ನಾ ದಿವಾಕರ
ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಹಾಗೂ ಜಾಗತಿಕ ಆರ್ಥಿಕತೆಯ ನಡುವೆ ಜಗತ್ತಿನಾದ್ಯಂತ ಶ್ರಮಜೀವಿಗಳ ಚಳುವಳಿಗಳು, ವಿಶೇಷವಾಗಿ ಕಾರ್ಮಿಕ ಸಂಘಗಳ (Trade Unions) ಹೋರಾಟಗಳು ಮನ್ವಂತರದ ಹಾದಿಯಲ್ಲಿ ಸಾಗುತ್ತಿವೆ. ಭಾರತದ ಸಂದರ್ಭದಲ್ಲಿ 1990ರ ದಶಕದ ಜಾಗತೀಕರಣದಿಂದ ಆರಂಭವಾದ ಈ ಪ್ರಕ್ರಿಯೆಗೆ ಕಾರ್ಮಿಕ ಸಂಘಟನೆಗಳು ಕ್ರಿಯಾಶೀಲವಾಗಿ ವಿರೋಧಿಸುತ್ತಲೇ ಇದ್ದರೂ ಮತ್ತೊಂದು ಮಗ್ಗುಲಲ್ಲಿ ಸಂಘಟನಾತ್ಮಕವಾಗಿ ಶಿಥಿಲವಾಗುತ್ತಿದ್ದು, ಹೊಸ ಪೀಳಿಗೆಯ ಶ್ರಮಿಕ ವರ್ಗಗಳನ್ನು ಆಕರ್ಷಿಸುವಲ್ಲಿ ಬಹುಮಟ್ಟಿಗೆ ಸೋತಿವೆ. ಇದಕ್ಕೆ ಕಾರಣ ನವ ಉದಾರವಾದದ ಪ್ರಭಾವದಿಂದ ಶ್ರಮ ಮಾರುಕಟ್ಟೆಯಲ್ಲಾಗಿರುವ ವ್ಯತ್ಯಯಗಳು ಹಾಗೂ ಶ್ರಮಿಕ ಅಥವಾ ಕಾರ್ಮಿಕ ಎಂಬ ದುಡಿಮೆಯ ಶಕ್ತಿಯ ನಿರ್ವಚನೆಯಲ್ಲಾಗಿರುವ ಬದಲಾವಣೆಗಳು.
ಮುಖ್ಯವಾಹಿನಿಯ ಕಾರ್ಮಿಕ ಸಂಘಗಳ ನಿರಂತರ ವಿಘಟನೆ, ಶಾಶ್ವತ ನಾಯಕತ್ವದ ಕಲ್ಪನೆ, ಹೋರಾಟದ ಹೊಸ ಮಾದರಿಗಳ ಕೊರತೆ, ಸಂಘಟಿತ ಕಾರ್ಮಿಕರ ಸಂಖ್ಯೆಯಲ್ಲಿನ ಕುಸಿತ, ಶ್ರಮ ಶಕ್ತಿಯ (Labour Power) ವ್ಯಾಖ್ಯಾನವನ್ನು ತಳಮಟ್ಟದವರೆಗೂ, ಎಲ್ಲ ಸ್ತರಗಳನ್ನೂ ಎಲ್ಲ ವಲಯಗಳನ್ನೂ ಒಳಗೊಳ್ಳುವ ಸ್ಪಷ್ಟ ತಾತ್ವಿಕ ನಿಲುವು ಇಲ್ಲದಿರುವುದು, ನಾಯಕತ್ವ ಮತ್ತು ಕಾರ್ಯಕರ್ತರ/ಸಂಘ ಸದಸ್ಯರ ನಡುವೆ ಹೆಚ್ಚಾಗುತ್ತಿರುವ ಅಂತರ, ಮುದಿ ನಾಯಕತ್ವದ (Old aged Leadership) ಬಿಗಿ ಹಿಡಿತ, ಅತಿಯಾದ ಕೇಂದ್ರೀಕರಣ, ಸಂಘಗಳ ನಿರ್ವಹಣೆಯಲ್ಲಿ ಶ್ರೇಣೀಕೃತ ಆಧಿಪತ್ಯದ ಪ್ರಭಾವ ಇವೆಲ್ಲವೂ ಸಹ ಭಾರತದ ಸಂಘಟಿತ ವಲಯದ ಕಾರ್ಮಿಕ ಸಂಘಗಳನ್ನು ಕಾಡುತ್ತಿರುವ ಸಮಸ್ಯೆಗಳು.
ಹೊಸ ದೃಷ್ಟಿಕೋನದ ಹಾ
ಈ ನಡುವೆಯೇ ದೇಶದ ಶ್ರಮಿಕರು ಮತ್ತೊಂದು ಮೇ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸುತ್ತಿದ್ದಾರೆ. ಇಲ್ಲಿ ಶ್ರಮಜೀವಿ ವರ್ಗಗಳು ಗಮನಿಸಬೇಕಾದ ಕೆಲವು ಸೂಕ್ಷ್ಮಗಳೂ ಇವೆ. ಸಾಂದರ್ಭಿಕ ಘೋಷಣೆಗಳು (Slogans) ಪ್ರಣಾಳಿಕೆ (Manifesto) ಆಗುವುದಿಲ್ಲ, ಪ್ರಣಾಳಿಕೆಗಳು ಕಾರ್ಯಕ್ರಮಗಳಾಗುವುದಿಲ್ಲ, ಪ್ರತಿಭಟನೆ-ಸೆಮಿನಾರ್ ಮುಂತಾದ ಕಾರ್ಯಕ್ರಮಗಳು ಸಾಂಘಿಕ ತಳಪಾಯವಾಗುವುದಿಲ್ಲ, ಈ ಕ್ರಿಯೆಗಳಲ್ಲಿ ಶ್ರಮಿಕರಲ್ಲಿ ಮೂಡುವ ಅರಿವು ಅಥವಾ ಪ್ರಜ್ಞೆ ವಿಸ್ತಾರವಾಗುವುದು ಮುಖ್ಯ. ಉದ್ಯಮದ ಮಾಲಿಕ ಅಥವಾ ಇಲಾಖೆಯ ಮುಖ್ಯಸ್ಥನನ್ನೂ ದಾಟಿ ಒಂದು ಚುನಾಯಿತ ಸರ್ಕಾರ ಇದೆ ಎಂಬ ಅರಿವು ಇದ್ದೇ ಇರುತ್ತದೆ.
