ಬೆಂಗಳೂರು : ರಾಜ್ಯದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಈಗಾಗಲೇ ಒಂದು ತಿಂಗಳು ಪೂರ್ಣಗೊಂಡಿದೆ. ಆದರೆ ಕೇವಲ 13 ಜನರ ಸಂಪುಟವನ್ನು ಕಳೆದ ಒಂದು ತಿಂಗಳಿನಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಹೀಗಿರುವಾಗ ಇದುವರೆಗೂ ಕೂಡ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳುತ್ತಿಲ್ಲ. ಇದು ಸಚಿವಾಕಾಂಕ್ಷಿ ಶಾಸಕರಿಗೆ ಬೇಸರ ಮೂಡಿಸುತ್ತಿದೆ.

ಬಹುತೇಕ ಸದ್ಯ ಡಿಕೆ ಶಿವಕುಮಾರ್ ಸಂಪುಟದಲ್ಲಿರುವ ಸಚಿವರು ಈ ಹಿಂದಿನ ಸಿದ್ದರಾಮಯ್ಯ ಸಂಪುಟದವರೇ ಆಗಿದ್ದಾರೆ. ಆದರೆ ನೂತನವಾಗಿ ಮಂತ್ರಿಗಳಾಗುವ ಕನಸು ಕಂಡಿರುವ ಹಲವಾರು ಕಾಂಗ್ರೆಸ್ ಶಾಸಕರು ತೆರೆಮರೆಯಲ್ಲಿ ಮಂತ್ರಿಗಿರಿಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಈ ನಡುವೆಯೇ ಜಾತಿವಾರು, ಸಮುದಾಯವಾರು ಹಾಗೂ ಪ್ರಾಂತ್ಯವಾರು ಲೆಕ್ಕಾಚಾರದಿಂದ ಅಳೆದು ತೂಗಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ಚರ್ಚೆಗಳು ಮುಂದುವರೆದಿವೆ. ಮಂತ್ರಿಗಿರಿಗಾಗಿ ಶಾಸಕರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುತ್ತ ಗಿರಕಿ ಹೊಡೆಯಲು ಪ್ರಾರಂಭಿಸಿದ್ದಾರೆ. ಹಿರಿಯರು ಹಾಗೂ ಕಿರಿಯ ಶಾಸಕರು ಸಚಿವ ಸ್ಥಾನದ ಆಸೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಖುದ್ದು ಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಹಾಕುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಕರಾವಳಿ ಕಿರಿಕ್: ನಟ ಪ್ರಜ್ವಲ್ ದೇವರಾಜ್ ಆಪ್ತರ ವಿರುದ್ಧ FIR
ಕಳೆದ ವಾರವಷ್ಟೇ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಗದಗ ಜಿಲ್ಲೆಯ ರೋಣ ಕ್ಷೇತ್ರದ ಜಿ.ಎಸ್. ಪಾಟೀಲ್ ಅವರಿಗೆ ಮಂತ್ರಿಗಿರಿಗಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಆಗ್ರಹಿಸಿದ್ದರು. ಅಲ್ಲದೆ ಜಿಎ.ಎಸ್. ಪಾಟೀಲ್ ಅಭಿಮಾನಿಗಳ ಬಳಗದಿಂದ ತುಮಕೂರಿನಿಂದ ಬೆಂಗಳೂರಿನ ಪ್ರೀಡಂಪಾರ್ಕ್‌ವರೆಗೆ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯುವ ಕೆಲಸ ಮಾಡಿದ್ದರು.
ಇದಷ್ಟೇ ಅಲ್ಲದೆ ಯುವ ಶಾಸಕರೂ ತಮಗೂ ಮಂತ್ರಿಗಿರಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಶಾಸಕರಾದ ಶರತ್ ಬಚ್ಚೇಗೌಡ, ಶ್ರೀನಿವಾಸ ಮಾನೆ, ರಿಜ್ವಾನ್ ಅರ್ಷದ್, ಪ್ರದೀಪ್ ಈಶ್ವರ್ ಸೇರಿದಂತೆ ಹಲವರು ಬೇಡಿಕೆ ಇಡುತ್ತಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಿರುವಾಗ ಖುದ್ದು ಡಿಕೆ ಶಿವಕುಮಾರ್ ಈ ವಿಚಾರದಲ್ಲಿ ಆಸಕ್ತಿ ತೋರಿಸಿ, ಎಲ್ಲ ಶಾಸಕರ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಸಚಿವ ಸ್ಥಾನ ನೀಡಬೇಕೆಂಬ ಪ್ರತಿಭಟನೆಗಳನ್ನು ನಾವು ಒಪ್ಪಲ್ಲ, ಕಾಂಗ್ರೆಸ್ ಪಕ್ಷ ಶಿಸ್ತನ್ನು ಹೊಂದಿದೆ. ಇಲ್ಲಿ ಗೊಂದಲಗಳಿಗೆ ನಾವು ಅವಕಾಶ ನೀಡುವುದಿಲ್ಲ. ಸದ್ಯ ರಾಜ್ಯದಲ್ಲಿ ಈಗ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಯಾವೊಬ್ಬ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗೆ ಉಳಿಯಬಾರದು. ಇದನ್ನು ಎಲ್ಲರೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇನ್ನುಳಿದಂತೆ ಸಚಿವ ಸ್ಥಾನದ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅಭಯ ನೀಡಿದ್ದಾರೆ.

ಇನ್ನೂ ಮುಖ್ಯವಾಗಿ ಆರಂಭದಲ್ಲಿ ಜುಲೈ ತಿಂಗಳ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿತ್ತು. ಆದರೆ ಕಳೆದ 5ರಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ವಾಪಸ್ ಆದ ಬಳಿಕ ಈ ಬಗೆಯ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳಲಿವೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ವ್ಯಕ್ತವಾಗುತ್ತಿದ್ದವು.
ಆದರೆ ಸಂಪುಟ ವಿಸ್ತರಣೆಯ ಸುಳಿವು ಇದುವರೆಗೂ ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ. ಬಹುತೇಕ ಮುಂದಿನ ವಾರದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಫ್ಲೈಟು ಫುಲ್ ಆಗಲಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಜುಲೈ 13ರ ವೇಳೆಗೆ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಇನ್ನೂ ಇದಕ್ಕೆ ಕಾರಣವನ್ನು ನೋಡುವುದಾದರೆ ಸದ್ಯ ಡಿಕೆ ಶಿವಕುಮಾರ್ ಸಚಿವ ಸಂಪುಟ ಅಪೂರ್ಣವಾಗಿದೆ. ಆದರೆ ರಾಜ್ಯದಲ್ಲಿ ಬರ, ನೆರೆಯ ಜೊತೆಗೆ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ನಿರ್ವಹಣೆ ಮಾಡಲು ಸಚಿವರೇ ಇಲ್ಲ. ಇನ್ನೂ ಪ್ರಮುಖವಾಗಿ ಆಗಸ್ಟ್‌ನಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಕೆಲವೇ ಕೆಲವು ಜನರನ್ನು ಹೊಂದಿರುವ ಸಂಪುಟದಿಂದ ನಿರೀಕ್ಷಿತ ಮಟ್ಟದಲ್ಲಿ ಚರ್ಚೆಗಳು ನಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ರಾಜ್ಯದಲ್ಲಿ ತಲೆದೂರಿರುವ ಸಮಸ್ಯೆಗಳಿಗೂ ಯಾವುದೇ ರೀತಿಯ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಹೀಗಾಗಿ ಈ ಎಲ್ಲ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಶಿವಕುಮಾರ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಪಕ್ಷಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇದನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಯುವಕರು ಹಾಗೂ ಹಿರಿಯ ಅನುಭವಿ ಶಾಸಕರ ತಂಡವನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲಕ್ಷಣಗಳು ದಟ್ಟವಾಗಿವೆ.






