ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ AI2379 ವಿಮಾನವು ಹಾರಾಟದ ವೇಳೆ ತೀವ್ರ ವಾಯು ಕ್ಷೋಭೆ (ಟರ್ಬುಲೆನ್ಸ್)ಗೆ ಸಿಲುಕಿದ ಪರಿಣಾಮ ಕೆಲ ಕ್ಷಣಗಳ ಕಾಲ ಸುಮಾರು 300 ಅಡಿ ಕೆಳಕ್ಕೆ ಕುಸಿದ ಘಟನೆ ನಡೆದಿದೆ. ಈ ವೇಳೆ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 14 ಮಂದಿ ಗಾಯಗೊಂಡಿದ್ದಾರೆ.

ಹಠಾತ್ ಉಂಟಾದ ಟರ್ಬುಲೆನ್ಸ್‌ನಿಂದ ವಿಮಾನದೊಳಗೆ ಭಾರೀ ಆತಂಕದ ವಾತಾವರಣ ನಿರ್ಮಾಣವಾಯಿತು. ಸೀಟ್‌ಬೆಲ್ಟ್ ಧರಿಸದಿದ್ದ ಕೆಲವು ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿ ವಿಮಾನದ ಮೇಲ್ಭಾಗಕ್ಕೆ ಬಡಿದು ಗಾಯಗೊಂಡಿದ್ದಾರೆ. ಘಟನೆಯಿಂದ ವಿಮಾನದ ಒಳಗಿನ ಕೆಲವು ಸೀಲಿಂಗ್ ಪ್ಯಾನೆಲ್‌ಗಳಿಗೂ ಹಾನಿಯಾಗಿದೆ.
ಆದರೆ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಪೈಲಟ್ ವಿಮಾನವನ್ನು ದೆಹಲಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಮುಂಚಿತವಾಗಿಯೇ ಮಾಹಿತಿ ಪಡೆದಿದ್ದ ವಿಮಾನ ನಿಲ್ದಾಣದ ತುರ್ತು ವೈದ್ಯಕೀಯ ತಂಡ ಸ್ಥಳದಲ್ಲೇ ಸಿದ್ಧವಾಗಿದ್ದು, ವಿಮಾನ ಇಳಿದ ತಕ್ಷಣ ಗಾಯಗೊಂಡವರಿಗೆ ಚಿಕಿತ್ಸೆ ನೀಡಿತು. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆ ಕುರಿತು ಪ್ರಕಟಣೆ ನೀಡಿರುವ ಏರ್ ಇಂಡಿಯಾ, ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ AI2379 ವಿಮಾನವು ಹಾರಾಟದ ವೇಳೆ ಅನಿರೀಕ್ಷಿತ ಟರ್ಬುಲೆನ್ಸ್‌ಗೆ ಸಿಲುಕಿತ್ತು ಎಂದು ದೃಢಪಡಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಸಂಸ್ಥೆಯ ಮೊದಲ ಆದ್ಯತೆಯಾಗಿದ್ದು, ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅಗತ್ಯ ಮಾಹಿತಿಯನ್ನು ಒದಗಿಸುವಲ್ಲಿ ಏರ್ ಇಂಡಿಯಾ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.