ಆದರೆ ಈ ಸರ್ಕಾರಗಳನ್ನೂ ದಾಟಿ ಒಂದು ಪ್ರಭುತ್ವ ಹಾಗೂ ಅಲ್ಲಿ ರಕ್ಷಣೆ ಪಡೆಯುವ ಮಾರುಕಟ್ಟೆ ಆರ್ಥಿಕತೆ ಇರುತ್ತದೆ ಎಂಬ ಅರಿವು ಮೂಡಿಸಲು ಕಾರ್ಮಿಕ ಸಂಘಗಳು ಹೊಸ ಮಾದರಿಗಳನ್ನು ಗುರುತಿಸಬೇಕಿದೆ. ಡಿಜಿಟಲ್ ಯುಗದ ಶ್ರಮಿಕ ವರ್ಗ ಯಾವುದೇ ವಲಯದಲ್ಲಿದ್ದರೂ, ಆರ್ಥಿಕವಾಗಿ ಯಾವುದೇ ಸಂತೆಯಲ್ಲಿ ದುಡಿಯುತ್ತಿದ್ದರೂ, ಅವರನ್ನು ತಲುಪಬೇಕಾದರೆ ಸಿದ್ಧಮಾದರಿಗಳು ಸಾಲುವುದಿಲ್ಲ. ಕರಪತ್ರ, ವಿಚಾರ ಸಂಕಿರಣ, ಭಾಷಣ-ಉಪನ್ಯಾಸಗನ್ನು ಮೀರಿ, ಈ ಯುವ ಶ್ರಮ ಶಕ್ತಿಯನ್ನು (young labour power) ಸಂಚಯಿಸುವ ಹೊಸ ಮಾದರಿಗಳನ್ನು ಕಂಡುಕೊಳ್ಳಬೇಕಿದೆ. ಮಾರ್ಕ್ಸ್-ಲೆನಿನ್, ಲೋಹಿಯಾ, ಅಂಬೇಡ್ಕರ್, ಗಾಂಧಿ ಹೀಗೆ ನಿರ್ದಿಷ್ಟ ಸಿದ್ಧಾಂತಗಳನ್ನೇ ಅವಲಂಬಿಸಿರುವ ಕಾರ್ಮಿಕ ಸಂಘಗಳು ತಾವು ನಿಂತ ತಾತ್ವಿಕ ಭೂಮಿಕೆಯನ್ನೂ ಮೀರಿ ಗಮನಿಸಬೇಕಾದ್ದು ತಾವು ಕಾರ್ಯನಿರ್ವಹಿಸುತ್ತಿರುವ ನೆಲವನ್ನು, ನೆಲದ ವಾಸ್ತವಗಳನ್ನು (Ground Realities) ಹಾಗೂ ಈ ನೆಲದಲ್ಲೇ ಬೆವರು ಸುರಿಸುತ್ತಿರುವ ತಳಸಮಾಜದ ನಾಡಿಮಿಡಿತವನ್ನು.
ಕಾರ್ಮಿಕ ಸಂಘಗಳ ವೈಫಲ್ಯ
ಮುಖ್ಯವಾಹಿನಿಯ ಕಾರ್ಮಿಕ ಸಂಘಗಳ ವೈಫಲ್ಯವನ್ನು ಇಲ್ಲಿ ನೇರವಾಗಿ ಗುರುತಿಸಬಹುದು. ಎಡಪಂಥೀಯ ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿರುವ ಕಾರ್ಮಿಕ ಸಂಘಟನೆಗಳು ಶಿಥಿಲವಾಗುತ್ತಿರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ನವ ಉದಾರವಾದಿ ಆರ್ಥಿಕತೆ, 1990ರ ನಂತರ ಹೆಚ್ಚಾಗುತ್ತಲೇ ಇರುವ ಹೊರಗುತ್ತಿಗೆ ಪದ್ಧತಿ (Out sourced labour)̧ ಶಾಶ್ವತ ಉದ್ಯೋಗಿಗಳು ಇರುವ ಸಾರ್ವಜನಿಕ ಉದ್ದಿಮೆಗಳ ಅವಸಾನ ಮತ್ತು ಶಿಕ್ಷಣ-ಆರೋಗ್ಯದಿಂದ ಉತ್ಪಾದನಾ ವಲಯದವರೆಗೂ ವಿಸ್ತರಿಸಿರುವ ತಾತ್ಕಾಲಿಕ ನೌಕರಿಯ ಅವಕಾಶಗಳು. 1991ರಲ್ಲಿ ಸಾರ್ವಜನಿಕ ವಲಯದ (Public sector) ಕಾರ್ಮಿಕರ ಸಂಖ್ಯೆ 19.6 ದಶಲಕ್ಷ ಇತ್ತು. 2008ಕ್ಕೇ ಅದು 17.5 ದಶಲಕ್ಷಕ್ಕೆ ಕುಸಿದಿತ್ತು.
2023ರಲ್ಲಿ ಕೇಂದ್ರ ಸರ್ಕಾರದ ನೌಕರಿಯಲ್ಲಿರುವ ಕಾರ್ಮಿಕರ ಸಂಖ್ಯೆ 48.67 ಲಕ್ಷಗಳಷ್ಟಿದೆ. ಇದರಲ್ಲಿ ರೈಲ್ವೆ ಇಲಾಖೆ ಒಂದರಲ್ಲೇ 11.3 ಲಕ್ಷ ಶಾಶ್ವತ ನೌಕರರಿದ್ದಾರೆ. ಕೆಂದ್ರದಲ್ಲಿ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ 40.40 ಲಕ್ಷ ಅಂದರೆ ಹತ್ತು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಸಾರ್ವಜನಿಕ ಬ್ಯಾಂಕುಗಳ ಸಂಖ್ಯೆಯೂ ಕಡಿಮೆಯಾಗಿದ್ದು ಜನವರಿ 2025ರಲ್ಲಿ 7.58 ಲಕ್ಷ ನೌಕರರಿದ್ದರು. 2017ರಲ್ಲಿ 8.50 ಲಕ್ಷ ನೌಕರರಿದ್ದರು. ಬ್ಯಾಂಕಿಂಗ್, ವಿಮೆ ಸೇರಿದಂತೆ ಎಲ್ಲ ಉತ್ಪಾದಕೀಯ-ಸೇವಾ ವಲಯಗಳಲ್ಲೂ ಗುತ್ತಿಗೆ ಪದ್ಧತಿ (Contract system)̧ ಹೊರಗುತ್ತಿಗೆ (Out sourcing), ಶಿಕ್ಷಣ ವಲಯದಲ್ಲಿ ಅತಿಥಿ ಬೋಧಕರು/ಸಿಬ್ಬಂದಿ (Guest teachers/lectures and administration staff) ಸಾಮಾನ್ಯವಾಗಿರುವುದರಿಂದ, ಸಂಘಟಿತ ಕಾರ್ಮಿಕರ ಸಂಖ್ಯೆ ಸತತವಾಗಿ ಕುಸಿಯುತ್ತಲೇ ಇದೆ.
ಸೈದ್ಧಾಂತಿಕ ವೈಫಲ್ಯಗಳು
ಕಾರ್ಮಿಕ ಸಂಘಗಳು ಶಿಥಿಲವಾಗುವುದಕ್ಕೆ ಮತ್ತೊಂದು ಕಾರಣವನ್ನು ಸೈದ್ಧಾಂತಿಕ ನೆಲೆಯಲ್ಲಿ, ಕಾರ್ಯವೈಖರಿಯಲ್ಲಿ ಹಾಗೂ ಒಳಗೊಳ್ಳುವಿಕೆಯ ಕೊರತೆಯಲ್ಲಿ ಗುರುತಿಸಬಹುದು. ವಿಶೇಷವಾಗಿ ಎಡಪಕ್ಷಗಳ ನೇತೃತ್ವದಲ್ಲಿರುವ ಕಾರ್ಮಿಕ ಸಂಘಗಳ ಬಹುಪಾಲು ಸದಸ್ಯರು ಈ ಪಕ್ಷಗಳ ಮೂಲ ಸೈದ್ಧಾಂತಿಕ ಕಲ್ಪನೆಗಳಿಂದಲೇ ವಿಮುಖರಾಗಿರುತ್ತಾರೆ. ಕೆಂಬಾವುಟ ಹೋರಾಟದ ಸಂಕೇತವಾಗಿದ್ದು ಆರ್ಥಿಕ ಸವಲತ್ತುಗಳನ್ನು ಗಳಿಸಲಿರುವ ಸೇತುವೆಯಾಗಿದೆಯೇ ಹೊರತು, ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವ ರಕ್ಷಾ ಕವಚ ಆಗಿಲ್ಲ. ಮೇ ದಿನದ ಮೆರವಣಿಗೆಯಲ್ಲಿ (Rally) ಕೆಂಬಾವುಟ ಹಿಡಿದು ಕ್ರಾಂತಿ ಚಿರಾಯುವಾಗಲಿ (Long live Revolution) ಎಂದು ಘೋಷಣೆ ಕೂಗುವ ಕಾರ್ಮಿಕರಿಗೆ ಕ್ರಾಂತಿಯ ಅರ್ಥವೇ ತಿಳಿದಿರುವುದಿಲ್ಲ. ಹಾಗಾಗಿ ಇದು ಸಾಂದರ್ಭಿಕ ಮಂತ್ರೋಚ್ಛಾರಣೆಯಾಗಿಬಿಡುತ್ತದೆ.
ಎಡಪಂಥೀಯ ಕಾರ್ಮಿಕ ಸಂಘಗಳ, ವಿಶೇಷವಾಗಿ ಬ್ಯಾಂಕಿಂಗ್, ವಿಮೆ ಮತ್ತಿತರ ವೈಟ್ ಕಾಲರ್ ನೌಕರಿಗಳನ್ನು ಪ್ರತಿನಿಧಿಸುವ ಸಂಘಗಳ ಅನೇಕ ನಾಯಕರು ಈ ಘೋಷಣೆ ಕೂಗುತ್ತಲೇ ನಿವೃತ್ತರಾಗಿ, ತದನಂತರ ಮಠಮಾನ್ಯಗಳಲ್ಲಿ, ದೇವಾಲಯಗಳಲ್ಲಿ ಸೇವೆ ಮಾಡುತ್ತಾ, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಾ ಇರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಕೆಂಬಾವುಟ ಹಿಡಿಯುವ ಕಾರ್ಮಿಕರಲ್ಲಿ ಕ್ರಾಂತಿ ಎಂಬ ಉದಾತ್ತ ವಿದ್ಯಮಾನದ ಅರ್ಥ ಮತ್ತು ಅವಶ್ಯಕತೆಯ ಅರಿವು ಬಿತ್ತುವ ಕೆಲಸದಲ್ಲಿ ಎಡಪಂಥೀಯ ಕಾರ್ಮಿಕ ಸಂಘಗಳು ಸೋತಿವೆ. ಕಾರ್ಮಿಕ ಸಂಘಗಳೇ ಅನುಸರಿಸುವ ಆರ್ಥಿಕ ದೃಷ್ಟಿಕೋನದ ಚಳುವಳಿಗಳು (Economism) ತಳಮಟ್ಟದ ಕಾರ್ಮಿಕರ ಅರಿವಿನ ವಿಸ್ತಾರಕ್ಕೆ ಅಡ್ಡಗೋಡೆಗಳಾಗುತ್ತವೆ.
ನಾಯಕತ್ವದ ಸೀಮಿತ ಭೂಮಿಕೆ
ಈ ಸಮಸ್ಯೆ ಇನ್ನೂ ಹೆಚ್ಚಾಗುವುದಕ್ಕೆ ಕಾರಣ ಬಹುತೇಕ ಕಾರ್ಮಿಕ ಸಂಘಗಳಲ್ಲಿ ವ್ಯವಸ್ಥಿತವಾಗಿ ಬೆಳೆದುಬಂದಿರುವ ಶಾಶ್ವತ ನಾಯಕತ್ವದ ಕಲ್ಪನೆ (Permanent Leadership) ಹಾಗೂ ಹೊರಗಿನವರ ನಾಯಕತ್ವದ (Outsidersʼ leadership) ಪರಂಪರೆ. 1980-90ರವರೆಗೂ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಸಹ ಕಾರ್ಮಿಕರು ಹಿರಿಯ ನಾಯಕತ್ವದ (Senior leadership) ಆದೇಶಗಳನ್ನು ಸಮ್ಮಾನಿಸುತ್ತಿದ್ದರು. ಆದರೆ ತದನಂತರದ ಕ್ಷಿಪ್ರ ಬೆಳವಣಿಗೆಗಳಲ್ಲಿ ಕಟ್ಟಡ ಕಾರ್ಮಿಕನಿಗೂ ಸಹ ಸುತ್ತಲಿನ ಸಮಾಜದ ವಿದ್ಯಮಾನಗಳು ಸುಲಭವಾಗಿ ಅರ್ಥವಾಗುವ ತಂತ್ರಜ್ಞಾನಗಳು ಅಂಗೈನಲ್ಲೇ ಲಭ್ಯವಾಗುತ್ತದೆ. ಈ ಯುವ-ಮಿಲೆನಿಯಂ ಜಗತ್ತಿನ ಶ್ರಮಿಕರು ಎರಡೂ ನಾಯಕತ್ವಗಳಿಗೆ ಮನ್ನಣೆ ನೀಡುವುದಿಲ್ಲ.
ಹಾಗಾಗಿ ಎಷ್ಟೇ ಅನುಭವಿಗಳಾಗಿದ್ದರೂ ಹಿರಿಯ ಕಾರ್ಮಿಕ ನಾಯಕರು ತಳಹಂತದ ದುಡಿಮೆಗಾರರೊಡನೆ ಸಮರ್ಪಕವಾಗಿ ಸಂವಾದಿಸಲಾಗುವುದಿಲ್ಲ. ಈ ಡಿಜಿಟಲ್ ಯುಗದ ಕಾರ್ಮಿಕರಿಗೆ ಮಾರ್ಕ್ಸ್, ಏಂಗೆಲ್ಸ್, ಲೆನಿನ್, ಅಂಬೇಡ್ಕರ್ ಅವರಿಗಿಂತಲೂ ಮುಖ್ಯವಾಗಿ ಮೊದಲು ತಲುಪಬೇಕಿರುವುದು ವರ್ತಮಾನದ ಸ್ಥಿತಿಗತಿಗಳು. ಕಾರ್ಪೋರೇಟ್ ಮಾರುಕಟ್ಟೆ, ನವ ಬಂಡವಾಳಶಾಹಿ (Neo Capitalism) ಜಗತ್ತು, ಚುನಾಯಿತ ಸರ್ಕಾರಗಳ ಆಪ್ತ ಬಂಡವಾಳಶಾಹಿ (Croney Capitalism) ಆರ್ಥಿಕ ನೀತಿಗಳು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಇವೆಲ್ಲವನ್ನೂ ಸಂರಕ್ಷಿಸಿ, ದುಡಿಯುವ ವರ್ಗಗಳ ಶೋಷಣೆಯ ಮಾರ್ಗಗಳನ್ನು ರೂಪಾಂತರಗೊಳಿಸುವ ಆಳುವ ವರ್ಗಗಳ, ಚುನಾಯಿತ ಸರ್ಕಾರಗಳ ತಾತ್ವಿಕ ನೆಲೆಗಳು.
