ರಾಜ್ಯದ ಯಶಸ್ವಿ ಉದ್ಯಮಿ VRL ಗ್ರೂಪ್ಸ್ ನ ಸಂಸ್ಥಾಪಕ ವಿಜಯ್ ಸಂಕೇಶ್ವರ್ ಅವರು ಸಂಕ್ರಾಂತಿಯ ಈ ಶುಭ ದಿನದಂದು ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ VRL ಟ್ರಾವೆಲ್ಸ್ ಮತ್ತು ರೋಡ್ ಲೈನ್ಸ್ ಮೂಲಕ ಕೇವಲ ರಾಜ್ಯ ಮಾತ್ರವಲ್ಲದೆ ದೇಶದ ಮಟ್ಟದಲ್ಲಿ ಉದ್ಯಮ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಖ್ಯಾತಿ ಅವರ ಸಂಸ್ಥೆಗಿದೆ.

VRL ಗ್ರೂಪ್ಸ್ ನ ಸಾವಿರಾರು ಬಸ್ ಗಳು, ಟ್ರಕ್ ಗಳು, ಸೇರಿದಂತೆ ಸಾವಿರಾರು ವಾಹಳಗಳು ಸಾರಿಗೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಈ ಮಧ್ಯೆ ಈಗ ನೆಲದಿಂದ ಆಗಸಕ್ಕೆ ಹಾರುವ ಕಡೆಗೆ ವಿಜಯ ಸಂಕೇಶ್ವರ್ ಅವರು ಹೆಜ್ಜೆಯಿಟ್ಟಿದ್ದಾರೆ. ತಮ್ಮದೆಯಾದ ನೂತನ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.

ಹೌದು, ಮಕರ ಸಂಕ್ರಮಣದ ಶುಭ ದಿನದಂದು ವಿಜಯ ಸಂಕೇಶರ್, ಪುತ್ರ ಆನಂದ್ ಸಂಕೇಶ್ವರ್ ಸೇರಿದಂತೆ ಕುಟುಂಬ ಹಾಗೂ ಉದ್ಯಮದ ಸ್ನೇಹಿತರು ಜೊತೆಗೂಡಿ ತಮ್ಮ ನೂತನ ವಿಮಾನಯಾನ ಸಂಸ್ಥೆಯ ಮೊಟ್ಟ ಮೊದಲ ವಿಮಾನವನ್ನು ಬರಮಾಡಿಕೊಂಡಿದ್ದಾರೆ.

Gulf Stream G150 ಎಂಬ ಹೊಸ ವಿಮಾನವನ್ನು ಖರೀದಿಸಿರುವ VRL ಬಳಗ ಇಂದು ತಮ್ಮ ನೂತನ ಉದ್ಯಮಕ್ಕೆ ಚಾಲನೆ ನೀಡಿದ್ದು, ವಿಮಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಪಟ್ಟಿದ್ದಾರೆ.

ಆ ಮೂಲಕ ಕನ್ನಡಿಗರಾಗಿ, ಕರ್ನಾಟಕದ ಉದ್ಯಮಿಯಾಗಿ ದೇಶದ ಮಟ್ಟದಲ್ಲಿ ಕರುನಾಡಿಗೆ ಕೀರ್ತಿ ತರುವ ವಿಮಾನಯಾನ ಉದ್ಯಮವನ್ನು ಸ್ಥಾಪಿಸಿರುವ ವಿಜಯನಸಂಕೇಶ್ವರ ಅವರಿಗೆ ಕನ್ನಡಿಗರು ಶುಭಕೋರಿದ್ದಾರೆ.