ನವದೆಹಲಿ : ಅಯೋಧ್ಯೇಯ ರಾಮ ಮಂದಿರ ಕಾಣಿಕೆ ಹುಂಡಿ ಲೂಟಿ ಪ್ರಕರಣ ಎಲ್ಲೆಡೆ ವ್ಯಾಪಕ ಸದ್ದು ಮಾಡುತ್ತಿದೆ ಭಕ್ತರ ನಂಬಿಕೆಗೆ ಯಾವೆಲ್ಲ ರೀತಿಯಲ್ಲಿ ಟ್ರಸ್ಟ್ ಆಡಳಿಲತ ಮಂಡಳಿ ಘಾಸಿಗೊಳಿಸಿದೆ ಎಂಬ ಮಾಹಿತಿಗಳು ಹೊರಬರುತ್ತಿವೆ. ಈ ನಡುವೆಯೇ ಉತ್ತರ ಪ್ರದೇಶ ಈ ಇಡೀ ಲೂಟಿ ಹಗರಣದ ತನಿಖೆಗಾಗಿ ನೇಮಕ ಮಾಡಿದ್ದ ವಿಶೇಷ ತನಿಖಾ ದಳ ಎಸ್‌ಐಟಿ (Special Investigation Team) ಹಲವು ಸ್ಫೋಟಕ ಸಂಗತಿಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಕಳೆದ ಜೂನ್ 12 ರಂದು ಸರ್ಕಾರ ನೇಮಕ ಮಾಡಿದ್ದ ಎಸ್‌ಐಟಿಯು ತನ್ನ ಒಂಬತ್ತು ಪುಟಗಳ ಮಧ್ಯಂತರ ವರದಿಯನ್ನು ಜೂನ್ 23 ರಂದು ಉತ್ತರ ಪ್ರದೇಶದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಿದೆ. ಆದರೆ ಈ ಮಧ್ಯಂತರ ವರದಿಯಲ್ಲಿನ ಹಲವು ಸಂಗತಿಗಳು ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಟ್ರಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ವ್ಯಕ್ತಿಗಳು ಭದ್ರತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿಲಿಲ್ಲ, ಸರಿಯಾದ ನಿಯಮ ಪಾಲನೆ ಮಾಡದಿರುವುದು ವರದಿಯಲ್ಲಿ ಬಹಿರಂಗವಾಗಿದೆ.
ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದ ಮಧ್ಯಂತರ ವರದಿ..!
ಭಕ್ತರಿಂದ ದೇಣಿಗೆಗಳನ್ನು ಎಣಿಕೆ ಮಾಡುವ ಕೆಲವು ಸಿಬ್ಬಂದಿಗಳು ಹಣದ ಕಳ್ಳತನ ಮತ್ತು ನಗದು ದುರುಪಯೋಗದಲ್ಲಿ ಭಾಗಿಯಾಗಿರುವುದು ಕಂಡುಬರುತ್ತದೆ. 40 ದಿನಗಳ ಅವಧಿಯಲ್ಲಿ 70 ಬಾರಿ ಕಳ್ಳತನದ ಪ್ರಕರಣಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿವೆ. ಹಲವು ವರ್ಷಗಳಿಂದ ದೇವಸ್ಥಾನಕ್ಕೆ ಬಂದಿದ್ದ ಕಾಣಿಕೆಗಳ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳಲ್ಲಿ ಗಂಭೀರ ಲೋಪಗಳು ನಡೆದಿವೆ ಎಂದು ಮಧ್ಯಂತರ ವರದಿಯು ಒತ್ತಿ ಹೇಳಿದೆ.
ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಮತ್ತು ರಾಮಶಂಕರ್ ಮಿಶ್ರಾ ಎಂಬ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಎಸ್‌ಐಟಿ ಶಿಫಾರಸು ಮಾಡಿದೆ. ಇಷ್ಟೆಲ್ಲ ನಡೆದರೂ ಟ್ರಸ್ಟ್‌ನ ಆಗಿನ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಚಂಪತ್ ರಾಯ್ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ : ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ1ಕೋಟಿ ರೂ ಅನುದಾನ: ಸಿಎಂ
ಟ್ರಸ್ಟ್‌ನ ಹಿರಿಯ ಪದಾಧಿಕಾರಿ ಅನಿಲ್ ಮಿಶ್ರಾ ಮತ್ತು ಎಣಿಕೆಯ ಉಸ್ತುವಾರಿ ಅಧಿಕಾರಿ ಸುಭಾಷ್ ಶ್ರೀವಾಸ್ತವ ಬೇಜವಾಬ್ದಾರಿಯನ್ನು ಎಸ್‌ಐಟಿ ಗಮನಿಸಿದೆ. ಆದರೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಯಾರೂ ಮಾಡುತ್ತಿಲ್ಲ ಎನ್ನುವುದು ತನಿಖಾ ದಳದ ಅಸಹಾಕತೆಯಾಗಿದೆ. ಅಲ್ಲದೆ ಪ್ರಮುಖವಾಗಿ ಲೂಟಿ ಮಾಡಿದ ಹಣ ಮರಳಿಸಲಾಗುತ್ತಿದೆಯಾ..? ಆರೋಪಿಗಳ ವಿಚಾರದಲ್ಲಿ ಸರ್ಕಾರ ಯಾವ ನಿಲುವು ತಾಳಲಿದೆ..? ರಾಜಕೀಯ ಪ್ರಭಾವದಿಂದ ಆರೋಪಿಗಳ ಬಚಾವಾಗುತ್ತಾರಾ..? ರಾಮನ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವುದರ ನೇರ ಹೊಣೆ ಹೊರುವವರು ಯಾರು ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಇನ್ನೂ ಉತ್ತರವೇ ಸಿಕ್ಕಿಲ್ಲ.
ಎಸ್‌ಐಟಿ ಬಿಚ್ಚಿಟ್ಟ ಸ್ಫೋಟಕ ಸತ್ಯಗಳೇನು..?
ಈ ಇಡೀ ದೇಣಿಗೆ ಕಳ್ಳತನದ ಪ್ರಕರಣವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ದೇಣಿಗೆಯ ನಿರ್ವಹಣೆ, ಟ್ರಸ್ಟ್‌ನಲ್ಲಿದ್ದ ಸದಸ್ಯರ ಪೂರ್ವಾಪರ ಮಾಹಿತಿ ಹಾಗೂ ದೇವಸ್ಥಾನಕ್ಕೆ ಬಂದ ಕೊಡುಗೆಗಳ ಬಗ್ಗೆಯೂ ತಿಳಿದುಕೊಳ್ಳಬೇಕಿದೆ ಎಂದು ಎಸ್‌ಐಟಿ ತಿಳಿಸಿದೆ.
ಕಳ್ಳತನದ ಘಟನೆಗಳನ್ನು ಅರ್ಥಮಾಡಿಕೊಳ್ಳಲು, ಗಿಫ್ಟ್‌ಗಳನ್ನು ನಿರ್ವಹಿಸುವ ಸಂಪೂರ್ಣ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಎಸ್‌ಐಟಿ ಪ್ರತಿಪಾದಿಸಿದೆ. ವರದಿಯ ಪ್ರಕಾರ, ಪ್ರಾಥಮಿಕ ಮತ್ತು ಅತ್ಯಂತ ಗಂಭೀರ ನ್ಯೂನತೆಯೆಂದರೆ ವಿವಿಧ ಹುಂಡಿಗಳಿಂದ ಸಂಗ್ರಹಿಸಲಾಗಿದ್ದ ಹಣವನ್ನು ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಬೆರೆಸಲಾಗಿತ್ತು. ಆದರೆ ನಿಗದಿತ ಕಾರ್ಯವಿಧಾನವು ಪ್ರತಿ ಹುಂಡಿಯಲ್ಲಿರುವ ವಸ್ತುಗಳನ್ನು ಪ್ರತ್ಯೇಕವಾಗಿ ಎಣಿಸಿ ದಾಖಲಿಸಬೇಕೆಂದು ಕಡ್ಡಾಯಗೊಳಿಸಿತ್ತು. ಇದರ ನೇರ ಪರಿಣಾಮವಾಗಿ, ಯಾವುದೇ ನಿರ್ದಿಷ್ಟ ದಿನದಂದು ನಿರ್ದಿಷ್ಟ ಹುಂಡಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂಬುದನ್ನು ನಂತರ ನಿಖರವಾಗಿ ಖಚಿತಪಡಿಸಿಕೊಳ್ಳುವುದು ಅಸಾಧ್ಯವಾಯಿತು. SIT ಇದನ್ನು ಹೊಣೆಗಾರಿಕೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ ಗಂಭೀರ ದೋಷವೆಂದು ಗುರುತಿಸಿದೆ.
