್ತವೆ. ಗ್ರಾಮೀಣ ಜನತೆ, ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ಉನ್ನತ ಶಿಕ್ಷಣ ಮತ್ತು ಸಾಂಸ್ಥಿಕ ಬೆಳವಣಿಗೆಯಲ್ಲಿ ಮೇಲ್ಪದರದ ಧನಬಲ ಇರುವ ವರ್ಗಗಳೇ ಮುಖ್ಯ ಫಲಾನುಭವಿಗಳಾಗುತ್ತವೆ. ಹಾಗಾಗಿಯೇ ಪ್ರಸಕ್ತ ಸಂದರ್ಭದಲ್ಲಿ ಈ ವರ್ಗದ ಸುಶಿಕ್ಷಿತರು ದಿವ್ಯ ಮೌನ ವಹಿಸಿದ್ದಾರೆ.
ವಿಕಾಸ ಮತ್ತು ಹಿಂಚಲನೆ
ಇದು 2047ರ ವಿಕಾಸದ ಕಲ್ಪನೆಗಳನ್ನು ಈಡೇರಿಸಬಹುದು. ಆದರೆ 1947ರ ಕನಸುಗಳನ್ನು ನುಚ್ಚು ನೂರು ಮಾಡುತ್ತದೆ. ಸ್ವಾತಂತ್ರ್ಯದ ಪೂರ್ವಸೂರಿಗಳು ಸ್ವತಂತ್ರ ಭಾರತವನ್ನು ಕೇವಲ ಆಡಳಿತಾತ್ಮಕ ಪ್ರಜಾತಂತ್ರವಾಗಿ ರೂಪಿಸಲು ಯೋಚಿಸಿರಲಿಲ್ಲ. ಬದಲಾಗಿ ಎಲ್ಲ ರೀತಿಯ ಧಾರ್ಮಿಕ ನಂಬಿಕೆ-ಆಚರಣೆಗಳನ್ನು ಕಾಪಾಡಿಕೊಳ್ಳುತ್ತಲೇ, ಭಾರತೀಯ ಸಮಾಜವನ್ನು ಅಂಧಶ್ರದ್ಧೆ-ಮೂಢ ನಂಬಿಕೆಗಳಿಂದ ಮುಕ್ತಗೊಳಿಸಿ ವೈಚಾರಿಕ ನೆಲೆಯಲ್ಲಿ ವೈಜ್ಞಾನಿಕ ಆಲೋಚನಾ ಕ್ರಮಗಳ ಕ್ರಿಯಾಶೀಲ ದೇಶವನ್ನಾಗಿ ರೂಪಿಸಲು ಕನಸುಕಂಡಿದ್ದರು. ಈ ಕನಸಿನ ಹಾದಿಯಲ್ಲೇ ಸ್ವತಂತ್ರ ಭಾರತದ ಮೊದಲ 50 ವರ್ಷಗಳು ಸೃಜನಶೀಲ-ಕಲಾತ್ಮಕ ಚಲನಚಿತ್ರಗಳನ್ನು, ಸೃಜನಾತ್ಮಕ ರಂಗಪ್ರಯೋಗಗಳನ್ನು, ಪ್ರಗತಿಶೀಲ ಮುಂಗಾಣ್ಕೆಯ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯವಾಗಿತ್ತು. ಇದೇ ಅವಧಿಯಲ್ಲಿ ಅತ್ಯುನ್ನತ ವೈಜ್ಞಾನಿಕ ಅನ್ವೇಷಣೆಗಳನ್ನು ದಾಖಲಿಸಲು ಸಾಧ್ಯವಾಗಿತ್ತು. ಅತ್ಯುನ್ನತ ಗುಣಮಟ್ಟದ ಚರಿತ್ರಕಾರರನ್ನು ಹುಟ್ಟುಹಾಕಿತ್ತು.

21ನೆಯ ಶತಮಾನ ಈಗಾಗಲೇ ಇವೆಲ್ಲವನ್ನೂ ಕಳೆದುಕೊಂಡಿದೆ. ಈ 25 ವರ್ಷಗಳಲ್ಲಿ ಸಾರ್ವಕಾಲಿಕ ಪ್ರಸ್ತುತತೆಯ ಚಲನಚಿತ್ರವನ್ನು ತಯಾರಿಸಲು ನಾವು ಸೋತಿದ್ದೇವೆ. ಸಾಹಿತ್ಯವಲಯದ ಸ್ವ ಹಿತಾಸಕ್ತಿ ಮತ್ತು ರಾಜಕೀಯ ಒಲವು ಸೃಜನಶೀಲ ಬರಹಗಳನ್ನು ಉತ್ಪಾದಿಸುವಲ್ಲಿ ಸೋತಿದ್ದೇವೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿಯನ್ನೂ ಈ ವೈರಾಣು ಅತಿಕ್ರಮಿಸಿದ್ದು, ಈವರೆಗೂ ಕಾಣದಿದ್ದ ಪಂಥೀಯ ಭಾವನೆ ಮತ್ತು ಚರಿತ್ರೆಯನ್ನು ವಿಕೃತಗೊಳಿಸುವ ರಂಗಪ್ರಯೋಗಗಳು ಹೆಚ್ಚಾಗುತ್ತಿವೆ. ಈ ಕ್ಷೇತ್ರಗಳನ್ನು ನಿರ್ವಹಿಸುವ ಉನ್ನತ ಮಟ್ಟದ ಸಂಸ್ಥೆಗಳೆಲ್ಲವೂ ರಾಜಕೀಯ ಪ್ರಭಾವಿ ವಲಯಗಳಾಗಿದ್ದು ತಮ್ಮ ಬೌದ್ಧಿಕ ಅಂತಃಸತ್ವವನ್ನು ಕಳೆದುಕೊಂಡಿವೆ. ಚಲನಚಿತ್ರ ರಂಗವನ್ನು ರಾಜಕೀಯ ಪ್ರಚಾರದ ವೇದಿಕೆಯನ್ನಾಗಿ ಪರಿವರ್ತಿಸಲಾಗಿದ್ದು ಹತ್ತಾರು ʼ ಫೈಲ್ ʼಗಳು ಪರದೆಯ ಮೇಲೆ ರಾರಾಜಿಸುತ್ತಿವೆ.
