ಮೋದಿ ಆಡಳಿತ BJP-RSS ಕೆಮಿಸ್ಟ್ರಿ ಮೇಲೆ ಬೀರಿದ ಪರಿಣಾಮವೇನು?

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ, ನವ ಭಾರತದ ಘೋಷಣೆಯೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷಗಳು ಕಳೆದವು. ಮೊನ್ನೆ ತಾನೇ ಕರೋನಾ ಸಂಕಷ್ಟದ ನಡುವೆಯೂ ಬಿಜೆಪಿಯ ಏಳನೇ ವರ್ಷದ ಸಂಭ್ರಮಾಚರಣೆ ನಡೆಸಿದೆ.

ಬಿಜೆಪಿಯ ಈ ಸಂಭ್ರಮದಲ್ಲಿ ಅದರ ಮಾತೃ ಸಂಘಟನೆ ಆರ್ ಎಸ್ ಎಸ್ ಮತ್ತು ಅದರ ಪರಿವಾರದ ಇತರೆ ನೂರೆಂಟು ಸಂಘಟನೆಗಳು ಕೂಡ ಭಾಗಿಯಾಗಿವೆ. ಹತ್ತಾರು ಬಗೆಯಲ್ಲಿ ಮೋದಿ ಸರ್ಕಾರದ ಏಳು ವರ್ಷಗಳ ನಿರಂತರ ಅಧಿಕಾರವನ್ನು ಸಂಭ್ರಮಿಸಲಾಗಿದೆ. ಸಂಘ ಮತ್ತು ಅದರ ಪರಿವಾರದ ಆ ಸಂಭ್ರಮದ ಹಿಂದೆ ನಿಜವಾಗಿಯೂ ಬಿಜೆಪಿಯ ಸಾಧನೆ, ಪ್ರಧಾನಿ ಮೋದಿಯ ಯಶಸ್ಸಿನ ಕಾರಣವಿತ್ತೆ? ಅಥವಾ ಹಿಂದೂ ರಾಷ್ಟ್ರ ನಿರ್ಮಾಣದ ತನ್ನ ಅಜೆಂಡಾವನ್ನು ಜಾರಿಗೆ ತರುತ್ತಿರುವ ಮೋದಿ ಸರ್ಕಾರದ ವರಸೆಯ ಕುರಿತ ಸಂತೃಪ್ತಿ ಇತ್ತೆ ಎಂಬುದು ಕುತೂಹಲದ ಸಂಗತಿ.

ಆದರೆ, ಅದಕ್ಕೆ ಮುನ್ನ ಆರ್ ಎಸ್ ಎಸ್ ನ ರಾಜಕೀಯ ಮಹತ್ವಾಕಾಂಕ್ಷೆಯ ಹಿಂದೂ ರಾಷ್ಟ್ರ ನಿರ್ಮಾಣದ ಅಜೆಂಡಾದ ಭಾಗವಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವ(ಬಹುತೇಕ ಸ್ವಂತ ಬಲದ ಮೇಲೆ) ಅದರ ಕನಸು ಕೈಗೂಡಿ ಈ ಏಳು ವರ್ಷಗಳಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧ, ವ್ಯವಹಾರಗಳು ಯಾವ ಸ್ವರೂಪ ಪಡೆದಿವೆ? ‘ಎ ಪಾರ್ಟಿ ವಿತ್ ಎ ಡಿಫರೆನ್ಸ್’ ಎಂಬ ಒಂದು ಕಾಲದ ಹೆಗ್ಗಳಿಕೆಯನ್ನು ವ್ಯತಿರಿಕ್ತ ಅರ್ಥದಲ್ಲಿ ಬಳಸುವ ಮಟ್ಟಿಗೆ ಬದಲಾಗಿರುವ ಬಿಜೆಪಿಯಂತೆಯೇ, ಅದರ ಮಾರ್ಗದರ್ಶಕ ಆರ್ ಎಸ್ ಎಸ್ ಮತ್ತು ಪರಿವಾರಗಳೂ ಬದಲಾಗಿವೆಯೇ? ಅಥವಾ ಈಗಲೂ ಅದು ‘ಸಾಂಸ್ಕೃತಿಕ ಸಂಘಟನೆ’ಯಾಗಿಯೇ ಉಳಿದಿದೆಯೇ ಎಂಬುದು ಈಗ ಏಳು ವರ್ಷದ ಬಳಿಕ ಸಹಜವಾಗೇ ಚರ್ಚೆಯಾಗುತ್ತಿರುವ ಸಂಗತಿ. ಅದರಲ್ಲೂ, ಮದುವೆಯಾಗಿ ಹೊಸತರಲ್ಲಿ ಅನೂನ್ಯವಾಗಿರುವ ಪತಿ-ಪತ್ನಿಯರ ನಡುವಿನ ನಂಟು ಏಳು ವರ್ಷ ಕಳೆಯುವ ಹೊತ್ತಿಗೆಲ್ಲಾ ಏನೆಲ್ಲಾ ಬದಲಾವಣೆ ಕಂಡು ಹಳಸುತ್ತದೆ. ಅದನ್ನೇ ‘ಸೆವೆನ್ ಇಯರ್ಸ್ ಇಚ್’ ಎನ್ನಲಾಗುತ್ತದೆ ಎಂಬ ನಾಣ್ನುಡಿಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ನಂಟಿನ ಅಧಿಕಾರದ ಏಳು ವರ್ಷಗಳನ್ನು ವಿಶ್ಲೇಷಿಸಲಾಗುತ್ತಿದೆ.

ಅದರಲ್ಲೂ ಮುಖ್ಯವಾಗಿ, ಬಿಜೆಪಿಯ ಈ ಹಿಂದಿನ ಅವತಾರ ಜನಸಂಘದ ಹುಟ್ಟಿನಿಂದ ಹಿಡಿದು ಈವರೆಗೆ ಸುಮಾರು 40 ವರ್ಷಗಳ ಕಾಲ ನಿರಂತರವಾಗಿ ‘ಯಜಮಾನ’, ‘ಮಾರ್ಗದರ್ಶಕ’, ‘ಗುರು’ವಿನ ಸ್ಥಾನದಲ್ಲಿದ್ದ ಆರ್ ಎಸ್ ಎಸ್ ಮತ್ತು ಅದರ ಆಣತಿಯ ಮೇಲೇ ಹೆಜ್ಜೆ ಹಾಕುತ್ತಿದ್ದ ಭಾರತೀಯ ಜನತಾ ಪಕ್ಷದ ನಡುವಿನ ಕೆಮಿಸ್ಟ್ರಿ ಹಾಗೆಯೇ ಉಳಿದಿದೆಯೇ? ಅಥವಾ ಏಳು ವರ್ಷಗಳ ಅಧಿಕಾರ ಪರ್ವ ಆ ಸಮೀಕರಣದಲ್ಲಿ ಏರುಪೇರಾಗಿದೆಯೇ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಇದೇ ಪ್ರಶ್ನೆಗಳನ್ನು ಖ್ಯಾತ ಪತ್ರಕರ್ತ ಹರೀಶ್ ಖಾರೆ ಕೂಡ ಇತ್ತೀಚಿನ ತಮ್ಮ ವಿಶ್ಲೇಷಣೆಯೊಂದರಲ್ಲಿ ಎತ್ತಿದ್ದು, ಮುಖ್ಯವಾಗಿ ಉಗ್ರ ಹಿಂದುತ್ವದ ಐಕಾನ್ ಮೋದಿಯವರ ಆಡಳಿತದ ಈ ಏಳು ವರ್ಷಗಳಲ್ಲಿ ಬಿಜೆಪಿಯ ಮೇಲೆ ಹಿಂದುತ್ವ ಸಿದ್ಧಾಂತದ ಪ್ರತಿಪಾದಕ ಆರ್ ಎಸ್ ಎಸ್ನ ಪ್ರಭಾವದಲ್ಲಿ ಆಗಿರುವ ಬದಲಾವಣೆಗಳೇನು