- ಮೊದಲನೆಯದಾಗಿ, ದೇವಾಲಯದ ಆವರಣದಲ್ಲಿ ಸ್ಥಾಪಿಸಲಾದ ಹುಂಡಿಗಳು ಅಥವಾ ದೇಣಿಗೆ ಪೆಟ್ಟಿಗೆಗಳಲ್ಲಿ ನಗದು , ನಾಣ್ಯಗಳು, ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಠೇವಣಿ ಇಟ್ಟರೂ ಅದರ ಬಗ್ಗೆ ಗಮನಹರಿಸದಿರುವುದು.
- ಎರಡನೆಯದಾಗಿ, ಅವುಗಳನ್ನು ನೇರವಾಗಿ ಟ್ರಸ್ಟ್ ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಠೇವಣಿ ಇಟ್ಟಿರುವ ಬಗ್ಗೆ ಮಾಹಿತಿ ಪಡೆದಿದೆ. ಇನ್ನೂ ಗರ್ಭಗುಡಿಯ ಬಳಿ ರಾಮ ಪಾದಗಳಲ್ಲಿ ಕಾಣಿಕೆಗಳನ್ನು ಇಡುವುದರ ಬಗ್ಗೆಯೂ ಪರಿಶೀಲನೆ ಕೈಗೊಂಡಿದೆ

ಈ ಎಲ್ಲವುಗಳಿಂದ ಸಂಗ್ರಹಿಸಿದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಎಣಿಕೆ ಕೋಣೆಗೆ ತೆಗೆದುಕೊಂಡು ಹೋಗಿ, ಅಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಹಾಯದಿಂದ ಎಣಿಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಎಸ್‌ಓಪಿ ಗಾಳಿಗೆ ತೂರಿ ಕಾರ್ಯಭಾರ..
ಈ ಉದ್ದೇಶಕ್ಕಾಗಿ ಟ್ರಸ್ಟ್ ಮತ್ತು ಬ್ಯಾಂಕ್ ನಡುವೆ ವಿವರವಾದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ನಿಗದಿ ಪಡಿಸಲಾಗಿತ್ತು. ಈ ಕಾರ್ಯವಿಧಾನವು ಟ್ರಸ್ಟ್ ಮತ್ತು ಬ್ಯಾಂಕ್ ಪ್ರತಿನಿಧಿಗಳ ಸಮ್ಮುಖದಲ್ಲಿ ದೇಣಿಗೆ ಪೆಟ್ಟಿಗೆಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿದೆ. ಪ್ರತಿ ಪೆಟ್ಟಿಗೆಗೆ ಪ್ರತ್ಯೇಕ ದಾಖಲೆಗಳನ್ನು ನಿರ್ವಹಿಸಬೇಕು; ಕಡ್ಡಾಯವಾಗಿ ಸಿಬ್ಬಂದಿ ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ತಪಾಸಣೆಗೆ ಒಳಗಾಗಬೇಕು; ಎಣಿಕೆ ಸಿಬ್ಬಂದಿ ಪಾಕೆಟ್‌ಗಳಿಲ್ಲದೆ ವಿಶೇಷ ಉಡುಪುಗಳನ್ನು ಧರಿಸಬೇಕು; ಎಣಿಕೆ ಕೋಣೆಯೊಳಗೆ ವೈಯಕ್ತಿಕ ವಸ್ತುಗಳನ್ನು ನಿಷೇಧಿಸಬೇಕು; ಪ್ರತಿ ಉದ್ಯೋಗಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸಬೇಕು; ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಬೇಕು ಎಂದು ಎಸ್‌ಐಟಿ ವರದಿ ನೀಡಿದೆ.
