ಸಿನಿಮಾ ಎನ್ನುವುದು ಒಂದು ಮಾಧ್ಯಮ. ಸಿನಿಮಾವನ್ನು ಬಳಸಿಕೊಂಡು ಅವಿದ್ಯಾವಂತರಿಗೆ ತಿಳುವಳಿಕೆ ನೀಡುವ ಕೆಲಸವನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದರು. ಡಾ ರಾಜ್ಕುಮಾರ್ ಸಿನಿಮಾಗಳನ್ನು ನೋಡಿ ಬೆಳೆದವರು ಉತ್ತಮ ಗುಣವಂತರಾಗಿ ಬದಲಾದ ಅದೆಷ್ಟೋ ಘಟನೆಗಳು ಇಂದಿಗೂ ಜೀವಂತ ಸಾಕ್ಷಿಗಳಾಗಿವೆ. ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ತೀರ ಕಡಿಮೆ ಇತ್ತು. ಅಂದಿನಿಂದಲೂ ದೇಶದಲ್ಲಿ ಸಿನಿಮಾ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಮೂಲಕ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ ಎನ್ನುವುದು ಒಂದು ವರ್ಗದ ಆರೋಪ ಆಗಿದೆ. ಆಗಿದ್ದರೆ ಸಮಾಜದಲ್ಲಿ ನಡೆಯುತ್ತಿರುವ ಹುಳುಕುಗಳನ್ನು ಎತ್ತಿ ತೋರಿಸುವುದೇ ತಪ್ಪಾ ಎನ್ನುವುದು ಮತ್ತೊಂದು ವರ್ಗದ ಪ್ರತ್ಯಾರೋಪ.
‘ದಿ ಕೇರಳ ಸ್ಟೋರಿ’ ಕಥೆ ಆದರೂ ಏನು..? ವಿರೋಧ ಯಾಕೆ..?
‘ದಿ ಕೇರಳ ಸ್ಟೋರಿ’ ಟೈಟಲ್ನಲ್ಲಿ ಇರುವಂತೆಯೇ ಇದೊಂದು ಕೇರಳದಲ್ಲಿ ನಡೆದಿರುವ ಸತ್ಯಕಥೆ ಆಧರಿತ ಚಿತ್ರ. ಈ ಚಿತ್ರದಲ್ಲಿ ಹಿಂದೂ ಸಂಸಾರದ ಯುವತಿಯನ್ನು ಮುಸ್ಲಿಂ ಹುಡುಗರು ಪ್ರೀತಿಸುವುದು. ಮದುವೆಗೂ ಮುನ್ನವೇ ದೈಹಿಕ ಸಂಪರ್ಕ ಬೆಳೆಸುವುದು. ಆ ಬಳಿಕ ಅನಿವಾರ್ಯವಾಗಿ ಮದುವೆ ಆಗುವಂತೆ ಮಾಡುವುದು. ಮುಸ್ಲಿಂ ಧರ್ಮದವರು ಅಲ್ಲದಿದ್ದರೆ ಮದುವೆ ಆಗುವುದು ನಿಷೇಧ ಎನ್ನುವ ಕಾರಣ ಇಟ್ಟುಕೊಂಡು ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಬದಲಾವಣೆ ಮಾಡುವುದು. ಕೊನೆಗೆ ಅಂತಿಮವಾಗಿ ಕೇರಳ ಮೂಲದ ಯುವತಿಯರನ್ನು ಸಿರಿಯಾ ಸೇರಿದಂತೆ ISIS ಉಗ್ರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿರುವ ದೇಶಗಳಿಗೆ ಕಳ್ಳಸಾಗಣೆ ಮಾಡುವುದು. ಅಲ್ಲಿನ ಉಗ್ರರ ಜೊತೆಗೆ ದೇಹ ಹಂಚಿಕೊಳ್ಳಲು ಪ್ರಚೋದಿಸುವುದು. ಈ ರೀತಿ ನೂರಾರು ಹಿಂದೂ ಯುವತಿಯನ್ನು ಸಾಗಾಟ ಮಾಡಲಾಗಿದೆ ಎಂದು ಇಡೀ ಚಿತ್ರದಲ್ಲಿ ತೋರಿಸಲಾಗಿದೆ.
ಕಾಶ್ಮೀರ್ ಫೈಲ್ ಬಳಿಕ ‘ದಿ ಕೇರಳ ಸ್ಟೋರಿ’ ವಿವಾದ..!