“ ಇಂದು ಶ್ರಮಿಕರು ಎದುರಿಸುತ್ತಿರುವ ಅನಿಶ್ಚಿತ, ಅಭದ್ರ ಸ್ಥಿತಿಗೆ, ಶೋಷಣೆ ದಬ್ಬಾಳಿಕೆಗಳಿಗೆ, ತಾರತಮ್ಯಗಳಿಗೆ ಮೂಲ ಕಾರಣ ನವ ಉದಾರವಾದಿ ಆರ್ಥಿಕತೆಯಲ್ಲಿದೆ, ಅದರ ಉಪಾಸಕರಲ್ಲಿದೆ ” ಎಂಬ ವಾಸ್ತವವನ್ನು ಕಾರ್ಮಿಕರಿಗೆ ಮನದಟ್ಟು ಮಾಡಿದರೆ ಕಾರ್ಮಿಕ ವರ್ಗದ ಪ್ರಧಾನ ಎದುರಾಳಿ ಯಾರು ಎನ್ನುವುದೂ ಸಹ ಅರ್ಥವಾಗುತ್ತದೆ. ಈ ಎದುರಾಳಿಗಳನ್ನು ಆರ್ಥಿಕತೆಯ ಅಂಗಳದಲ್ಲಿ ಶೋಧಿಸಬೇಕೇ ಹೊರತು, ಮನುವಾದ, ಫ್ಯಾಸಿಸಂ, ಬ್ರಾಹ್ಮಣವಾದ ಮತ್ತಿತರ ಸಾಂಸ್ಕೃತಿಕ ಆವರಣಗಳಲ್ಲಿ ಶೋಧಿಸಲಾಗುವುದಿಲ್ಲ. ಇವೆಲ್ಲವೂ ಸಹ ಮಾರುಕಟ್ಟೆ ಆರ್ಥಿಕತೆಯ ಪ್ರಧಾನ ಅವಯವಗಳೇ ಹೊರತು, ಆಧಾರ ಸ್ತಂಭಗಳಲ್ಲ. ಈ ಅರಿವು ಎಲ್ಲ ಸ್ತರಗಳ ಶ್ರಮಿಕರಲ್ಲಿ ಮೂಡಬೇಕಾದರೆ ಸಿದ್ಧಮಾದರಿಗಳು ನೆರವಾಗುವುದಿಲ್ಲ. ಗೇಟ್ ಮೀಟಿಂಗ್, ಉದ್ದುದ್ದ ಭಾಷಣ, ಸಿದ್ಧಾಂತಗಳ ಬೋಧನೆಗಳಿಂದ ಇದು ಸಾಧ್ಯವಾಗುವುದೂ ಇಲ್ಲ. ಹೊಸ ಮಾದರಿಗಳನ್ನು ಅನುಸರಿಸಬೇಕು.
ಮಿಲೆನಿಯಂ ಜಗತ್ತಿನ ವಾಸ್ತವಗಳು
ಏಕೆಂದರೆ ಮಿಲೆನಿಯಂ ಯುಗದ ಶ್ರಮಿಕ ಜೀವಿಗಳಿಗೆ ನಾಳೆಯ ಬದುಕು ಮುಖ್ಯವಾಗಿರುತ್ತದೆ. ತಮ್ಮ ಭವಿಷ್ಯದ ಕನಸುಗಳನ್ನು ಸಂಘಟನಾತ್ಮಕ ಹಾದಿಯಲ್ಲಿ ಕಟ್ಟಿಕೊಳ್ಳುವ ಈ ಯುವ ಸಮೂಹ ನಾಯಕತ್ವದ ಕಡೆ ನೋಡುವಾಗ ತಲೆಮಾರಿನ ಅಂತರ ಅಡ್ಡಗೋಡೆಯಂತಿದ್ದರೆ, ಎಂತಹ ಉತ್ತಮ ಸಂದೇಶವೂ ಅವರ ಮಿದುಳನ್ನು ಪ್ರವೇಶಿಸುವುದಿಲ್ಲ. ತಮ್ಮದೇ ಓರಿಗೆಯ ಅಥವಾ ಪೀಳಿಗೆಯ, ತಮ್ಮ ದುಡಿಮೆಯ ವಲಯವನ್ನೇ ಪ್ರತಿನಿಧಿಸುವ ನಾಯಕತ್ವವನ್ನು ಮಿಲೆನಿಯಂ ಸಮೂಹ ಬಯಸುತ್ತದೆ. ಶಾಶ್ವತ ನಾಯಕತ್ವವಾಗಲೀ, ಮೇಲ್ಮಟ್ಟದಿಂದ ಫರ್ಮಾನುಗಳನ್ನು ಹೊರಡಿಸುವ ಮುಂದಾಳತ್ವವಾಗಲೀ, ನಿತ್ಯ ದುಡಿಮೆಯಲ್ಲಿ ಗೋಚರಿಸದ ಮುಖವಾಡಗಳನ್ನಾಗಲೀ ಈ ತಲೆಮಾರಿನ ಶ್ರಮಿಕರು ಸಮ್ಮತಿಸುವುದಿಲ್ಲ.
ಸ್ಥಾಪಿತ ಕಾರ್ಮಿಕ ಸಂಘಗಳು ಕಲಿಯಬೇಕಾದ ಮತ್ತೊಂದು ಪಾಠ ಎಂದರೆ ಒಳಗೊಳ್ಳುವಿಕೆ ಮತ್ತು ಪ್ರಾತಿನಿಧ್ಯದ ಮಹತ್ವ. ಒಳಗೊಳ್ಳುವಿಕೆಯನ್ನು ಕೇವಲ ಭಾಗವಹಿಸುವಿಕೆಯಲ್ಲಿ ಅಥವಾ ಕೆಲವು ಸ್ಥಾನಮಾನಗಳಲ್ಲಿ ಗುರುತಿಸಲಾಗುವುದಿಲ್ಲ. ನಿರ್ಣಾಯಕ ಹಂತಗಳಲ್ಲಿ ಸಮಸ್ತ ಕಾರ್ಮಿಕರಿಗೂ ಅನ್ವಯಿಸುವ ಆತ್ಯಂತಿಕ ನಿರ್ಧಾರಗಳಲ್ಲಿ ಕಟ್ಟಕಡೆಯ ಶ್ರಮಿಕನ ಒಳಗೊಳ್ಳುವಿಕೆ ಎಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ಇಲ್ಲಿ ಪ್ರಾತಿನಿಧ್ಯದ ಪ್ರಶ್ನೆಯೂ ಉದ್ಭವಿಸುತ್ತದೆ. ಸ್ಥಾಪಿತ ಕಾರ್ಮಿಕ ಸಂಘಗಳಲ್ಲಿ ಬೇರೂರಿರುವ ಪಿತೃಪ್ರಧಾನ ಮೌಲ್ಯಗಳ ಕಾರಣ ಮಹಿಳಾ ಪ್ರಾತಿನಿಧ್ಯವನ್ನು ಅಲ್ಲಗಳೆಯುತ್ತಲೇ ಬರಲಾಗಿದೆ. ನಾಯಕತ್ವದ ಸ್ಥಾನಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇಲ್ಲದಿರುವುದು ಹೊಸ ತಲೆಮಾರಿನ ಮಹಿಳಾ ಕಾರ್ಮಿಕರಿಗೆ ಪುರುಷಾಳ್ವಿಕೆ ಮತ್ತು ತಾರತಮ್ಯದ ಲಕ್ಷಣವಾಗಿಯೇ ಕಾಣುತ್ತದೆ.
ಹೊಸ ನಾಯಕತ್ವದ ಅವಕಾಶಗಳೆಡೆ
ಉನ್ನತ ಮಟ್ಟದ ನಾಯಕತ್ವದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಇಲ್ಲದಂತಾಗಿರುವುದೇ ಶಾಶ್ವತ ನಾಯಕತ್ವದ ಪರಂಪರೆಯಿಂದ. ಇದನ್ನು ಮೊದಲು ಬುಡಸಮೇತ ತೆಗೆದುಹಾಕಬೇಕಿದೆ. ಈ ಪ್ರಾತಿನಿಧಿಕ ಪ್ರಶ್ನೆಗಳಿಂದಾಚೆ ಕಾರ್ಮಿಕ ಸಂಘಗಳು ಯೋಚಿಸಬೇಕಿರುವುದು ಶ್ರಮಿಕ ವರ್ಗಗಳಲ್ಲಿರುವ ಎರಡು ಉಪವರ್ಗಗಳ ಧೋರಣೆ ಮತ್ತು ಆಲೋಚನೆಯ ಮಾದರಿಯ ಬಗ್ಗೆ. ಆರ್ಥಿಕ ದೃಷ್ಟಿಕೋನವೇ ಪ್ರಧಾನವಾಗಿರುವ ಕಾರ್ಮಿಕ ಸಂಘಗಳಲ್ಲಿ ಫಲಾನುಭವಿ ವರ್ಗ ಮತ್ತು ವಂಚಿತ ವರ್ಗ ಎರಡೂ ಒಟ್ಟಿಗೇ ಇರುವುದನ್ನು ಸುಲಭವಾಗಿ ಗುರುತಿಸಬಹುದು. ಮೊದಲ ವರ್ಗದ ಹಿತಾಸಕ್ತಿಗಳೇ ಸಂಘದ ಆದ್ಯತೆಗಳೂ ಆಗುವುದನ್ನು ಹಲವು ಸಂದರ್ಭಗಳಲ್ಲಿ ಕಾಣಬಹುದು.
ಇಲ್ಲಿ ವಂಚಿತ ಶ್ರಮಿಕ ವರ್ಗಗಳ ಭವಿಷ್ಯದ ಪ್ರಶ್ನೆ ಎದುರಾಗುತ್ತದೆ. ಇದೇ ಸಮಸ್ಯೆಯನ್ನು ಶಾಶ್ವತ ಕಾರ್ಮಿಕರು ಮತ್ತು ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ನಡುವೆಯೂ ಕಾಣಬಹುದು. ಸಂಘದ ಸದಸ್ಯರಾಗಿದ್ದರೂ ನಾಯಕತ್ವದ ಸ್ಥಾನಮಾನಗಳು ಇಲ್ಲದಿರುವುದರಿಂದ ತಾತ್ಕಾಲಿಕ-ಗುತ್ತಿಗೆ ಕಾರ್ಮಿಕರ ಅಭಿಪ್ರಾಯಗಳಿಗೆ ಮನ್ನಣೆ ದೊರೆಯುವುದು ದುಸ್ತರವಾಗುತ್ತದೆ. ಅವರ ಬೇಡಿಕೆಗಳ ಈಡೇರಿಕೆಗೆ ಸಂಘಗಳು ಹೋರಾಡುತ್ತವೆ ಆದರೆ ಹೋರಾಟದ ಮಾರ್ಗದಲ್ಲಿ ಈ ಶ್ರಮಿಕ ವರ್ಗದ ಅಭಿಪ್ರಾಯಗಳು ನಿರ್ಲಕ್ಷಿಸಲ್ಪಡುತ್ತವೆ. ನಾಯಕತ್ವದಿಂದ ವಂಚಿತರಾಗುವ ಮಹಿಳಾ ಕಾರ್ಮಿಕರೂ ಇದೇ ದುಸ್ಥಿತಿಯನ್ನು ಎದುರಿಸುತ್ತಾರೆ. ಪ್ರಾತಿನಿಧ್ಯ ಮತ್ತು ಒಳಗೊಳ್ಳುವಿಕೆಯ ಪ್ರಶ್ನೆ ಇಲ್ಲಿ ಮಹತ್ವ ಪಡೆಯುತ್ತದೆ. .ಎಡಪಂಥೀಯ ಸಂಘಟನೆಗಳನ್ನೂ ಒಳಗೊಂಡಂತೆ, ಇಡೀ ಕಾರ್ಮಿಕ ಸಂಘಗಳ ವಾತಾವರಣದಲ್ಲಿ (Eco system) ಮಹಿಳಾ ಪ್ರಾತಿನಿಧ್ಯ ಇಲ್ಲದಿರುವ ಪ್ರಸಕ್ತ ಸನ್ನಿವೇಶದಲ್ಲಿ ಈ ಸಮಸ್ಯೆ ಶೀಘ್ರ ಪರಿಹಾರ ಕಾಣಬೇಕಿದೆ.
ಹಕ್ಕುಗಳು ಇಲ್ಲವಾಗಿರುವ ಸಮಯದಲ್ಲಿ
ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡಿರುವುದೇ ಅಲ್ಲದೆ ಸಂಘಟನೆಯ ಹಕ್ಕುಗಳನ್ನೂ ಸಹ ಬಹುಮಟ್ಟಿಗೆ ಇಲ್ಲವಾಗಿಸುತ್ತದೆ. ಈ ಸಂಹಿತೆಗಳ ಹೊರತಾಗಿ ನೋಡಿದಾಗ, ಜವಳಿ ಉದ್ಯಮದಲ್ಲಿ, ಗಾರ್ಮೆಂಟ್ ಮಳಿಗೆಗಳಲ್ಲಿ, ಕಾರ್ಪೋರೇಟ್ ಷಾಪಿಂಗ್ ಮಾಲ್‌ಗಳಲ್ಲಿ, ಸಣ್ಣ ಪ್ರಮಾಣದ ವಾಣಿಜ್ಯ ಭಂಡಾರಗಳಲ್ಲಿ ಹಾಗೂ ಬಟ್ಟೆ ಅಂಗಡಿಗಳಲ್ಲಿ, ಮಾರ್ಟ್‌ಗಳಲ್ಲಿ, ಆಸ್ಪತ್ರೆಗಳಲ್ಲಿ ನಮಗೆ ಕಾಣುವುದು ಶೇಕಡಾ 95ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು. ಎಳೆಯ ಬಾಲೆಯರಿಂದ ವೃದ್ಧ ಮಹಿಳೆಯರವರೆಗೂ ವ್ಯಾಪಿಸುವ ಈ ಉದ್ಯೋಗ ಮಾರುಕಟ್ಟೆ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳ ಕೂಪಗಳಾಗಿರುವುದನ್ನು ಈಗಲಾದರೂ ಗಮನಿಸಬೇಕಿದೆ.
ಹೊಸ ಕಾನೂನುಗಳ ಅನ್ವಯ ಇಂತಹ ಮಳಿಗೆಗಳಲ್ಲಿ ಕಾರ್ಮಿಕ ಸಂಘ ಸ್ಥಾಪಿಸುವುದೇ ಅಸಾಧ್ಯವಾಗುತ್ತದೆ. ವಿಪರ್ಯಾಸ ಎಂದರೆ ಈ ಕಾನೂನು ಜಾರಿಯಾಗುವ ಮುನ್ನವೂ ಇಂತಹ ಮಳಿಗೆಗಳಲ್ಲಿ ದುಡಿಯುತ್ತಿದ್ದ ಮಹಿಳೆಯರನ್ನು ಸಂಘಟಿಸುವ ಪ್ರಯತ್ನಗಳು ನಡೆದಿಲ್ಲ. ಇಂತಹ ಅಸುರಕ್ಷಿತ (un protected) ಮತ್ತು ಅಭದ್ರ (Unsafe ) ವಲಯಗಳಲ್ಲಿ ದುಡಿಯುತ್ತಿರುವ ಶ್ರಮಿಕರ ಸಂಖ್ಯೆ ಎಷ್ಟಿದೆ ಎಂಬ ದತ್ತಾಂಶವೂ ಬಹುಶಃ ಯಾವುದೇ ಸ್ಥಾಪಿತ ಕಾರ್ಮಿಕ ಸಂಘಗಳ ಬಳಿ ಇಲ್ಲ. ಕಾರ್ಮಿಕ ಇಲಾಖೆಯಲ್ಲಿ ಇರಬಹುದಾದ ಮಾಹಿತಿಗಳು ಮಾಲಿಕರು ಒದಗಿಸುವ ಸಂಖ್ಯೆಯನ್ನೇ ಅವಲಂಬಿಸುವುದರಿಂದ, ವಾಸ್ತವ ಸಂಖ್ಯೆ ತಿಳಿಯುವುದು ಅಸಾಧ್ಯ.