ಮತ್ತು ಅಂತಹ ಬದಲಾವಣೆಗಳಿಗೆ ಕಾರಣವೇನು ಎಂಬುದನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ‘ದ ವೈರ್’ ಸುದ್ದಜಾಲತಾಣಕ್ಕಾಗಿ ಮಾಡಿರುವ ಆ ವಿಶ್ಲೇಷಣೆಯಲ್ಲಿ ಅವರು, ಜನಸಂಘದ ದಿನಗಳಿಂದ ಈವರೆಗೆ ಭಾರತೀಯ ಜನತಾ ಪಕ್ಷ ಮತ್ತು ಅದರ ಮಾರ್ಗದರ್ಶಕ ಶಕ್ತಿಕೇಂದ್ರ ಆರ್ ಎಸ್ ಎಸ್ ನಡುವಿನ ನಂಟಿನ ಮೇಲೆ ಬೆಳಕು ಚೆಲ್ಲಿದ್ದಾರೆ. ಜೊತೆಗೆ ಸದ್ಯದ ಸ್ಥಿತಿಯಲ್ಲಿ ಏಳು ವರ್ಷಗಳ ಮೋದಿ ಆಡಳಿತದ ಬಳಿಕ ಆ ಸಂಬಂಧದಲ್ಲಿ ಆಗಿರುವ ಬದಲಾವಣೆಗಳೇನು ಎಂಬ ಬಗ್ಗೆಯೂ ವಿಶ್ಲೇಷಿಸಿದ್ದಾರೆ.

1970ರ ದಶಕದ ಕೊನೆಯ ಹೊತ್ತಿಗೆ ಜನತಾ ಪಕ್ಷ ನೇತೃತ್ವದ ಸರ್ಕಾರದಲ್ಲಿ ಪಾಲುದಾರನಾಗಿದ್ದ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಆಡ್ವಾಣಿಯವರು, ಆರ್ ಎಸ್ ಎಸ್ ನೊಂದಿಗಿನ ನಂಟು ಕಡಿದುಕೊಳ್ಳಬೇಕು ಎಂದು ಮಧು ಲಿಮಯೆ ಮತ್ತಿತರು ಒತ್ತಾಯಿಸಿದಾಗ, ಜನಸಂಘದ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದಲೇ ಹೊರನಡೆದಿದ್ದರು. ಅಷ್ಟರಮಟ್ಟಿಗೆ ಜನಸಂಘಕ್ಕೆ ಅಂದು ಆರ್ ಎಸ್ ಎಸ್ ಮುಖ್ಯವಾಗಿತ್ತು ಮತ್ತು ಜನಸಂಘದ ಮೇಲೆ ಆರ್ ಎಸ್ ಎಸ್ ಯಜಮಾನಿಕೆ ಇತ್ತು. ಅದಾದ ಸುಮಾರು ಕಾಲು ಶತಮಾನದ ಬಳಿಕ 2005ರಲ್ಲಿ ಅದೇ ಎಲ್ ಕೆ ಆಡ್ವಾಣಿ ಅವರು ಜಿನ್ನಾ ಅವರನ್ನು ಬಣ್ಣಿಸಿದಾಗ ಕೂಡ ಆರ್ ಎಸ್ ಎಸ್ ಹಿಡಿತ ಅಷ್ಟೇ ಬಿಗಿಯಾಗಿತ್ತು. ಪರಿಣಾಮವಾಗಿ ಅಂದಿನ ಸಂಘ ಪರಿವಾರದ ಪ್ರಭಾವಿ ನಾಯಕ ಅಶೋಕ್ ಸಿಂಘಾಲ್ ಅವರ ಒಂದು ಹುಕಂಗೆ ಬಿಜೆಪಿಯ ಭೀಷ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ನೀಡಬೇಕಾಯಿತು.