‘ದಿ ಕೇರಳ ಸ್ಟೋರಿ’ಗೂ ಮುನ್ನ ಈ ಹಿಂದೆ ಕಾಶ್ಮೀರ್ ಫೈಲ್ಸ್ ಅನ್ನೋ ಚಿತ್ರ ಬಿಡುಗಡೆ ಆಗಿತ್ತು. ಜಮ್ಮು ಕಾಶ್ಮೀರದಲ್ಲಿ 80, 90ರ ದಶಕದಲ್ಲಿ ಏನೆಲ್ಲಾ ಆಯ್ತು..? ಮುಸ್ಲಿಂ ಪ್ರತ್ಯೇಕತಾವಾದಿಗಳು ಕಾಶ್ಮೀರಿ ಹಿಂದೂ ಪಂಡಿತರನ್ನು ಹೇಗೆಲ್ಲಾ ಹತ್ಯೆ ಮಾಡಿದರು. ಕಾಶ್ಮೀರ ಬಿಟ್ಟು ಹೋಗುವಂತೆ ಮಾಡಿದ್ದು ಹೇಗೆ..? ಎನ್ನುವುದನ್ನು ಚಿತ್ರಿಸಲಾಗಿತ್ತು. ಆ ಚಿತ್ರ ಹಿಂದೂ ಮುಸ್ಲಿಂ ನಡುವೆ ಭಿನ್ನತೆಯನ್ನು ಸೃಷ್ಟಿಸಿ, ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮಾಡಲಾಯ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಆ ಕಾಶ್ಮೀರಿ ಫೈಲ್ ಮೀರಿಸುವ ರೀತಿಯಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರೀಕರಣ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಯುವತಿಯರು ಮುಸ್ಲಿಂ ಹುಡುಗರ ಬಾಂಧವ್ಯಕ್ಕೆ ಅದೆಷ್ಟು ಸಲೀಸಾಗಿ ಸಿಲುಕುತ್ತಾರೆ ಎಂದರೆ, ಮುಸ್ಲಿಂ ಸ್ನೇಹಿತೆಯೊಬ್ಬಳು ಎಲ್ಲರನ್ನೂ ಊಟಕ್ಕೆ ಕರೆದೊಯ್ಯುವ ಪ್ಲ್ಯಾನ್ ಮಾಡುತ್ತಾಳೆ. ಕಾರು ಹತ್ತಿ ಹೋಟೆಲ್ಗೆ ಹೋಗುವ ಮುನ್ನವೇ ಮನಸ್ಸುಗಳು ಬೆಸೆದುಕೊಂಡಿರುತ್ತವೆ. ಇದು ದಿ ಕೇರಳ ಸ್ಟೋರಿ ಹೂರಣ.
ಮುಸ್ಲಿಂ ಯುವಕರದ್ದು ತಪ್ಪೋ..? ಹಿಂದೂ ಯುವತಿಯರದ್ದು ತಪ್ಪೋ..?

ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಎರಡ್ಮೂರು ದೃಶ್ಯಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದನ್ನು ತೀರಾ ಕೆಟ್ಟದಾಗಿ ತೋರಿಸಿದ್ದಾರೆ. ಮುಸ್ಲಿಂ ಹುಡುಗರು ಕಟುಕರು, ಹಿಂದೂ ಯುವತಿಯರನ್ನು ಪ್ರೀತಿಸಿ, ಮತಾಂತರ ಮಾಡಿ ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದೇ ಒಪ್ಪಿಕೊಳ್ಳೋಣ. ಆದರೆ ಹಿಂದೂ ಯುವತಿಯರು ಅಷ್ಟೊಂದು ಮಾನಸಿಕವಾಗಿ ಟೊಳ್ಳು ವ್ಯಕ್ತಿತ್ವದವರು ಎಂದು ಹೇಳುತ್ತಿರುವುದು ಎಷ್ಟು ಸರಿ. ಅದೆಷ್ಟೋ ಹಿಂದೂ ಯುವಕರು ಓದಿಕೊಂಡು ಕೃಷಿ ಮಾಡುತ್ತಿದ್ದರೂ, ಮನೆ ಕಡೆ ಆರ್ಥಿಕವಾಗಿ ಸಬಲರಾಗಿ ಇದ್ದರೂ ಮದುವೆ ಆಗಲು ಹೆಣ್ಣುಗಳು ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನೂರಾರು ಯುವತಿಯರು ಮುಸ್ಲಿಂ ಹುಡುಗರು ಬೀಸಿದ ಬಲೆಗೆ ಬಿದ್ದು ಹೋಗಿದ್ದಾರೆ. ಹೋಗುತ್ತಿದ್ದಾರೆ ಎಂದು ಹೇಳುವುದು ಮೂರ್ಖತನ. ಈ ಕಥೆಯನ್ನು ಸಂಪೂರ್ಣವಾಗಿ ಅಲ್ಲಗಳೆಯುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಒಂದೆರಡು ಪ್ರಕರಣಗಳು ಆಗಿರಲೂ ಬಹುದು. ಆದರೆ ಸಿನಿಮಾದಲ್ಲಿ ತೋರಿಸಿರುವ ಮಟ್ಟಕ್ಕೆ ನಮ್ಮ ಹಿಂದೂ ಹೆಣ್ಣು ಮಕ್ಕಳು ಇಲ್ಲ. ಅವರಿಗೂ ನಾಡು, ನುಡಿ ಧರ್ಮದ ಮೇಲೆ ಸ್ವಾಭಿಮಾನ ಇದ್ದೇ ಇರುತ್ತದೆ. ಹಿಂದೂ ಮುಸ್ಲಿಂ ಯುವಕ ಯುವತಿ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಅದರ ಬಗ್ಗೆಯೂ ಒಂದು ಸಾಮರಸ್ಯ ಚಿತ್ರ ತೆಗಿಯಬಹುದಿತ್ತು. ಆಧಾರವಿಲ್ಲದ ಚಿತ್ರವನ್ನು ಕ್ರೂರವಾಗಿ ಚಿತ್ರಿಸಲಾಗಿದೆ. ಹಿಂಸಾತ್ಮಕ ಚಿತ್ರಗಳನ್ನು ನೋಡಿ ಆನಂದಪಡುವ ಜನರು ಸಿನಿಮಾ ನೋಡಬಹುದು ಚೆನ್ನಾಗಿದೆ.
ಕೃಷ್ಣಮಣಿ






