ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಎಂದು ನಾಮಕರಣ ಮಾಡಲಾಗಿದೆ. ಇಂಡಿಯಾ ಮುನ್ನುಗ್ಗುತ್ತಿರುವ ರೀತಿಯನ್ನು ಗಮನಿಸಿದರೆ ಈ ಬಾರಿ ಭಾರತದಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. 24 ಪಕ್ಷಗಳು ಒಟ್ಟಿಗೆ ಸೇರಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಪೈಪೋಟಿ ನೀಡುತ್ತಾ ಅಧಿಕಾರ ಕಿತ್ತುಕೊಳ್ಳುವ ಸಮಯ ಸಮೀಪಿಸುವಂತಿದೆ. ಈ ರೀತಿಯ ಲಕ್ಷಣಗಳು ಕಾಣಿಸಲು ಪ್ರಮುಖ ಕಾರಣ ಏನು ಅನ್ನೋದನ್ನು ನೋಡೋದಾದ್ರೆ ಮೂರ್ನಾಲ್ಕು ಅಂಶಗಳನ್ನು ಪಟ್ಟಿ ಮಾಡಬಹುದಾಗಿದೆ.
ಪ್ರಧಾನಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ – ಕಾಂಗ್ರೆಸ್

ಯಾವುದೇ ಒಂದು ಮೈತ್ರಿಕೂಟದಲ್ಲಿ ಮೊದಲಿಗೆ ಬಿರುಕು ತರುವುದೇ ಅಧಿಕಾರ. ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಯಾರು..? ರಾಹುಲ್ ಗಾಂಧಿ ಮೋದಿಗೆ ಪರ್ಯಾಯರೇ..? ಎಂದು ಬಿಜೆಪಿ ಹಾಗು ಮಿತ್ರಪಕ್ಷಗಳು ಪ್ರಶ್ನೆ ಮಾಡುತ್ತವೆ. ಆದರೆ ಬೆಂಗಳೂರಿನ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಕಾಂಗ್ರೆಸ್ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದೆ ಎನ್ನಲಾಗಿದೆ. ಅಂದ್ರೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಪ್ರಮುಖ ಅಜೆಂಡಾ ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸುವುದೇ ಆಗಿದೆ. ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿ, ಬಿಜೆಪಿಯನ್ನು ಮಣಿಸಿದ ಬಳಿಕ ಅಧಿಕಾರ ಹಂಚಿಕೆ ಕಸರತ್ತಿಗೆ ಕೈ ಹಾಕುವುದು ಆಗಿದೆ.
11 ಜನರನ್ನು ಸೇರಿಸಿ ಸಮನ್ವಯ ಸಮಿತಿ ರಚನೆ..!

‘INDIA’ ಮೈತ್ರಿಕೂಟದಲ್ಲಿ ಇರುವ 24 ರಾಜಕೀಯ ಪಕ್ಷಗಳು ತನ್ನ ತನ್ನ ರಾಜ್ಯಗಳಲ್ಲಿ ಪ್ರಬಲವಾಗಿದೆ. ಶಕ್ತಿಶಾಲಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟಿಗೆ ಸೇರಿಕೊಂಡು ಕಾಂಗ್ರೆಸ್ ಮುನ್ನುಗ್ಗತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಳ್ಳಾಗುತ್ತದೆ ಅನ್ನೋ ಚರ್ಚೆಗಳು ಸಹ ನಡೆದಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್ ಹಾಗು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಮಾನ್ಯತೆ ಕೊಡುವುದು. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಡಪಕ್ಷಗಳು ಸೇರಿದಂತೆ ಯಾರು ಪ್ರಬಲ ಆಗಿದ್ದಾರೆ ಎನ್ನುವುದರ ಆಧಾರದಲ್ಲಿ ಟಿಕೆಟ್ ಹಂಚಿಕೆ ಮಾಡಿ, ಗೆಲುವೇ ಮಾನದಂಡ ಎನ್ನುವ ಆಧಾರದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಯಾವುದೇ ಗೊಂದಲ ಆಗದಂತೆ ತಡೆಯಲು ಸಮನ್ವಯ ಸಮಿತಿ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಭೆ ಮುಂಬೈನಲ್ಲಿ ನಿಗದಿಯಾಗಿದ್ದು, ಸಮನ್ವಯ ಸಮಿತಿಯಲ್ಲಿ ಯಾರೆಲ್ಲಾ ಇರಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯೇ ಪೂರ್ವ ತಯಾರಿ..!

ಇನ್ನೇನು ಕೆಲವೇ ತಿಂಗಳಲ್ಲಿ ದೇಶದ ಮೂರು ರಾಜ್ಯಗಳ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ, ರಾಜಸ್ಥಾನ್ ಹಾಗು ಛತ್ತೀಸ್ಗಢದಲ್ಲಿ ಚುನಾವಣೆ ನಡೆಯಲಿದ್ದು, ‘INDIA’ ಮೈತ್ರಿಕೂಟ ಒಟ್ಟಾಗಿ ಸ್ಪರ್ಧೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಅಬ್ಬರದ ಚುನಾವಣೆಯಲ್ಲಿ ಕಮಲ ನೆಲಕಚ್ಚಿದ್ದು, ಕಾಂಗ್ರೆಸ್ ಪಾಲಿಗೆ ಬೂಸ್ಟ್ ಆಗಿದೆ ಎನ್ನಬಹುದು. ಇದೀಗ ಮುಂಬರುವ ಮೂರು ರಾಜ್ಯಗಳ ವಿಧಾನಸಭೆಯಲ್ಲಿ ಸಣ್ಣ ಪುಟ್ಟ ಪಕ್ಷಗಳನ್ನು ಒಟ್ಟಿಗೆ ಸೇರಿಸಿಕೊಂಡು ಚುನಾವಣೆ ನಡೆಸಿ, ಬಿಜೆಪಿ ಮುಗ್ಗರಿಸುವಂತೆ ಮಾಡುವ ಲೆಕ್ಕಾಚಾರ ಹಾಕಲಾಗ್ತಿದೆ. ಒಂದು ವೇಳೆ ಪ್ರಧಾನಿ ಮೋದಿ ಮೂರೂ ರಾಜ್ಯಗಳಲ್ಲಿ ಸೋಲುಂಡರೆ ದೇಶದ ಜನರ ಚಿಂತನೆ ಬದಲಾಗಿದೆ ಎಂದೇ ಅರ್ಥ. ದೇಶಪ್ರೇಮ, ಭಾರತ ಮಾತೆ ಮುಖ ನೋಡಿ ಮತ ಹಾಕುವುದಿಲ್ಲ ಎನ್ನುವ ಸಂದೇಶ ಹೊರಬೀಳಲಿದೆ.
ಕೃಷ್ಣಮಣಿ






