• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

2024- ಬಿಚ್ಚಿಟ್ಟ ವಾಸ್ತವವೂ ಕಲಿಯಬೇಕಾದ ಪಾಠಗಳೂ

ನಾ ದಿವಾಕರ by ನಾ ದಿವಾಕರ
January 2, 2025
in ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ
0
2024- ಬಿಚ್ಚಿಟ್ಟ ವಾಸ್ತವವೂ ಕಲಿಯಬೇಕಾದ ಪಾಠಗಳೂ
Share on WhatsAppShare on FacebookShare on Telegram

ADVERTISEMENT

—–ನಾ ದಿವಾಕರ—-


ಸಾಗಿಬಂದ ಹಾದಿಯ ವೈಫಲ್ಯಗಳಿಂದ ಕಲಿಯಬೇಕಿರುವುದನ್ನು ಸಮಾಜ ಗಮನಿಸುತ್ತಿರಬೇಕು


ಕಳೆದು ಹೋದ ಸಮಯ ಮತ್ತು ಸಾಗಿಬಂದ ಹಾದಿ ಇವೆರಡೂ ಮುಂದೆ ನಡೆಯುವ ಹಾದಿಯ ಆತ್ಮಾವಲೋಕನದ ಗುರುತುಗಳಾಗಬೇಕು. ಇದು ಚರಿತ್ರೆಗೆ ಎಷ್ಟು ಅನ್ವಯಿಸುವುದೋ ಅಷ್ಟೇ ಪ್ರಮಾಣದಲ್ಲಿ ವರ್ತಮಾನದ ಸಂದರ್ಭಕ್ಕೂ ಅನ್ವಯಿಸುವ ಒಂದು ನಿಯಮ. ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದ ನಡುವೆ ಕಳೆದ ವರ್ಷದಲ್ಲಿ ಸಮಾಜ ಎದುರಿಸುವ ವ್ಯತ್ಯಯ, ಕೊರತೆ ಮತ್ತು ಪಲ್ಲಟಗಳನ್ನು ಮರೆತುಹೋದರೆ, ಭವಿಷ್ಯದ ನಮ್ಮ ಚಟುವಟಿಕೆಗಳು ಅರ್ಥಹೀನವಾಗಿಬಿಡುತ್ತವೆ. ಚಾರಿತ್ರಿಕವಾಗಿ ನೋಡಿದಾಗ ಭಾರತೀಯ ಸಮಾಜ ಈ ರೀತಿ ತನ್ನ ಗತ ದಿನಗಳಿಂದ ಕಲಿಯಬೇಕಿದ್ದ ಪಾಠಗಳನ್ನು ಕಲಿತಿದ್ದರೆ ಇಂದು ಇನ್ನೂ ಹೆಚ್ಚು ಆರೋಗ್ಯಕರ ಸಮಾಜವನ್ನು ಕಾಣಬಹುದಿತ್ತು. ಆದರೆ ಭಾರತೀಯ ಸಮಾಜವನ್ನು ನಿರ್ದೇಶಿಸಿ, ನಿಯಂತ್ರಿಸುವ ಸಾಂಪ್ರದಾಯಿಕ ಚಿಂತನಾಧಾರೆಗಳು ಇದಕ್ಕೆ ಅವಕಾಶವನ್ನೇ ನೀಡದಂತೆ ʼ ಭವ್ಯ ಪರಂಪರೆ ʼಯ ಅಮಲಿನಲ್ಲಿ ಸದಾ ತೇಲುತ್ತಿರುತ್ತದೆ.
ಹಾಗಾಗಿಯೇ ಭಾರತ ಸವೆದ ಹಾದಿಯ ವ್ಯತ್ಯಯಗಳಿಂದ ಪಾಠ ಕಲಿಯದೆ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ದಿನದಿಂದ ದಿನಕ್ಕೆ ಹಿಂದಕ್ಕೆ ಚಲಿಸುತ್ತಿದೆ. ಆದರೆ 21ನೇ ಶತಮಾನದ ಕಾಲು ಭಾಗದ ಸಮಯವನ್ನು ದಾಟಿರುವ ಡಿಜಿಟಲ್‌ ಯುಗದ ಭಾರತ ಮತ್ತೆ ಮತ್ತೆ ಈ ತಪ್ಪು ಮಾಡಕೂಡದು. ಈ ಎಚ್ಚರಿಕೆ ನಾಗರಿಕರಲ್ಲಿ ಇರುವಷ್ಟೇ, ನಾಗರಿಕ ವಲಯದಲ್ಲಿ ಜನಸಮುದಾಯಗಳಿಗೆ ಹೊಸ ದಾರಿ ತೋರಲು ಅಹರ್ನಿಶಿ ಶ್ರಮಿಸುತ್ತಿರುವ ಎಲ್ಲ ಜನಪರ ಸಂಘಟನೆ, ಹೋರಾಟಗಳಲ್ಲೂ ಇರಬೇಕು. ನಮ್ಮ ಜನಪರ ಅಥವಾ ಪ್ರಗತಿಪರ ಹೋರಾಟಗಳೂ ಸಹ ಈ ನಿಟ್ಟಿನಲ್ಲಿ ವಿಫಲವಾಗುತ್ತಲೇ ಬಂದಿವೆ. ತತ್ಪರಿಣಾಮವಾಗಿ ಹೋರಾಟಗಳ ಸ್ವರೂಪ ಬದಲಾಗುತ್ತಿಲ್ಲ, ಪ್ರತಿಭಟನೆಗಳ ಲಕ್ಷಣಗಳು ರೂಪಾಂತರಗೊಳ್ಳುತ್ತಿಲ್ಲ.

