ಉತ್ತರ ಪ್ರದೇಶದ ಕಾನ್ಪುರದಲ್ಲಿ 23 ವರ್ಷದ ಆನಂದ್ ಕುಮಾರ್ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ನವ ಭಾರತದಲ್ಲಿ ಈ ವಯೋಮಾನದ ಯುವಜನರ ಆತ್ಮಹತ್ಯೆಗಳು ರೈತರ ಆತ್ಮಹತ್ಯೆಯಷ್ಟೇ ಸಾಮಾನ್ಯ ಸುದ್ದಿಯಾಗಿದೆ. ಇದಕ್ಕೆ ಸರ್ಕಾರಗಳ ಪರಿಹಾರದ ಚೆಕ್ ಹೊರತು ಮತ್ತಾವ ಪ್ರತಿಕ್ರಿಯೆಯೂ ಇರುವುದಿಲ್ಲ. ಮೃತ ವ್ಯಕ್ತಿ ದಲಿತನಾಗಿದ್ದರೆ ದಲಿತ ಸಂಘಟನೆಗಳು ಎದ್ದು ನಿಲ್ಲುತ್ತವೆ. ಮುಸ್ಲಿಂ ಆದರೆ ಸಾಮುದಾಯಿಕ ಪ್ರತಿಕ್ರಿಯೆಯೇ ಇರುವುದಿಲ್ಲ. ಹಿಂದೂ ಆಗಿದ್ದರೆ, ಮೇಲ್ಜಾತಿ ಹಿಂದೂ ಸಮಾಜಗಳು ʼ ಇದಕ್ಕೆಲ್ಲಾ ಮೀಸಲಾತಿಯೇ ಕಾರಣ ʼ ಎಂದು ಹೇಳಿ ಸುಮ್ಮನಾಗುತ್ತವೆ. ಈ ಯುವಕನ ಆತ್ಮಹತ್ಯೆಗೆ ಕಾರಣ, 2024ರಲ್ಲಿ ಬಿ ಟೆಕ್ ಪದವಿಯಲ್ಲಿ ಟಾಪರ್ (Topper) ಆಗಿ ಚಿನ್ನದ ಪದಕ ಗಳಿಸಿದ್ದರೂ ನಿರುದ್ಯೋಗದಿಂದ ಆತನಲ್ಲಿ ಮಡುಗಟ್ಟಿದ್ದ ನಿರಾಸೆ, ಹತಾಶೆ ಮತ್ತು ಅಸಹಾಯಕತೆ.

ಕಾನ್ಪುರದ ಪ್ರಣ್ವೀರ್ ಸಿಂಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (PSIT) ಸಂಸ್ಥೆಯಲ್ಲಿ ಬಿ.ಟೆಕ್. ವ್ಯಾಸಂಗ ಮಾಡಿ ,ರಾಜ್ಯಮಟ್ಟದಲ್ಲಿ ಮೂರನೆ ಶ್ರೇಣಿ ಪಡೆದು, ಉತ್ತರ ಪ್ರದೇಶ ಸರ್ಕಾರದಿಂದ ಚಿನ್ನದ ಪದಕ ಪಡೆದಿದ್ದ ಆನಂದ್ ಕುಮಾರ್ ,ತನ್ನ ಪೋಷಕರು ಪರ ಊರಿಗೆ ಹೋಗಿರುವ ಸಂದರ್ಭದಲ್ಲಿ , ಐದು ಸಾಲುಗಳ ಡೆತ್ ನೋಟ್ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಆನಂದ್ ಕುಮಾರ್ ತನ್ನ ಕೊನೆಯ ಮಾತುಗಳಾಗಿ “ ಸಾರಿ ಅಪ್ಪಾ, ನಾನು ಸರ್ಕಾರಿ ನೌಕರಿ ಗಳಿಸಲು 50 ಬಾರಿ ಪ್ರಯತ್ನಿಸಿದೆ ಆದರೆ ಸಫಲವಾಗಲಿಲ್ಲ, ನನ್ನನ್ನು ಕ್ಷಮಿಸಿಬಿಡಿ ” ಎಂದು ಬರೆದಿಟ್ಟು ಅಂತಿಮ ವಿದಾಯ ಹೇಳಿದ್ದಾನೆ. ಈ ಸಾವಿಗೆ ಯಾರು ಹೊಣೆ ? ಬಹುಶಃ ಈ ಪ್ರಶ್ನೆ ಯಾವುದೇ ಮೂಲೆಯಿಂದ ಧ್ವನಿಸಿದರೂ, ವಿಕಸಿತ ಭಾರತದಲ್ಲಿ ಉತ್ತರ ದೊರೆಯುವುದಿಲ್ಲ. ಏಕೆಂದರೆ ಈ ಯುವಕ ʼ ಎಲ್ಲರೊಳಗೊಬ್ಬ ʼ ಆಗುತ್ತಾನೆ.

