ಕೋಲಾರ: ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರನ ವ್ಯಾಮೋಹದ ಜೊತೆಗೆ ನನ್ನನ್ನು ಹಾಳು ಮಾಡಿ ಸಮಾಜವನ್ನೂ ಹಾಳುಮಾಡಬೇಕೆಂಬ ಉದ್ದೇಶ ಹೊಂದಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ನೆಲೆ ಇಲ್ಲದೆ ಜನವರಿ 9 ರಂದು ಕೋಲಾರ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅತ್ತ ಪುತ್ರನ ವ್ಯಾಮೋಹ, ಇತ್ತ ನನ್ನನ್ನು ಹಾಳು ಮಾಡುವ ಉದ್ದೇಶವನ್ನ ಹೊಂದಿದ್ದಾರೆ. ಆದರೆ ಸಿದ್ದರಾಮಯ್ಯ ಬಂದರೆ ನನಗೆ 10 ಸಾವಿರ ಮತ ಕಡಿಮೆಯಾಗಬಹುದು, ಆದರೆ ಗೆಲುವು ನನ್ನದೇ. ಕೋಲಾರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ರಾಹುಲ್ ಗಾಂಧಿಯೇ ಸ್ಪರ್ಧೆ ಮಾಡಲಿ ನನ್ನ ಗೆಲುವಿನ ಅಂತರ 50 ಸಾವಿರ ಮತಗಳು, ಇದು ಶತಸಿದ್ಧ, ಇದರ ಹೊರತು ಬೇರೇನು ಆಗುವುದಿಲ್ಲ.
ಕೋಲಾರ ಕ್ಷೇತ್ರದಲ್ಲಿ 220 ಗ್ರಾಮಗಳಲ್ಲಿ ಕಾಂಗ್ರೆಸ್ನ 500 ಕಾರ್ಯಕರ್ತರು ಸಹ ಇಲ್ಲ. ಆದರು ಕೋಲಾರ ಕ್ಷೇತ್ರಕ್ಕೆ ಅಲ್ಪಸಂಖ್ಯಾತರನ್ನು ನಂಬಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಸಮಾವೇಶಕ್ಕೆ ತಲಾ ಎರಡು ಸಾವಿರದಂತೆ ಹಣ ನೀಡಿ ಜನರನ್ನು ಕರೆ ತರಲು ಕಾಂಗ್ರೆಸ್ ನಾಯಕರು, ಮುಖಂಡರು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರಕ್ಕೆ ಬಂದರೆ ಬೇರೆ ಬೇರೆ ಪಕ್ಷದ ನಾಯಕರು ನನಗೆ ಸಹಾಯ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಯಾವ ಕಾರಣಕ್ಕೂ ಭಯಪಡದೆ ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ. ಎಲ್ಲಾ ಪಕ್ಷದ ಮುಖಂಡರು ಕೋಲಾರಕ್ಕೆ ಬಂದು ನನ್ನನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆಂದು. ಅಲ್ಲದೇ ನನಗೆ ಮುಸ್ಲಿಂ ಸಮುದಾಯದವರೂ ಮತ ಹಾಕುವ ಭರವಸೆ ನೀಡಿದ್ದಾರೆ. ಮಾರ್ಚ್ ತಿಂಗಳಲ್ಲಿ 1 ಲಕ್ಷ ಕಾರ್ಯಕರ್ತರನ್ನು ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡಿ ಅಮಿತ್ ಷಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸೋಣ. ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜನಪ್ರಿಯ ಯೋಜನೆಗಳು ನಮ್ಮ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದರು.