ದೇಶವೇ ಕರೋನದಿಂದ ತತ್ತಿರಿಸುತ್ತಿರುವ ಇಂತಹ ಸಂದರ್ಭಗಳಲ್ಲಿ ದೆಹಲಿಯ ಗಾಜೀಪುರ್ ಗಡಿಯಲ್ಲಿ ಇಫ್ತಾರ್ ಕೂಟ ನಡೆದಿದ್ದು ಇದರಲ್ಲಿ ರೈತ ನಾಯಕ ರಾಕೇಶ್ ಟಿಕಾಯಿತ್ ಭಾಗಿಯಾಗಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿತ್ತು. ಈ ಕೂಟದಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲ, ಕರೋನ ಗೈಡ್ ಲೈನ್ ಉಲ್ಲಂಘನೆ ಮಾಡಿಲಾಗಿದೆ ಎಂಬ ಮಾತು ಕೂಡ ಕೇಳಿಬಂದಿತ್ತು.
ಈ ಕುರಿತು ಖಾಸಗಿ ಸುದ್ದಿಗೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯಿತ್, ” ಇಫ್ತಾರ್ ಕೂಟದಲ್ಲಿ ಜನರು ಅಂತರ ಕಾಪಾಡಿಕೊಂಡೇ ಕುಳಿತಿದ್ದಾರೆ. 50 ಜನರು ಒಟ್ಟು ಸೇರಬಹುದು ಎಂದು ದೆಹಲಿ ಸರ್ಕಾರವೇ ಹೇಳಿದೆ. ಕೂಟದಲ್ಲಿದ್ದದ್ದು ಕೇವಲ 22-35 ಮಂದಿ. ಯಾರೊಬ್ಬರೂ ಪರಸ್ಪರ ತಬ್ಬಿಕೊಳ್ಳುವುದಾಗಲೀ, ಕೈ ಕುಲುಕುವುದಾಗಲೀ ಮಾಡಿಲ್ಲ” ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕರೋನ ಪ್ರಕರಣ ಹೆಚ್ಚಾಗುತ್ತಿದ್ದರು ಕೇಂದ್ರ ಸರ್ಕಾರ ತಂದಿರುವ ಹೊಸ ರೈತರ ಕಾಯ್ದೆ ವಿರುದ್ಧ ಇನ್ನೂ ಪ್ರತಿಭಟನೆ ಮಾಡ್ತಿದಿರಲ್ಲ ಎಂಬ ಖಾಸಗಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ರೈತರು ತಮ್ಮ ಮನೆಗಳಲ್ಲಿಯೇ ಇದ್ದಾರೆ. ಅವರನ್ನು ಮನೆಗೆ ಹೋಗಿ ಎನ್ನಲು ನಾವು ಯಾರು? ಕೊರೊನಾ ಇಲ್ಲಿಂದ ಹರಡುತ್ತಿದೆಯೇ? ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದೇವೆ. ಈಗ ಇದು ನಮ್ಮ ಮನೆಯೇ. ಹಲವಾರು ರೈತರು ಲಸಿಕೆ ಪಡೆದುಕೊಂಡಿದ್ದಾರೆ. 2ನೇ ಲಸಿಕೆ ಪಡೆಯಲು ಕಷ್ಟ ಪಡುತ್ತಿದ್ದಾರೆ. ಇಲ್ಲೊಂದು ಲಸಿಕಾ ಕೇಂದ್ರ ಸ್ಥಾಪಿಸಲು ನಾವು ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ ಎಂದಿದ್ದಾರೆ.
ದೆಹಲಿಯಲ್ಲಿ ಕರೋನ ಸೋಂಕು ತೀವ್ರವಾಗಿ ಹರಡುತ್ತಿದ್ದು ಈ ಕುರಿತು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿತ್ತು. ತೀವ್ರವಾಗಿ ಹಬ್ಬುತ್ತಿರುವ ಕರೋನವನ್ನು ತಡೆಯಲು ಕರ್ಫ್ಯೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಕೇಜ್ರಿವಾಲ್ ಸರ್ಕಾರ ಆರು ದಿನಗಳ ಕಾಲ ಲಾಕ್ ಡೌನ್ ಮಾಡುವುದಾಗಿ ಘೋಷಿಸಿತು. ದೇಶಾದ್ಯಂತ ಸಕ್ರಿಯ ಸೋಂಕಿತರ ಸಂಖ್ಯೆ 25, 43,909 ವಾದರೆ ಸಾವನಪ್ಪಿದ ಒಟ್ಟು ಸಂಖ್ಯೆ 1,89,549 ಎಂದು ತಿಳಿದುಬಂದಿದೆ.