ಐದು ದಶಕಗಳ ಚರಿತ್ರೆ ಇರುವ ದಲಿತ, ಎಡಪಂಥೀಯ ಹೋರಾಟಗಳೂ ಸವೆದ ಹಾದಿಯನ್ನೇ ಇಂದಿಗೂ ಅನುಸರಿಸುತ್ತಿವೆ. ಈ ನಿಟ್ಟಿನಲ್ಲಿ ಗಂಭೀರ ಸ್ವ ವಿಮರ್ಶೆ ಅಗತ್ಯವಾಗಿದೆ.
2025ಕ್ಕೆ ಕಾಲಿಟ್ಟಿರುವ ಭಾರತೀಯ ಸಮಾಜಕ್ಕೆ ಕಳೆದ ಹತ್ತು ವರ್ಷಗಳ ಬಹುಸಂಖ್ಯಾವಾದಿ ಆಳ್ವಿಕೆ ಮತ್ತು ಇದರ ಸುತ್ತಲಿನ ಅಪ್ರಜಾಸತ್ತಾತ್ಮಕ ಸಾಂಸ್ಥಿಕ ಬೆಳವಣಿಗೆಗಳು ಈ ವೇಳೆಗಾಗಲೇ ಸಮಾಜವನ್ನು ಜಾಗೃತಗೊಳಿಸಬೇಕಿತ್ತು. ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕ ನೆಲೆಯಲ್ಲಿ ತಳಸಮಾಜವಷ್ಟೇ ಅಲ್ಲದೆ ಮಧ್ಯಮ ಸ್ತರದ ಹಿತವಲಯವೂ ಸಹ ಈ ಅವಧಿಯಲ್ಲಿ ಹಲವು ವ್ಯತ್ಯಯಗಳಿಗೆ ಸಾಕ್ಷಿಯಾಗಿದೆ. ಸಾಂವಿಧಾನಿಕ ಫಲಾನುಭವಿ ಸಮಾಜವೊಂದು ಆಳ್ವಿಕೆಯ ಕೇಂದ್ರಗಳಿಗೆ ಹತ್ತಿರವಾಗುವ ಮೂಲಕ, ಅವಕಾಶವಂಚಿತ-ಶೋಷಿತ ಸಮಾಜವನ್ನು ನಿರ್ಲಕ್ಷಿಸುತ್ತಲೇ ಬಂದಿರುವುದನ್ನೂ ಈ ಅವಧಿಯಲ್ಲಿ ಕಾಣಬಹುದು. ಇದಕ್ಕೆ ಸೈದ್ಧಾಂತಿಕ ನೆಲೆಗಳಲ್ಲಿ ಕಾರಣಗಳನ್ನು ಶೋಧಿಸುತ್ತಲೇ ಇದ್ದರೂ, ವರ್ತಮಾನದ ವಾಸ್ತವದ ನೆಲೆಗಟ್ಟಿನಲ್ಲಿ ಪರ್ಯಾಯ ಚಿಂತನೆಗಳನ್ನು ರೂಪಿಸಲಾಗುತ್ತಿಲ್ಲ.
ಸವೆದ ಹಾದಿಯನ್ನು ನೆನೆಯುತ್ತಾ