ಭಾರತದ ಎರಡು ಮಗ್ಗುಲುಗಳು
ಬೌದ್ಧಿಕ ಸಂಕಥನಗಳಲ್ಲಿ (Intellectual Discourses) ಸಾಮಾನ್ಯವಾಗಿ ಭಾರತವನ್ನು ವಿಶ್ಲೇಷಿಸುವಾಗ, ಅರ್ಥಶಾಸ್ತ್ರಜ್ಞರು ಹಾಗೂ ಸಮಾಜಶಾಸ್ತ್ರಜ್ಞರು, ಎರಡು ಭಾರತವನ್ನು ಗುರುತಿಸುತ್ತಾರೆ. ಅನುಕ್ರಮವಾಗಿ ಬಡವರ-ಶ್ರೀಮಂತರ ಭಾರತ ಮತ್ತು ಶೋಷಿತರ-ಶೋಷಕರ ನೆಲೆಯಲ್ಲಿ ಈ ಸಾಂಕೇತಿಕ ವಿಭಜನೆಯನ್ನು ಕಾಣುತ್ತಾರೆ. ಇದನ್ನೇ ಮತ್ತೊಂದು ಮಗ್ಗುಲಿನಿಂದ ನೋಡಿದಾಗ, 21ನೆಯ ಶತಮಾನದ ಭಾರತವನ್ನು ಸಾಮಾಜಿಕವಾಗಿ ಮತ್ತೊಮ್ಮೆ ಎರಡಾಗಿ ನೋಡಬಹುದು. ಸಂವೇದನಾಶೀಲ ಹಾಗೂ ಸಂವೇದನಾರಹಿತ ಭಾರತ. ಕಳೆದ 15 ವರ್ಷಗಳ ಹಿಂದುತ್ವ ಆಳ್ವಿಕೆಯಲ್ಲಿ ಈ ವೈರುಧ್ಯ (Contradiction) ಪದೇಪದೇ ಕಾಣಿಸಿಕೊಳ್ಳುತ್ತಲೇ ಇದೆ. ಹೆಚ್ಚಾಗುತ್ತಲೂ ಇದೆ.
ಆರಂಭದಲ್ಲಿ ಉಲ್ಲೇಖಿಸಿದ ಯುವಕನ ದಾರುಣ ಅಂತ್ಯವನ್ನೇ ಗಮನದಲ್ಲಿಟ್ಟು ನೋಡಿದಾಗ, ಈ ನತದೃಷ್ಟ ಪ್ರಜೆಯನ್ನು ಪ್ರತಿನಿಧಿಸುವ ಸಾವಿರಾರು ಯುವ ಜನರು ದೆಹಲಿಯ ಜಂತರ್ ಮಂತರ್ನಲ್ಲಿ ಕಾಣುತ್ತಾರೆ. ಅಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಯುವ ಸಮೂಹದ ಒಳಗೆ ಇರಬಹುದಾದ ಭವಿಷ್ಯದ ʼ ಆನಂದ್ ಕುಮಾರ್ʼ ಗಳನ್ನು ಗುರುತಿಸಲು ಸಾಧ್ಯವಾದರೆ ನಮ್ಮನ್ನು ಮೊದಲನೆ ವರ್ಗಕ್ಕೆ ಸೇರಿಸಬಹುದು. 22 NEET ಶಿಕ್ಷಣಾರ್ಥಿಗಳ ಆತ್ಯಹತ್ಯೆಯಿಂದ ನೊಂದು, ಕೇಂದ್ರ ವಿತ್ತ ಸಚಿವರ ರಾಜೀನಾಮೆಗಾಗಿ ಆಗ್ರಹಿಸಿ ಮುಷ್ಕರ ನಡೆಸಿದ್ದ ಈ ಯುವ ಜನರ ಪೈಕಿ ಈಗ 124 ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಈ ಸಮೂಹದ ಮೇಲೆ ಬೀಸಲಾದ ಲಾಠಿಗಳು, ಪ್ರಯೋಗಿಸಲಾದ ಅಶ್ರುವಾಯು ಸಹಜವಾಗಿ ಅಲ್ಲಿ ನೆರೆದಿರುವವರ ಕಣ್ಣನ್ನು ಒದ್ದೆ ಮಾಡಿರುತ್ತದೆ.

