Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವಿವೇಕ ಯೋಜನೆ – ಬೇಕಿರುವುದು ಬಾಹ್ಯ ಸಮಾಜಕ್ಕಲ್ಲವೇ ?

ಶಾಲೆಯಿಂದ ಹೊರಬರುತ್ತಿರುವ ಮಕ್ಕಳಿಗೆ ನಾವು ಎಂತಹ ಸಮಾಜವನ್ನು ತೋರಿಸುತ್ತಿದ್ದೇವೆ ?
ನಾ ದಿವಾಕರ

ನಾ ದಿವಾಕರ

November 19, 2022
Share on FacebookShare on Twitter

ಒಂದೆಡೆ ಶಿಕ್ಷಣದ ವಾಣಿಜ್ಯೀಕರಣ ಮತ್ತು ಕಾರ್ಪೋರೇಟೀಕರಣದ ದಾಳಿಯಿಂದ ಸರ್ಕಾರಿ ಶಾಲೆಗಳು ಅವಸಾನ ಹೊಂದುತ್ತಿರುವಾಗಲೇ ಕರ್ನಾಟಕ ಸರ್ಕಾರ ಈ ಶಾಲೆಗಳನ್ನು ಪುನಶ್ಚೇತನಗೊಳಿಸುವ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಪ್ರತಿಯೊಂದು ಸರ್ಕಾರಿ ಶಾಲೆಯಲ್ಲೂ ವಿಶೇಷ ಕೊಠಡಿಯೊಂದನ್ನು ನಿರ್ಮಿಸುವ “ ವಿವೇಕ ಯೋಜನೆ ”ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 24 ಸಾವಿರ ಸುಸಜ್ಜಿತ ಶಾಲಾ ಕೊಠಡಿಗಳನ್ನು ನಿರ್ಮಿಸಲು ಬೃಹತ್‌ ಯೋಜನೆಯನ್ನು ರೂಪಿಸಿದೆ. ಈ ವರ್ಷದಲ್ಲೇ 7600 ಶಾಲಾ ಕೊಠಡಿಗಳನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದು, ಪ್ರತಿ ವರ್ಷ 8000 ಕೊಠಡಿಗಳನ್ನು ನಿರ್ಮಿಸಲು ಆಯೋಜಿಸಲಾಗಿದೆ. ಇದು ಶೈಕ್ಷಣಿಕವಾಗಿ ಸಮಾಜಮುಖಿಯಾಗಿದ್ದಲ್ಲಿ ಸ್ವಾಗತಾರ್ಹ ಕ್ರಮವೆಂದೇ ಹೇಳಬಹುದು.

ಹೆಚ್ಚು ಓದಿದ ಸ್ಟೋರಿಗಳು

ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ : ನಾ ದಿವಾಕರ ಅವರ ಬರಹ ಭಾಗ – 1

ಭ್ರೂಣ ಹಂತಕ ಸಮಾಜವೂ ಹೆಣ್ತನದ ಉಳಿವೂ – ನಾ ದಿವಾಕರ ಅವರ ಬರಹ

ಸಂವಿಧಾನ ಸಮರ್ಪಣೆಯೂ ಆಡಳಿತ ಜವಾಬ್ದಾರಿಯೂ – ನಾ ದಿವಾಕರ ಅವರ ಬರಹ

ಸರ್ಕಾರದ ಯೋಜನೆಗಳನ್ನು ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಖ್ಯಾತನಾಮರ ಹೆಸರುಗಳಿಂದಲೇ ಗುರುತಿಸುವ ಮೂಲಕ, ತಮ್ಮ ರಾಜಕೀಯ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಗುರುತಿಸಿಕೊಂಡು, ಚುನಾವಣಾ ರಾಜಕಾರಣದ ಬತ್ತಳಿಕೆಯಲ್ಲಿ ಬಳಸಿಕೊಳ್ಳುವ ಒಂದು ಪರಂಪರೆ ಭಾರತದಲ್ಲಿ ಸ್ಥಾಪಿತವೂ, ಸ್ವೀಕೃತವೂ ಆಗಿರುವುದರಿಂದ, ರಾಜ್ಯ ಸರ್ಕಾರವೂ ಸಹ ಈ ಯೋಜನೆಗೆ ಸ್ವಾಮಿ ವಿವೇಕಾನಂದರ ಹೆಸರನ್ನೇ ನೀಡಿದೆ. ನೂತನ ಸುಸಜ್ಜಿತ ಶಾಲಾ ಕೊಠಡಿಗಳನ್ನು “ ವಿವೇಕ ಕೊಠಡಿ ” ಎಂದು ಹೆಸರಿಸುವ ಮೂಲಕ, ರಾಜ್ಯ ಬಿಜೆಪಿ ಸರ್ಕಾರ ವಿವೇಕಾನಂದರ ತತ್ವಾದಾರ್ಶಗಳ ನೆಲೆಯಲ್ಲಿ ಮಕ್ಕಳಿಗೆ ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೋಧಿಸಲು ಆಲೋಚನೆ ಮಾಡಿದೆ. ಎಲ್ಲ ವಿವೇಕ ಕೊಠಡಿಗಳಿಗೂ ಕೇಸರಿ ಬಣ್ಣ ಬಳಿಯುವ ಯೋಜನೆಗೆ ಸದ್ಯಕ್ಕೆ ಚಾಲನೆ ನೀಡಿಲ್ಲವಾದರೂ, ಬಿಜೆಪಿ ಸರ್ಕಾರ ಈ ಯೋಜನೆಯ ಹಿಂದಿನ ರಾಜಕೀಯ ಉದ್ದೇಶ ಮತ್ತು ಶಿಕ್ಷಣದ ಕೇಸರೀಕರಣದ ಧ್ಯೇಯವನ್ನು ಸೂಕ್ಷ್ಮವಾಗಿ ಹೊರಗೆಡಹಿರುವುದು ಸತ್ಯ.