Priyankh kharge : ಸರ್ ನಿಮ್ಮನ್ನ ರಂ..ಮಗ ಅಂತ ಬಿಜೆಪಿಯವರು ಬೈತಿದ್ದಾರೆ #pratidhvani


ಈ ನಿಟ್ಟಿನಲ್ಲಿ ವಿಶೇಷವಾಗಿ ಶೋಷಿತ ತಳಸಮುದಾಯಗಳಿಗೆ ಮತ್ತು ನಿರಂತರ ದೌರ್ಜನ್ಯಗಳಿಗೀಡಾಗುತ್ತಿರುವ ಮಹಿಳಾ ಸಂಕುಲ, ಆದಿವಾಸಿಗಳು, ಅಸ್ಪೃಶ್ಯ ಸಮುದಾಯಗಳಿಗೆ ಹಾಗೂ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಅಲ್ಪಸಂಖ್ಯಾತರಿಗೆ ಮತ್ತು ಎಲ್ಲ ಅವಕಾಶವಂಚಿತರಿಗೆ 2024ರ ಕೆಲವು ಬೆಳವಣಿಗೆಗಳು ಕಣ್ತೆರೆಸಬೇಕಿದೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಭಾರತ ಸಾಗುತ್ತಿರುವ ಹಾದಿ ದೇಶವನ್ನು ಮೂಲ ಸಾಂವಿಧಾನಿಕ ಆಶಯಗಳಿಂದ ದೂರ ಕರೆದೊಯ್ಯುತ್ತಿರುವ ಅಪಾಯದ ನಡುವೆಯೇ ಸಾಂಸ್ಕೃತಿಕವಾಗಿ ಶತಮಾನಗಳ ಬಹುಸಾಂಸ್ಕೃತಿಕ ನೆಲೆಗಳನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸುತ್ತಿರುವ ಮತೀಯವಾದಿ ಬಹುಸಂಖ್ಯಾವಾದದ ಬಲವರ್ಧನೆಯ ಅಪಾಯವನ್ನೂ 2024 ನಮ್ಮ ಮುಂದೆ ತೆರೆದಿಟ್ಟಿದೆ. ಹಿಂತಿರುಗಿ ನೋಡುವ ತಾಳ್ಮೆ ಮತ್ತು ವ್ಯವಧಾನ ನಮ್ಮೊಳಗಿದ್ದರೆ ನಾಳೆಗಳು ಉತ್ತಮವಾಗಿರುತ್ತವೆ.

ರಾಜಕೀಯವಾಗಿ .2024 ಒಂದು ರೀತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಒಳಸೂಕ್ಷ್ಮಗಳನ್ನು ಶ್ರೀಸಾಮಾನ್ಯನ ಮುಂದೆ ತೆರೆದಿಟ್ಟ ವರ್ಷ. ಹತ್ತು ವರ್ಷಗಳ ಆಳ್ವಿಕೆಯ ನಂತರ ತನ್ನ ಸಾಂವಿಧಾನಿಕ ಅಧಿಕಾರ ಪೀಠ ಇನ್ನು ಶಾಶ್ವತ ಎಂದೆಣಿಸಿದ್ದ ಬಿಜೆಪಿ ಮತ್ತು ಅದರ ನಾಯಕರಿಗೆ ಭಾರತದ ಮತದಾರ ತಕ್ಕ ಉತ್ತರ ನೀಡಿದ ವರ್ಷ 2024. “ ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌” ಎಂಬ ಘೋಷಣೆಯೊಂದಿಗೆ ಭಾರತದ ಸಂವಿಧಾನವನ್ನೂ ಒಳಗೊಂಡಂತೆ ದೇಶದ ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ ನಕ್ಷೆಯನ್ನೇ ಬದಲಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಬಲಪಂಥೀಯ ಹಿಂದುತ್ವ ರಾಜಕಾರಣಕ್ಕೆ ಭಾರತದ ಶ್ರೀಸಾಮಾನ್ಯರು ಪ್ರಜಾಪ್ರಭುತ್ವದ ಅಂತಃಸತ್ವವನ್ನು ಮನದಟ್ಟುಮಾಡಿದ್ದಾರೆ. ಪುನರಾಯ್ಕೆಯಾಗಿದ್ದರೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಹಟಮಾರಿ ಧೋರಣೆ ಮತ್ತು ಏಕಾಧಿಪತ್ಯದ ಮನಸ್ಥಿತಿಯಿಂದ ಹೊರಬರುವುದು ಅವಶ್ಯವಾಗಿದೆ.


ಹಾಗೆಯೇ ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯು ಸೃಷ್ಟಿಸುತ್ತಿರುವ ಅಸಮಾನತೆಗಳ ಮೂಲೋತ್ಪಾಟನೆಯ ಆಲೋಚನೆಯನ್ನೇ ಮಾಡದೆ ಕೇವಲ ಕಲ್ಯಾಣ ಯೋಜನೆಗಳ ಮೂಲಕವೇ ಮತದಾರರನ್ನು ಸೆಳೆಯಬಹುದು ಎನ್ನುವುದನ್ನೂ ಜನರು ನಿರೂಪಿಸಿದ್ದಾರೆ. ಜಾರ್ಖಂಡ್‌, ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶಗಳು ಇದನ್ನೇ ಸೂಚಿಸುತ್ತವೆ. ಮತ್ತೊಂದು ಆಯಾಮದಲ್ಲಿ ನೋಡಿದಾಗ, ದೇಶದ ಸಾಂವಿಧಾನಿಕ-ಪ್ರಜಾಸತ್ತಾತ್ಮಕ ಮೌಲ್ಯಗಳು ಅಧೋಗತಿಗಿಳಿದಿದ್ದು, ಬಹುಸಂಖ್ಯಾತ ಜನತೆ ಬಡತನ, ನಿರುದ್ಯೋಗ, ನಿರ್ವಸತಿ, ಹಸಿವು ಮತ್ತು ಜಾತಿ-ಲಿಂಗತ್ವ ದೌರ್ಜನ್ಯಗಳು ಪರಾಕಾಷ್ಠೆ ತಲುಪಿದ್ದರೂ, ಮತದಾರರಿಗೆ ಒಂದು ಪ್ರಜಾಸತ್ತಾತ್ಮಕ ರಾಜಕೀಯ ಪರ್ಯಾಯ ಕಾಣದೆ ಹೋದುದನ್ನು 2024ರ ಲೋಕಸಭಾ ಚುನಾವಣೆಗಳು ಬಿಂಬಿಸಿವೆ.


ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯು ಸೃಷ್ಟಿಸುತ್ತಿರುವ ಅಸಮಾನತೆಗಳು ತಳಸಮಾಜದಲ್ಲಿ ಅಸಮಾಧಾನಗಳನ್ನು ಹುಟ್ಟುಹಾಕಿದ್ದರೂ ಇದು ಸೃಜಿಸಬೇಕಾದ ಆಕ್ರೋಶವಾಗಲೀ, ಹತಾಶೆಯಾಗಲೀ ರಾಜಕೀಯ ಪ್ರತಿರೋಧವಾಗಿ ಪರಿವರ್ತನೆಯಾಗದಿರುವುದನ್ನೂ 2024 ನಿರೂಪಿಸಿದೆ. ಈ ಅಸಮಾನತೆಯನ್ನು ನೀಗಿಸಿ, ಸುಸ್ಥಿರ ಬದುಕು ಸಾಧಿಸುವ ಹಾದಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಲ್ಯಾಣ ಆರ್ಥಿಕತೆಯ ಯೋಜನೆಗಳೇ ಅಂತಿಮ ಆಯ್ಕೆಯೇನೋ ಎನ್ನುವ ಮಟ್ಟಿಗೆ ಚುನಾವಣಾ ರಾಜಕಾರಣವು ತಳಸಮಾಜದ ಮೇಲೆ ಮಂಕುಬೂದಿ ಎರಚಿದೆ. ಮುಖ್ಯವಾಹಿನಿಯ ಎಲ್ಲ ಪಕ್ಷಗಳೂ ತಮ್ಮ ಬಂಡವಾಳಿಗ ಲಕ್ಷಣವನ್ನು (Bourgeous Character) ಮತ್ತೊಮ್ಮೆ ದೃಢೀಕರಿಸಿರುವುದಕ್ಕೆ 2024 ಸಾಕ್ಷಿಯಾಗಿದೆ. ಈ ಹಾದಿಯಲ್ಲೇ ಬಂಡವಾಳಶಾಹಿ ಅರ್ಥವ್ಯವಸ್ಥೆಯು ಹೇಗೆ ಆಡಳಿತ-ಹಣಕಾಸು ಭ್ರಷ್ಟಾಚಾರವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ಒಳಗಿಂದೊಳಗೇ ಪೋಷಿಸಿಕೊಂಡು ಬರುತ್ತದೆ ಎನ್ನುವುದನ್ನೂ 2024 ನಿರೂಪಿಸಿದೆ.


ಆಡಳಿತಾತ್ಮಕವಾಗಿ ನೋಡಿದಾಗ, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಹಣಕಾಸು ಭ್ರಷ್ಟಾಚಾರದ ವಿಭಿನ್ನ ರೂಪಗಳನ್ನು 2024 ಬಹಿರಂಗಪಡಿಸಿದೆ. ಕೇಂದ್ರ ಬಿಜೆಪಿ ಸರ್ಕಾರದ ಚುನಾವಣಾ ಬಾಂಡ್‌ ಈ ಬ್ರಹ್ಮಾಂಡ ಭ್ರಷ್ಟಾಚಾರದ ಒಂದು ರಾಷ್ಟ್ರೀಯ ಆಯಾಮವಾದರೆ, ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ಅಲುಗಾಡಿಸಿದ MUDA ಹಗರಣ, ವಾಲ್ಮೀಕಿ ನಿಗಮ ಹಗರಣ ಹಾಗೂ ವಕ್ಫ್‌ ಆಸ್ತಿಯ ಸುತ್ತ ಆವರಿಸಿರುವ ಅಕ್ರಮ ಭೂ ಸ್ವಾಧೀನದ ಪ್ರಕರಣಗಳು ಈ ಭ್ರಷ್ಟ ಜಗತ್ತಿನ ಮತ್ತೊಂದು ಮಜಲು. ಬಂಡವಾಳಶಾಹಿ ಆರ್ಥಿಕತೆ ಈ ರೀತಿಯ ಔದ್ಯಮಿಕ ಭ್ರಷ್ಟಾಚಾರ ಇಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡುವುದಿಲ್ಲ ಎಂಬ ಸುಡು ವಾಸ್ತವವನ್ನು ಇನ್ನಾದರೂ ತಳಸಮಾಜದ ಶೋಷಿತರು ಅರ್ಥಮಾಡಿಕೊಳ್ಳಬೇಕಲ್ಲವೇ ?