ಈ ಫೈಲುಗಳಿಂದಾಚೆಗೆ ನೋಡುವ ಅಧ್ಯಯನಶೀಲತೆ ಮತ್ತು ಆಳವಾದ ಅರಿವು ಕಲಾ ಕ್ಷೇತ್ರಗಳಲ್ಲಿ ಕ್ಷೀಣಿಸುತ್ತಿದ್ದು, ಸಾಂಸ್ಕೃತಿಕ ವಲಯದ ಸಂಸ್ಥೆಗಳನ್ನೂ ಸಹ ಅಡಳಿತಾರೂಢ ರಾಜಕೀಯ ಪಕ್ಷಗಳ ಸೈದ್ಧಾಂತಿಕ ಗವಾಕ್ಷಿಗಳಾಗಿ (Ideological Windows) ಪರಿವರ್ತಿಸಲಾಗುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಇದಕ್ಕೆ ಹೊರತಲ್ಲ. ಇಲ್ಲಿ ಬಲಪಂಥೀಯ ರಾಜಕೀಯ ಚಿಂತನೆ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಸಂಯೋಜನೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಸ್ವತಂತ್ರ ಭಾರತದ ಸುಭದ್ರ ಬುನಾದಿ ಇರುವುದೇ ಸಾಂಸ್ಥಿಕ ಸಂರಚನೆಗಳಲ್ಲಿ. ಕಳೆದ 25 ವರ್ಷಗಳಲ್ಲಿ ಈ ಎಲ್ಲ ಸಂರಚನೆಗಳೂ ರೂಪಾಂತರಗೊಂಡಿದ್ದು, ವೈಜ್ಞಾನಿಕ-ವೈಚಾರಿಕ ಭಾರತವನ್ನು ಕಟ್ಟುವ ಕನಸುಗಳೆಲ್ಲವೂ ನುಚ್ಚುನೂರಾಗಿದೆ. ಸೃಜನಶೀಲತೆಯನ್ನು ಕಳೆದುಕೊಂಡ ಯಾವ ಸಮಾಜವೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಲಾಗುವುದಿಲ್ಲ.

ನಾಳೆಯ ಪ್ರಶ್ನೆಗಳ ಬೆನ್ನಟ್ಟಿ,,,,,
ಕೇವಲ ರಾಜಕೀಯ ಬದಲಾವಣೆಯಿಂದ ಇದನ್ನು ಸರಿಪಡಿಸಲಾಗುವುದೇ ? ಆರ್ಥಿಕತೆಯನ್ನು ಹೊಸದಾರಿಗೆ ಹೊರಳಿಸುವುದರ ಮೂಲಕ ಸಾಧಿಸಬಹುದೇ ? ಸಂವಿಧಾನವನ್ನು ಗ್ರಾಂಥಿಕವಾಗಿ ಸಂರಕ್ಷಣೆ ಮಾಡಿದರೆ ಇದು ಸರಿಹೋಗುವುದೇ ? ಚಳುವಳಿ, ಆಂದೋಲನ, ಅಭಿಯಾನಗಳ ಮೂಲಕ ಇದನ್ನು ಸರಿದಾರಿಗೆ ತರಲಾಗುವುದೇ ? ಈ ಹಲವು ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಪ್ರಯತ್ನಗಳಿಗೆ ಚಾಲನೆ ನೀಡುವವರಾರು, ಮುಂದಾಳತ್ವ ಒದಗಿಸುವವರಾರು, ನಿರ್ದಿಷ್ಟ ನೀಲನಕ್ಷೆಯನ್ನು ತಯಾರಿಸುವವರಾರು ? ಈ ಪ್ರಶ್ನೆಗಳಿಗೂ ಉತ್ತರ ಕಾಣಬೇಕಿದೆ.
ಮುಂದುವರೆದ ಲೇಖನದಲ್ಲಿ ಈ ಕುರಿತು ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳೋಣ.
-೦-೦-೦-೦-