ಬಿಜೆಪಿ ಮೇಲಿನ ಆರ್ ಎಸ್ ಎಸ್ ಹಿಡಿತ ಅಷ್ಟಕ್ಕೇ ಸೀಮಿತವಲ್ಲ. 2013ರಲ್ಲಿ ಲೋಕಸಭಾ ಚುನಾವಣಾ ತಯಾರಿಗಳು ಗರಿಗೆದರುವ ಹೊತ್ತಿಗೆ, ಬಿಜೆಪಿ ನೇತೃತ್ವದ ಎನ್ ಡಿಎ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆ ಎದುರಾದಾಗ, ಸ್ವತಃ ರಾಮಜನ್ಮಭೂಮಿ ರಥಯಾತ್ರೆಯ ರೂವಾರಿ ಆಡ್ವಾಣಿ ಸೇರಿದಂತೆ ಸಾಲು- ಸಾಲು ಹಿರಿಯ ನಾಯಕರು ಹುರುಪುಗೊಂಡಿದ್ದರು. ಆದರೆ, ಆಗಲೂ ಆರ್ ಎಸ್ ಎಸ್ ತನ್ನ ಯಜಮಾನಿಕೆ ಮೆರೆದು, ಹಿಂದುತ್ವದ ಉಗ್ರ ಪ್ರತಿಪಾದಕ ನರೇಂದ್ರ ಮೋದಿಯವರ ಹೆಸರನ್ನು ಘೋಷಿಸಿತ್ತು. ಆ ಮೂಲಕ ಆಡ್ವಾಣಿಯಾದಿಯಾಗಿ ಹತ್ತಾರು ಮಂದಿ ನಾಯಕರು ರಾಜಕಾರಣದ ತೆರೆಮರೆಗೆ ಸರಿಯುವಂತೆ ಮಾಡಲಾಗಿತ್ತು. ಅದು ಆರ್ ಎಸ್ ಎಸ್ ಆಗ ಹೊಂದಿದ್ದ ಪ್ರಭಾವಿ ಹಿಡಿತಕ್ಕೆ ನಿದರ್ಶನ.

ಆದರೆ, ಗುಜರಾತ್ ಮಾದರಿಯ ಪ್ರಯೋಗದ ಮೇಲ್ಪಂಕ್ತಿಯ ಮಾನದಂಡದ ಮೇಲೆ ನರೇಂದ್ರ ಮೋದಿಯವರು, ಲೋಕಸಭಾ ಚುನಾವಣೆಯಲ್ಲಿ ಭಾರೀ ಜನಬೆಂಬಲದೊಂದಿಗೆ ಅಧಿಕಾರ ಹಿಡಿದ ಬಳಿಕ ಆರ್ ಎಸ್ ಎಸ್ ಅದೇ ಪ್ರಭಾವವನ್ನು, ಹಿಡಿತವನ್ನು ಹೊಂದಿದೆಯೇ? ತನ್ನದೇ ನಾಯಕನ (ಮೋದಿಯವರು ಆರ್ ಎಸ್ ಎಸ್ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದವರು) ಅಧಿಕಾರವಧಿಯಲ್ಲಿ ಆರ್ ಎಸ್ ಎಸ್ ಆಡಳಿತ ನೀತಿ, ಅಧಿಕಾರದ ಅವಕಾಶಗಳು, ಹುದ್ದೆ, ಸ್ಥಾನಮಾನಗಳಲ್ಲಿ ಪಡೆದಿರುವ ಪಾಲು ಮತ್ತು ಲಾಭಗಳು ಅದನ್ನು ಈಗಲೂ ಹಿಂದಿನಷ್ಟೇ ಯಜಮಾನಿಕೆಯ ಸ್ಥಾನದಲ್ಲಿ ನಿಲ್ಲಿಸಿವೆಯೇ? ರಾಜಕಾರಣದ ಪಡಸಾಲೆಯಲ್ಲಿ ನೇರವಾಗಿ ವಿಜೃಂಭಿಸದೆ, ತೆರೆಮರೆಯಲ್ಲಿದ್ದು, ‘ತಾನೊಂದು ಸಾಂಸ್ಕೃತಿಕ ಸಂಘಟನೆ ಮಾತ್ರ, ಬಿಜೆಪಿಯಷ್ಟೇ ಅಲ್ಲದೆ, ಯಾವುದೇ ರಾಜಕೀಯ ಪಕ್ಷಕ್ಕೆ ಬೇಕಾದರೂ, ಅವರು ಬಯಸಿದ್ದಲ್ಲಿ ತಾನು ಮಾರ್ಗದರ್ಶನ ಮಾಡಬಲ್ಲೆ’ ಎಂಬ ತನ್ನ ಹಿಂದಿನ ರಾಜಕೀಯ ಅಂತರ ಮತ್ತು ಚಹರೆಯನ್ನು ಉಳಿಸಿಕೊಂಡಿದೆಯೇ? ಎಂಬುದು ಈಗಿನ ಪ್ರಶ್ನೆ.

ಆ ಪ್ರಶ್ನೆಯ ಹಿನ್ನೆಲೆಯಲ್ಲೇ, ಹರೀಶ್ ಖಾರೆ ಅವರು, “ಏಳು ವರ್ಷಗಳ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯ ಆಡಳಿತದ ಬಳಿಕ, ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧದ ಕುರಿತ ಸಾಂಪ್ರದಾಯಿಕ ಗ್ರಹಿಕೆ ಸಾಕಷ್ಟು ಬದಲಾಗಿದೆ. ಹಾಗಾಗಿ ಈ ಅವಧಿಯ ತಮ್ಮ ಪಾತ್ರದ ಬಗ್ಗೆ ಸ್ವತಃ ನಾಗ್ಪುರದ ಮಾರ್ಗದರ್ಶಕರು ಆತ್ಮಾವಲೋಕನ ಮಾಡಿಕೊಂಡರೂ, ಹಿಂದಿನ ವೈಭವದ ಯಜಮಾನಿಕೆಯ ದಿನಗಳಿಗೆ ಹೋಲಿಸಿದರೆ ಈಗ ತಮ್ಮ ನೈತಿಕ ನೆಲೆಯೇ ಕುಸಿದುಬಿದ್ದಿರುವುದು ಅವರ ಕಣ್ಣಿಗೇ ರಾಚುತ್ತದೆ” ಎಂದಿದ್ದಾರೆ.

ಮೋದಿ ಆಡಳಿತ ಹಿಂದುತ್ವಪರ, ಹಿಂದೂರಾಷ್ಟ್ರ ನಿರ್ಮಾಣದ ತನ್ನ ಅಜೆಂಡಾಕ್ಕೆ ಪೂರಕ, ಮುಸ್ಲಿಮರು, ಆದಿವಾಸಿಗಳು, ದಲಿತರ ಪರ ಸರ್ಕಾರವಿಲ್ಲ ಎಂಬುದನ್ನು ಸಂದರ್ಭ ಬಂದಾಗೆಲ್ಲಾ ಮೋದಿ ಸಾಬೀತು ಮಾಡುತ್ತಲೇ ಇದ್ದಾರೆ. ಮನುವಾದಿ, ಪುರೋಹಿತಶಾಹಿಯ ಆಶಯದಂತೆಯೇ ಸರ್ಕಾರದ ನೀತಿ-ನಿರೂಪಣೆಗಳನ್ನು ರೂಪಿಸಲು ತಮ್ಮ ಮಿತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಶತಮಾನದ ತನ್ನ ಸಂಘಟನೆಯ ನಿರಂತರ ಶ್ರಮಕ್ಕೆ, ಸರ್ಕಾರದ ಆಯಕಟ್ಟಿನ ಸ್ಥಾನಗಳಲ್ಲಿ, ದೇಶದ ಶಿಕ್ಷಣ, ಉದ್ಯಮ, ವ್ಯಹವಾರ ವಲಯಗಳಲ್ಲಿ ಆಯಕಟ್ಟಿನ ಸ್ಥಾನಮಾನಗಳ ಪ್ರತಿಫಲವೂ ಸಿಕ್ಕಿದೆ. ಸ್ವಯಂಸೇವಕರ ‘ನಿಸ್ವಾರ್ಥ ಸೇವೆ’ ಮತ್ತು ‘ತ್ಯಾಗ’ಕ್ಕೆ ಪ್ರತಿಫಲ ಸಿಕ್ಕಿದೆ ಎಂಬುದೂ ಸೇರಿದಂತೆ ಹಲವು ಸಂತೃಪ್ತಿ ಸಮಾಧಾನಗಳು ಆರ್ ಎಸ್ ಎಸ್ ಪಾಲಿಗೆ ಸಿಕ್ಕಿವೆ.

