ದೆಹಲಿ: ದೇಶದಲ್ಲಿ ಇತ್ತೀಚೆಗಷ್ಟೇ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಈ ಮಧ್ಯೆ ಮಧ್ಯಪ್ರದೇಶದ (Madhya Pradesh) ಭೋಪಾಲ್ ನ ಬೆರಾಸಿಯಾದಲ್ಲಿ ಲೋಕಸಭೆ ಚುನಾವಣೆ (Lok Sabha Election) ವೇಳೆ ಅಪ್ರಾಪ್ತ ಬಾಲಕನೊಬ್ಬ ಮತ ಚಲಾಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿರುವ ಅಪ್ರಾಪ್ತ ಬಿಜೆಪಿಯ (BJP) ಪಂಚಾಯತ್ ನಾಯಕ ವಿನಯ್ ಮೆಹರ್ ಅವರ ಪುತ್ರ ಎನ್ನಲಾಗಿದೆ. ಮತದಾನದ ಸಂದರ್ಭದಲ್ಲಿ ತಂದೆಯೊಂದಿಗೆ ತೆರಳಿ ಆತ ಮತ ಚಲಾಯಿಸಿದ್ದಾನೆ. ಬಾಲಕ ಇವಿಎಂ ಬಟನ್ ಒತ್ತಿ ಮತ ಚಲಾಯಿಸುತ್ತಿರುವುದನ್ನು ಆತನ ಅಪ್ಪನೇ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ನಂತರ ಇದನ್ನು ಪೋಸ್ಟ್ ಮಾಡಲಾಗಿದೆ.
ಕಾಂಗ್ರೆಸ್ ನಾಯಕ ಕಮಲ್ ನಾಥ್ ಇದನ್ನು ಟೀಕಿಸಿದ್ದಾರೆ. ಮೊಬೈಲ್ ಫೋನ್ ನ್ನು ಮತಗಟ್ಟೆಗೆ ಹೇಗೆ ಅನುಮತಿಸಲಾಯಿತು? ಬಾಲಕನಿಗೆ ತನ್ನ ತಂದೆಯೊಂದಿಗೆ ಮತಗಟ್ಟೆಗೆ ಹೋಗಲು ಹೇಗೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಈಗ ಮೂಡಿದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.