ಗೋಡೆಗೆ ಬಳಿಯುವ ಬಣ್ಣ, ತಾರಸಿಗೆ ಬಳಸುವ ವಸ್ತುಗಳು, ಬಾಗಿಲಿಗೆ ಬಳಸುವ ತೇಗದ ಮರ, ನೆಲವನ್ನು ಅಲಂಕರಿಸುವ ನೆಲಹಾಸು ಇವೆಲ್ಲವೂ ಅಲಂಕಾರಿಕ ವಸ್ತುಗಳು. ಇದಾವುದೂ ಮಕ್ಕಳ ಶಿಕ್ಷಣದ ಮೇಲಾಗಲೀ, ಎಳೆಯ ಮಕ್ಕಳ ಮನಸ್ಸಿನ ಮೇಲಾಗಲೀ ಪ್ರಭಾವ ಬೀರುವುದಿಲ್ಲ. ಅತ್ಯಾಧುನಿಕ ಮತ್ತು ಸುಸಜ್ಜಿತ ಎನ್ನಲಾಗುವ ಶಾಲಾ ಕೊಠಡಿಗಳ ನಾಲ್ಗು ಗೋಡೆಗಳ ನಡುವೆ ನಾವು ಮಕ್ಕಳ ಮನಸಿನಲ್ಲಿ ಬಿತ್ತುವ ಚಿಂತನೆಗಳು ಮತ್ತು ಆಲೋಚನೆಗಳು ಮಾತ್ರವೇ ಭವಿಷ್ಯದ ತಲೆಮಾರಿಗೆ ಉತ್ತಮ ಪ್ರಜೆಗಳನ್ನು ನೀಡಲು ಸಾಧ್ಯ. ಎಳೆಯ, ಹರೆಯದ ಮಕ್ಕಳಿಗೆ ಶಾಲೆಯಲ್ಲಿ ಬೋಧಿಸುವ ಪಠ್ಯಗಳು ಮತ್ತು ಶಿಕ್ಷಕ ವರ್ಗ ನೀಡುವ ನೈತಿಕತೆ ಮತ್ತು ಆದರ್ಶಗಳ ಆಲೋಚನೆಗಳು, ಭವಿಷ್ಯದಲ್ಲಿ ಆ ಮಕ್ಕಳನ್ನು ʼ ಸನ್ಮಾರ್ಗʼ ದಲ್ಲಿ ಕೊಂಡೊಯ್ಯುವಂತಿರಬೇಕು. ವರ್ತಮಾನದ ಸಂದರ್ಭದಲ್ಲಿ ಭಾರತ ಎದುರಿಸುತ್ತಿರುವ ಜ್ವಲಂತ ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳನ್ನು ಗಮನಿಸಿದಾಗ ಈ ʼ ಸನ್ಮಾರ್ಗ ʼವನ್ನು ಭಾರತದ ಸಂವಿಧಾನದ ಚೌಕಟ್ಟಿನಲ್ಲೇ ಕಂಡುಕೊಳ್ಳಬೇಕಾಗುತ್ತದೆ.

ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಚೌಕಟ್ಟಿನಲ್ಲೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಮೂಲಕ ಭಾರತೀಯ ಸಮಾಜವನ್ನು ಕಾಡುತ್ತಿರುವ ಜಾತಿ ವ್ಯವಸ್ಥೆ, ಮತೀಯವಾದ, ಮತಾಂಧತೆ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ ಮತ್ತು ಸಾಮಾಜಿಕಾರ್ಥಿಕ ಅಸಮಾನತೆಗಳ ಪರಿವೆ ಮಕ್ಕಳಲ್ಲಿ ಮೂಡುವಂತಹ ಶಿಕ್ಷಣವನ್ನು ನೀಡುವ ಮೂಲಕ, ಭವಿಷ್ಯದ ತಲೆಮಾರಿನಲ್ಲಿ ಒಂದು ಉನ್ನತಾದರ್ಶದ, ಸಮಾನತೆ, ಸೌಹಾರ್ದತೆ ಮತ್ತು ಸಮನ್ವಯತೆಯ ಸಮಾಜವನ್ನು ಕಟ್ಟುವಂತಹ ಕಾಲಾಳುಗಳನ್ನು ಇವತ್ತಿನ ಶಾಲೆಗಳು ರೂಪಿಸಬೇಕಿದೆ. ʼ ವಿವೇಕ ʼ ಕೊಠಡಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದೇ ಆದರೆ ಈ ಯೋಜನೆಯೂ ಸಾರ್ಥಕತೆ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ʼ ವಿವೇಕ ʼ ಕೊಠಡಿಯಲ್ಲಿ ನಡೆಯುವ ಬೋಧನೆಗಳು, ಡಾ ಬಿ ಆರ್‌ ಅಂಬೇಡ್ಕರ್‌, ರವೀಂದ್ರನಾಥ ಠಾಗೂರ್‌, ಮಹಾತ್ಮ ಗಾಂಧಿ, ನಾರಾಯಣಗುರು, ಬುದ್ಧ, ಬಸವಣ್ಣ, ಕುವೆಂಪು ಅವರೊಂದಿಗೇ ವಿವೇಕಾನಂದರ ಚಿಂತನೆಗಳನ್ನೂ ಒಳಗೊಂಡಿರುವುದು ಅತ್ಯವಶ್ಯ.

ವಸ್ತುಸ್ಥಿತಿಯ ಅವಲೋಕನ ಮುಖ್ಯ

ಈ ಕೊಠಡಿಗಳ ನಿರ್ಮಾಣಕ್ಕೂ ಮುನ್ನ ಸರ್ಕಾರ ಗಮನ ಹರಿಸಬೇಕಾದ ಗಂಭೀರ ಸಮಸ್ಯೆಗಳು ನಮ್ಮೆದುರು ತಾಂಡವಾಡುತ್ತಿವೆ. ಕೋವಿದ್‌ ಸಾಂಕ್ರಾಮಿಕದ ದಾಳಿಗೊಳಗಾಗಿ ಲಕ್ಷಾಂತರ ಮಕ್ಕಳು ಶಾಲೆಗಳನ್ನು ತೊರೆದ ಒಂದು ಸನ್ನಿವೇಶವನ್ನು ನಾವು ಎದುರಿಸಿದ್ದೇವೆ. ಆದಾಗ್ಯೂ 2020-21ರ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಉನ್ನತ ಮಾಧ್ಯಮಿಕ ಹಂತದಲ್ಲಿ ಶಾಲಾ ಮಕ್ಕಳ ಒಟ್ಟು ದಾಖಲಾತಿ ಅನುಪಾತ ಸುಧಾರಿಸಿರುವುದು ಗಮನಾರ್ಹ ಅಂಶ. ರಾಜ್ಯದಲ್ಲಿರುವ 76,450 ಶಾಲೆಗಳಲ್ಲಿ 49,679 ಸರ್ಕಾರಿ ಶಾಲೆಗಳಿವೆ, 7,110 ಸರ್ಕಾರಿ ಅನುದಾನಿತ ಮತ್ತು 19,650 ಖಾಸಗಿ ಅನುದಾನರಹಿತ ಶಾಲೆಗಳು ಮಾನ್ಯತೆ ಪಡೆದಿವೆ. ಬಾಲಕಿಯರ ಮತ್ತು ಎಸ್‌ಸಿ-ಎಸ್‌ಟಿ-ಒಬಿಸಿ ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಹೆಚ್ಚಳ ಕಂಡಿರುವುದು ಆಶಾದಾಯಕ ಬೆಳವಣಿಗೆಯೂ ಆಗಿದೆ. ಖಾಸಗಿ ಅನುದಾನರಹಿತ ಶಾಲೆಗಳ ದಾಖಲಾತಿಯಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದರೆ, ಹೆಚ್ಚು ಕುಟುಂಬಗಳು ಆರ್ಥಿಕವಾಗಿ ಕುಸಿದಿರುವುದನ್ನೂ ಕಾಣಬಹುದು.

ಶಾಲೆ ಎಂದರೆ ಕೇವಲ ಕಲಿಕೆಯ ಕೊಠಡಿಗಳಷ್ಟೇ ಎಂದು ಭಾವಿಸುವ ಒಂದು ಮನಸ್ಥಿತಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವುದರಿಂದ, ಸಾಮಾನ್ಯವಾಗಿ ಒಂದು ಶಾಲೆಯಲ್ಲಿರಬೇಕಾದ ಮೂಲ ಸೌಕರ್ಯಗಳ ಬಗ್ಗೆ ಸರ್ಕಾರಗಳು ಹೆಚ್ಚು ಗಮನಹರಿಸುವುದಿಲ್ಲ. ಇತ್ತೀಚಿನ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್‌ಫರ್ಮೇಷನ್ ಸಿಸ್ಟಂ (ಯುಡಿಐಎಸ್‌ಎ+) ವರದಿಯೊಂದರ ಅನುಸಾರ ರಾಜ್ಯದ 943 ಸರ್ಕಾರಿ, 10 ಅನುದಾನಿತ ಮತ್ತು 48 ಖಾಸಗಿ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಬಾಲಕಿಯರಿಗಾಗಿಯೇ ಇರುವ 75,919 ಶಾಲೆಗಳ ಪೈಕಿ 1,570 ಶಾಲೆಗಳಲ್ಲಿ ಶೌಚಾಲಯಗಳು ಬಳಕೆಯೋಗ್ಯವಾಗಿಲ್ಲ. 328 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದಿರುವುದನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ಯುತ್‌ ಸೌಲಭ್ಯವಿಲ್ಲದ 714 ಶಾಲೆಗಳು, ಕುಡಿಯುವ ನೀರಿನ ಸೌಲಭ್ಯವಿಲ್ಲದ 220 ಶಾಲೆಗಳು, ಕೈತೊಳೆಯುವ ಸೌಕರ್ಯಗಳಿಲ್ಲದ 8,153 ಶಾಲೆಗಳು, ಅಗತ್ಯವಿರುವ ಮಕ್ಕಳಿಗೆ ಜಾರುಹಾದಿ (Ramp) ಇಲ್ಲದ 22,616 ಶಾಲೆಗಳು ನಮ್ಮ ನಡುವೆ ಇದೆ. ನಾವು ಸ್ವಚ್ಚ ಭಾರತ ಅಭಿಯಾನದ ನಡುವೆ ಇದ್ದೇವೆ ಎನ್ನುವುದು ನಮ್ಮ ಗಮನದಲ್ಲಿರಬೇಕು.

ಈ ನಡುವೆ ರಾಜ್ಯ ಸರ್ಕಾರ ತನ್ನ ನೂತನ ಶಿಕ್ಷಣ ನೀತಿಯನ್ವಯ 25ಕ್ಕಿಂತಲೂ ಕಡಿಮೆ ಮಕ್ಕಳಿರುವ 13,800 ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 1,800 ಶಾಲೆಗಳಲ್ಲಿ 10ಕ್ಕಿಂತಲೂ ಕಡಿಮೆ ಮಕ್ಕಳಿರುವುದು ವರದಿಯಾಗಿದೆ. 2021-22ರ ಶೈಕ್ಷಣಿಕ ವರ್ಷದಲ್ಲೇ 500 ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲಾಗಿದೆ. ಹಳ್ಳಿಗಾಡುಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಸಮೀಪದ ಹೋಬಳಿ ಶಾಲೆಗಳೊಡನೆ ವಿಲೀನಗೊಳಿಸುವ ಪ್ರಕ್ರಿಯೆಯ ಹಿಂದೆ ಪ್ರಾಥಮಿಕ ಶಿಕ್ಷಣದ ಖಾಸಗೀಕರಣದ ಉದ್ದೇಶವೂ ಅಡಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶಾಲೆಗಳು ಸಮೀಪವಿದ್ದಷ್ಟೂ ಮಕ್ಕಳ ವಿದ್ಯಾಭ್ಯಾಸ ಮತ್ತು ಕಲಿಕೆ ಹೆಚ್ಚು ಆತಂಕಗಳಿಲ್ಲದೆ ನಿರಾಯಾಸವಾಗಿ ನಡೆಯುತ್ತದೆ. ಕಡಿಮೆ ಸಂಖ್ಯೆ ಇರುವ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ. ಸಣ್ಣಪುಟ್ಟ ಗ್ರಾಮದ ಮಕ್ಕಳೂ ಸಹ ಖಾಸಗಿ ಶಾಲೆಗಳಿಗೆ ಪ್ರತ್ಯೇಕ ಅಥವಾ ಶಾಲಾ ವಾಹನಗಳಲ್ಲಿ ಓಡಾಡುವುದನ್ನು ದಿನನಿತ್ಯ ನೋಡುತ್ತಲೇ ಇದ್ದೇವೆ. ಈ ಮಕ್ಕಳಿಗೆ ಅವರು ವಾಸಿಸುವ ಗ್ರಾಮದಲ್ಲೇ ಉತ್ತಮ ಗುಣಮಟ್ಟದ ಶಾಲಾ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಗಿಂತಲೂ ಹೆಚ್ಚು ಕಾಡಬೇಕಿರುವುದು ಬೋಧಕರ ಕೊರತೆ. ಮಾರ್ಚ್‌ 2022ರ ವೇಳೆಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇರುವುದು ವರದಿಯಾಗಿದೆ. ನಗರ ಪ್ರದೇಶಗಳಲ್ಲಿ ಹಿತಲವಯದ ಸಮಾಜವು ಖಾಸಗಿ ಟ್ಯೂಷನ್‌ ಮೂಲಕ ಈ ಕೊರತೆಯನ್ನು ನೀಗಿಸಿಕೊಳ್ಳುತ್ತವೆ ಆದರೆ ಗ್ರಾಮೀಣ ಮಕ್ಕಳು ಇದರಿಂದ ವಂಚಿತರಾಗಿರುತ್ತಾರೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕರ 25,813 ಹುದ್ದೆಗಳ ಪೈಕಿ 15 ಸಾವಿರ ಹುದ್ದೆಗಳಿಗೆ ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಪ್ರೌಢಶಾಲಾ ಹಂತದಲ್ಲಿ ಖಾಲಿ ಇರುವ 6,085 ಬೋಧಕ ಹುದ್ದೆಗಳ ಪೈಕಿ 3294 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಹೆಚ್ಚಿನ ಮಟ್ಟಿಗೆ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ಉತ್ತೇಜನ ನೀಡುತ್ತಿದೆ. ಅತಿಥಿ ಶಿಕ್ಷಕರಿಗೆ ನೀಡುವ ವೇತನ ಮತ್ತು ಭತ್ಯೆಗಳು ಜೀವನ ನಿರ್ವಹಣೆಗೆ ಪೂರಕವಾಗಿ ಇಲ್ಲದಿರುವ ಕಾರಣ ಹೆಚ್ಚಿನ ಶಿಕ್ಷಕರು ಖಾಸಗಿ ಟ್ಯೂಷನ್‌ ಮೂಲಕವೇ ಮಕ್ಕಳನ್ನು ಆಕರ್ಷಿಸಲು ಯತ್ನಿಸುತ್ತಾರೆ. ಇದು ಪರೋಕ್ಷವಾಗಿ ಶಾಲಾ ಶಿಕ್ಷಣ ಮತ್ತು ಬೋಧನ ಪ್ರಕ್ರಿಯೆ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತವೆ.