ಬಾಹ್ಯ ಸಮಾಜದಲ್ಲಿ ಈ ಏಟುತಿಂದ ಮಕ್ಕಳಿಗೆ ಕಂಬನಿ ಮಿಡಿಯುವ ಮನಸ್ಸುಗಳು ಎಷ್ಟು ಸಂಖ್ಯೆಯಲ್ಲಿವೆ ? ಒಬ್ಬ ವಿದ್ಯಾರ್ಥಿನಿ “ ನಿಮ್ಮ ಮಕ್ಕಳೇ ಆಗಿದ್ದರೆ ಹೀಗೆ ಹೊಡೆಯುತ್ತಿದ್ದಿರಾ ?,,,, ” ಎಂದು ರೋದಿಸುತ್ತಿರುವ ವಿಡಿಯೋ ನೋಡಿದಾಗ ಈ ಪ್ರಶ್ನೆ ಮೂಡುತ್ತದೆ. ರಾಷ್ಟ್ರೀಯ ಮುಖ್ಯವಾಹಿನಿಯ ಸುದ್ದಿಮನೆಗಳ ನಿರೂಪಕರಿಗೆ ಈ ಬಾಲೆ ಕಾಣುವುದಿಲ್ಲ, ತಲೆಗೆ ಕಲ್ಲೇಟು ಬಿದ್ದು ರಕ್ತಸ್ರಾವವಾಗುತ್ತಿರುವ ಪೊಲೀಸ್ ಸಿಬ್ಬಂದಿ ಕಾಣುತ್ತಾರೆ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದೆ ಹೋದಾಗ, ಸಮೂಹಗಳಲ್ಲಿ ಉದ್ರಿಕ್ತ ಮನಸ್ಥಿತಿ ಸಹಜ. ಹಾಗೆಂದ ಮಾತ್ರಕ್ಕೆ ಆ ಪೊಲೀಸ್ ಅಧಿಕಾರಿ ಅನುಕಂಪಕ್ಕೆ ಹೊರತಾಗುವುದಿಲ್ಲ. ಆದರೆ ಇದನ್ನೇ ಮುಷ್ಕರನಿರತ ವಿದ್ಯಾರ್ಥಿಗಳ ಹಿಂಸಾತ್ಮಕ ಕೃತ್ಯ ಎಂದು ಬಣ್ಣಿಸುವ ಸುದ್ದಿವಾಹಿನಿಗಳಿಗೆ, ಪೊಲೀಸರ ಲಾಠಿ ಪ್ರಹಾರಕ್ಕೆ ಚದುರಿ ಹೋದ, ಆಸ್ಪತ್ರೆ ಸೇರಿರುವ ವಿದ್ಯಾರ್ಥಿ ಸಮೂಹ ಏಕೆ ಗೋಚರಿಸುವುದಿಲ್ಲ ?

ಸಾಮಾಜಿಕ ಸ್ವಾಸ್ಥ್ಯದ ಚೌಕಟ್ಟಿನಲ್ಲಿ
ಪೊಲೀಸರ ಮೇಲೆ ಹಲ್ಲೆ ನಡೆಸುವುದು ಕಾನೂನಾತ್ಮಕ ಅಪರಾಧ, ಎರಡು ಮಾತಿಲ್ಲ. ಆದರೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಬೇಡಿಕೆಗೆ ಕಿವಿಗೊಡಲೂ ಮುಂದಾಗದೆ, ದೇಶದ ಹಿತಾಸಕ್ತಿಗಾಗಿ ಸಂಸತ್ತಿನ ಒಳಗೆ ಚರ್ಚೆಯಲ್ಲಿ ನಿರತರಾಗಿದ್ದ ನೂರಾರು ಜನಪ್ರತಿನಿಧಿಗಳಿಗೆ, ಆಡಳಿತಾರೂಢ ಪಕ್ಷದ ನೇತಾರರಿಗೆ, ಈ ಯುವ ಜನರ ಮುಂದೆ ನಿಂತು , ಅವರ ಬೇಡಿಕೆಗಳನ್ನು ಆಲಿಸಿ, ಒಂದೆರಡು ಸಮಾಧಾನದ ಮಾತುಗಳನ್ನಾಡಿದ್ದರೆ ರುದ್ರಪ್ರಳಯವಾಗುತ್ತಿತ್ತೇ ? ಒಂದು ಕ್ಷಣ ಪ್ರಧಾನಿಗಳು, ಆಳುವ ಪಕ್ಷದ ಅಧ್ಯಕ್ಷರು ಈ ಹೆಜ್ಜೆ ಮುಂದಿಟ್ಟು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಲ್ಲಿ , ಖಂಡಿತವಾಗಿಯೂ ಈ ಮಕ್ಕಳು ಕೈಕಟ್ಟಿ ಕುಳಿತುಕೊಳ್ಳುತ್ತಿದ್ದರು.
ಬದಲಾಗಿ ಈ ಮಕ್ಕಳು ಎದುರಿಸಬೇಕಾಗಿದ್ದು ಪೊಲೀಸರ ಲಾಠಿ ಏಟುಗಳನ್ನು. ಕೆಲವು ದಿನಗಳ ಹಿಂದೆ ದೆಹಲಿಯಲ್ಲೇ ಅತ್ಯಾಚಾರ-ಹತ್ಯೆಗೀಡಾದ 12 ವರ್ಷದ ಬಾಲೆಯ “ ಪಾಪಾ ಮುಝೆ ಬಚಾಲೋ ” (ಅಪ್ಪಾ ನನ್ನನ್ನು ಕಾಪಾಡೀ,,,,,,) ಎಂಬ ಕೂಗಿಗೂ, ಕಾನ್ಪುರದ ಯುವಕನ “ ಅಪ್ಪಾ ನನ್ನನ್ನು ಕ್ಷಮಿಸಿಬಿಡಿ ,,,,,” ಎಂಬ ನೋವಿದ ದನಿಗೂ, ದೆಹಲಿಯಲ್ಲಿ ವಿದ್ಯಾರ್ಥಿನಿಯ “ ನಿಮ್ಮ ಮಕ್ಕಳಾಗಿದ್ದರೆ ಹೀಗೆ ಹೊಡೆಯುತ್ತಿದ್ದಿರಾ…… ” ಎಂಬ ವೇದನೆಗೂ ತಾತ್ವಿಕವಾಗಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಮೂರೂ ಸನ್ನಿವೇಶಗಳಲ್ಲಿ ನಮಗೆ ಕಾಣುವುದು ಒಂದು ನೊಂದ ಹೃದಯ, ಅಸಹಾಯಕ ಜೀವ ಮತ್ತು ʼ ಕೇಳುವವರಿಲ್ಲದ ʼ ಅನಾಥ ಪ್ರಜ್ಞೆ.

