‘ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ’ದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ರಾಜಕೀಯ ಪ್ರವೇಶಿಸುವ ಮೊದಲು ವಾರಣಾಸಿಯಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದರು. ಈಗ, ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜಕೀಯದಲ್ಲಿ ಪವರ್ ಪ್ಲೇಯರ್ ಆಗಿ, ಸಮಾಜವಾದಿ ಪಕ್ಷದ (ಎಸ್‌ಪಿ) ಪ್ರಮುಖ ಮಿತ್ರ ಪಕ್ಷವಾಗಿ, ಅವರು ಮತ್ತೆ ಚಾಲಕನ ಸ್ಥಾನದಲ್ಲಿದ್ದಾರೆ. ಗಾಜಿಪುರ ಜಿಲ್ಲೆಯ ಜಹೂರಾಬಾದ್‌ನ ಹಾಲಿ ಶಾಸಕರಾಗಿರುವ ರಾಜ್‌ಭರ್ ಈ ಬಾರಿ ಬಿಜೆಪಿ ಮತ್ತು ಬಹುಜನ ಸಮಾಜ ಪಕ್ಷದಿಂದ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ.
ಬಿಜೆಪಿಯು ತಮ್ಮ ಪಕ್ಷಕ್ಕೆ ಡಿಸೆಂಬರ್‌ನಲ್ಲಿ ಪಕ್ಷಾಂತರಗೊಂಡ ಮತ್ತು ಅದೇ ಸಮುದಾಯಕ್ಕೆ ಸೇರಿದ ಮಾಜಿ ಬಿಎಸ್‌ಪಿ ನಾಯಕ ಕಾಳಿಚರಣ್ ರಾಜ್‌ಭರ್ ಅವರನ್ನು ಓ.ಪಿ.ರಾಜ್‌ಭರ್ ವಿರುದ್ಧ ಕಣಕ್ಕಿಳಿಸಿದೆ. ಕಾಳಿಚರಣ್ ಜಹೂರಾಬಾದ್ ಅವರು ಬಿಎಸ್‌ಪಿಯಿಂದ 2002 ಮತ್ತು 2007 ರಲ್ಲಿ ಎರಡು ಬಾರಿ ಗೆದ್ದಿದ್ದರು.
ಈ 2012 ರಲ್ಲಿ ಈ ಕ್ಷೇತ್ರದಿಂದ ಎಸ್‌ಪಿಯಿಂದ ಗೆದ್ದಿದ್ದ ಶಾದಾಬ್ ಫಾತಿಮಾ ಅವರನ್ನು ಬಿಎಸ್‌ಪಿ ಕಣಕ್ಕಿಳಿಸಿದೆ. ಅವರು ಕ್ಷೇತ್ರದಲ್ಲಿ ಬಹುಪಾಲು ದಲಿತ ಮತಗಳನ್ನು ಮತ್ತು ಹೆಚ್ಚಿನ ಮುಸ್ಲಿಂ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.
ಕಾಳಿಚರಣ್ ಮತ್ತು ಓ.ಪಿ. ರಾಜ್‌ಭರ್ ನಡುವಿನ ರಾಜ್‌ಭರ್ ಮತಗಳ ವಿಭಜನೆಯಾದರೆ, ತನ್ನದೇ ಆದ ಪ್ರಮುಖ ಮತದಾರರನ್ನು ಹೊಂದಿರುವ ಬಿಜೆಪಿ ಲಾಭ ಪಡೆಯಬಹುದು ಎಂಬುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಜಹೂರಾಬಾದ್‌ನಲ್ಲಿ ಮಾತ್ರವಲ್ಲದೆ, ವಾರಣಾಸಿ ಜಿಲ್ಲೆಯ ಶಿವಪುರದಿಂದ ಎಸ್‌ಬಿಎಸ್‌ಪಿ ಅಭ್ಯರ್ಥಿಯಾಗಿರುವ ಒ.ಪಿ.ರಾಜ್‌ಭರ್ ಅವರ ಪುತ್ರ ಅರವಿಂದ್ ರಾಜ್‌ಭರ್ ಅವರನ್ನು ಗುರಿಯಾಗಿಸಲು ಸಹ ಬಿಜೆಪಿ ತನ್ನ ‘ರಾಜ್‌ಭರ್ ವರ್ಸಸ್ ರಾಜ್‌ಭರ್’ ಸೂತ್ರವನ್ನು ಬಳಸುತ್ತಿದೆ. ಯುಪಿಯ ಪ್ರಸ್ತುತ ಕ್ಯಾಬಿನೆಟ್ ಸಚಿವ ಅನಿಲ್ ರಾಜ್‌ಭರ್ ಅಲ್ಲಿ ಬಿಜೆಪಿ ಅಭ್ಯರ್ಥಿ.