ಈ ದುಡಿಮೆಗಾರರು ದಿನಕ್ಕೆ 12 ರಿಂದ 14 ಗಂಟೆ ಕೆಲಸ ಮಾಡುತ್ತಾರೆ, ಇಡೀ ಅವಧಿಯಲ್ಲಿ ನಿಂತೇ ಇರಬೇಕಾಗುತ್ತದೆ, ವೇತನ ಸಹಿತ ರಜೆ, ಮುಟ್ಟಿನ ರಜೆ , ಭವಿಷ್ಯ ನಿಧಿ ಮುಂತಾದ ಸಾಂವಿಧಾನಿಕ ಸವಲತ್ತುಗಳಿಂದ ವಂಚಿತರಾಗಿರುತ್ತಾರೆ. ಯಾವುದೇ ರೀತಿಯ ಆರೋಗ್ಯ ಕಾಳಜಿಯ (Health Care) ವ್ಯವಸ್ಥೆಯನ್ನು ಮಾಲಿಕರು ಕಲ್ಪಿಸುವುದಿಲ್ಲ. ದೀರ್ಘಕಾಲದ ಅನಾರೋಗ್ಯ ನೌಕರಿಗೇ ಸಂಚಕಾರ ತರುತ್ತದೆ. ಬಹುತೇಕ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಬರುವ ಇಂತಹ ಶ್ರಮಿಕ ಹೆಣ್ಣು ಮಕ್ಕಳು ಬಡ ಕುಟುಂಬಗಳಿಂದಲೇ ಬಂದಿರುತ್ತಾರೆ. ಈ ಹೆಣ್ಣು ಮಕ್ಕಳು ಎದುರಿಸಬಹುದಾದ ಲೈಂಗಿಕ ಕಿರುಕುಳ, ದೌರ್ಜನ್ಯಗಳು ಸದ್ದಿಲ್ಲದೆ ಮರೆಯಾಗಿಬಿಡುತ್ತವೆ. ಈ ಸಮಸ್ಯೆಗಳನ್ನು ಪರಿಹರಿಸುವವರು ಯಾರು ?
ಈ ಶ್ರಮಿಕರ ಸಂಖ್ಯೆ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಭದ್ರತೆ ಮತ್ತು ಔದ್ಯೋಗಿಕ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ಸ್ಥಾಪಿತ ಕಾರ್ಮಿಕ ಸಂಘಗಳಿಗೆ ಏಕೆ ಸಂಗ್ರಹಿಸಲಾಗಿಲ್ಲ ? ಅಪಾರ ಸ್ಥಿರಾಸ್ತಿ ಸಂಪತ್ತಿನ ವಾರಸುದಾರರಾಗಿರುವ ಕಾರ್ಮಿಕ ಸಂಘಗಳು ಈ ಉದಾತ್ತ ಕೆಲಸವನ್ನು ಏಕೆ ಕೈಗೆತ್ತಿಕೊಂಡಿಲ್ಲ ? ಮೇ ದಿನದ ಮೆರವಣಿಗೆಯಲ್ಲಿ “ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ ” ಎಂದು ಘೋಷಣೆ ಕೂಗುವಾಗ, ಈ ʼ ಐಕ್ಯತೆ ʼಯ ಅಂಗಳದಲ್ಲಿ ಇಂತಹ ಅಸಂಘಟಿತ ಶ್ರಮಿಕರಿಗೆ ಸ್ಥಾನ ಇರಬೇಕಲ್ಲವೇ ? ಮೆರವಣಿಗೆಯಲ್ಲಿ ಭಾಗವಹಿಸುವ ಎಷ್ಟು ಕಾರ್ಮಿಕರಿಗೆ ಈ ಅರಿವು ಇರುತ್ತದೆ ? ಬಹುಪಾಲು ಕಾರ್ಮಿಕರಿಗೆ ಅರಿವು ಇಲ್ಲ ಎನ್ನುವುದಾದರೆ, ಈ ಲೋಪಕ್ಕೆ ಯಾರು ಹೊಣೆ ?
ಕಾರ್ಮಿಕರ ಪ್ರಥಮ ಎದುರಾಳಿ ಯಾರು ?
ದುಡಿಯುವ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಮುನ್ನ ಈ ಸಾಮಾಜಿಕ ಅರಿವನ್ನೂ ಮೂಡಿಸಬೇಕು, ಮಹಿಳಾ ಸಮೂಹ ಎದುರಿಸುತ್ತಿರುವ ತಾರತಮ್ಯಗಳ ಅರಿವನ್ನೂ ಮೂಡಿಸಬೇಕು. ಕೆಂಬಾವುಟ ಹಿಡಿದು “ ಕ್ರಾಂತಿ ಚಿರಾಯುವಾಗಲಿ ” ಎಂದು ಕೂಗುವವರಿಗೆ ಅರಿವಾಗಬೇಕಿರುವ ವಾಸ್ತವ ಎಂದರೆ, ಈ ಜಿಂದಾಬಾದ್ ಘೋಷಣೆ ಸಾಂದರ್ಭಿಕವಾಗಕೂಡದು. ಕಾರ್ಮಿಕರ ಐಕ್ಯತೆ ಜಿಂದಾಬಾದ್ ಎಂದು ಕೂಗುವಾಗ ಪ್ರತಿಯೊಬ್ಬ ಶ್ರಮಜೀವಿಯ ಮನಸ್ಸಿನಲ್ಲೂ ಐಕ್ಯತೆ ಎಂದರೇನು, ಯಾರೊಂದಿಗೆ, ಯಾರ ವಿರುದ್ಧ ಎಂಬ ಅರಿವು ಇರಬೇಕು. ʼ
ಒಂದುಗೂಡುವುದಕ್ಕೂ ಒಂದಾಗುವುದಕ್ಕೂ ಅಪಾರ ಅಂತರವಿದೆ. ಈಗ ಪ್ರತಿವರ್ಷ, ಸಾಂದರ್ಭಿಕವಾಗಿ ಒಂದುಗೂಡುತ್ತಿದ್ದೇವೆ. ಆದರೆ ಒಂದಾಗಲು ಅನೇಕ ತಡೆಗೋಡೆಗಳಿವೆ. ಹಾಗಾದರೆ ಐಕ್ಯತೆ ಎಂದರೇನು ?
