ಮಂಡ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸಂಸದೆ ಸುಮಲತಾ, ಪಕ್ಷೇತರರಾಗಿ ಸ್ಪರ್ಧೆ ಮಾಡಿ ಮಾಜಿ ಸಚಿವ ಚಲುವರಾಯ ಸ್ವಾಮಿ ಸೇರಿದಂತೆ ಕಾಂಗ್ರೆಸ್ ಬೆಂಬಲ ಪಡೆದಿದ್ದರು. ಈ ಮೂಲಕ ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದರು. ಆದರೆ ಬಿಜೆಪಿ ಸೇರ್ಪಡೆಗೆ ಅಂದೇ ಆಹ್ವಾನ ಬಂದಿದ್ದರು, ಬಿಜೆಪಿ ಸೇರದ ಸುಮಲತಾ ಇದೀಗ ಬಿಜೆಪಿ ಸೇರುವುದಕ್ಕೆ ಪೂರ್ವ ತಯಾರಿ ಮಾಡಿಕೊಳ್ತಿದ್ದಾರೆ. ಇದರ ಭಾಗವಾಗಿ ಸೋಮವಾರ ತನ್ನ ಅತ್ಯಾಪ್ತರನ್ನು ಬಿಜೆಪಿಗೆ ಸೇರಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಚಿವರಾದ ಅಶ್ವಥ್ ನಾರಾಯಣ್, ಗೋಪಾಲಯ್ಯ, ನಾರಾಯಣಗೌಡ, ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸಚ್ಚಿದಾನಂದ ಜೊತೆ ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಮಂಡ್ಯ ಭಾಗದ ಹಲವು ನಾಯಕರು ಪಕ್ಷ ಸೇರ್ಪಡೆ ಆಗಿದ್ದಾರೆ.
ಬಿಜೆಪಿ ಸೇರುವ ಬಗ್ಗೆ ಸುಮಲತಾ ಅಂಬರೀಷ್ ಶೀಘ್ರ ನಿರ್ಧಾರ
ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಬಗ್ಗೆ ಸಚ್ಚಿದಾನಂದ ಮಾತನಾಡಿದ್ದು, ನಾನು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದೆ, ಅಲ್ಲಿ ಉಚ್ಛಾಟನೆ ಮಾಡಿದ ನಂತರ ತಟಸ್ಥವಾಗಿದ್ದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಕೆಲಸ ಮಾಡಿದ್ದೆ. ಈಗಲೂ ಕೂಡ ಮೇಡಂ ಮೇಲೆ ನನಗೆ ಆತ್ಮೀಯ ವಿಶ್ವಾಸ ಇದೆ. ನಾನು ಬಿಜೆಪಿ ಸೇರೋದನ್ನು ಮೇಡಂಗೂ ತಿಳಿಸಿದ್ದೇನೆ. ಮುಂದೆ ಅವರೂ ಬಿಜೆಪಿಗೆ ಬರ್ತಾರೆ ಎಂದಿದ್ದಾರೆ. ಈಗಾಗಲೇ ಸುಮಲತಾ ಅಂಬರೀಷ್ ಜೊತೆ ಬಿಜೆಪಿ ನಾಯಕರು ಕೂಡ ಸಂಪರ್ಕದಲ್ಲಿದ್ದಾರೆ. ಮುಂದೆ ಸುಮಲತಾ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಆಗುತ್ತದೆ ಎಂದಿದ್ದಾರೆ. ಇನ್ನು ನಾನು ಶ್ರೀರಂಗಪಟ್ಟಣದಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ನನಗೆ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸ ಇದೆ. ಅಂತಿಮವಾಗಿ ನನ್ನ ಗೆಲುವಿನ ಬಗ್ಗೆ ಮತದಾರರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ ಸಚ್ಚಿದಾನಂದ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸುವುದೆ ನಮ್ಮ ಧ್ಯೇಯ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶ್ರೀರಂಗಪಟ್ಟಣದ ಸಚ್ಚಿದಾನಂದ, ಕೆ ಆರ್ ನಗರದ ಹನುಮಂತ ಬಾಬು, ನಾಗಮಂಗಲದ ಮಲ್ಲಿಕಾರ್ಜುನ್, ಲಿಂಗರಾಜ್ ಕೂಡ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತರಲು ಈ ಪ್ರಯತ್ನ ಆಗಿದೆ. ಸಚ್ಚಿದಾನಂದ ಸೇರಿದಂತೆ ಹಲವರ ಸೇರ್ಪಡೆಯಿಂದ ಮಂಡ್ಯ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಹಾಗೂ ಹೊಸ ಸಂಚಲನ ಮೂಡಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಈಗ ಒಬ್ಬರು ಶಾಸಕರು ಇದ್ದಾರೆ. ಮುಂದಿನ ಬಾರಿ 7ಕ್ಕೆ 7 ಕ್ಷೇತ್ರದಲ್ಲೂ ಬಿಜೆಪಿ ಶಾಸಕರುಗಳು ಇರುತ್ತಾರೆ ಎಂದಿದ್ದಾರೆ. ಮಂಡ್ಯದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಹಿಂದುತ್ವ ಮತ್ತಷ್ಟು ಜಾಸ್ತಿ ಆಗುತ್ತದೆ. ಹಿಂದುತ್ವದ ಆಧಾರದಲ್ಲೇ ಗೆಲ್ಲುತ್ತೇವೆ ಎಂದಿದ್ದಾರೆ. ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ತುಷ್ಟಿಕರಣ, ಸ್ವಾರ್ಥದ ರಾಜಕಾರಣ ಮಾಡುವ ಎರಡು ಪಕ್ಷಗಳಿಗೂ ನೀವು ಪಾಠ ಕಲಿಸಬೇಕು. ಮಂಡ್ಯದಲ್ಲಿ ಏನು ದುಡ್ಡು ಖರ್ಚು ಮಾಡಿದ್ರು ನಡೆಯಲ್ಲ. ಅಲ್ಲಿ ನಡೆಯೋದೇ ಸ್ವಾಭಿಮಾನದ ವಿಚಾರ. ಈ ಹಿಂದೆ ಎಂಪಿ ಚುನಾವಣೆಯಲ್ಲಿ ನೋಡಿದ್ದೀರಲ್ಲ ಎನ್ನುವ ಮೂಲಕ ಹೆಸರು ಪ್ರಸ್ತಾಪ ಮಾಡದೆ, ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ ಅಶ್ವತ್ಥ ನಾರಾಯಣ್.
ಮದ್ದೂರಿನಿಂದ ಅಭಿಷೇಕ್ ಅಂಬರೀಷ್ ಸ್ಪರ್ಧೆ ಬಗ್ಗೆ ಚರ್ಚೆ
ಆಪ್ತರನ್ನು ಬಿಜೆಪಿಗೆ ಕಳುಹಿಸಿರುವ ಸಂಸದೆ ಸುಮಲತಾ ಮಂಡ್ಯ ಜಿಲ್ಲೆಯಲ್ಲಿ ಮತದಾರರು ಬಿಜೆಪಿಗೆ ಯಾವ ರೀತಿ ಬೆಂಬಲ ನೀಡಲಿದ್ದಾರೆ ಅನ್ನೋ ಬಗ್ಗೆ ಮತದಾರರ ಮನಸ್ಥಿತಿ ಅರಿಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮಗ ಅಭಿಷೇಕ್ ಅಂಬರೀಷ್ ಅವರನ್ನು ಚುನಾವಣಾ ಅಖಾಡಕ್ಕೆ ಕರೆತರುವ ಬಗ್ಗೆಯೂ ಮಾತುಕತೆಗಳು ನಡೆದಿವೆ. ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದಿದ್ದರೂ ಮತ ನೀಡುವ ಒಲವು ವ್ಯಕ್ತವಾದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸುಮಲತಾ ಕೂಡ ಕೇಸರಿ ಬಾವುಟ ಹಿಡಿದು ಗೆಲುವಿಗಾಗಿ ರಣತಂತ್ರ ಹೆಣೆಯಲಿದ್ದಾರೆ. ಒಂದು ವೇಳೆ ಬಿಜೆಪಿ ಪಕ್ಷಕ್ಕೆ ಒಕ್ಕಲಿಗರ ಕೋಟೆಯಲ್ಲಿ ಊಹಿಸಿದ್ದಷ್ಟು ಮತಗಳು ಬಾರದೆ ಹೋದರೆ ಮುಂದಿನ ನಿರ್ಧಾರದಲ್ಲಿ ಅದಲು ಬದಲು ಆದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಸುಮಲತಾ ಆಪ್ತ ಬಳಗ. ಸದ್ಯಕ್ಕಂತು ಬಿಜೆಪಿ ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುವ ವ್ಯವಸ್ಥೆ ಮಾಡ್ತಿದೆ.
ಕೃಷ್ಣಮಣಿ