Vishwanath on Siddaramaiah: ಸಿದ್ದರಾಮಯ್ಯಗೆ  ಚಾಟಿ ಬೀಸಿದ ಬಿಜೆಪಿ ಪರಿಷತ್ ಸದಸ್ಯ ವಿಶ್ವನಾಥ್ #pratidhvani


ದುರಂತ ಎಂದರೆ ಚುನಾವಣಾ ಬಾಂಡ್‌ ಅಕ್ರಮಗಳು 2024ರ ಲೋಕಸಭಾ ಚುನಾವಣೆಗಳಲ್ಲಿ ವಿರೋಧ ಪಕ್ಷಗಳ ಬತ್ತಳಿಕೆಯ ಬ್ರಹ್ಮಾಸ್ತ್ರವಾಗಿ ಪರಿಣಮಿಸಲೇ ಇಲ್ಲ. ಬದಲಾಗಿ ಜನರ ಹತಾಶೆಯನ್ನು ತಣಿಸುವ ಗ್ಯಾರಂಟಿ ಯೋಜನೆಗಳು ಮತ್ತು ಅದರ ಸುತ್ತಲಿನ ಕಲ್ಯಾಣ ಆರ್ಥಿಕತೆಯೇ, ಗ್ಯಾರಂಟಿ ಘೋಷಣೆಗಳೇ ಪ್ರಧಾನವಾಗಿತ್ತು. ಇತ್ತ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ವಿರೋಧ ಪಕ್ಷಗಳು ಸಿದ್ಧರಾಮಯ್ಯ ಸರ್ಕಾರವನ್ನು ಇಳಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿ, ಮುಡಾ-ವಾಲ್ಮೀಕಿ-ವಕ್ಫ್‌ ವಿರುದ್ಧ ಕಹಳೆ ಮೊಳಗಿಸಿದರೂ, ಅಂತಿಮವಾಗಿ ಎಲ್ಲವೂ ತಣ್ಣಗಾಗಿದೆ. ಕಾರಣ ಸ್ಪಷ್ಟ. ಅಧಿಕಾರ ರಾಜಕಾರಣದ ಭಾಗಿದಾರ ಪಕ್ಷಗಳು ಮತ್ತು ನಾಯಕರಿಗೆ ತಿಳಿದಿರುವ ಒಂದು ಕಟುಸತ್ಯ ಎಂದರೆ ಒಬ್ಬರ ಜೇಬಿನಲ್ಲಿ ಮತ್ತೊಬ್ಬರ ಕೈ ಇರುತ್ತದೆ, ಒಬ್ಬರ ಅಕ್ರಮ ಸಂಪತ್ತಿನ ಭಂಡಾರದಲ್ಲಿ ಮತ್ತೊಬ್ಬರ ಪಾಲು ಇರುತ್ತದೆ. ಈ ಸುಡುವಾಸ್ತವವನ್ನು ಜನಸಾಮಾನ್ಯರಿಗೆ ಅರ್ಥಮಾಡಿಸುವಲ್ಲಿ 2024 ಯಶಸ್ವಿಯಾಗಿದೆ.
ಪ್ರತಿರೋಧದ ನೆಲೆಗಳ ನಡುವೆ

