ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಎಲ್ಲದಕ್ಕೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೇ ಹೊಣೆಮಾಡಿ ದೂಷಿಸುತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ (CONGRESS) ನಾಯಕ ಮನಮೋಹನ್ ಸಿಂಗ್ ಕುಟುಕಿದ್ದಾರೆ.
“ಒಂದೆಡೆ, ಜನರು ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಕಳೆದ ಏಳೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ (BJP) ಸರ್ಕಾರವು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಅದನ್ನು ಸರಿಪಡಿಸುವ ಬದಲು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೇ ಎಲ್ಲ ವಿಚಾರದಲ್ಲೂ ದೂಷಿಸುತ್ತಿದೆ. ಈ ಸರ್ಕಾರಕ್ಕೆ ಜನರ ಸಮಸ್ಯೆಗಳೇ ಕಾಣುತ್ತಿಲ್ಲ,” ಎಂದು ಟೀಕಿಸಿದ್ದಾರೆ.
ಫೆಬ್ರವರಿ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್‌ನ ಮತದಾರರನ್ನು ಉದ್ದೇಶಿಸಿ ಅವರು ವಿಡಿಯೋ ಸಂದೇಶದಲ್ಲಿ ಮಾತುಗಳನ್ನಾಡಿದ್ದಾರೆ.
“ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿ (Narendra Modi) ಮೋದಿ ತಮ್ಮ ತಪ್ಪುಗಳನ್ನು ಮರೆಮಾಚಲು ಇತಿಹಾಸವನ್ನು ದೂಷಿಸುವ ಬದಲು ಪ್ರಧಾನಿ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು. ನಾನು 10 ವರ್ಷ ಪ್ರಧಾನಿಯಾಗಿದ್ದಾಗ ನನ್ನ ಕೆಲಸದ ಮೂಲಕ ಮಾತನಾಡಿದ್ದೆ. ಪ್ರಪಂಚದ ಮುಂದೆ ದೇಶದ ಪ್ರತಿಷ್ಠೆಯನ್ನು ಕಾಪಾಡಿದ್ದೆ. ನಾನು ಎಂದಿಗೂ ಭಾರತದ ಹೆಮ್ಮೆಯನ್ನು ಹಾಳು ಮಾಡಲು ಬಿಟ್ಟಿಲ್ಲ ಎಂದು ನೇರವಾಗಿಯೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿದೇಶಾಂಗ ನೀತಿಯಲ್ಲಿ ವಿಫಲ
ಭಾರತೀಯ ಜನತಾ ಪಕ್ಷದ ಸರ್ಕಾರವು ವಿದೇಶಾಂಗ ನೀತಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮನಮೋಹನ್ ಸಿಂಗ್ (Manmohan Singh) ಹೇಳಿದ್ದಾಗಿ ಪಿಟಿಐ (PTI)ವರದಿ ಮಾಡಿದೆ.
“ಯಾವುದೇ ನಾಯಕರನ್ನು ಬಲವಂತವಾಗಿ ಆಲಂಗಿಸುವುದು, ಸೆಲೆಬ್ರಿಟಿಗಳ ತರ ಕೈ ಬೀಸುವುದು ಅಥವಾ ಅವರಿಗೆ ತರಹೇವಾರಿ ಊಟ ಮಾಡಿಸುವ ಮೂಲಕ ವಿದೇಶಾಂಗ ನೀತಿಯನ್ನು ನಡೆಸುವುದಲ್ಲ ಎಂಬುದನ್ನು ಪ್ರಧಾನಿ ಮೋದಿ ಅರ್ಥಮಾಡಿಕೊಂಡಿದ್ದಾರೆ ಎಂದೇ ನಾನು ಭಾವಿಸುತ್ತೇನೆ” ವ್ಯಂಗ್ಯವಾಡಿದ್ದಾರೆ.