33 ಸ್ಥಾನಗಳಿಂದ ಸ್ಪರ್ಧಿಸುತ್ತಿರುವ ರಾಷ್ಟ್ರೀಯ ಲೋಕದಳ (RLD) ನಂತರ, SP ನೇತೃತ್ವದ ಮೈತ್ರಿಕೂಟದಲ್ಲಿ 16 ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ SBSP ಅತ್ಯಧಿಕ ಸ್ಥಾನ ಹೊಂದಿರುವ ಪಕ್ಷವಾಗಿದೆ.
ಜಹೂರಾಬಾದ್‌ಗಾಗಿ ಬಿಜೆಪಿಯ ಯೋಜನೆಗಳು
O.P. ರಾಜ್‌ಭರ್ ಅವರ SBSP, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 2017 ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ರಾಜ್‌ಭರ್ ಕ್ಯಾಬಿನೆಟ್ ಮಂತ್ರಿಯಾದರು, ಆದರೆ ಅವರು 2019 ರ ಸಂಸತ್ತಿನ ಚುನಾವಣೆಯಲ್ಲಿ ಲೋಕಸಭೆ ಟಿಕೆಟ್‌ಗೆ ಬೇಡಿಕೆಯಿಟ್ಟಾಗ ಬಿಜೆಪಿಯೊಂದಿಗಿನ ಅವರ ಸಂಬಂಧವು ಹದಗೆಟ್ಟಿತು. 2019 ರಲ್ಲಿ ಎರಡು ಪಕ್ಷಗಳು ಬೇರ್ಪಟ್ಟ ನಂತರ, ರಾಜ್‌ಭರ್ ಎಸ್‌ಪಿ ಜೊತೆ ಸೇರಿದರು ಮತ್ತು ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಕ್ತ ಟೀಕಾಕಾರರಾದರು.
ರಾಜ್‌ಭರ್ ಸಮುದಾಯದ ಹೆಚ್ಚಿನ ಮತದಾರರಿರುವ ಜಹೂರಾಬಾದ್‌ನಲ್ಲಿ ಒ.ಪಿ.ರಾಹಭರ್ ಮತ್ತು ಕಾಳಿಚರಣ್ ರಾಜ್‌ಭರ್ ನಡುವಿನ ಮತಸಮರ ಕುತೂಹಲ ಕೆರಳಿಸಿದೆ.
2002 ಮತ್ತು 2007 ರಲ್ಲಿ ಜಹೂರಾಬಾದ್‌ನಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ಗೆದ್ದಿದ್ದ ಕಾಳಿಚರಣ್, 2012 ರಲ್ಲಿ ಎಸ್‌ಪಿಯ ಶಾದಾಬ್ ಫಾತಿಮಾ ಮತ್ತು 2017 ರಲ್ಲಿ ಓ.ಪಿ.ರಾಜ್‌ಭರ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಜಹೂರಾಬಾದ್‌ನಲ್ಲಿ ಬಿಜೆಪಿಯ ಮತಬೇಟೆಯು ಇತರೆಡೆಗಳಂತೆ ಮತದಾರರಲ್ಲಿನ ಜಾತಿ/ಸಮುದಾಯಗಳ ವಿಭಜನೆಯ ಮೇಲೆ ಅವಲಂಬಿತವಾಗಿದೆ. ಜಹೂರಾಬಾದ್‌ನಲ್ಲಿ ದಲಿತ ಮತದಾರರ ಸಂಖ್ಯೆ 70,000, ರಾಜ್‌ಭರ್‌ಗಳು 70,000, ಮುಸ್ಲಿಂ ಮತದಾರರು 30,000 ಮತ್ತು ಯಾದವ ಮತದಾರರು 45,000, ಚೌಹಾಣ್ ಮತದಾರರು 30,000 ಮತ್ತು 30,000 ರಜಪೂತ ಮತದಾರರು, 25,000 ಬ್ರಾಹ್ಮಣ ಮತದಾರರು ಮತ್ತು 20,000 ವೈಶ್ಯ ಮತದಾರರನ್ನು ಒಳಗೊಂಡಿದೆ.

ಕಾಳಿಚರಣ್ ಅವರ ಹಳೆಯ ಬಿಎಸ್‌ಪಿ ಸಂಪರ್ಕದಿಂದಾಗಿ ಅವರು ಕೆಲವು ದಲಿತ ಮತಗಳನ್ನು ಪಡೆಯುತ್ತಾರೆ, ಜೊತೆಗೆ ಅವರ ರಾಜಭರ್ ಸಮುದಾಯದ ಮತಗಳಲ್ಲಿ ಪಾಲು ಪಡೆಯುತ್ತಾರೆ ಎಂದು ಬಿಜೆಪಿ ಭಾವಿಸುತ್ತಿದೆ. ಚೌಹಾಣ್, ಬ್ರಾಹ್ಮಣ, ರಜಪೂತ ಮತ್ತು ವೈಶ್ಯ ಮತಗಳು ಮೊದಲಿನಿಂದಲೂ ಬಿಜೆಪಿಯ ಪ್ರಮುಖ ಮತಬ್ಯಾಂಕ್.
ಶಾದಾಬ್ ಫಾತಿಮಾ ಅವರ ಉಪಸ್ಥಿತಿಯಿಂದಾಗಿ ಮುಸ್ಲಿಂ ಮತಗಳ ವಿಭಜನೆಯೂ ಆದರೆ ಒ.ಪಿ.ರಾಜ್‌ಭರ್‌ಗೆ ಗೆಲುವು ಕಷ್ಟವಾಗಲಿದೆ ಎಂಬುವುದು ಬಿಜೆಪಿಯ ಲೆಕ್ಕಾಚಾರ.ಚ
“ಒ.ಪಿ. ರಾಜ್‌ಭರ್ ವಿರುದ್ಧ ದೊಡ್ಡ ಆಡಳಿತ ವಿರೋಧಿ ಅಲೆಯಿದೆ. ಏಕೆಂದರೆ ಅವರು ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕಾಳಿಚರಣ್‌ರಿಂದ ಞನಮಗೆ ಬಿಎಸ್‌ಪಿ,ರಾಜ್‌ಭರ್ ಮತಗಳು ಮಾತ್ರವಲ್ಲ , ದಲಿತರ ಮತಗಳೂ ಸಿಗುತ್ತವೆ. ಈಗ ಬಿಜೆಪಿ ಮತ್ತು ಬಿಎಸ್‌ಪಿಯ ಫಾತಿಮಾ ನಡುವೆ ಸ್ಪರ್ಧೆ ಏರ್ಪಟ್ಟಿದೆ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಭಾನು ಪ್ರತಾಪ್ ಸಿಂಗ್ ಹೇಳುತ್ತಾರೆ.1996ರಲ್ಲಿ ತನ್ನ ಅಭ್ಯರ್ಥಿ ಗಣೇಶ್ ಗೆದ್ದಿದ್ದು ಬಿಟ್ಟರೆ ಜಹೂರಾಬಾದ್ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದಿಲ್ಲ. ಅಂದಿನಿಂದ ಇಲ್ಲಿ ಬಿಅಎಸ್‌ಪಿ ಮತ್ತು ಎಸ್‌ಪಿ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ.
ಶಾದಾಬ್ ಫಾತಿಮಾ ಲೆಕ್ಕಾಚಾರ
ಬಿಎಸ್‌ಪಿ ಅಭ್ಯರ್ಥಿ ಶಾದಾಬ್ ಫಾತಿಮಾ ಆರಂಭದಲ್ಲಿ ಎಸ್‌ಪಿ ಟಿಕೆಟ್ ಪಡೆಯುವ ನಿರೀಕ್ಷೆ ಹೊಂದಿದ್ದರು, ಆದರೆ ಕಳೆದ ವಾರ ಈ ಕ್ಷೇತ್ರವನ್ನು ಎಸ್‌ಬಿಎಸ್‌ಪಿಗೆ ನೀಡಿದಾಗ ಪಕ್ಷ ತೊರೆದು ಬಿಎಸ್‌ಪಿ ಸೇರಿದ್ದರು. ಅವರು 2007 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗಾಜಿಪುರ ಸದರ್ ಕ್ಷೇತ್ರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಗೆದ್ದಿದ್ದರು.
ಈ ವರ್ಷ, ಫಾತಿಮಾ ಅವರು ಬಿಎಸ್‌ಪಿಯ ಸಾಂಪ್ರದಾಯಿಕ ದಲಿತ ಮತಗಳನ್ನು ಪಡೆಯುವ ಭರವಸೆಯಲ್ಲಿದ್ದಾರೆ, ಜೊತೆಗೆ ಮುಸ್ಲಿಂ ಮತಗಳು ಹಾಗೂ ಒ.ಪಿ. ರಾಜ್‌ಭರ್ ವಿರುದ್ಧದ ಆಡಳಿತ ವಿರೋಧಿ ಮತವನ್ನೂ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.
ಈ ಬಗ್ಗೆ ThePrint ಜೊತೆ ಮಾತಾಡಿರುವ ಫಾತಿಮಾ “ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ… ಜನರು ಈಗಲೂ ನನ್ನ ಹಿಂದಿನ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ. ನನಗೆ ಇಲ್ಲಿ ಯಾವುದೇ ಸ್ಪರ್ಧೆಯಿಲ್ಲ” ಎಂದಿದ್ದಾರೆ.
ಒ.ಪಿ.ರಾಜ್‌ಭರ್ ಚುನಾವಣಾ ತಂತ್ರ
ಬಿಜೆಪಿ ಮತ್ತು ಬಿಎಸ್‌ಪಿಯ ಹೇಳಿಕೆಗಳನ್ನು ವಿರೋಧಿಸಿರುವ ಓಂ ಪ್ರಕಾಶ್ ರಾಜ್‌ಭರ್ ಅವರ ಕಿರಿಯ ಪುತ್ರ ಅರುಣ್ ರಾಜ್‌ಭರ್ “ಗಾಜಿಪುರದಲ್ಲಿ, ಮುಸ್ಲಿಮರಿಗೆ ನಾಯಕ ಮುಖ್ತಾರ್ ಅನ್ಸಾರಿ ಮತ್ತು ಯಾದವರಿಗೆ ನಾಯಕ ಅಖಿಲೇಶ್ ಯಾದವ್. ಗಾಜಿಪುರ ಮುಸ್ಲಿಮರು ಫಾತಿಮಾಗೆ ಮತ ಹಾಕುವುದಿಲ್ಲ, ರಾಜಭರ್ ಮತಗಳು ವಿಭಜನೆಯಾಗುವುದಿಲ್ಲ ಮತ್ತು ಜನವಾದಿ ಪಕ್ಷದ ಅಧ್ಯಕ್ಷ ಸಂಜಯ್ ಚೌಹಾಣ್ ನಮ್ಮ ಮೈತ್ರಿಯಲ್ಲಿರುವುದರಿಂದ ನಾವು ಚೌಹಾಣ್ ಮತಗಳನ್ನು ಪಡೆಯುತ್ತೇವೆ. ಬಿಜೆಪಿ ಇಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಹೇಳಿದ್ದಾರೆ.
