ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮುಂದಿನ ಮೂರು ಇಲ್ಲವೇ ಆರು ತಿಂಗಳ ಒಳಗೆ ಪತನವಾಗಲಿದೆ ಎಂದು ಮಾಜಿ ಸಿಎಂ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

ರಾಜಕೀಯ ಬೆಳವಣಿಗೆ ಕುರಿತು ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ವಿಜಯ್ ಸರ್ಕಾರ ಬೀಳುವ ಕುರಿತು ಹೇಳಿಕೆ ಕೊಟ್ಟಿದ್ದಾರೆ. ವಿಜಯ್ ಅವರ ಸರ್ಕಾರ ಮೈತ್ರಿ ಪಕ್ಷಗಳ ಬೆಂಬಲದಿಂದ ಮಾತ್ರ ಬದುಕುಳಿದಿದೆ. ಈ ಸರ್ಕಾರ ಐದು ವರ್ಷ ಪೂರ್ಣಗೊಳಿಸಲ್ಲ. ವಿಜಯ್ ಅವರದ್ದು ಅಲ್ಪಸಂಖ್ಯಾತ ಸರ್ಕಾರ. ಮುಂದಿನ ಮೂರು ಇಲ್ಲವೇ ಆರು ತಿಂಗಳ ಒಳಗೆ ಪತನವಾಗಲಿದೆ ಎಂದಿದ್ದಾರೆ.

ಆಡಳಿತಾರೂಢ ಟಿವಿಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಪೂರ್ಣ ಜನಾದೇಶ ಹೊಂದಿಲ್ಲ. ಅಗತ್ಯ 118 ಬಹುಮತದ ಪೈಕಿ 108 ಸ್ಥಾನಗಳನ್ನ ಮಾತ್ರ ಗಳಿಸಿದೆ. ಈ ಚುನಾವಣೆಯಲ್ಲಿ ಜನ ಡಿಎಂಕೆ ಸರ್ಕಾರ ರಚಿಸಬೇಕೆಂದೇ ಮತ ಚಲಾಯಿಸಿದ್ದರು. ಆದ್ರೆ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಕೆಲ ಪಕ್ಷಗಳ ತಂತ್ರ ಹಾಗೂ ಅವರ ಜೊತೆಗಿನ ಹೊಂದಾಣಿಕೆಯಿಂದ ಟಿವಿಕೆ ಸರ್ಕಾರ ಜೀವಂತವಾಗಿದೆ ಎಂದಿದ್ದಾರೆ.

ಇದು ಅಲುಗಾಡುವ ಸೆಟಪ್, ಈ ವಾಹನ ಯಾವ ಜಂಕ್ಷನ್ ಅಥವಾ ತಿರುವಿನಲ್ಲಿ ತನ್ನ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತೋ ಗೊತ್ತಿಲ್ಲ. ಆದ್ದರಿಂದ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು. ಐದು ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.