ಸಾಮಾಜಿಕ ಜವಾಬ್ದಾರಿಯ ಗುರಿ

ಇಷ್ಟೆಲ್ಲಾ ಗಂಭೀರ ಸಮಸ್ಯೆಗಳ ನಡುವೆಯೇ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿ -2020ನ್ನು ಅಧಿಕೃತವಾಗಿ ಜಾರಿಗೊಳಿಸಲು ಸಜ್ಜಾಗುತ್ತಿದೆ. ನವ ಉದಾರವಾದಿ ಆರ್ಥಿಕ ನೀತಿಗೆ ಅನುಗುಣವಾಗಿ, ಶಿಕ್ಷಣ ವಲಯವನ್ನು ಪ್ರಾಥಮಿಕ ಹಂತದಿಂದ ಅತ್ಯುನ್ನತ ಅಧ್ಯಯನದವರೆಗೆ ಕಾರ್ಪೋರೇಟೀಕರಣಗೊಳಿಸಲೂ ಸರ್ಕಾರ ಸಿದ್ಧತೆ ನಡೆಸಿದೆ. ಈ ನಡುವೆಯೇ ಶಾಲಾ ಪಠ್ಯಕ್ರಮದಲ್ಲಿ ಏನನ್ನು ಬೋಧಿಸಬೇಕು, ಯಾವುದನ್ನು ಬೋಧಿಸಬೇಕು ಎನ್ನುವ ಜಿಜ್ಞಾಸೆಯೊಂದಿಗೇ ಈ ವರ್ಷದ ಪಠ್ಯಕ್ರಮದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ. ತನ್ನ ರಾಜಕೀಯ ಸಿದ್ಧಾಂತಗಳಿಗನುಗುಣವಾಗಿ ಶಾಲಾ ಪಠ್ಯಕ್ರಮವನ್ನು ಸಿದ್ಧಪಡಿಸುವ ಆಲೋಚನೆಯೇ ಅಪಾಯಕಾರಿಯಾಗಿದ್ದು, ಈ ಹಿಂದೆ ಇಂತಹ ಪ್ರಯತ್ನಗಳು ನಡೆದಿದ್ದರೂ ಅದನ್ನು ಹೋಗಲಾಡಿಸಿ, ಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ವಿವೇಕಯುತ ಶಿಕ್ಷಣವನ್ನು ನೀಡುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ಭಾರತ ಇಂದು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನೆಲೆಯಲ್ಲಿ ಯೋಚಿಸಿದಾಗ, ಇಂದಿನ ಮಕ್ಕಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಮೂಡಿಸುವಂತಹ ಶಿಕ್ಷಣ ನೀಡುವುದು ಅತ್ಯವಶ್ಯವಾಗಿದೆ. ತಂತ್ರಜ್ಞಾನ ಯುಗದ ಉಚ್ಛ್ರಾಯ ಹಂತದಲ್ಲಿರುವ ಭಾರತದಲ್ಲಿ ಶಾಲೆಯಿಂದ ಹೊರಬಂದ ಮಕ್ಕಳು ಎಳೆಯ ವಯಸ್ಸಿನಲ್ಲೇ ಡಿಜಿಟಲ್‌ ಯುಗಕ್ಕೆ ತೆರೆದುಕೊಳ್ಳುತ್ತಾರೆ. ಶಾಲಾ ಕೊಠಡಿಯಲ್ಲಿ ಎಷ್ಟೇ ನೈತಿಕತೆಯ ಪಾಠ ಮಾಡಿದರೂ ಹೊರಜಗತ್ತಿನ ಆಗುಹೋಗುಗಳು, ಬೆಳವಣಿಗೆಗಳು ಮಕ್ಕಳಿಗೆ ಢಾಳಾಗಿ ಗೋಚರಿಸುವಂತಿರುತ್ತದೆ. ಆಂಡ್ರಾಯ್ಡ್‌ ಜಗತ್ತಿನಲ್ಲಿ ಇಡೀ ಜಗತ್ತಿನ ವಿದ್ಯಮಾನಗಳನ್ನು ಕೈತುದಿಯಲ್ಲೇ ಕಾಣುವ ಅವಕಾಶವನ್ನೂ ಮಕ್ಕಳು ಪಡೆದಿರುತ್ತಾರೆ. ನಿತ್ಯ ಜೀವನದಲ್ಲಿ ಭಾರತೀಯ ಸಮಾಜ ಕಾಣುತ್ತಿರುವ ಅತ್ಯಾಚಾರಗಳು, ಭ್ರಷ್ಟಾಚಾರದ ಹಗರಣಗಳು, ಶ್ರದ್ಧಾ ವಾಲ್ಕರ್‌ ಪ್ರಕರಣದಂತಹ ಭೀಕರ ಘಟನೆಗಳು, ಅಸ್ಪೃಶ್ಯತೆಯ ಆಚರಣೆಗಳು ಇವೆಲ್ಲವೂ ಬಾಹ್ಯ ಜಗತ್ತಿನಲ್ಲಿ ಮಕ್ಕಳ ಮನಸಿನ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತವೆ. ಇದರೊಂದಿಗೇ ಸಮಾಜದಲ್ಲಿ ಬೇರೂರುತ್ತಿರುವ ದ್ವೇಷಾಸೂಯೆಗಳ ಮನಸ್ಥಿತಿಯೂ ಸಹ, ಕೌಟುಂಬಿಕ ವಾತಾವರಣದಲ್ಲೇ ಮಕ್ಕಳ ಮನಸ್ಸನ್ನು ಪ್ರಕ್ಷುಬ್ಧಗೊಳಿಸುತ್ತವೆ.