ಇದನ್ನೂ ಓದಿ : 666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಬಿಡುಗಡೆ
ಕೇವಲ ಈ ಎಲ್ಲ ನಿಯಮಗಳು ಇಷ್ಟು ದಿನಗಳ ಕಾಲ ಕಾಗದದ ಹಾಳೆಯ ಮೇಲಷ್ಟೇ ಅತ್ಯಂತ ಬಲಿಷ್ಠವಾಗಿ ಕಂಡುಬಂದಿವೆ. ಆದರೆ ಪ್ರಾಯೋಗಿಕವಾಗಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಎಸ್‌ಐಟಿ ತನಿಖೆಯು ಬಹಿರಂಗಪಡಿಸಿದೆ.
ಆಳವಾಗಿ ಹರಡಿಕೊಂಡಿರುವ ಹಗರಣದ ಬೇರುಗಳು..!
ಹಣಕಾಸಿನ ವ್ಯವಹಾರ ಅಷ್ಟೇ ಅಲ್ಲದೆ ಈ ಅಕ್ರಮವು ಇನ್ನಷ್ಟು ಆಳವಾಗಿ ಹರಡಿಕೊಂಡಿದೆ. ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳ ನಿರ್ವಹಣೆಯಲ್ಲಿಯೂ ಗಂಭೀರವಾದ ಲೋಪಗಳು ಕಂಡುಬಂದಿದ್ದವು. ಯಾವುದೇ ಪೆಟ್ಟಿಗೆಯಿಂದ ಚಿನ್ನ, ಬೆಳ್ಳಿ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಹೊರತೆಗೆದಾಗ, ಅವುಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ವಿಶೇಷ ಹುಂಡಿಯಲ್ಲಿ ಅಂದರೆ ಸಂಖ್ಯೆ 12 ರಲ್ಲಿ ಸಂಗ್ರಹಿಸಲಾಗುತ್ತದೆ. ನಂತರ, ಅವುಗಳ ತೂಕ, ಫೋಟೋಗ್ರಾಫಿ, ರೆಕಾರ್ಡಿಂಗ್ಸ್, ಹಾಗೂ ಸುರಕ್ಷತೆಗೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಲಾಗುತ್ತದೆ.
ಆದರೆ ಅನೇಕ ಸಂದರ್ಭಗಳಲ್ಲಿ ಈ ಕಾರ್ಯವಿಧಾನಗಳನ್ನು ಸ್ಥಿರವಾಗಿ ಅನುಸರಿಸಲಾಗುತ್ತಿರಲಿಲ್ಲ. ಕೆಲವು ಭಕ್ತರಿಗೆ ರಸೀದಿಗಳನ್ನು ನೀಡದಿರುವ ಬಗ್ಗೆ ದೂರುಗಳೂ ಸಹ ಬಂದಿವೆ. ಆದರೂ ಲಾಕರ್‌ನಲ್ಲಿ ಸಂಗ್ರಹಿಸಲಾದ 11 ಬೆಲೆಬಾಳುವ ವಸ್ತುಗಳನ್ನು ದಿಢೀರ್ ಆಗಿ ಎಸ್‌ಐಟಿ ಪರಿಶೀಲನೆಯನ್ನು ನಡೆಸಿದೆ. ಇನ್ನೂ ಮುಖ್ಯವಾಗಿ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಕಾರ್ಯನಿರ್ವಹಣೆಗಳನ್ನು ಅತ್ಯಂತ ಪಾರದರ್ಶಕವಾಗಿ ನೋಡಿಕೊಳ್ಳಬೇಕು. ದೇವಾಲಯದ ಆವರಣದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಎಲ್ಲ ಪ್ರಕ್ರಿಯೆಗಳು ಗೊಂದಲರಹಿತವಾಗಿ ನಡೆಯಬೇಕು ಎಂದು ಎಸ್‌ಐಟಿ ಸೂಚಿಸಿದೆ. ಆದರೆ ಎಸ್‌ಐಟಿಯ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಎಲ್ಲರ ಕುತೂಹಲವಾಗಿದೆ.