ಆದರೆ, ಇಂತಹ ‘ಸಂತೃಪ್ತಿ’, ‘ಸಮಾಧಾನ’ ಮತ್ತು ‘ಪ್ರತಿಫಲ’ಗಳೇ ಶುದ್ಧಾತಿಶುದ್ಧ ದೇಶಭಕ್ತ ಸಂಘಟನೆಯನ್ನು ಭ್ರಷ್ಟ ಮತ್ತು ಅಧಿಕಾರಲೋಲುಪ ಆಡಳಿತ ವ್ಯವಸ್ಥೆಯ ಎಲ್ಲಾ ಪಾಪಗಳು ಪಾಲುದಾರನಾಗಿಸಿಲ್ಲವೆ? ಎಂಬುದು ಸಂಘ ಮತ್ತು ಪರಿವಾರ ಕೇಳಿಕೊಳ್ಳಲೇಬೇಕಾದ ಪ್ರಶ್ನೆ. ಏಕೆಂದರೆ, ಹರೀಶ್ ಖಾರೆ ಅವರ ಪ್ರಕಾರ, “ಯಾವುದೇ ಬಗೆಯಲ್ಲಿ ಪ್ರಭುತ್ವದ ಜೊತೆ ನೀವು ಆಪ್ತ ನಂಟು ಹೊಂದಿದ್ದರೂ, ಅದಕ್ಕೆ ಇರುವ ಅನುಕೂಲಗಳಂತೆ ಅನಾನುಕೂಲಗಳೇ ಇರುತ್ತವೆ. ಯಾವ ಪಾಲುದಾರಿಕೆಯೂ ತಕ್ಕ ಬೆಲೆ ತೆರದೇ ಸಿಗದು. ಹಾಗೇ ಅಧಿಕಾರ, ಭಷ್ಟಗೊಳಿಸಿದರೆ, ಅಭೂತಪೂರ್ವ ಅಧಿಕಾರ, ಅಷ್ಟೇ ಅಭೂತಪೂರ್ವವಾಗಿ ಭ್ರಷ್ಟಗೊಳಿಸುತ್ತದೆ”!