ಹೊಸ ವರ್ಗದ ನಿಷ್ಕ್ರಿಯತೆ
ಸಮಾಜದ ಹೊಸ ವರ್ಗೀಕರಣದಲ್ಲಿ ಎರಡನೆಯ ವರ್ಗ ಈ ಸಂವೇದನಾರಹಿತ ಸಮಾಜದ ಪ್ರತಿನಿಧಿಯಾಗಿ ಕಾಣುತ್ತದೆ. ಜಂತರ್ ಮಂತರ್ನಲ್ಲಿ ಲಾಠಿಪ್ರಹಾರ ನಡೆಸಿದ ಪೊಲೀಸರು ನಮ್ಮಲ್ಲಿಯೇ ಒಬ್ಬರು. ಅವರೊಳಗೆ ಸಹೃದಯ ಭಾವನೆ , ಸ್ಪಂದನಶೀಲ ಮನಸ್ಸು ಅಡಗಿರುತ್ತದೆ. ಅವರನ್ನು ವ್ಯವಸ್ಥೆಯ ಆಜ್ಞಾಪಾಲಕರು ಎಂದಷ್ಟೇ ನೋಡುವುದರಿಂದ, ಅವರ ಆಂತರಿಕ ವ್ಯಕ್ತಿತ್ವವನ್ನು ಶೋಧಿಸಲು ಸಮಾಜ ಮುಂದಾಗುವುದಿಲ್ಲ. ಆದರೆ ಸಮವಸ್ತ್ರ ಹಾಗೂ ಕರ್ತವ್ಯ ಪ್ರಜ್ಞೆ ಅವರ ಈ ಸಂವೇದನೆಯ ತಂತುಗಳನ್ನು ತುಂಡರಿಸಿಬಿಟ್ಟಿರುತ್ತದೆ. ಅವರು ಬೀಸುವ ಲಾಠಿಗಳ ಹಿಂದೆ ಒಂದು ಆದೇಶ, ಆಜ್ಞೆ ಇರುತ್ತದೆ, ಒಂದು ಸಾಂಸ್ಥಿಕ ವ್ಯವಸ್ಥೆ ಇರುತ್ತದೆ. ಈ ಸಾಂಸ್ಥಿಕ ನೆಲೆಯಲ್ಲಿ ಬೇರೂರಿರುವ ಕ್ರೌರ್ಯ ಮತ್ತು ದಬ್ಬಾಳಿಕೆಯ ಮನಸ್ಥಿತಿಯೇ ಪ್ರತಿಯೊಂದು ಜನಾಂದೋಲನದ ಸಂದರ್ಭದಲ್ಲೂ ಸಾರ್ವಜನಿಕ ಸ್ವರೂಪ ಪಡೆದುಕೊಳ್ಳುತ್ತದೆ.
ಪ್ರಸ್ತುತ ಜಂತರ್ ಮಂತರ್ ಹೋರಾಟದಲ್ಲಿ ನಾವು ಗಮನಿಸಬೇಕಿರುವುದು ಈ ವಿರೋಧಾಭಾಸವನ್ನು. ಈ ಹೋರಾಟ ಅಂತ್ಯಗೊಳಿಸಲು ಸಿಜೆಪಿ ಪಕ್ಷದ ನಾಯಕರು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಆತ್ಮಹತ್ಯೆಗೆ ಶರಣಾದ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ಒಂದು ಕೋಟಿ ರೂ ಪರಿಹಾರ ಮತ್ತು ಸೋನಂ ವಾಂಗ್ಚುಕ್ ಅವರ ಬಿಡುಗಡೆ. 22 ನೀಟ್ ಶಿಕ್ಷಣಾರ್ಥಿಗಳು ಜೀವ ಕಳೆದುಕೊಂಡಿದ್ದರೂ, ಜಂತರ್ ಮಂತರ್ ಗಲಭೆಯಲ್ಲಿ 124 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಾಯಗೊಂಡು, ಒಬ್ಬ ವಿದ್ಯಾರ್ಥಿನಿ ಜೀವನ್ಮರಣ ಹೋರಾಟ ನಡೆಸುತ್ತಿರುವಾಗಲೂ, ನೂರಾರು ಯುವ ಜನರು ಪೊಲೀಸರ ಲಾಠಿ ಪ್ರಹಾರಕ್ಕೆ ತುತ್ತಾಗಿದ್ದರೂ, ಶಿಕ್ಷಣ ಸಚಿವರ ರಾಜೀನಾಮೆ ʼ ಒತ್ತಾಯಿಸಬೇಕಾದ ಬೇಡಿಕೆ ʼ ಆಗಿರುವುದೇ ಪ್ರಜಾಪ್ರಭುತ್ವದ ದುರಂತ ಅಲ್ಲವೇ ?