ಎದುರಾಳಿಯನ್ನು ಗುರುತಿಸಲು ಬೇಕಿರುವುದು ಅರಿವಿನ ವಿಸ್ತರಣೆ ಮತ್ತು ಜ್ಞಾನದ ಪ್ರಸರಣ. ಶ್ರಮಿಕ ಅಥವಾ ಕಾರ್ಮಿಕ ಎಂಬ ದುಡಿಮೆಯ ಭೂಮಿಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಲೇ ಇರುವ ಪ್ರಸ್ತುತ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು ಸಹ ಶ್ರಮಿಕರಾಗಿಯೇ ಕಾಣಬೇಕಿದೆ. ನಗರಗಳಲ್ಲಿ ಗ್ರಾಹಕ ವೇದಿಕೆಗಳು, ನಾಗರಿಕ ಸಂಘಟನೆಗಳು, ವೈಯುಕ್ತಿಕವಾಗಿ ಮಾನವ ಹಕ್ಕು ಹೋರಾಟಗಾರರೂ ಸಹ , ನಗರ ಸೌಂದರ್ಯ ಮತ್ತು ಸುಗಮ ವಾಹನ ಸಂಚಾರದ ಕಾರಣದಿಂದ ಈ ಸಣ್ಣ ದುಡಿಮೆಗಾರರನ್ನು ಶಾಶ್ವತವಾಗಿ ಉಚ್ಛಾಟಿಸುವ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಸ್ಥಾಪಿತ ಕಾರ್ಮಿಕ ಸಂಘಗಳು ಈ ದನಿ ಇಲ್ಲದವರಿಗೆ ಕಿವಿಗೊಡುತ್ತಿಲ್ಲ.
ಸೈದ್ಧಾಂತಿಕ ಅಡ್ಡಗೋಡೆಗಳು
ಭಾರತದಲ್ಲಿ ಕಾರ್ಮಿಕ ಐಕ್ಯತೆಗೆ ಇರುವ ಬಹುದೊಡ್ಡ ಅಡ್ಡಗೋಡೆ ಎಂದರೆ ಸೈದ್ಧಾಂತಿಕ ಅಸ್ಮಿತೆ (Ideological Identity) ಮತ್ತು ವಿವಿಧ ಪಕ್ಷಗಳ ಯಜಮಾನಿಕೆ/ಆಧಿಪತ್ಯದ ಆಕಾಂಕ್ಷೆಗಳು (Hegemonic Ambitions). ಕೆಂಪು ಬಣ್ಣದ ಎಷ್ಟು ಛಾಯೆಗಳಿದೆಯೋ ಅಷ್ಟು ಕಾರ್ಮಿಕ ಸಂಘಗಳು ಕೆಂಬಾವುಟದಡಿಯೇ ಕಾರ್ಮಿಕರನ್ನು ಸಂಘಟಿಸುತ್ತವೆ, ಹೋರಾಡುತ್ತವೆ. ಒಂದು ಕೆಂಬಾವುಟವ ಬದಲು ಬೇರೆ ಚಿಹ್ನೆಯ ಮತ್ತೊಂದು ಕೆಂಬಾವುಟ ಹಾರಾಡುತ್ತದೆ. ಕಾರ್ಮಿಕರ ಸಮಸ್ಯೆಯಾಗಲೀ, ಬವಣೆಯಾಗಲೀ ಬದಲಾವಣೆಯಾಗುವುದಿಲ್ಲ, ಹೆಚ್ಚೆಂದರೆ ಸ್ವಲ್ಪ ಸುಧಾರಣೆಯಾಗುತ್ತದೆ. “ ಕಾರ್ಮಿಕರ ಐಕ್ಯತೆ ”ಗೆ ಜಿಂದಾಬಾದ್ ಎಂದು ಕೂಗುವಾಗ, ಈ ಬಾವುಟಗಳು ಒಂದಾಗಬೇಕು ಎಂಬ ಪರಿವೆ ನಮಗಿರಬೇಕಲ್ಲವೇ ?
ಎಡಪಕ್ಷಗಳ ಐಕ್ಯತೆಗೆ ಅಡ್ಡಿಯಾಗಿರುವುದೇ ಈ ಪಕ್ಷಗಳ ನಿಯಂತ್ರಣದಲ್ಲಿರುವ ಕಾರ್ಮಿಕ ಸಂಘಟನೆಗಳು ಎನ್ನುವ ಅಭಿಪ್ರಾಯ ಎಡಪಂಥೀಯ ಚಿಂತಕರಲ್ಲೇ ದಟ್ಟವಾಗಿದೆ. ಇದರ ಸತ್ಯಾಸತ್ಯತೆಗಳನ್ನು ಬದಿಗಿಟ್ಟು ನೋಡಿದರೂ, ನವ ಉದಾರವಾದ ಮತ್ತು ಬಲಪಂಥೀಯ ಹಿಂದುತ್ವ ಬಲಗೊಳ್ಳುತ್ತಿರುವ ಹೊತ್ತಿನಲ್ಲಿ, ಈ ತಡೆಗೋಡೆಯನ್ನು ಕೆಡವಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಅಲ್ಲವೇ ? ಕೆಂಬಾವುಟದ ಅಡಿಯಲ್ಲಿ ಪಡೆಯುವ ಹಕ್ಕುಗಳು ಮತಗಟ್ಟೆಗಳಲ್ಲಿ ಕೇಸರಿಯಲ್ಲಿ ಲೀನವಾಗುವ ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಇದಕ್ಕೆ ವ್ಯಕ್ತಿಗತ ಶ್ರಮಿಕರನ್ನು ಹೊಣೆ ಮಾಡುವುದು ಆತ್ಮದ್ರೋಹವಾಗುತ್ತದೆ. ಅವರಲ್ಲಿ ಅರಿವು ಮೂಡಿಸುವಲ್ಲಿ ನಾವು ವಿಫಲವಾಗಿರುವುದನ್ನು ಮನಗಾಣಬೇಕಲ್ಲವೇ ?
ಕೋಟ್ಯಂತರ ಸಂಖ್ಯೆಯ ಕಾರ್ಮಿಕರನ್ನು ಪ್ರತಿನಿಧಿಸುವ ಸ್ಥಾಪಿತ, ಎಡಪಂಥೀಯ ಕಾರ್ಮಿಕ ಸಂಘಗಳು, ಯಾವ ವಲಯದಲ್ಲಾದರೂ ಕಾರ್ಮಿಕರ ಕುಟುಂಬ ವರ್ಗದೊಡನೆ ಒಡನಾಟ ಹೊಂದಿರುವ ನಿದರ್ಶನ ಇದೆಯೇ ? ಆ ಕುಟುಂಬದ ಸದಸ್ಯರು ಎದುರಿಸುತ್ತಿರುವ ನಿರುದ್ಯೋಗ, ಆರ್ಥಿಕ ಸಂಕಷ್ಟ, ಹೆಣ್ಣು ಮಕ್ಕಳ ಖಾಸಗಿ ಸಮಸ್ಯೆಗಳು ಮತ್ತು ಹಿರಿಯರ ಆರೋಗ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಪರಿಹಾರೋಪಾಯ ಮಾರ್ಗಗಳನ್ನು ಸೂಚಿಸುವುದು ಸ್ಥಾಪಿತ ಕಾರ್ಮಿಕ ಸಂಘಗಳ ಆದ್ಯತೆ ಏಕೆ ಆಗಿಲ್ಲ ? ಇದು ಕಾರ್ಮಿಕ ಚಳುವಳಿಯ ಸಾಮಾಜಿಕ ಜವಾಬ್ದಾರಿ ಅನ್ನಿಸುವುದಿಲ್ಲವೇ ? ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರಾಗಿ, ಗುಡಿ ಕೈಗಾರಿಕೆಗಳಲ್ಲಿ, ಗೃಹೋದ್ಯೋಗಗಳಲ್ಲಿ ತೊಡಗಿರುವ ಲಕ್ಷಾಂತರ ಶ್ರಮಿಕರು ಈ ಚೌಕಟ್ಟಿನೊಳಗೆ ಸೇರುತ್ತಾರೆ. ಇದಕ್ಕೆ ಬೇಕಾದ ಆರ್ಥಿಕ-ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಹಿಮಾಲಯದ ಚಾರಣದಷ್ಟೇನೂ ಕಷ್ಟವಲ್ಲ .