ಈ ಕಠೋರ ಸತ್ಯದ ಅನಾವರಣದ ನಡುವೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪಕ್ಷಗಳು ತಳಸಮಾಜದ ಪ್ರತಿರೋಧ ಮತ್ತು ಹೋರಾಟಗಳನ್ನು ತಣ್ಣಗಾಗಿಸಲು ಅನುಸರಿಸಬಹುದಾದ ಚಾಣಕ್ಯ ತಂತ್ರಗಳನ್ನೂ 2024 ಹೊರಹಾಕಿದೆ. ವಿರೋಧ ಪಕ್ಷಗಳನ್ನು ಮಣಿಸಲು ಕೇಂದ್ರೀಯ ಸಾಂವಿಧಾನಿಕ-ಕಾನೂನು ಸಂಸ್ಥೆಗಳನ್ನು ಸಮರ್ಥವಾಗಿ ಬಳಸುವ ಐದು ದಶಕಗಳ ಪರಂಪರೆಯನ್ನು ಬಿಜೆಪಿ ಸರ್ಕಾರ ವ್ಯವಸ್ಥಿತಗೊಳಿಸಿದೆ. ಹಾಗೆಯೇ ತಳಸಮಾಜದ ಆಕ್ರೋಶದ ದನಿಗಳನ್ನು ತಣ್ಣಗಾಗಿಸಲು ಸರ್ಕಾರಗಳು ಕರಾಳ ಕಾಯ್ದೆಗಳನ್ನು ಬಳಸುವ ತಂತ್ರಗಾರಿಕೆಗೂ ರಾಜಕೀಯ ಮನ್ನಣೆ ದೊರೆತಿರುವುದನ್ನು ಕಂಡಿದ್ದೇವೆ. ಏಕೆಂದರೆ ಮುಖ್ಯವಾಹಿನಿಯ ಯಾವ ಪಕ್ಷಗಳೂ ಕರಾಳಶಾಸನಗಳ ವಿರುದ್ಧ ರಾಜಕೀಯ ಪ್ರತಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಇಲ್ಲ.
ಕೇಂದ್ರ ಬಿಜೆಪಿ ಸರ್ಕಾರ ಸಾಂವಿಧಾನಿಕ ಕಾನೂನು ಚೌಕಟ್ಟಿನೊಳಗೆ ಇದನ್ನು ಸಾಧಿಸಿದರೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ, ತಳಸಮಾಜದ ಹತಾಶೆ ಮತ್ತು ಆಕ್ರೋಶಗಳಿಗೆ ದನಿಯಾಗಬೇಕಾದ ಜನಪರ ಹೋರಾಟಗಳನ್ನೂ ತನ್ನ ಅಂಗಳದೊಳಗೆ ಸೇರಿಸಿಕೊಳ್ಳುವ ಮೂಲಕ ಇದನ್ನು ಸಾಧಿಸಿದೆ. ಒಳಗೊಳ್ಳುವ ರಾಜಕಾರಣ (Inclusive Politics) ಎಂಬ ಉದಾತ್ತ ಚಿಂತನೆಯ ಅಪಭ್ರಂಶವೇನೋ ಎನ್ನುವಂತೆ ಪ್ರತಿರೋಧದ ನೆಲೆಗಳನ್ನು ಆಳ್ವಿಕೆಯ ಪ್ರಭಾವಳಿಯೊಳಗೆ ʼ ಒಳಗೊಳ್ಳುವ ʼ ಚಾಣಾಕ್ಷ ರಾಜಕಾರಣಕ್ಕೆ 2024ರ ಕರ್ನಾಟಕ ಸಾಕ್ಷಿಯಾಗಿದೆ. 1980ರ ದಶಕದಲ್ಲಿ ಮೌಲ್ಯಾಧಾರಿತ ರಾಜಕಾರಣದ ನಡುವೆಯೂ ಇದೇ ವಿದ್ಯಮಾನವನ್ನು ಕಂಡಿದ್ದೆವಲ್ಲವೇ ? ಅದರ ರೂಪಾಂತರ 2024ರಲ್ಲಿ ಕಾಣಿಸಿಕೊಂಡಿದೆ. ಅಂದು ಮಲಗಿದ್ದ ದನಿಗಳು 2014ರಲ್ಲಿ ಎಚ್ಚರಗೊಂಡಿದ್ದವು. ಆದರೆ 2024ರಲ್ಲಿ ಈ ದನಿಗಳನ್ನು ಮತ್ತೊಮ್ಮೆ ಅರೆ ನಿದ್ರಾವಸ್ಥೆಗೆ ತಳ್ಳಿದೆ.


ಈ ಜಟಿಲ ಸವಾಲುಗಳನ್ನು ಎದುರಿಸುವುದೇ ಅಲ್ಲದೆ ನೊಂದ, ಅನ್ಯಾಯ ತಾರತಮ್ಯಕ್ಕೊಳಗಾದ ಜನತೆಗೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ-ದಲಿತ-ಆದಿವಾಸಿ ಜನಸಮೂಹಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ಪರ್ಯಾಯ ವಿಚಾರಧಾರೆ, ಚಿಂತನೆ ಅನಿವಾರ್ಯವಾಗಿದೆ ಎಂಬ ಸುಡು ವಾಸ್ತವವನ್ನೂ 2024 ತೆರೆದಿಟ್ಟಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಆಧುನಿಕೋತ್ತರ ಚಿಂತನೆಗಳ ನೆಲೆಯಲ್ಲಿ ಬಿಡಿಬಿಡಿ ಹೋರಾಟಗಳಿಂದ, ವರ್ತಮಾನದ ಬಂಡವಾಳಶಾಹಿ-ನವ ಉದಾರವಾದಿ-ಬಹುಸಂಖ್ಯಾವಾದದ ಆಳ್ವಿಕೆಯನ್ನು ಎದುರಿಸಲಾಗುವುದಿಲ್ಲ ಎಂಬ ಕಟು ಸತ್ಯವನ್ನು ಈ ವರ್ಷ ತೆರೆದಿಟ್ಟಿದೆ. ಕೋವಿದ್‌ ಸಮಯದಲ್ಲಿ ನಡೆದ ರೈತ ಮುಷ್ಕರದಿಂದ ನಮ್ಮ ಹೋರಾಟಗಳು ಪಾಠ ಕಲಿತಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದೆ.
ಕಲಿಯದೆ ಹೋದ ಪಾಠಗಳು