ಆದರೆ ನವ ಭಾರತ ವಿಕಾಸದ ಹಾದಿಯಲ್ಲಿ ಸಾಗುತ್ತಿರುವುದೇ ಹೀಗೆ. ನೀಟ್ ಭ್ರಷ್ಟಾಚಾರ ಹಗರಣದ ರೂವಾರಿಗಳ ವಿರುದ್ಧ ಎಫ್ಐಆರ್ ಹೂಡಲಾಗಿದೆ. NEET ಪರೀಕ್ಷೆಯನ್ನು ನಡೆಸುವ ಸಾಂವಿಧಾನಿಕ ಜವಾಬ್ದಾರಿ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳು ನಿರಾಳವಾಗಿದ್ದಾರೆ. ಪರೀಕ್ಷಾರ್ಥಿಗಳು ಪುನಃ ಪರೀಕ್ಷೆ ಬರೆದು 11 ಲಕ್ಷಕ್ಕೂ ಹೆಚ್ಚು ತೇರ್ಗಡೆಯಾಗಿ, ವೈದ್ಯರಾಗುವ, ಇಂಜಿನಿಯರ್ ಆಗುವ ಕನಸು ಕಾಣುತ್ತಿದ್ದಾರೆ. ʼ ಸಂವೇದನಾ ರಹಿತ ʼ ಸಮಾಜದ ಚೌಕಟ್ಟಿನಲ್ಲಿ ಇಣುಕಿ ನೋಡಿದಾಗ ಈ ಭಾವಿ ಫಲಾನುಭವಿಗಳೂ, ಅವರ ಪೋಷಕರೂ ಸಹಜವಾಗಿ ಕಾಣುತ್ತಾರೆ. ಈ ವಿದ್ಯಾರ್ಥಿ ಸಮೂಹದ ಒಂದು ವರ್ಗ ಜಂತರ್ ಮಂತರ್ನಲ್ಲಿ ಕಾಣಬಹುದು ಆದರೆ ಬಹುಪಾಲು ನಿರ್ಲಿಪ್ತತೆಗೆ ಜಾರಿಬಿಟ್ಟಿರುತ್ತಾರೆ. ಮೇಲ್ವರ್ಗಗಳ , ಮೇಲ್ಪದರ ಸಮಾಜಗಳ (Elite societies) ಲಕ್ಷಣವಿದು.
ಸಾರ್ವಜನಿಕ ಸಂವೇದನೆ ಎಲ್ಲಿ ?
ಈ ಯುವ ಜನಸಂಖ್ಯೆಯನ್ನು ಬದಿಗಿಟ್ಟು ವಿಶಾಲ ಸಮಾಜದ ಕಡೆ ನೋಡಿದಾಗ ಜಂತರ್ ಮಂತರ್ ಹೋರಾಟಕ್ಕೆ ಮತ್ತು ಅಲ್ಲಿ ನಡೆದಿರುವ ವ್ಯವಸ್ಥೆಯ ದೌರ್ಜನ್ಯಕ್ಕೆ ಸಾರ್ವಜನಿಕ ಪ್ರತಿಕ್ರಿಯೆ ಹೇಗೆ ಕಾಣುತ್ತಿದೆ ? ಎಲ್ಲಾ ಅನ್ಯಾಯಗಳ ವಿರುದ್ಧವೂ ಹೋರಾಡುವ ಎಡಪಂಥೀಯ, ದಲಿತ, ಮಹಿಳಾ ಸಂಘಟನೆಗಳು ಮತ್ತು ಪಕ್ಷಗಳು ಮತ್ತು ಇವುಗಳಿಗೆ ಸಂಯೋಜಿತವಾದ ವಿದ್ಯಾರ್ಥಿ ಸಂಘಗಳನ್ನು ಹೊರತುಪಡಿಸಿದರೆ, ನಮಗೆ ಕಾಣುವುದು ಕಾಂಗ್ರೆಸ್, ಆಮ್ ಆದ್ಮಿ ಮೊದಲಾದ ರಾಜಕೀಯ ಪಕ್ಷಗಳು ಮಾತ್ರ. ಏಕೆ, ಆಡಳಿತ ಪಕ್ಷದ ನಾಯಕರಿಗೆ, ಸದಸ್ಯರಿಗೆ, ಬೆಂಬಲಿಗರಿಗೆ ಇಲ್ಲಿ ಅನ್ಯಾಯ ನಡೆದಿರುವುದು, ಅಲ್ಲಿ ದೌರ್ಜನ್ಯ ನಡೆದಿರುವುದು ಗೋಚರಿಸುತ್ತಿಲ್ಲವೇ ? ಅಥವಾ ಪಕ್ಷ ನಿಷ್ಠೆ ಅಥವಾ ನಾಯಕ ನಿಷ್ಠೆ ಎನ್ನುವುದು ಸ್ವಯಂ ವಿವೇಕವನ್ನೂ ನಾಶಪಡಿಸುವಷ್ಟು ಶಕ್ತಿ ಹೊಂದಿರುವುದೇ ?