“ಚೀನಾ ಸೈನಿಕರು ಒಂದು ವರ್ಷದಿಂದ ಇಲ್ಲೇ ಕುಳಿತಿದ್ದಾರೆ. ಹಳೆಯ ಸ್ನೇಹಿತರು ದೂರ ಸರಿಯುತ್ತಿದ್ದಾರೆ. ಈ ಸರ್ಕಾರ ಏನೂ ಮಾಡುತ್ತಿಲ್ಲ. ಜೂನ್ 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರು ಘರ್ಷಣೆ ಮಾಡಿದಾಗಿನಿಂದ ನಡೆಯುತ್ತಿರುವ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟನ್ನು ಸಿಂಗ್ ಉಲ್ಲೇಖಿಸಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿಯವರ ಭದ್ರತಾ ಉಲ್ಲಂಘನೆಯ ವಿಷಯ ಕೂಡ ಪ್ರಸ್ತಾಪಿಸಿ, ಪಂಜಾಬ್ ಮುಖ್ಯಮಂತ್ರಿ (Punjab Chief minister )ಮತ್ತು ರಾಜ್ಯದ ಜನರನ್ನು ಅವಮಾನಿಸಲೆಂದೇ ಮೋದಿ ಹಾಗೂ ಬಿಜೆಪಿ ನಾಯಕರು ಆಗ ಪ್ರಯತ್ನಿಸಿದರು ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಜನವರಿ 5 ರಂದು ಮೋದಿ ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡುವುದನ್ನು ಏಕಾಏಕಿ ನಿಲ್ಲಿಸಬೇಕಾಯಿತು. ಇದು ಭಾರಿ ವಿವಾದಕ್ಕೆ ಕಾರಣವಾಯಿತು. ಜಿಲ್ಲೆಯ ಹುಸೇನಿವಾಲಾ ಗ್ರಾಮಕ್ಕೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಅವರ ಬೆಂಗಾವಲು ಪಡೆ ಸುಮಾರು 15 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡಿತ್ತು. ಕೇಂದ್ರವು ಇದನ್ನು “ಪ್ರಮುಖ ಭದ್ರತಾ ಲೋಪ” ಎಂದು ಬಣ್ಣಿಸಿತ್ತು ಎಂಬುದನ್ನು ಇಲ್ಲಿ ಸಿಂಗ್ ಮಾತಿಗೆ ನೆನಪಿಸಿಕೊಳ್ಳಬಹುದು.

ರೈತರ ಆಂದೋಲನದ ಸಂದರ್ಭದಲ್ಲೂ Modi ಸರ್ಕಾರ ಪಂಜಾಬ್ ಅನ್ನು ದೂಷಿಸಲು ಪ್ರಯತ್ನಿಸಿದೆ. ಪಂಜಾಬಿಗಳ ಶೌರ್ಯ, ದೇಶಭಕ್ತಿ ಮತ್ತು ತ್ಯಾಗಕ್ಕೆ ಜಗತ್ತು ವಂದಿಸುತ್ತದೆ. ಆದರೆ ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಸರ್ಕಾರವು ಈ ಬಗ್ಗೆ ತುಟಿಬಿಚ್ಚುವುದಿಲ್ಲ. ಪಂಜಾಬ್ ಮೂಲದ ನಿಜವಾದ ಭಾರತೀಯನಾಗಿ, ಈ ಎಲ್ಲಾ ವಿಷಯಗಳು ನನ್ನನ್ನು ಆಳವಾಗಿ ನೋಯಿಸಿವೆ. ಸರ್ಕಾರಕ್ಕೆ ಆರ್ಥಿಕ ನೀತಿ ಎಂದರೇನು ಎಂಬುದೇ ಅರ್ಥವಾಗುತ್ತಿಲ್ಲ ಎಂಬ ಬೇಸರ ನನಗಿದೆ ಎಂದಿದ್ದಾರೆ.
bjp government ಆರ್ಥಿಕ ನೀತಿಗಳಲ್ಲಿ “ಸ್ವಾರ್ಥ ಮತ್ತು ದುರಾಸೆಯೇ” ಅಡಗಿದೆ. ತಮ್ಮ ಸ್ವಾರ್ಥಕ್ಕಾಗಿ ಅವರು ಜನರನ್ನು ವಿಭಜಿಸಿ ಹೋರಾಡುವಂತೆ ಮಾಡುತ್ತಿದ್ದಾರೆ” ಎಂದು ಸಿಂಗ್ ಗಂಭೀರವಾಗಿ ಆರೋಪಿಸಿದ್ದಾರೆ.