ಯುದ್ಧಗಳಾದಾಗ ಮನುಷ್ಯರು ಮಾತ್ರ ತೊಂದರೆಗೆ ಸಿಕ್ಕೋದಾ, ಅಲ್ಲಿನ ಪ್ರಾಣಿ ಪಕ್ಷಿಗಳಿಗೇನೂ ಆಗಲ್ವಾ?

ಯುದ್ಧದಿಂದ ಏನೆಲ್ಲ ಹಾನಿಯಾಗುತ್ತದೆ ಎಂಬ ಪ್ರಶ್ನೆಯನ್ನು ಯಾರಿಗಾದರೂ ಕೇಳಿ ನೋಡಿ. ಸಾವಿರಾರು ಮನುಷ್ಯರು ಸಾಯುತ್ತಾರೆ, ಮನೆ ಮಠಗಳು, ಆಸ್ಪತ್ರೆಗಳು, ಸರಕಾರಿ ಹಾಗೂ ಖಾಸಗಿ ಕಟ್ಟಡಗಳು ಹಾನಿಗೀಡಾಗುತ್ತವೆ… ಹೀಗೆ ಉತ್ತರಿಸುವವರ ಪಟ್ಟಿ ಉದ್ದಕ್ಕೆ ಹೋಗುತ್ತದೆ.

ಆದರೆ ಅವರ ಪಟ್ಟಿ ಅಷ್ಟೂ ಉದ್ದಕ್ಕೂ ಹೋಗುವುದಿಲ್ಲ. ಅಲ್ಲಿ ಪ್ರಾಣಿ, ಪಕ್ಷಿಗಳು, ಕೀಟ, ಕ್ರಿಮಿಗಳೂ ನಾಶವಾಗುತ್ತವೆ, ಅವುಗಳ ವಾಸಸ್ಥಳಗಳೂ ಧ್ವಂಸವಾಗುತ್ತವೆ.. ಎನ್ನುವಲ್ಲಿವರೆಗೆ!

ಏಕೆಂದರೆ, ನಾವು ಮನುಷ್ಯರು ತುಂಬ ಸ್ವಾರ್ಥಿಗಳು. ನಾವು ನಮ್ಮ ಊರು, ನಾಡು, ರಾಷ್ಟ್ರ, ಜಾತಿ, ಧರ್ಮ, ಭಾಷೆಗಳ ಗೋಡೆಗಳ ನಡುವೆ ಬದುಕುವವರು. ನಮಗೆ ನಮ್ಮದೆಂದು ಭಾವಿಸದ ಜಾತಿಯವನು, ಭಾಷೆಯವನು, ರಾಜ್ಯದವನು, ದೇಶದವನು ಅಂದರೆ ನಮಗೆ ಪ್ರೀತಿ ಉಕ್ಕುವುದಿಲ್ಲ. ಅವರಿಗೆ ತೊಂದರೆಯಾದಾಗ ಕರುಳು ಚುರ್ರೆನ್ನುವುದಿಲ್ಲ. ಅವನು ನಮ್ಮವನಲ್ಲ ಎಂಬ ಭಾವನೆ ಬೇರೂರಿರುವಾಗ ಹಾಗಾಗದಿರವುದು ಸಹಜ. ಇನ್ನು ಪ್ರಾಣಿ, ಪಕ್ಷಿಗಳನ್ನೂ ಒಳಗೊಂಡಂತೆ ಚಿಂತಿಸುವ, ತರ್ಕಿಸುವ, ಸ್ಪಂದಿಸುವ ಮನೋಭಾವವನ್ನು ಯಾವ ಶಾಲೆ, ಕಾಲೇಜುಗಳೂ ಕಲಿಸುವುದಿಲ್ಲ. ಹೀಗಾಗಿ ನಮ್ಮ ಮನಸ್ಸು ಸ್ಪಂದಿಸದಿದ್ದರೂ, ಯುದ್ಧದಿಂದ ಮಾನವಕುಲ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳಷ್ಟೇ ನಷ್ಟವಾಗುವುದು ನಮ್ಮ ಕಣ‍್ಣಿಗೆ ಕಾಣಿಸುತ್ತದೆ ಮತ್ತು ಮನಸ್ಸಿಗೆ ಗೋಚರಿಸುತ್ತದೆ.

ಯುದ್ಧದಿಂದ ಪ್ರಾಣಿ, ಪಕ್ಷಿಗಳೂ ಸಂತ್ರಸ್ತರು:

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮಾಡುವ ಯುದ್ಧಗಳು ನಮ್ಮ ಜತೆಗೆ ಈ ಭೂಮಿಯಲ್ಲಿ ವಾಸಿಸುತ್ತಿರುವ ಇತರ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳಿಗೂ ಹಾನಿ ಮಾಡುತ್ತವೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ. ಕಳೆದ ಮೂರು ದಶಕಗಳಿಂದ ಜಗತ್ತಿನ ನಾನಾ ಭಾಗದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷಗಳು ಜಗತ್ತಿನ ಭೂಮಂಡಲದ ಮುಕ್ಕಾಲು ಭಾಗದಲ್ಲಿ ವಾಸವಿರುವ ಪಕ್ಷಿಗಳು ಹಾಗೂ ಸಸ್ತನಿಗಳ ಆವಾಸ ಸ್ಥಾನಗಳಿಗೂ ಹರಡಿದೆ ಎನ್ನುವುದು ಕನ್ಸರ್ವೇಶನ್ ಲೆಟರ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನದ ಸಾರಾಂಶ.

ಅಂದರೆ ಎರಡು ದೇಶಗಳ ನಡುವೆ, ಎರಡು ನೀತಿಗಳ ನಡುವೆ ನಡೆಯುವ ಸಶಸ್ತ್ರ ಯುದ್ಧಗಳು, ಮಾನವಕುಲಗಳ ನಡುವಿನ ಸಂಘರ್ಷವು ಕೇವಲ ನಾಗರಿಕರ ನಡುವೆ ನಡೆಯುತ್ತಿಲ್ಲ. ಬದಲಿಗೆ ಅವುಗಳಿಗೇ ಗೊತ್ತಿಲ್ಲದಂತೆ ಆಯಾ ದೇಶಗಳಲ್ಲಿ ವಾಸವಿರುವ ಜೀವಜಂತುಗಳನ್ನೂ ಒಳಗೊಂಡಿದೆ. ಅದರಲ್ಲೂ ಯುದ್ಧಸಂತ್ರಸ್ತ ಪ್ರದೇಶಗಳಲ್ಲಿ ಹರಡಿರುವ ಸಸ್ತನಿಗಳು ಹಾಗೂ ಪಕ್ಷಿ ಪ್ರಭೇದಗಳ ಆವಾಸಸ್ಥಾನಗಳನ್ನೂ ಒಳಗೊಂಡಿದೆ. ಈ ಜೀವಿಗಳು ಅವುಗಳಿಗೇ ಅರಿವಿಲ್ಲದಂತೆ ಮನುಷ್ಯ ಸೃಷ್ಟಿಸಿದ ಯುದ್ಧ, ಸಂಘರ್ಷಗಳಿಗೆ ಬೆಲೆ ತೆರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅಪಾಯದಂಚಿನಲ್ಲಿರುವ ಜೀವಿಗಳಿಗೆ ಆಪತ್ತು:

ಸ್ವೀಡನ್ ನ ಉಪ್ಪ್ಸಲ ಕಾನ್ಫ್ಲಿಕ್ಟ್ ಡೇಟಾ ಪ್ರೋಗ್ರಾಂನವರು ಜಾಗತಿಕ ಸಶಸ್ತ್ರ ಸಂಘರ್ಷಗಳನ್ನು 1970 ರಿಂದಲೇ  ದಾಖಲಿಸುತ್ತ ಬಂದಿದೆ. ವಿಶೇಷವಾಗಿ,1989 ಹಾಗೂ 2018 ರ ನಡುವೆ ಜಗತ್ತಿನ ನಾನಾ ಕಡೆ ನಡೆದ 1.5 ಲಕ್ಷ ಸಂಘರ್ಷಗಳ (ಕನಿಷ್ಠ ಒಬ್ಬ ಮನುಷ್ಯ ಮೃತನಾದ ಸಂಘರ್ಷಗಳನ್ನೂ ಒಳಗೊಂಡು) ಅಧ್ಯಯನವನ್ನು ಮಾಡಲಾಗಿದೆ. ಹಾಗೂ ಸಂಶೋಧಕರ ತಂಡವು ಈ ಪ್ರದೇಶಗಳಲ್ಲಿನ ಭೂಮಿಗೆ ಸಂಬಂಧಿಸಿದ  ಹಾಗೂ ಸಸ್ತನಿಗಳ ಹಂಚಿಕೆಯ ನಕಾಶೆಯನ್ನು ರೂಪಿಸಿತ್ತು.