ಭಾರತದಲ್ಲಿ ಪ್ರಸ್ತುತ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ 1.37 ಲಕ್ಷ ಇದೆ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ 70 ಸಾವಿರ ಇದೆ. ವಿವಿಧ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ 41.3 ಲಕ್ಷ ಇದೆ. ಪ್ರತಿವರ್ಷ 15 ಲಕ್ಷ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಾರೆ. 72 ಸಾವಿರ ಬಿ ಟೆಕ್ ಪದವೀಧರರು ಈ ವ್ಯಾಸಂಗದಲ್ಲಿ ಮತ್ತು ಮಾರುಕಟ್ಟೆಯಲ್ಲಿದ್ದಾರೆ. ಇಷ್ಟೂ ಜನರ ದೃಷ್ಟಿಯಲ್ಲಿ ಜಂತರ್ ಮಂತರ್ನಲ್ಲಿ ಹೋರಾಡುತ್ತಿರುವ ಯುವಸಮೂಹ ಹೇಗೆ ಕಾಣಿಸುತ್ತದೆ ? ಇವರ ನೋವು, ಆಕ್ರಂದನ ಹೇಗೆ ಕೇಳಿಸುತ್ತದೆ. ಅವರ ಮೇಲಿನ ದೌರ್ಜನ್ಯ ಹೇಗೆ ಗೋಚರಿಸುತ್ತದೆ ?

ಈ ಸುಮಾರು 50 ಲಕ್ಷ ಯುವಜನರು ಮತ್ತು ಅವರ ಪೋಷಕರು , ಅಂದರೆ ಅಂದಾಜು ಎರಡು ಕೋಟಿ ಜನರು, 50 ಲಕ್ಷ ಕುಟುಂಬಗಳು ಜಂತರ್ ಮಂತರ್ನಲ್ಲಿ ಮೊಳಗಿದ ಒಕ್ಕೊರಲ ದನಿಗೆ, ಮನೆಯಲ್ಲೇ ಕುಳಿತು ದನಿಗೂಡಿಸಿದ್ದರೆ ಹೇಗಿರುತ್ತಿತ್ತು ? ಸಾಮಾಜಿಕ ಮಾಧ್ಯಗಳ (Social Media) ಯುಗದಲ್ಲಿ ಇದು ಅಸಾಧ್ಯವಲ್ಲ. ಜಂತರ್ ಮಂತರ್ನಲ್ಲಿ ಕೇಳಿಬರುತ್ತಿರುವ ಕೂಗು ವರ್ತಮಾನದ ಆಕಾಂಕ್ಷಿಗಳದ್ದೇ ಆಗಿದ್ದರೂ ಅಲ್ಲಿ ಭವಿಷ್ಯ ಭಾರತದ ಬೌದ್ಧಿಕ ಆಸ್ತಿಯ ದೊಡ್ಡ ದನಿಯೂ ಇದೆ. ಈ ದೃಷ್ಟಿಯಿಂದ ನೋಡಿದಾಗ, ಈಗಾಗಲೇ ವೈದ್ಯಕೀಯ-ಇಂಜಿನಿಯರಿಂಗ್ ಮತ್ತಿತರ ಪದವಿಗಳನ್ನು ಪಡೆದು ಮಾರುಕಟ್ಟೆಯ ಫಲಾನುಭವಿಗಳಾಗಿರುವ ಒಂದು ವರ್ಗದ ನಿಷ್ಕ್ರಿಯ ಮೌನ ನಮ್ಮ ನಡುವೆ ಕಾಣುತ್ತದೆ.
ವರ್ಗಪ್ರಜ್ಞೆಯ ವಿಕೃತ ರೂಪ
ಈ ವರ್ಗದ ಒಳಹೊಕ್ಕು ನೋಡಿದಾಗ ಹಳೆಯ ವಿದ್ಯಾರ್ಥಿ ಸಂಘಗಳೂ ಸಹ (Alumni Associations) ಕಾಣುತ್ತವೆ. ಪ್ರಸ್ತುತ ಸಂಭ್ರಮಾಚರಣೆಯಲ್ಲಿವೆ. 1950-60ರ ದಶಕದ ಈ ಫಲಾನುಭವಿ ವರ್ಗಗಳು ಒಂದು ಹಂತದಲ್ಲಿ ಸಾಂವಿಧಾನಿಕವಾಗಿಯೂ ತಮ್ಮ ಸವಲತ್ತುಗಳನ್ನು ಪಡೆದು ತಮ್ಮ ಸಾಮಾಜಿಕ ಅಂತಸ್ತು, ಆರ್ಥಿಕ ಶ್ರೇಣಿಯನ್ನು ಹೆಚ್ಚಿಸಿಕೊಂಡಿದ್ದಾರೆ. ನಿವೃತ್ತ ಜೀವನದಲ್ಲಿ ಪಿಂಚಣಿಯ ಸೌಲಭ್ಯ ಪಡೆದಿರುವವರೂ ಇರುತ್ತಾರೆ. ಈ ಸೌಲಭ್ಯಗಳನ್ನು ಪಡೆಯದಿದ್ದರೂ, ಬಡತನದಿಂದ ದೂರವಾಗಿ ಅನುಕೂಲಕರ ಸ್ಥಿತಿಯಲ್ಲಿ ಒಂದು ಹಿತವಲಯವನ್ನು ಸೃಷ್ಟಿಸಿಕೊಂಡಿರುವ ಔದ್ಯಮಿಕ/ಔದ್ಯೋಗಿಕ ಜಗತ್ತಿನ ಮಾಜಿ ಸದಸ್ಯರೂ ಇಲ್ಲಿ ಕಾಣುತ್ತಾರೆ. ವಿಶ್ವವಿದ್ಯಾಲಯಗಳ ಎಲ್ಲ ಶ್ರೇಣಿಯ ಫಲಾನುಭವಿಗಳೂ ಮೇಳೈಸಿರುತ್ತಾರೆ.