ಹಾಗೆ ಕಲಿತಿದ್ದರೆ 2014ರ ನಂತರ ಭಾರತದಲ್ಲಿ ಉಗಮಿಸಿ ಬಲವಾಗುತ್ತಿರುವ ಕೋಮುವಾದಿ ಫ್ಯಾಸಿಸಂ ವಿರುದ್ಧ, ಮಾರುಕಟ್ಟೆ ಆರ್ಥಿಕತೆಯ ಶೋಷಣೆಗಳ ವಿರುದ್ಧ ಹಾಗೂ ತೀವ್ರವಾಗುತ್ತಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳ ವಿರುದ್ಧ ಮತ್ತು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವ ಜಾತಿ ಶ್ರೇಷ್ಠತೆ-ಪಿತೃಪ್ರಧಾನತೆಯ ವ್ಯಸನದ ವಿರುದ್ಧ, ಸಮಗ್ರ ಸ್ವರೂಪದ ಏಕೀಕೃತ ಜನಾಂದೋಲನ ರೂಪುಗೊಳ್ಳಬೇಕಿತ್ತು. ದಲಿತ ಚಳುವಳಿಗಳಾಗಲೀ, ಎಡಪಂಥೀಯ ಹೋರಾಟಗಳಾಗಲೀ ಸಾಂದರ್ಭಿಕ ಐಕಮತ್ಯದಿಂದಾಚೆಗೆ ಯೋಚಿಸಿ, ಸೈದ್ಧಾಂತಿಕ ಭಿನ್ನಮತಗಳ ಹೊರತಾಗಿಯೂ ಐಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆಯನ್ನಾದರೂ ಇಡಬೇಕಿತ್ತು. ವಿಘಟಿತ ಜನಪರ ಹೋರಾಟಗಳು ಅಂತಿಮವಾಗಿ ಆಳುವವರ ಅಥವಾ ಬಲಾಢ್ಯರ ಕುತಂತ್ರಗಳಿಗೆ ಬಲಿಯಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಎಂಬ ಕಟು ವಾಸ್ತವ ನಮಗೆ ಅರಿವಾಗಬೇಕಿತ್ತು.
ಅದು ಸಾಧ್ಯವಾಗಿಲ್ಲ ಎನ್ನುವುದಷ್ಟೇ ಅಲ್ಲ ಏಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೂ 2024 ನಮ್ಮ ಮುಂದೆ ನಿದರ್ಶನಗಳನ್ನು ಮುಂದಿರಿಸಿದೆ. ಜನಪರ ಅಥವಾ ಪ್ರಗತಿಪರ ಎನಿಸಿಕೊಳ್ಳುವ ಹೋರಾಟಗಳು-ಹೋರಾಟಗಾರರು ಆಳ್ವಿಕೆಯ ಕೇಂದ್ರಗಳಿಗೆ ನಿಕಟವಾದಷ್ಟೂ ಹೋರಾಟಗಳು ಮಂಕಾಗುತ್ತವೆ. ಹೋರಾಟಗಾರರು ನೊಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಯಾವುದೋ ಉದಾತ್ತ ಉದ್ದೇಶಗಳನ್ನು ಹೊತ್ತು ಹೋರಾಟಗಳಿಗೆ ಇಳಿಯುವ ಯುವ ಸಮೂಹ ಭ್ರಮನಿರಸನಕ್ಕೊಳಗಾಗುತ್ತದೆ. ಸಹಜವಾಗಿಯೇ ಕಾರ್ಯಕರ್ತರೂ ಸಹ ಅನುಕೂಲಕರ ವಾತಾವರಣಗಳನ್ನು (Green pastures) ಹುಡುಕಿ ತಮ್ಮ ಮೂಲ ಉದ್ದೇಶವನ್ನೇ ಮರೆತು, ವ್ಯವಸ್ಥೆಯೊಳಗೆ ಒಂದಾಗಿಬಿಡುತ್ತಾರೆ. ಸಮಕಾಲೀನ ಇತಿಹಾಸದಲ್ಲೇ ಇದನ್ನು ನೋಡಿದ್ದೇವೆ. ಆದರೆ ಇದರಿಂದ ನಾವು ಏನನ್ನೂ ಕಲಿತಿಲ್ಲ. ಹಾಗಾಗಿ 2024ರ ಸಂದರ್ಭಗಳು ಜನಾಂದೋಲನಗಳಿಗೆ ಪ್ರಶಸ್ತ ಭೂಮಿಕೆ ಒದಗಿಸಿದ್ದರೂ, ಚಳುವಳಿಗಳು ಅದರ ಸದುಪಯೋಗ ಪಡೆದುಕೊಳ್ಳಲು ವಿಫಲವಾಗಿವೆ.