O.P. ರಾಜ್‌ಭರ್ ಅವರು ಅನ್ಸಾರಿಯವರ ಪುತ್ರ ಅಬ್ಬಾಸ್ ಅನ್ಸಾರಿ ಅವರನ್ನು ಮೌದಿಂದ ಕಣಕ್ಕಿಳಿಸಿದ್ದಾರೆ, ಇದು ಜಹೂರಾಬಾದ್‌ನಲ್ಲಿ ಅವರಿಗೆ ಮುಸ್ಲಿಂ ಮತಗಳನ್ನು ತರಲಿದೆ ಎಂಬುವುದು O.P. ರಾಜ್‌ಭರ್ ಲೆಕ್ಕಾಚಾರ.
ಶಿವಪುರದಲ್ಲಿ ಅರವಿಂದ್ ರಾಜ್‌ಭರ್ ಎದುರಿಸುತ್ತಿರುವ ಸವಾಲು
O.P. ರಾಜ್‌ಭರ್ ಜಹೂರಾಬಾದ್‌ನಲ್ಲಿ ತಮ್ಮದೇ ಆದ ಹೋರಾಟವನ್ನು ನಡೆಸುತ್ತಿದ್ದರೆ, ಅವರ ಮಗ ಅರವಿಂದ್ ಶಿವಪುರದಲ್ಲಿ ಬಿಜೆಪಿಯ ಅನಿಲ್ ರಾಜ್‌ಭರ್ ಅವರನ್ನು ಎದುರಿಸಲಿದ್ದಾರೆ.
ಅನಿಲ್ ರಾಜ್‌ಭರ್ 2017 ರ ವಿಧಾನಸಭಾ ಚುನಾವಣೆಯಲ್ಲಿ ಶಿವಪುರದಿಂದ ಗೆದ್ದು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. O.P. ರಾಜ್‌ಭರ್ ಅವರು ಬಿಜೆಪಿಯ ಸಖ್ಯ ತೊರೆದ ನಂತರ, ಬಿಜೆಪಿ ಅವರನ್ನು ತನ್ನ ರಾಜಭರ್ ಮುಖ ಎಂದು ಪ್ರಚಾರ ಮಾಡುತ್ತಿದೆ.
ಶಿವಪುರ ಕ್ಷೇತ್ರವು ಅಂದಾಜು 60,000 ರಾಜ್‌ಭರ್ ಮತಗಳು, 50,000 ಯಾದವ್ ಮತಗಳು, 30,000 ಮುಸ್ಲಿಂ ಮತಗಳು,35,000 ಬ್ರಾಹ್ಮಣ ಮತದಾರರು, 30,000 ಚೌಹಾನ್ಸ್, 25,000 ಮೌರ್ಯರು , ಪ್ರಜಾಪತಿ ಮತ್ತು ಇತರ ಜಾತಿಗಳನ್ನು ಹೊಂದಿದೆ.
ಎಸ್‌ಬಿಎಸ್‌ಪಿ ಮುಸ್ಲಿಂ, ಯಾದವ್ ಮತ್ತು ರಾಜ್‌ಭರ್ ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದರೆ, ಬಿಜೆಪಿ ರಾಜ್‌ಭರ್, ಚೌಹಾಣ್ ಮತ್ತು ಬ್ರಾಹ್ಮಣ ಮತಗಳನ್ನು ಪಡೆಯುವ ಲೆಕ್ಕಾಚಾರದಲ್ಲಿದೆ. ಮಾರ್ಚ್ 7 ರಂದು ನಡೆಯಲಿರುವ ಯುಪಿ ಚುನಾವಣೆಯ ಕೊನೆಯ ಹಂತದಲ್ಲಿ ಜಹೂರಾಬಾದ್ ಮತ್ತು ಶಿವಪುರ ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.