ಕೋಟ್ಯಂತರ ಸಂಖ್ಯೆಯ ಈ ವರ್ಗದಲ್ಲಿ ಇಂದು ಅನ್ಯಾಯಗಳನ್ನು ಸಹಿಸಿಕೊಳ್ಳುವ, ಸಮರ್ಥಿಸಿಕೊಳ್ಳುವ, ಕಂಡೂಕಾಣದಂತಿರುವ, ನಿರ್ಲಿಪ್ತರಾಗಿ ಬೆಂಬಲಿಸುವ ನಾಲ್ಕು ಉಪವರ್ಗಗಳು ಸೃಷ್ಟಿಯಾಗಿವೆ. ಈ ವರ್ಗದ ಸುಶಿಕ್ಷಿತ ಹಿತವಲಯದ ಜನರಿಗೆ ಜಂತರ್ ಮಂತರ್ ಹೇಗೆ ಕಾಣಬೇಕು ? ಇಲ್ಲಿನ ಆಕ್ರಂದನ ಕೇಳುತ್ತಿಲ್ಲವೇ ಅಥವಾ ಕೇಳಿಯೂ ಸ್ಪಂದಿಸದಷ್ಟು ಅನ್ಯಮನಸ್ಕ ಮನೋಭಾವ ಆವರಿಸಿದೆಯೇ ? ಈ ಪ್ರಶ್ನೆ ಮೂಡಲು ಕಾರಣವೆಂದರೆ, ಜಂತರ್ ಮಂತರ್ ಅಥವಾ ಕಾಕ್ರೋಚ್ ಪಕ್ಷದಲ್ಲಿ ಧ್ವನಿಸುತ್ತಿರುವುದು ನಮ್ಮ ನಂತರದ ಪೀಳಿಗೆಯ ದನಿಗಳೇ. ನಮ್ಮ ಮಕ್ಕಳು, ಸೋದರರು, ಸೋದರಿಯರ ದನಿಗಳೇ. ಈ ಸಾವಿರಾರು ಯುವ ಜನರನ್ನು ಪ್ರಾತಿನಿಧಿಕವಾಗಿ ನೋಡಿದಾಗ ಅದರ ಹಿಂದೆ ಬೃಹತ್ ಜಗತ್ತು ಕಾಣಲೇಬೇಕಲ್ಲವೇ ? ಈ ಜಗತ್ತಿನಲ್ಲಿ ನಿವೃತ್ತ ಬ್ಯಾಂಕ್-ಎಲ್ಐಸಿ ಮುಂತಾದ ವೈಟ್ ಕಾಲರ್ ಉದ್ಯೋಗಿಗಳು, ಕಾರ್ಮಿಕ ಸಂಘಗಳು ಖಂಡಿತವಾಗಿಯೂ ಇರುತ್ತವೆ.
ಭಾರತೀಯ ಸಮಾಜ ತನ್ನ ಮನುಜ ಸೂಕ್ಷ್ಮತೆ, ಸ್ಪಂದನೆಯ ಮನೋಭಾವ ಮತ್ತು ಸಾರ್ವಜನಿಕ ಸಂವೇದನೆಯನ್ನು ಉಳಿಸಿಕೊಂಡಿದ್ದರೆ ಈ ಎಲ್ಲ ದನಿಗಳೂ ಇಂದು ಜಂತರ್ ಮಂತರ್ನಲ್ಲಿ ಸಾಂಕೇತಿಕವಾಗಿಯಾದರೂ ಧ್ವನಿಸಬೇಕಿತ್ತು. ಹಿಂದುತ್ವ, ಮೀಸಲಾತಿ, ಮತೀಯತೆ, ವರ್ಗ ಹಿತಾಸಕ್ತಿ ಮತ್ತು ಜಾತಿ-ವರ್ಗ ಶ್ರೇಣಿ ಮೊದಲಾದ ಅಡ್ಡಗೋಡೆಗಳು , ಈ ವಿಶಾಲ ಸಮಾಜದೊಳಗಿನ ಆಂತರಿಕ ಸಂವೇದನೆಯನ್ನೇ ಹೊಸಕಿಹಾಕಿಬಿಟ್ಟಿವೆ. ಸಮಾಜದ ಈ ವರ್ಗವೇ ಇಂದು ನವ ಉದಾರವಾದದ, ಹಿಂದುತ್ವ ರಾಜಕಾರಣದ ಫಲಾನುಭವಿಯೂ ಸಂರಕ್ಷಕ ಪಡೆಯೂ ಆಗಿರುವುದು ನವ ಭಾರತದ ದುರಂತ. ಇಲ್ಲಿ ಸೃಷ್ಟಿಯಾಗಿರುವ ಬೌದ್ಧಿಕ ನಿಷ್ಕ್ರಿಯತೆಯನ್ನೇ ನಾವು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಾಣಬಹುದು.

