ನವದೆಹಲಿ: ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲು ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹಬ್ಬದ ಋತುವಿನಲ್ಲಿ ಸಕ್ಕರೆ ಕೊರತೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ, ಕೃತಕ ಬೆಲೆ ಏರಿಕೆ ಮತ್ತು ಅಕ್ರಮ ದಾಸ್ತಾನಿಗೂ ಕಡಿವಾಣ ಹಾಕಲು ಕ್ರಮ ಆರಂಭಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ.

ಇತ್ತೀಚಿನ ವಾರಗಳಲ್ಲಿ ಸಕ್ಕರೆ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಜುಲೈ 20ರಂದು ಪ್ರತಿ ಕೆ.ಜಿಗೆ ₹48.18 ಇದ್ದ ಸಕ್ಕರೆ ಬೆಲೆ, ಆಗಸ್ಟ್ 20ರಂದು ₹55.70ಕ್ಕೆ ಏರಿಕೆಯಾಗಿದೆ. ಬೆಲೆ ಏರಿಕೆಯ ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಕ್ಕರೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇತ್ತೀಚಿನ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದೇ ಕಾರಣ ಎಂಬ ವಾದವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.2022-23ರಲ್ಲಿ ಎಥೆನಾಲ್ ಉತ್ಪಾದನೆಗೆ ಸುಮಾರು 12% ಸಕ್ಕರೆಯನ್ನು ಬೇರೆಡೆಗೆ ತಿರುಗಿಸಲಾಗುತ್ತಿತ್ತು. ಆದರೆ 2025-26ರಲ್ಲಿ ಈ ಪ್ರಮಾಣ ಸುಮಾರು 9%ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಎಥೆನಾಲ್‌ನ ಸುಮಾರು ಮುಕ್ಕಾಲು ಭಾಗ ಇದೀಗ ಮೆಕ್ಕೆಜೋಳ ಸೇರಿದಂತೆ ಧಾನ್ಯಗಳಿಂದ ಬರುತ್ತಿದೆ ಎಂದು ಸರ್ಕಾರ ತಿಳಿಸಿದೆ.ಪ್ರಸ್ತುತ ಸಕ್ಕರೆ ಋತುವಿನಲ್ಲಿ ದೇಶದ ಸಕ್ಕರೆ ಉತ್ಪಾದನೆ ಸುಮಾರು 306 ಲಕ್ಷ ಮೆಟ್ರಿಕ್ ಟನ್ (LMT) ಆಗುವ ನಿರೀಕ್ಷೆಯಿದೆ. ಆರಂಭದಲ್ಲಿ ಕಬ್ಬು ಬೆಳೆಯುವ ರಾಜ್ಯಗಳು ಸುಮಾರು 343 LMT ಉತ್ಪಾದನೆಯಾಗಬಹುದು ಎಂದು ಅಂದಾಜಿಸಿದ್ದವು.
ಕಬ್ಬಿನ ಬೆಳೆಯಲ್ಲಿ ರೆಡ್ ರಾಟ್, ಟಾಪ್ ಬೋರರ್ ರೋಗ ಹಾಗೂ ಅತಿಯಾದ ಮಳೆಯಿಂದ ಉಂಟಾದ ನೀರು ನಿಲ್ಲುವಿಕೆ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.
ಆದಾಗ್ಯೂ, ಅಕ್ಟೋಬರ್‌ನಲ್ಲಿ ಹೊಸ ಸಕ್ಕರೆ ಕಬ್ಬು ನುರಿಯುವ ಋತು ಆರಂಭವಾಗುವವರೆಗೆ ದೇಶೀಯ ಬೇಡಿಕೆ ಪೂರೈಸಲು ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.ಸಕ್ಕರೆ ಬೆಲೆ ಏರಿಕೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾಗತಿಕವಾಗಿಯೂ ಸಕ್ಕರೆ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. 2026-27ರಲ್ಲಿ ಜಾಗತಿಕ ಸಕ್ಕರೆ ಕೊರತೆ ಸುಮಾರು 33 LMT ಇರಬಹುದು ಎಂದು ಅಂದಾಜಿಸಲಾಗಿದೆ.ಇದರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಹೆಚ್ಚಾಗಿದೆ. ಜೂನ್ 30ರಂದು ಪ್ರತಿ ಟನ್‌ಗೆ $474 ಇದ್ದ ಸಕ್ಕರೆ ಬೆಲೆ ಆಗಸ್ಟ್ 20ರಂದು $552ಕ್ಕೆ ಏರಿಕೆಯಾಗಿದೆ. ಅಂದರೆ ಎರಡು ತಿಂಗಳೊಳಗೆ ಶೇ.16ಕ್ಕೂ ಅಧಿಕ ಏರಿಕೆಯಾಗಿದೆ.

ಸಕ್ಕರೆ ದಾಸ್ತಾನಿಗೆ ಹೊಸ ಮಿತಿ
ಸಕ್ಕರೆ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಪ್ರಕಟಿಸಿದೆ.
- ಆಗಸ್ಟ್ 1ರಿಂದ ನವೆಂಬರ್ 30ರವರೆಗೆ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳಿಗೆ 400 ಟನ್ ದಾಸ್ತಾನು ಮಿತಿ ವಿಧಿಸಲಾಗಿದೆ.
- ಸೆಪ್ಟೆಂಬರ್ 1ರಿಂದ ಬೃಹತ್ ಪ್ರಮಾಣದಲ್ಲಿ ಸಕ್ಕರೆ ಖರೀದಿಸುವ ಗ್ರಾಹಕರು 15 ದಿನಗಳ ಬಳಕೆಗೆ ಮೀರಿದಷ್ಟು ಸಕ್ಕರೆ ದಾಸ್ತಾನು ಮಾಡುವಂತಿಲ್ಲ.
- ಸಕ್ಕರೆ ಕಾರ್ಖಾನೆಗಳಲ್ಲಿ ಅಕ್ರಮ ದಾಸ್ತಾನು ಅಥವಾ ಕೃತಕ ಕೊರತೆ ಸೃಷ್ಟಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಜಂಟಿ ತಂಡಗಳಿಂದ ತಪಾಸಣೆ ನಡೆಯಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದರ ಜತೆಗೆ ರಾಜ್ಯಗಳು ಹಾಗೂ ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ 15ರಿಂದಲೇ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿದೆ. ಇದರಿಂದ ಅಕ್ಟೋಬರ್ ತಿಂಗಳ ಸಕ್ಕರೆ ಉತ್ಪಾದನೆ ಸಾಮಾನ್ಯ 3-4 LMTನಿಂದ 10 LMTಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ.
ಎಥೆನಾಲ್ ನೀತಿಯಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸುವಲ್ಲೂ ಸಹಾಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಗಸ್ಟ್ 20, 2026ರ ವೇಳೆಗೆ 2025-26ರ ಸಕ್ಕರೆ ಋತುವಿನ ಕಬ್ಬು ಬಾಕಿ ಮೊತ್ತದ ಶೇ.97ರಷ್ಟು ಹಣವನ್ನು ರೈತರಿಗೆ ಪಾವತಿಸಲಾಗಿದೆ.ಗ್ರಾಹಕರ ಹಿತಾಸಕ್ತಿ ಕಾಪಾಡುವುದರ ಜತೆಗೆ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುವಂತೆ ನೋಡಿಕೊಳ್ಳಲಾಗುವುದು. ಸಕ್ಕರೆ ದಾಸ್ತಾನು, ಬೆಲೆ ಮತ್ತು ಮಾರುಕಟ್ಟೆ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿ, ಅಕ್ರಮ ದಾಸ್ತಾನು ಹಾಗೂ ಅನಗತ್ಯ ಬೆಲೆ ಏರಿಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.