ಒಟ್ಟು 9,056 ಪಕ್ಷಿ ಪ್ರಭೇದಗಳು ಹಾಗೂ 4,291 ಸಸ್ತನಿ ಪ್ರಭೇದಗಳು ಈ ಸಂಘರ್ಷಗಳಿಗೆ ಸಾಕ್ಷಿಯಾಗಿರುವುದನ್ನು ಈ ಸಂಶೋಧನೆಯು ಬೆಳಕಿಗೆ ತಂದಿತ್ತು. ಅವುಗಳ ಪೈಕಿ 615 ಪ್ರಭೇದಗಳು ಸತತವಾಗಿ ಸಂಘರ್ಷಗಳಿಗೆ ತೆರೆದುಕೊಂಡಿರುವುದು ತಿಳಿದುಬಂದಿತ್ತು. ಇವುಗಳ ಪೈಕಿ ಶೆ.85 ರಷ್ಟು ಪಕ್ಷಿ ಹಾಗೂ ಸಸ್ತನಿಗಳ ಪ್ರಭೇದಗಳು ‘ಗಂಭೀರವಾಗಿ ಅಳಿವಿನಂಚಿನಲ್ಲಿರುವ’, ‘ಅಳಿವಿನಂಚಿನಲ್ಲಿರುವ’ ಹಾಗೂ ಕೆಂಪು ಪಟ್ಟಿಯ ‘ಅಪಾಯದಂಚಿನಲ್ಲಿರುವ’ ಸ್ಥಿತಿಯಲ್ಲಿವೆ. ಅಲ್ಲದೆ, ಇವುಗಳ ಹಂಚಿಕೆಯು ಸಶಸ್ತ್ರ ಸಂಘರ್ಷದ ಪ್ರದೇಶದಲ್ಲೇ ಇದೆ. ಈ ಸಂಘರ್ಷದ ಭೀತಿಯ ನಡುವೆಯೇ ಈ ಪ್ರದೇಶದಲ್ಲಿರುವ ಅಪಾಯಂಚಿನಲ್ಲಿರುವ ಪ್ರಾಣಿ, ಪಕ್ಷಿಗಳು ಬೇಟೆ, ಮರಗಳ ನಾಶ, ಕೃಷಿ ಚಟುವಟಿಕೆಗಳಂಥ ಬೆಳವಣಿಗೆಗಳಿಂದಲೂ ಪ್ರಭಾವಿತವಾಗಿ ತೊಂದರೆಗಳಾಗಿವೆ.

ಕಳೆದ ವರ್ಷ ಇದೇ ಸಂಶೋಧಕರ ತಂಡದವರು ಭಾರತದಲ್ಲಿನ ಸಂಘರ್ಷಗಳು ಹಾಗೂ ಪ್ರಭೇದಗಳ ಹಂಚಿಕೆಯನ್ನೂ ವಿವರವಾಗಿ ಪರೀಕ್ಷಿಸಿದ್ದರು.

ಭಾರತದಲ್ಲೂ ಸಾಕಷ್ಟು ಪ್ರಾಣಿ, ಪಕ್ಷಿಗಳಿಗೆ ಹಾನಿ:

ಈ ಅಧ್ಯಯನದಲ್ಲಿ ಭಾಗಿಯಾಗಿರುವ ಹಾಗೂ ವಿಜ್ಞಾನಿ ಅಭಿಷೇಕ್ ಹರಿಹರ್ ಅವರ ಪ್ರಕಾರ, ಭಾರತದಲ್ಲೂ ಅನೇಕ ಸಂಘರ್ಷಗಳು ಈ ಭಾಗದಲ್ಲಿರುವ ವನ್ಯಜೀವಿಗಳು ಹಾಗೂ ಸಂರಕ್ಷಿತ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಉದಾಹರಣೆಗೆ ಭಾರತ –ಪಾಕಿಸ್ತಾನ ನಡುವಿನ ಗಡಿ ಸಂಘರ್ಷವನ್ನು ಗಮನಿಸಿ. ಆ ಪ್ರದೇಶಗಳಲ್ಲಿನ ಅಳಿವಿನಂಚಿನಲ್ಲಿರುವ ಮಾರ್ಖೋರ್ (ಈ ಭಾಗದ ಕಾಡಿನಲ್ಲಿರುವ ಒಂದು ಜಾತಿಯ ದೊಡ್ಡ ಆಡು), ಜಾರ್ಖಂಡ್ ನ ಪಲಮುವ ಟೈಗರ್ ರಿಸರ್ವ್ ನಲ್ಲಿನ ಸಂರಕ್ಷಣಾ ಸಾಮರ್ಥ್ಯದ ಮೇಲೂ ಇಲ್ಲಿನ ಸಂಘರ್ಷಗಳು ಪ್ರಭಾವ ಬೀರಿವೆ.

ಅಲ್ಲದೆ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನ ಪ್ರದೇಶವು 1980 ರಿಂದ 2003 ರವರೆಗೆ ಬೋಡೋ ಮತ್ತಿತರ ಸಮುದಾಯಗಳ ಜನಾಂಗೀಯ ರಾಜಕೀಯ ಸಂಘರ್ಷದಿಂದ ಸಂತ್ರಸ್ತ ತಾಣವಾಗಿತ್ತು. ಈ ಭಾಗದಲ್ಲಿನ ಮೂಲಸೌಲಭ್ಯಗಳ ನಾಶ ಹಾಗೂ ಅದರಿಂದಾಗಿ ಇಲ್ಲಿ ವಾಸವಿರುವ ವನ್ಯಜೀವಿಗಳು ಹಾಗೂ ಅವುಗಳ ಆವಾಸಸ್ಥಾನಗಳ ಮೇಲೆ ಆದ ದುಷ್ಪರಿಣಾಮದಿಂದ ಈ ತಾಣವನ್ನು 1992 ರಿಂದ 2011 ರವರೆಗೆ ಅಪಾಯದಂಚಿನಲ್ಲಿರುವ ಪಟ್ಟಿಯಲ್ಲಿ ಯುನೆಸ್ಕೋ ವರದಿಯು ಸ್ಥಾನ ನೀಡಿತ್ತು.

ಆ ಸಂದರ್ಭದಲ್ಲಿ ಇಲ್ಲಿನ ಒಂದು ಕೊಂಬಿನ ಖಡ್ಗಮೃಗವು (ರೈನೋಸೆರೊಸ್ ಯೂನಿಕಾರ್ನಿಸ್) ಸ್ಥಳೀಯವಾಗಿ ಅಳಿದುಹೋದವು ಹಾಗೂ ಸ್ವಾಂಪ್ ಡೀರ್ ಎಂಬ ಜಿಂಕೆಗಳ ಪ್ರಭೇದದ ಸಂತತಿಯು ದೊಡ್ಡ ಮಟ್ಟದಲ್ಲಿ ಕ್ಷೀಣಿಸಿತು. 2003 ರ ನಂತರದಲ್ಲಿ ಸಂಘರ್ಷ ಕೊನೆಗೊಂಡಿದ್ದರಿಂದ ನಿಧಾನವಾಗಿ ಈ ಎರಡೂ ಪ್ರಭೇದಗಳನ್ನು ಮತ್ತೆ ಅಳಿವಿನಂಚಿನಿಂದ ಮೇಲೆ ತರಲು ಸಾಧ್ಯವಾಯಿತು ಎಂದು ಹರಿಹರ್ ವಿವರಿಸುತ್ತಾರೆ.

ಶಾಂತಿ ಪ್ರಕ್ರಿಯೆಯ ನಡುವೆಯೇ ಬೋಡೋ ಟೆರಿಟೋರಿಯಲ್ ಕೌನ್ಸಿಲ್, ಉದ್ಯಾನದ ಆಡಳಿತ ಮಂಡಳಿ, ಸ್ಥಳೀಯ ಜನಸಮುದಾಯಗಳು ಹಾಗೂ ವಿವಿಧ ಸರಕಾರೇತರ ಸಂಸ್ಥೆಗಳು ಮಾನಸ್ ಉದ್ಯಾನದಲ್ಲಿ ಜೀವಿಗಳ ಸಂರಕ್ಷಣೆಗೆ ಧಾವಿಸಿದ್ದರಿಂದ ಈ ಮಹತ್ವದ ಬೆಳವಣಿಗೆ ಸಾಧ್ಯವಾಯಿತು ಎನ್ನುವುದು ಹರಿಹರ್ ಅವರ ಅಭಿಮತ.

ಸಂಶೋಧನೆಗೆ ವಿವಿಧ ಸಂಸ್ಥೆಗಳ ಸಹಕಾರ:

ಹಾಗೆ ನೋಡಿದರೆ ಕನ್ಸರ್ವೇಶನ್ ಲೆಟರ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನದ ಹಿಂದೆ ಇಂಟರ್ ನ್ಯಾಶನಲ್ ಯೂನಿಯನ್ ಫಾರ್ ದ ಕನ್ಸರ್ವೇಶನ್ ಆಫ್ ನೇಚರ್ ಅಂಡ್ ನ್ಯಾಚುರಲ್ ರಿಸೋರ್ಸಸ್ (ಐಯುಸಿಎನ್) ನ ಸುದೀರ್ಘ ಶ್ರಮವಿದೆ. ಐಯುಸಿಎನ್ ಕೆಂಪುಪಟ್ಟಿಯಲ್ಲಿ ವರ್ಗೀಕರಿಸಿರುವ ಜಗತ್ತಿನ ಶೇ.70 ರಷ್ಟು ಅಪಾಯದಂಚಿನಲ್ಲಿರುವ ಉಭಯವಾಸಿಗಳು, ಪಕ್ಷಿಗಳು ಹಾಗೂ ಸಸ್ತನಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾನವ ನಿರ್ಮಿತ ಸಂಘರ್ಷಗಳ ಬಲಿಪಶುಗಳಾಗುತ್ತಿವೆ ಎಂಬುದು ಈ ವರದಿಯ ಮಹತ್ವದ ಅಂಶವಾಗಿದೆ.

ಈ ಅಧ್ಯಯನವನ್ನು ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ-ಇಂಡಿಯಾ(WCS-India), ನೇಚರ್ ಕನ್ಸರ್ವೇಶನ್ ಫೌಂಡೇಶನ್ (NCF), ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಹಾಗೂ ಪಂಥ್ರಿಯಾದ ವಿಜ್ಞಾನಿಗಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಸಶಸ್ತ್ರ ಸಂಘರ್ಷಗಳು ನಡೆಯುತ್ತಿರುವ ಪ್ರದೇಶಗಳ ನಕಾಶೆಗಳು, ಪ್ರಭೇದಗಳ ಭೌಗೋಳಿಕ ವ್ಯಾಪ್ತಿಯ ನಕಾಶೆಗಳು ಹಾಗೂ ಜಗತ್ತಿನೆಲ್ಲೆಡೆಯ ಭೂಪ್ರದೇಶದ ಸಸ್ತನಿ ಹಾಗೂ ಪಕ್ಷಿ ಪ್ರಭೇದಗಳಿಗೆ ಇರುವ ಅಪಾಯಗಳ ಮಾಹಿತಿಗಳನ್ನು ಆಧರಿಸಿ ಈ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

ಈ ಅಧ್ಯಯನದ ಪ್ರಕಾರ, ಭಾರತದ ಜೀವವೈವಿಧ್ಯವೂ ಈ ವಿಚಾರದಲ್ಲಿ ಪರಿಣಾಮಕ್ಕೊಳಗಾಗಿದೆ. ಮುಖ್ಯವಾಗಿ ಭಾರತದ ಉತ್ತರ, ಪೂರ್ವ ಹಾಗೂ ಈಶಾನ್ಯ ಭಾಗಗಳು ಸಶಸ್ತ್ರ ಸಂಘರ್ಷಗಳಿಂದ ನೊಂದಿವೆ. ಈ ಪ್ರದೇಶಗಳಲ್ಲಿರುವ ಜೀವ ಪ್ರಭೇದಗಳೂ ಕೂಡ ಅಷ್ಟೇ ಪ್ರಭಾವಕ್ಕೆ ತುತ್ತಾಗಿದೆ. ಬಹುಶಃ ಈ ವರದಿಯಿಂದಾಗಿ ಮನುಷ್ಯರು ಸಶಸ್ತ್ರ ಸಂಘರ್ಷಗಳಿಂದ ಆಗುವ ನಷ್ಟವನ್ನು ನೋಡುವ ಪರಿ ಭವಿಷ್ಯದಲ್ಲಿ ಬದಲಾಗಲಿದೆ. ಬದಲಾಗುವ ಮನಸ್ಸಿದ್ದರೆ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...