ನವ ಯುಗದ ಯುವದನಿಯ ಭವಿಷ್ಯ
ಈ ವರ್ಗದೊಳಗಿಂದ ಹುಟ್ಟುವ ಅಥವಾ ಉತ್ಪಾದಿಸಲಾಗುವ ನಿರೂಪಣೆಗಳೇ, ಕಾಕ್ರೋಚ್ ಜನತಾ ಪಕ್ಷವನ್ನು, ನೀಟ್ ಆಕಾಂಕ್ಷಿಗಳನ್ನು, ಜಂತರ್ ಮಂತರ್ನಲ್ಲಿ ನೆರೆದಿರುವ ಸಾವಿರಾರು ನೊಂದ ಮನಸ್ಸುಗಳನ್ನು ನಿರ್ಲಕ್ಷಿತರಂತೆ ನೋಡುವ ಮನಸ್ಥಿತಿಯನ್ನು ಸೃಷ್ಟಿಸುತ್ತವೆ. ಈ ಹೋರಾಟದ ಅಂತಿಮ ಫಲಿತಾಂಶ ಏನೇ ಆಗಿರಲಿ, ಇದನ್ನು ಮುಂದೊಯ್ಯಲು ಅಗತ್ಯವಾದ ಬೌದ್ಧಿಕ ಕ್ಷಮತೆ ಮತ್ತು ತಯಾರಿ ಕಾಕ್ರೋಚ್ ಪಕ್ಷದಿಂದ ಆಗಿದೆಯೋ ಇಲ್ಲವೋ ಹೇಳಲಾಗುವುದಿಲ್ಲ ಆದರೆ ದೆಹಲಿಯಲ್ಲಿ ನಡೆದ ಬೆಳವಣಿಗೆಗಳು ಮುಂದಿನ ಚುನಾವಣೆಗಳ ವೇಳೆಗೆ ವಿಸ್ಮೃತಿಗೆ ಜಾರುವಂತೆ ಮಾಡಲು ಸಕಲ ಪ್ರಯತ್ನಗಳೂ ನಡೆಯುತ್ತವೆ.
ಆದರೆ ಈ ಕಿಡಿ ನಂದಿಹೋಗುವುದಿಲ್ಲ. ನವ ಉದಾರವಾದ ಇಂತಹ ಹಲವು ಕಿಡಿಗಳನ್ನು ಮುಂದಿನ ದಿನಗಳಲ್ಲಿ ಉತ್ಪಾದಿಸುತ್ತಲೇ ಇರುತ್ತದೆ. ಇವತ್ತಿನ ಸರ್ಕಾರ ಇಂದಿನ ದನಿಗಳನ್ನು ಅಡಗಿಸಬಹುದು ಆದರೆ ಅಲ್ಲಿನ ಆಂತರ್ಯದ ನೋವು ಮತ್ತು ಬಾಹ್ಯ ಗಾಯಗಳು ಮಾಸಿಹೋಗುವುದಿಲ್ಲ. ರೂಪಾಂತರಗೊಂಡು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಈ ನೋವಿಗೆ ಸ್ಪಂದಿಸುವಂತಹ ಮನಸ್ಸುಗಳನ್ನು ವರ್ತಮಾನದ ಯುವ ಸಮಾಜಗಳಲ್ಲಿ ನಾವು ತಯಾರು ಮಾಡಬೇಕಿದೆ. ಹಿರಿಯ ಪೀಳಿಗೆಯ ಸಮಾಜಗಳನ್ನು ನಿದ್ರಾವಸ್ಥೆಯಿಂದ ಎಚ್ಚರಿಸಬೇಕಿದೆ. ಇದು ನಮ್ಮ ಮಕ್ಕಳ ಪ್ರಶ್ನೆ ಎಂಬ ಅರಿವು ಮೂಡಿಸಬೇಕಿದೆ ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯ ಆದ್ಯತೆ ಇದೇ ಆಗಬೇಕಿದೆ.
ಹಾಗಾದಲ್ಲಿ ಮಾತ್ರ ಭವಿಷ್ಯದಲ್ಲಾದರೂ ನಾವು ಸಾಂಕೇತಿಕವಾಗಿ ʼಒಂದು ಭಾರತʼವನ್ನು ಕಾಣಲು ಸಾಧ್ಯ.