ಸರ್ಕಾರ ಆಯೋಜಿಸಿರುವ ಸುಸಜ್ಜಿತ ʼ ವಿವೇಕ ʼ ಕೊಠಡಿಗಳಲ್ಲಿ ಈ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಲು ನೆರವಾಗುವಂತಹ, ಸಾಮಾಜಿಕ ಜವಾಬ್ದಾರಿಯುಳ್ಳ, ಸಾಂವಿಧಾನಿಕ ಪ್ರಜ್ಞೆಯನ್ನು ಉದ್ಧೀಪನಗೊಳಿಸುವ, ಸಮಾಜಮುಖಿ ಬೋಧನಾ ಕ್ರಮಗಳನ್ನು ಅಳವಡಿಸಿದಲ್ಲಿ, ವಿವೇಕಾನಂದರ ಹೆಸರಿಗೂ ಸಾರ್ಥಕತೆ ಬರುತ್ತದೆ. ಸಮನ್ವಯ ಸಮಾಜದ ಪರಿಕಲ್ಪನೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕಾದರೆ, ವಿವೇಕಾನಂದರ ಅನೇಕ ವಿವೇಕದ ನುಡಿಗಳು ನೆರವಿಗೆ ಬರುತ್ತವೆ. ಆದರೆ ಹೊರಜಗತ್ತಿನಲ್ಲಿ ಇದಕ್ಕೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸುವುದೂ ಸಮಾಜದ ಆದ್ಯತೆಯಾಗಬೇಕಲ್ಲವೇ ? ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಲ್ಕರ್‌ ಪ್ರಕರಣ ಭಾರತೀಯ ಸಮಾಜವನ್ನು ಕಾಡುತ್ತಿರುವ ಪಿತೃಪ್ರಾಧಾನ್ಯತೆ ಮತ್ತು ಪಾತಕೀಕರಣದ ಸಂಕೇತವಾಗಿ ನಮಗೆ ಕಾಣದೆ ಹೋದರೆ, ಮುಂದಿನ ದಿನಗಳಲ್ಲಿ ನೂರಾರು ವಾಲ್ಕರ್‌ಗಳು, ನಿರ್ಭಯಾಗಳು ಸೃಷ್ಟಿಯಾಗುತ್ತಾರೆ. ಈ ಆತಂಕ ನಮ್ಮನ್ನು ಕಾಡುವುದೇ ಆದಲ್ಲಿ, ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸ್ತ್ರೀ ಸೂಕ್ಷ್ಮತೆ, ಸ್ತ್ರೀ ಸಂವೇದನೆ ಮತ್ತು ಮನುಜ ಸಂವೇದನೆಯ ಬೀಜಗಳನ್ನು ಬಿತ್ತುವುದು ನಮ್ಮ ಆದ್ಯತೆಯಾಗಬೇಕಿದೆ.

