ಶ್ರೀಲಂಕಾ ಇನ್ನು ಮುಂದೆ ಹೋಗಬೇಕಾದರೆ ವೀಸಾ ಬೇಕಾಗಿಲ್ಲ. ಭಾರತ ಸೇರಿದಂತೆ 7 ದೇಶಗಳಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ತೀರ್ಮಾನಿಸಿದೆ. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಹೀಗೆ ಒಟ್ಟು ಏಳು ದೇಶಗಳ ಪ್ರಯಾಣಿಕರಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ಕ್ಯಾಬಿನೆಟ್ ತನ್ನ ಒಪ್ಪಿಗೆ ನೀಡಿದೆ.
ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಅವರ ಪ್ರಕಾರ ಈ ನಿರ್ಧಾರವು ಪ್ರಾಯೋಗಿಕ ಯೋಜನೆಯಾಗಿ ತಕ್ಷಣವೇ ಪ್ರಾರಂಭವಾಗಿದೆ ಮತ್ತು ಮುಂದಿನ ವರ್ಷದ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬೆಳವಣಿಗೆಯು ಪ್ರವಾಸಿಗರ ಆಗಮನವನ್ನು ಹೆಚ್ಚಿಸುತ್ತದೆ ಎಂದು ಅಲಿ ಸಬ್ರಿ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಆಗಮನವನ್ನು ಐದು ಮಿಲಿಯನ್ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಶ್ರಿಲಂಕಾ ಸರಕಾರದ ಸಚಿವಾಲಯವು ಹೇಳಿದೆ. ಈ ಕ್ರಮವು ಪ್ರಯಾಣಿಕರಿಗೆ ವೀಸಾ ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯವನ್ನು ಉಳಿಸುತ್ತದೆ.
ಕಳೆದ ವಾರದ ಆರಂಭದಲ್ಲಿ, ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ಐದು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾಗಳನ್ನು ನೀಡುವ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಘೋಷಿಸಿತ್ತು.
ಕ್ಯಾಬಿನೆಟ್ ಪೇಪರ್ ಅನ್ನು ಶ್ರೀಲಂಕಾದ ಪ್ರಧಾನಿ ದಿನೇಶ್ ಗುಣವರ್ಧನಾ, ಪ್ರವಾಸೋದ್ಯಮ ಮತ್ತು ಭೂ ಸಚಿವ ಹರಿನ್ ಫೆರ್ನಾಂಡೋ, ಸಾರ್ವಜನಿಕ ಭದ್ರತಾ ಸಚಿವ ತಿರಾನ್ ಅಲ್ಲೆಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಜಂಟಿಯಾಗಿ ಮಂಡಿಸಿದ್ದಾರೆ.