ಸಂಘಟಿತ ವಲಯದ ಸಂಕಟಗಳು
ಸಂಘಟಿತ ಕಾರ್ಮಿಕ ವಲಯದ ಬಹುದೊಡ್ಡ ಬೇನೆ ಇರುವುದು ಫಲಾನುಭವಿ ವರ್ಗಗಳ ವರ್ತನೆಯಲ್ಲಿ. ಈ ಹಿತವಲಯಗಳನ್ನು ಪ್ರತಿನಿಧಿಸುವವರೇ ಇಂದು ನವ ಉದಾರವಾದದ ಉಪಾಸಕರಾಗಿದ್ದಾರೆ, ಹಿಂದುತ್ವವಾದದ ಮುಂದಾಳುಗಳೂ ಆಗಿದ್ದಾರೆ. 1970ರ ದಶಕದಲ್ಲಿ ಕೆಂಬಾವುಟದ ಆಶ್ರಯದಲ್ಲಿ ಬದುಕು ಕಟ್ಟಿಕೊಂಡ ಸಾರ್ವಜನಿಕ ಉದ್ದಿಮೆಗಳ ಇಡೀ ಪೀಳಿಗೆ ಇಂದು ಹಿಂದುತ್ವ ರಾಜಕಾರಣದ ಸಾರಥ್ಯ ವಹಿಸಿರುವುದು ಈ ವಿರೋಧಾಭಾಸಕ್ಕೆ ಸಾಕ್ಷಿ. ಕೆಲವೇ ಅಪವಾದಗಳನ್ನು ಕಾಣಬಹುದು. ಈ ವಲಯದಲ್ಲಿ ಅಂಬೇಡ್ಕರ್ ಉಪಾಸಕರೂ ಇರುವುದು ದುರದೃಷ್ಟಕರ. ಈ ವರ್ಗಗಳ ಪ್ರಭಾವಳಿಯಿಂದ ಮಿಲೆನಿಯಂ ಜಗತ್ತಿನ ಯುವ ಜನಾಂಗವನ್ನು ಹೊರತರಬೇಕಿದೆ. ಇದು ಸಿದ್ಧಮಾದರಿಗಳ ಹೋರಾಟ/ಚಳುವಳಿಗಳಿಂದ ಸಾಧ್ಯವಾಗುವುದಿಲ್ಲ. ಹೊಸ ಮಾದರಿಗಳನ್ನು ಶೋಧಿಸಬೇಕಿದೆ.
ಈ ಶೋಧ ಕಾರ್ಯಕ್ಕೆ ಮುನ್ನುಗ್ಗುವ ಮುನ್ನ ಕಾರ್ಮಿಕ ಸಂಘಗಳು ತಮ್ಮ ಪಿತೃಪ್ರಧಾನ ಮೌಲ್ಯಗಳಿಂದ ಮುಕ್ತವಾಗಬೇಕಿದೆ. ಶಾಶ್ವತ ಮತ್ತು ಹೊರಗಿನವರ ನಾಯಕತ್ವದಿಂದ ಬಿಡಿಸಿಕೊಳ್ಳಬೇಕಿದೆ.
ಬಾವುಟ, ಚಿಹ್ನೆ, ಬ್ಯಾನರ್‌ಗಳಿಗೆ ಅಂಟಿಕೊಳ್ಳದೆ, ಮುಕ್ತ ಆಲೋಚನೆಗೆ ತೆರೆದುಕೊಳ್ಳುವ ಸಂಕಲ್ಪ ಮಾಡಬೇಕಿದೆ. ಸೈದ್ಧಾಂತಿಕ ನೆಲೆಯನ್ನು ಶಿಥಿಲಗೊಳಿಸದೆ, ಎಲ್ಲರನ್ನೂ ಒಳಗೊಳ್ಳುವ ಪ್ರಾತಿನಿಧಿಕ ಮೌಲ್ಯಗಳನ್ನು ಒಪ್ಪಿಕೊಳ್ಳಬೇಕಿದೆ. ಆಗ ಭಾರತದ ದುಡಿಯುವ ವರ್ಗಗಳ ಕೆಂಪು ವಂದನೆಗಳು, ಜಿಂದಾಬಾದ್‌ಗಳು, ಎತ್ತಿಹಿಡಿದ ಮುಷ್ಟಿಗಳು ತಮ್ಮ ಅಂತಿಮ ಗುರಿಯಾದ, ಸಮಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಲು ನೆರವಾಗುತ್ತವೆ. ಇಲ್ಲವಾದಲ್ಲಿ ಇವೆಲ್ಲವೂ ಸಾಂಕೇತಿಕ-ಸಾಂದರ್ಭಿಕ ಆಚರಣೆಗಳಾಗಿಬಿಡುತ್ತವೆ.
ಇನ್ನು ಯೋಚಿಸಲು ಹೆಚ್ಚು ಕಾಲ ಉಳಿದಿಲ್ಲ. ಭಾರತ ಈಗಾಗಲೇ ಮಾರುಕಟ್ಟೆ ಆರ್ಥಿಕತೆ ಮತ್ತು ಬಲಪಂಥೀಯ ಫ್ಯಾಸಿಸ್ಟ್ ವಾತಾವರಣದಲ್ಲಿ ಸಿಲುಕಿದೆ. ಇದನ್ನು ಹೊರತರುವ ಶಕ್ತಿ ಇರುವುದು ದುಡಿಯುವ ವರ್ಗಗಳಲ್ಲಿ, ಮಹಿಳೆಯರಲ್ಲಿ, ಶೋಷಿತ ಸಮುದಾಯಗಳಲ್ಲಿ. ಈ ಸಂಕಲ್ಪ ಮಾಡಲು ಸಿದ್ಧಾಂತಗಳ ಅವಶ್ಯಕತೆ ಇಲ್ಲ. ಸಮಾಜಮುಖಿ ಚಿಂತನೆ ಮತ್ತು ನ್ಯಾಯಪರ-ಜನಪರ ಆಲೋಚನೆ ಇದ್ದರೆ ಸಾಕು. ಕಾರ್ಮಿಕರಲ್ಲಿ ಇದನ್ನು ಮೂಡಿಸುವ ದೃಷ್ಟಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸೋಣ. ಹುತಾತ್ಮರನ್ನು ನೆನೆಯೋಣ ಜೊತೆಗೆ ಅಂತರಾತ್ಮವನ್ನೂ ಪ್ರಶ್ನಿಸಿಕೊಂಡು ಅವಲೋಕನದ ಹಾದಿಯಲ್ಲಿ ಸಾಗೋಣ. ಒಂದುಗೂಡುವುದು ಸಾಂದರ್ಭಿಕ ಅನಿವಾರ್ಯತೆಗಾಗಿ, ಒಂದಾಗುವುದು ಶಾಶ್ವತ ಗುರಿ ತಲುಪುವುದಕ್ಕಾಗಿ. ನಮಗೆ ಯಾವುದು ಬೇಕು ?
ಸಮಸ್ತ ದುಡಿಯುವ ವರ್ಗಗಳಿಗೆ ಮೇ ದಿನದ ಶುಭಾಶಯಗಳು.
-೦-೦-೦-೦-