H Vishwanath: ಸಿಎಂ ಸಿದ್ದರಾಮಯ್ಯವ್ರೇ ನಿಮ್ಮ ಹೆಸರನ್ನ ಕೆಡಿಸಲಿಕ್ಕೆ ಹೊರಟಿದ್ದಾರೆ..! #siddaramaiah #bjp

ಇದಕ್ಕೆ ಸಮಾನಾಂತರಾಗಿ ನೋಡಿದಾಗ ಕೆಲವು ಯಶಸ್ವಿ ಹೋರಾಟಗಳನ್ನೂ 2024 ಕಂಡಿದೆ. ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು ಯಶಸ್ವಿ ಹೋರಾಟಗಳನ್ನು ನಡೆಸಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾದುದು. ಈ ಗೆಲುವುಗಳಿಂದ ಪಾಠ ಕಲಿಯುವುದೇ ಆದರೆ, ಯಾವುದೇ ಗೆಲುವು ಅಥವಾ ಯಶಸ್ಸು ಜನಾಂದೋಲನಗಳನ್ನು ಮತ್ತಷ್ಟು ಸಂಘಟನೆಯತ್ತ ಕರೆದೊಯ್ಯಬೇಕೇ ಹೊರತು, ಬಿಡಿ ಹೋರಾಟಗಳ ವಿಘಟನೆಯತ್ತ ಒಯ್ಯಬಾರದು ಎಂಬ ಪಾಠವನ್ನೂ ನಾವು ಕಲಿಯಬೇಕಲ್ಲವೇ ? ಪರ್ಯಾಯ ರಾಜಕಾರಣ, ಪರ್ಯಾಯ ಆರ್ಥಿಕತೆ ಮತ್ತು ತಳಸಮಾಜವನ್ನು ಸುಸ್ಥಿರಗೊಳಿಸುವಂತಹ ಪರ್ಯಾಯ ಸಾಂಸ್ಕೃತಿಕ ಚಿಂತನೆಗಳಿಗೆ ಪ್ರಜ್ಞಾವಂತ ಸಮಾಜ ತೆರೆದುಕೊಳ್ಳದೆ ಹೋದರೆ, ಭಾರತದ ಪ್ರಜಾಪ್ರಭುತ್ವ ಮತ್ತು ಅದನ್ನೇ ಅವಲಂಬಿಸುವ ಜನಸಾಮಾನ್ಯರ ಬದುಕು ಯಥಾಸ್ಥಿತಿಯಲ್ಲೇ ಮುಂದುವರೆಯುತ್ತದೆ ಅಥವಾ ಇನ್ನೂ ಅಧಃಪತನಕ್ಕೆ ಈಡಾಗುತ್ತದೆ ಎಂಬ ಎಚ್ಚರಿಕೆಯನ್ನೂ 2024 ನೀಡಿದೆ.
2024 ಇದನ್ನು ನಮಗೆ ಕಲಿಸಿದೆ ಆದರೆ ನಾವು ಕಲಿತಿದ್ದೇವೆಯೇ ? 2025ರಲ್ಲಾದರೂ ಕಣ್ತೆರೆಯೋಣವೇ ?


-೦-೦-೦-

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

“ಪಿನಾಕ”ಧರನಾದ ಗೋಲ್ಡನ್ ಸ್ಟಾರ್ ಗಣೇಶ್ ..

Next Post

‘ಬಾಲಿ’ ಎಂದೇ ಪ್ರಸಿದ್ದರಾಗಿದ್ದ ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ನಿಧನ .

Related Posts

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ
Top Story

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

by ನಾ ದಿವಾಕರ
August 29, 2026
0

ಭಾರತೀಯ ಪ್ರಜಾತಂತ್ರ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ? ವಸಾಹತು ಆಳ್ವಿಕೆಯಲ್ಲಿ , 1947ರ ಹೊಸ್ತಿಲಲ್ಲೂ ಸಹ ಶೇಕಡಾ 13ರಷ್ಟು ಭಾರತೀಯರು ಮಾತ್ರ ಮತದಾನದ ಹಕ್ಕು ಹೊಂದಿದ್ದರು....

Read moreDetails
‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

August 28, 2026
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
Next Post

‘ಬಾಲಿ’ ಎಂದೇ ಪ್ರಸಿದ್ದರಾಗಿದ್ದ ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ನಿಧನ .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada