ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ ಈ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಶನಿವಾರ ರಾತ್ರಿ ನಗರಕ್ಕೆ ಆಗಮಿಸಿ, ಇಂದು ಸರಣಿ ಸಭೆಗಳು, ಭೇಟಿಗಳನ್ನು ಮಾಡುತ್ತಿರುವ ನಬಿನ್ ಪಕ್ಷದ ಎಲ್ಲ ವರ್ಗದ ನಾಯಕರ ಸಭೆ ನಡೆಸಿ, ಪ್ರಮುಖ ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ. ನೀವು ಇನ್ನು ಮುಂದೆ ಎಲ್ಲೋ ಕುಳಿತು ಪಕ್ಷ ಸಂಘಟನೆಯ ಮಾತನಾಡುವ ಬದಲು ಗ್ರೌಂಡ್ ಲೆವೆಲ್‌ನಲ್ಲಿ ಜನರನ್ನು ಭೇಟಿಯಾಗಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಾಕೀತು ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ಆದದ್ದ ಆಯಿತು, ಇನ್ನು ಮುಂದೆ ಕಡ್ಡಾಯವಾಗಿ ಎಲ್ಲ ಶಾಸಕರು ಹಾಗೂ ಸಂಸದರು ತಳಮಟ್ಟದಲ್ಲಿನ ಜನರನ್ನು ಭೇಟಿಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಅರಿವು ಮೂಡಿಸಬೇಕು. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು. ಹೋರಾಟ, ಸಂಘಟನೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜೊತೆ ಜೊತೆಗೆ ಎಲ್ಲರನ್ನೂ ಕರೆದುಕೊಂಡು ಹೋಗಬೇಕು ಎಂದು ನಬಿನ್ ಸೂಚಿಸಿದ್ದಾರೆ.
ಇದನ್ನೂ ಓದಿ : ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್! ಈ ನಿಯಮ ಕಡ್ಡಾಯ
ಸಂಘಟನೆಯ ವಿಚಾರದಲ್ಲಿ ಬೂತ್ ಮಟ್ಟ, ಶಕ್ತಿ ಕೇಂದ್ರ, ಮಂಡಲ, ಮಹಾ ಮಂಡಲ, ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಹೋರಾಟ ನಡೆಸಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪಶ್ಚಿಮ ಬಂಗಾಳ ಮಾದರಿಯಲ್ಲಿ ಕಾರ್ಯಕರ್ತರು, ನಾಯಕರು ಗ್ರೌಂಡ್ಗಿಳಿದು ಸಂಘಟನೆ, ಹೋರಾಟ ಮಾಡಬೇಕು ಎಂದು ಸದ್ಯ ಇರುವ ಪಕ್ಷದ ಸ್ಥಿತಿಯ ಬಗ್ಗೆ ನಬಿನ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಜನರಲ್ಲಿ ಮೂಡಿಸಿದ್ದ ವಿಶ್ವಾಸ ಹುಸಿಯಾಗಿದೆ, ಜನರ ನಂಬಿಕೆ ಉಳಿಸಲು ವಿಫಲವಾಗಿದೆ. ಹೀಗಾಗಿ ನೀವು ಗಟ್ಟಿಯಾಗಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿ, ಇಲ್ಲಿನ ಪ್ರತಿಯೊಬ್ಬ ಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಹ ಭ್ರಷ್ಟಾಚಾರದ ಆರೋಪದಿಂದ ಮುಕ್ತರಾಗಿಲ್ಲ. ಜನರ ಬದುಕನ್ನು ಹಸನು ಮಾಡುವ ಭರವಸೆ ಕೊಟ್ಟ ಕಾಂಗ್ರೆಸ್ ಬೆಲೆ ಏರಿಕೆ ಮೂಲಕ ಜನರ ಬದುಕು ದುಸ್ತರವಾಗಿಸಿದೆ ಎಂದು ನಬಿನ್ ವಾಗ್ದಾಳಿ ನಡೆಸುವ ಮೂಲಕ ಪಕ್ಷದ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ.
ಕೇವಲ ಗ್ಯಾರಂಟಿ ಪ್ರಚಾರದಲ್ಲಿ ತೊಡಗಿದ್ದಾರೆ. ಜನರ ಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಸರ್ಕಾರದ ನಡೆಯಿಂದ ಯುವಕರು ಹತಾಶರಾಗಿದ್ದಾರೆ, ರೈತರು ಸಂಕಷ್ಟದಲ್ಲಿದ್ದಾರೆ. ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ. ಈ ಎಲ್ಲಾ ವೈಫಲ್ಯಗಳು ಸ್ಪಷ್ಟವಾಗಿವೆ. ಕೇವಲ ವೈಫಲ್ಯಗಳ ಜೊತೆಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಿಂದ ಬಿಜೆಪಿ ನಾಯಕರು ಹೊರಬರಬೇಕು. ಈಗಾಗಲೇ ತಮಿಳುನಾಡಿನ ರಾಜಕೀಯ ಸ್ಥಿತಿ ನಿಮ್ಮೆದುರು ಇದೆ ಎಂದು ಟಿವಿಕೆಯ ಗೆಲುವಿನ ಪರಿಯನ್ನು ಉಲ್ಲೇಖಿಸಿ ಚಾಟಿ ಬೀಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ದೊರಕಿದೆ.
ಯಾವುದೇ ಕಾರಣಕ್ಕೂ ಇಲ್ಲಿನ ಬಿಜೆಪಿ ನಾಯಕರು ಪಕ್ಷ ಸಂಘಟನೆಯಲ್ಲಿ ಹಿಂದೆ ಉಳಿಯಬಾರದು. ಸರ್ಕಾರ ನಡೆಸುತ್ತಿರುವ ನಾಯಕರು ಸರ್ಕಾರವನ್ನು ತಮಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಲ್ಲಿನ ಸರ್ಕಾರ ದೆಹಲಿ ಕಾಂಗ್ರೆಸ್‌ನ ಎಟಿಎಂ ಆಗಿದೆ ಎಂದು ದೂರಿದ್ದಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ರಾಜ್ಯ ನಾಯಕರಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.