ಆದರೆ, ಆರ್ ಎಸ್ ಎಸ್ ತನ್ನ ಸ್ವಯಂಸೇವಕರು ಅಧಿಕಾರದ ಇಂತಹ ಪ್ರಲೋಭನೆಗಳಿಗೆ ಎಂದೂ ಪಕ್ಕಾಗುವುದಿಲ್ಲ ಎಂದೇ  ಹೇಳುತ್ತದೆ ಮತ್ತು ಅಧಿಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳಿಂದ ಅವರು ಗಾವುದ ದೂರವೇ ನಿಲ್ಲುತ್ತಾರೆ. ಅಂತಹದ್ದೇನಾದರೂ ಇದ್ದರೆ ಅದು ಬಿಜೆಪಿ ಮತ್ತು ಅದರ ಕೇಡರ್ ಗೆ ಮಾತ್ರ ಸೀಮಿತ ಎಂದು ಬಿಂಬಿಸುತ್ತದೆ. ಆ ಮೂಲಕ ಭ್ರಷ್ಟಾತಿಭ್ರಷ್ಟ ನಾಯಕರ ಜೊತೆಗಿದ್ದೂ ತನ್ನ ಸ್ವಯಂಸೇವಕರು ಶುದ್ಧಹಸ್ತರಾಗಿ, ಕೇವಲ ‘ದೇಶಸೇವಕ’ರಾಗಿ ಉಳಿದಿದ್ದಾರೆ ಎಂದೇ ಹೇಳುತ್ತದೆ. ಆದರೆ, ವಾಸ್ತವವಾಗಿ ‘ಹಣ’ ಮತ್ತು ‘ರಾಜಕಾರಣ’ದ ವಿಷಯದಲ್ಲಿ ಭಾರತೀಯ ಜನತಾ ಪಕ್ಷದ ‘ನ್ಯೂ ಇಂಡಿಯಾ’, ಆರ್ ಎಸ್ ಎಸ್ ಸದಾ ಕೆಂಡಕಾರುವ ನೆಹರೂ ಅವರ ‘ಓಲ್ಡ್ ಇಂಡಿಯಾ’ಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ. ಇನ್ನು ಸಾಮಾಜಿಕ ಸಮಾನತೆ, ಸ್ವಾತಂತ್ರ್ಯ, ಸೌಹಾರ್ದ, ಸರ್ವರ ಏಳಿಗೆಯಂತಹ ಪ್ರಜಾಸತ್ತಾತ್ಮಕ ವಿಷಯಗಳಲ್ಲಿ ಆಘಾತಕಾರಿ ಬೆಳವಣಿಗೆಗಳಿಗೆ ‘ನ್ಯೂ ಇಂಡಿಯಾ’ ತಿದಿಯೊತ್ತಿದೆ.

ಅಧಿಕಾರ ಮತ್ತು ಅದು ತಂದುಕೊಡುವ ಎಲ್ಲಾ ಬಗೆಯ ಪ್ರಭಾವಗಳು ವ್ಯಕ್ತಿಗಳನ್ನಷ್ಟೇ ಭ್ರಷ್ಟಗೊಳಿಸುವುದಿಲ್ಲ, ಸಂಘ-ಪರಿವಾರ, ಸಂಘಟನೆಗಳನ್ನೂ ಕಡುಭ್ರಷ್ಟಗೊಳಿಸಬಲ್ಲವು ಎಂಬುದನ್ನು ಕಣ್ಣೆದುರಿನ ನಿದರ್ಶನಗಳು ಸಾಲುಸಾಲಾಗಿವೆ. ಆ ಹಿನ್ನೆಲೆಯಲ್ಲಿ ಬಿಜೆಪಿಯ ನೈತಿಕತೆ ಮತ್ತು ನಡವಳಿಕೆಯ ಕಣ್ಗಾವಲು ಇಡುತ್ತಿದ್ದ ಸಂಘ, ಈ ಏಳು ವರ್ಷಗಳಲ್ಲಿ ಎಷ್ಟು ಸಮರ್ಥವಾಗಿ ಮತ್ತು ದಿಟ್ಟತನದಿಂದ ಆ ಕಾರ್ಯವನ್ನು ಮಾಡಿದೆ ಎಂಬುದನ್ನು ಗಮನಿಸಿದರೆ, ಸಿಗುವುದು ಆಘಾತಕಾರಿ ಚಿತ್ರಣವೇ!  ಅಷ್ಟೇ ಅಲ್ಲ; “ಪಕ್ಷ ಮತ್ತು ಪಕ್ಷದ ಸರ್ಕಾರದ ನೀತಿ-ನಡತೆಯ ಮೇಲೆ ಕಣ್ಣಿಡಬೇಕಾದ ಮತ್ತು ತನ್ನ ಭರವಸೆಯ ‘ಹಿಂದೂ ಪುನರುತ್ಥಾನ’, ರಾಮರಾಜ್ಯದ ಮರುಸ್ಥಾಪನೆಯ ದಿಕ್ಕಿನಲ್ಲಿ ಆಡಳಿತ ಸಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿದ್ದ ಸಂಘ, ಅದನ್ನು ಮರೆತು, ಮೋದಿ ಪಂಥದ ಪರ ವಕಾಲತುವಹಿಸುವ ಮಟ್ಟಕ್ಕೆ ಬದಲಾಗಿದೆ” ಎಂದು ಹರೀಶ್ ವಿಶ್ಲೇಷಿಸುತ್ತಾರೆ!

ಹಾಗಾಗಿಯೇ, ಕರೋನಾದಂತಹ ಭೀಕರ ಪರಿಸ್ಥಿತಿಯ ನಡುವೆ, ದೇಶದ ಜನರ ಜೀವ ಮತ್ತು ಜೀವನ ರಕ್ಷಿಸುವವಲ್ಲಿ ಸಂಪೂರ್ಣ ಕೈಚೆಲ್ಲಿರುವ ಮೋದಿಯವರ ಆಡಳಿತದ ಲೋಪಗಳ ಬಗ್ಗೆ ಎಚ್ಚರಿಕೆ ನೀಡುವ ಬದಲಾಗಿ, ಸೋಂಕಿನ ರುದ್ರ ತಾಂಡವಕ್ಕೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಮಾತುಗಳಿಗೆ ‘ದೇಶದ್ರೋಹ’ದ ಬಣ್ಣ ಕಟ್ಟುವ, ‘ನೆಗೇಟಿವಿಟಿ’ ಬದಲು ದೇಶದ ಬಗ್ಗೆ ‘ಪಾಸಿಟಿವಿಟಿ’ ಹರಡಿ ಎಂದು ಬೋಧಿಸುವ ಮಟ್ಟಿಗೆ ಕಲ್ಟ್(ಪಂಥ) ಮನಸ್ಥಿತಿಯನ್ನು ಸಂಘದ ನಾಯಕರು ಪ್ರದರ್ಶಿಸುತ್ತಿದ್ದಾರೆ.

ಆ ಹಿನ್ನೆಲೆಯಲ್ಲಿ, “ದೇಶದ ಕೋಟ್ಯಂತರ ಜನರ ಸಾವು- ನೋವು, ನಷ್ಟಗಳಿಗೆ ಪ್ರಧಾನಿ ಮೋದಿಯವರ ವಿವೇಚನಾರಹಿತ ನೀತಿಗಳು, ಮತ್ತು ನಿಲುವುಗಳೇ ಕಾರಣ ಎಂದು ಹೇಳುವ ಮಟ್ಟಿನ ನೈತಿಕತೆಯನ್ನಾಗಲೀ, ವ್ಯಕ್ತಿಗತ ಘನತೆಯನ್ನಾಗಲೀ ಮತ್ತು ಬೌದ್ಧಿಕ ಗಟ್ಟಿತನವನ್ನಾಗಲೀ ಸಂಘದ ನಾಯಕರು ತೋರುತ್ತಿಲ್ಲ. ಈ ಏಳು ವರ್ಷಗಳ ಮೋದಿಯವರ ಆಡಳಿತಾವಧಿ ನಾಗ್ಪುರದ ನೈತಿಕ ಯಜಮಾನಿಕೆಯನ್ನು ಹೇಗೆ ಮಣ್ಣುಪಾಲು ಮಾಡಿದೆ ಎಂಬುದಕ್ಕೆ ಈ ಕರೋನಾ ಕಾಲದ ಪರಿವಾರದ ನಡವಳಿಕೆಗಿಂತ ಬೇರೆ ನಿದರ್ಶನ ಬೇಕಿಲ್ಲ” ಎಂಬ ಖಾರೆ ಅವರ ಮಾತುಗಳಲ್ಲಿ ನಿಜವಿಲ್ಲದಿಲ್ಲ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...