ಸರ್ಕಾರ ಕೊಠಡಿಗಳಿಗೆ ಯಾವ ಬಣ್ಣ ಬಳಿಯಬೇಕು ಎಂದು ಯೋಚಿಸುವುದರ ಬದಲು, ಕೊಠಡಿಯ ನಾಲ್ಕು ಗೋಡೆಗಳ ನಡುವೆ ಕಿವಿಯಲಗಿಸಿ, ಕಣ್ತೆರೆದು, ಮುಕ್ತ ಮನಸ್ಸಿನೊಂದಿಗೆ ಯಾವುದೇ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು ಸಿದ್ಧವಾಗಿರುವ ಅಸಂಖ್ಯಾತ ಮಕ್ಕಳಿಗೆ ಎಂತಹ ಶಿಕ್ಷಣ ನೀಡಬಹುದು ಎಂಬುದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ. ಭಾರತದ ಇತಿಹಾಸ ಮತ್ತು ಪರಂಪರೆಯಲ್ಲಿ ಮೌಲ್ಯಗಳಿಗೆ ಕೊರತೆಯೇನಿಲ್ಲ. ಯಾವ ಮೌಲ್ಯಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ ಎಂದು ನಿರ್ಧರಿಸುವ ವಿವೇಕ ಮತ್ತು ವಿವೇಚನೆ ಬಾಹ್ಯ ಸಮಾಜಕ್ಕೆ ಇರಬೇಕಾಗುತ್ತದೆ. ಬುದ್ಧ-ಬಸವ-ಗಾಂಧಿ-ಅಂಬೇಡ್ಕರಾದಿಯಾಗಿ ಬೋಧಿಸಲಾಗಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳೇ ಭಾರತೀಯ ಸಮಾಜದ ಉನ್ನತಿಯ ಸಾಧನಗಳೂ ಆಗಿವೆ. ಇವರೊಂದಿಗೆ ವಿವೇಕಾನಂದ, ನಾರಾಯಣಗುರು ಮುಂತಾದ ಸಂತರ ಮೌಲ್ಯಯುತ ಸಂದೇಶಗಳು ಭಾರತೀಯ ಸಮಾಜವನ್ನು ಒಂದು ಸುಂದರ ಸೌಹಾರ್ದಯುತ ನೆಲೆಯಲ್ಲಿ ನಿರ್ಮಿಸಲು ನೆರವಾಗುತ್ತವೆ.

ಸರ್ಕಾರ ನಿರ್ಮಿಸಲು ಮುಂದಾಗಿರುವ ಸಾವಿರಾರು ʼ ವಿವೇಕ ಕೊಠಡಿ ʼಗಳಲ್ಲಿ ಈ ಸಮನ್ವಯದ ಸಂದೇಶವು, ವೈಚಾರಿಕ ನೆಲೆಯಲ್ಲಿ ಅಭಿವ್ಯಕ್ತಗೊಂಡು, ಮಕ್ಕಳಲ್ಲಿ ವೈಚಾರಿಕೆ ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸಿ, ಭವಿಷ್ಯದ ಭಾರತಕ್ಕೆ ಉದಾತ್ತ ಚಿಂತನೆಯ ಸಮನ್ವಯ ಸ್ವರೂಪಿ ಮನಸ್ಥಿತಿಯನ್ನು ನಿರ್ಮಿಸುವುದೇ ಆದರೆ ಈ ಯೋಜನೆಯೂ ಅರ್ಥಪೂರ್ಣವಾಗಬಹುದು. ಮಕ್ಕಳನ್ನು ಎಲ್ಲ ರೀತಿಯ ದ್ವೇಷಾಸೂಯೆಗಳಿಂದ ಮುಕ್ತಗೊಳಿಸಿ, ಭಿನ್ನ ಭೇದಗಳಿಂದ ದೂರವಾಗಿಸಿ, ʼ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಪಂಪನ ಸಂದೇಶವನ್ನು ಬಿತ್ತಬೇಕಿದೆ. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನೂ ಬಿತ್ತಬೇಕಿದೆ. ಈ ದೃಷ್ಟಿಯಿಂದ ನೋಡಿದರೆ ವಿವೇಕದ ಕೋಣೆಗಳು ಎಳೆಯ-ಹರೆಯದ ವಿದ್ಯಾರ್ಥಿ ಸಮುದಾಯಕ್ಕಿಂತಲೂ ಬಾಹ್ಯ ಸಮಾಜದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ಸಾಮಾಜಿಕ-ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ಪ್ರಸ್ತುತತೆ ಪಡೆಯುತ್ತವೆ. ಭವಿಷ್ಯದ ಪೀಳಿಗೆಯನ್ನು ಉಜ್ವಲಗೊಳಿಸಲಾದರೂ, ನಮ್ಮೊಳಗಿನ ವಿವೇಕವನ್ನು ಜಾಗೃತಗೊಳಿಸಿ, ಒಂದು ಸುಂದರ ಸಮಾಜವನ್ನು ನಿರ್ಮಿಸಲು ಮುಂದಾಗಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
6192
Next
»
loading
play
Siddaramaiah: ಗ್ಯಾರಂಟಿಗಳನ್ನ ವಿರೋಧಿಸೋ ಮಿಸ್ಟರ್ ಮೋದಿನೇ ಫ್ರೀ ಕೊಡ್ತಿನಿ ಅಂತಿಲ್ವಾ?
play
Siddaramaiah: ಗ್ಯಾರಂಟಿಗಳನ್ನ ವಿರೋಧಿಸೋ ಮಿಸ್ಟರ್ ಮೋದಿನೇ ಫ್ರೀ ಕೊಡ್ತಿನಿ ಅಂತಿಲ್ವಾ?
«
Prev
1
/
6192
Next
»
loading

don't miss it !

ಮಂತ್ರ ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಪೂಜಾ ಗಾಂಧಿ
ಸಿನಿಮಾ

ಮಂತ್ರ ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಪೂಜಾ ಗಾಂಧಿ

by Prathidhvani
November 28, 2023
ಹರಿಯಾಣದಲ್ಲಿ ಕಡಿಮೆ ತೀವ್ರತೆಯ ಭೂಕಂಪ
ದೇಶ

ಹರಿಯಾಣದಲ್ಲಿ ಕಡಿಮೆ ತೀವ್ರತೆಯ ಭೂಕಂಪ

by Prathidhvani
November 26, 2023
SIM Card: ಡಿ.1ರಿಂದ ಹೊಸ ಸಿಮ್‌ ಕಾರ್ಡ್‌ ನಿಯಮಗಳು
Top Story

SIM Card: ಡಿ.1ರಿಂದ ಹೊಸ ಸಿಮ್‌ ಕಾರ್ಡ್‌ ನಿಯಮಗಳು

by ಪ್ರತಿಧ್ವನಿ
November 29, 2023
ಬಲಪಂಥಿಯ ಉಗ್ರವಾದಿಗಳು ಮತ್ತು ಅವರ ಗಾಂಧಿ-ನೆಹರು ದ್ವೇಷ – ಡಾ. ಜೆ ಎಸ್ ಪಾಟೀಲ ಅವರ ಬರಹ
ಕರ್ನಾಟಕ

ಬಲಪಂಥಿಯ ಉಗ್ರವಾದಿಗಳು ಮತ್ತು ಅವರ ಗಾಂಧಿ-ನೆಹರು ದ್ವೇಷ – ಡಾ. ಜೆ ಎಸ್ ಪಾಟೀಲ ಅವರ ಬರಹ

by Prathidhvani
November 25, 2023
ಕಳೆದು ಹೋದ ಮೊಬೈಲ್‌ ಪತ್ತೆ ಹಚ್ಚೋದು ಹೇಗೆ? ಬ್ಲಾಕ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಪರಿಹಾರ!
ಇತರೆ

ಕಳೆದು ಹೋದ ಮೊಬೈಲ್‌ ಪತ್ತೆ ಹಚ್ಚೋದು ಹೇಗೆ? ಬ್ಲಾಕ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಪರಿಹಾರ!

by Prathidhvani
November 30, 2023
Next Post
Kranti Movie Interview | D BOSS ವಿಶೇಷ ಸಂದರ್ಶನ | D BOSS Darshan Interview| Pratidhvani #dboss

Kranti Movie Interview | D BOSS ವಿಶೇಷ ಸಂದರ್ಶನ | D BOSS Darshan Interview| Pratidhvani #dboss

Voter Data Theft : ರಾಜ್ಯದಲ್ಲಿ ಎಲೆಕ್ಷನ್ ಗೂ ಮೊದಲೇ ನಡೀತು ವೋಟರ್‌ ಐಡಿ ಹಗರಣ | Anupam Iyengar | Pratidhvani

Voter Data Theft : ರಾಜ್ಯದಲ್ಲಿ ಎಲೆಕ್ಷನ್ ಗೂ ಮೊದಲೇ ನಡೀತು ವೋಟರ್‌ ಐಡಿ ಹಗರಣ | Anupam Iyengar | Pratidhvani

Voter Data Theft :ಹೊಂಬಾಳೆ ಕ್ರಿಯೇಷನ್ಸ್ , ಚಿಲುಮೆ ಎಂಟರ್‌ಪ್ರೈಸಸ್‌, ವೋಟರ್‌ ಐಡಿ ಹಗರಣದಲ್ಲಿ ಭಾಗಿ|Pratidhvani

Voter Data Theft :ಹೊಂಬಾಳೆ ಕ್ರಿಯೇಷನ್ಸ್ , ಚಿಲುಮೆ ಎಂಟರ್‌ಪ್ರೈಸಸ್‌, ವೋಟರ್‌ ಐಡಿ ಹಗರಣದಲ್ಲಿ ಭಾಗಿ|Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist