ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆಯ ಪ್ರಗತಿ ಅತ್ಯಂತ ನಿಧಾನವಾಗಿರುವ ಹಿನ್ನೆಲೆಯಲ್ಲಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅವರು ವಿಶೇಷ ಅರ್ಜಿಯನ್ನು ಸಲ್ಲಿಸಿದ್ದಾರೆ.ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಒಂದು ವರ್ಷದವರೆಗೆ ಹೊಸ ಜಾಮೀನು ಅರ್ಜಿ ಸಲ್ಲಿಸದಂತೆ ವಿಧಿಸಲಾಗಿದ್ದ ನಿರ್ಬಂಧವನ್ನು ಸಡಿಲಗೊಳಿಸುವಂತೆ ದರ್ಶನ್ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ಹೊಸ ಬೆಳವಣಿಗೆಗಳು ಅಥವಾ ವಿಶೇಷ ಸಂದರ್ಭಗಳು ಎದುರಾದರೆ, ಜಾಮೀನು ಕೋರುವ ಅವಕಾಶವನ್ನು ಸಂಪೂರ್ಣವಾಗಿ ನಿರ್ಬಂಧಿಸಬಾರದು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಕಳೆದ ಮೇ 15ರಂದು ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ವೇಳೆ, ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಂಡುಬರದಿದ್ದರೆ ಒಂದು ವರ್ಷದ ಬಳಿಕ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಇದೀಗ ಆ ಆದೇಶವನ್ನು ಸ್ಪಷ್ಟಪಡಿಸುವಂತೆ ದರ್ಶನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಒಂದು ವರ್ಷದ ಅವಧಿಯನ್ನು ಸಂಪೂರ್ಣ ನಿರ್ಬಂಧವೆಂದು ಪರಿಗಣಿಸಬಾರದು ಎಂದು ಕೋರಿದ್ದಾರೆ.ಅರ್ಜಿಯಲ್ಲಿ, ವಿಚಾರಣೆ ವಿಳಂಬವಾದರೆ ತಾವು ದೀರ್ಘಕಾಲ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ದರ್ಶನ್ ಉಲ್ಲೇಖಿಸಿದ್ದಾರೆ. ಇದರಿಂದ ತಮ್ಮ ವೃತ್ತಿಜೀವನ, ಜೀವನೋಪಾಯ ಮತ್ತು ಕುಟುಂಬಕ್ಕೆ ತೀವ್ರ ಹಾನಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ತಮ್ಮ ತಾಯಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇಂತಹ ವಿಶೇಷ ಸಂದರ್ಭಗಳಲ್ಲಿ ಜಾಮೀನು ಕೋರುವ ಅವಕಾಶ ಇರಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಾಸಿಕ್ಯೂಷನ್ ಈ ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳನ್ನು ಪಟ್ಟಿ ಮಾಡಿದೆ. ಆದರೆ ಸುಪ್ರೀಂ ಕೋರ್ಟ್ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಶೀಘ್ರ ಮುಗಿಸಲು ಸೂಚಿಸಿದ್ದರೂ, ಇದುವರೆಗೆ ಕೇವಲ ಇಬ್ಬರು ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ ಎಂದು ದರ್ಶನ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವೇಗದಲ್ಲಿ ವಿಚಾರಣೆ ಮುಗಿಯಲು ಹಲವು ವರ್ಷಗಳು ಬೇಕಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜೂನ್ 11ರಂದು ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರು. ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದೇ ಕೊಲೆಗೆ ಕಾರಣ ಎಂದು ಆರೋಪಿಸಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

ಬಳಿಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ದರ್ಶನ್ ಮತ್ತೆ ಜೈಲು ಸೇರಿದ್ದರು. ನ್ಯಾಯಾಂಗ ಪ್ರಕ್ರಿಯೆಗೆ ತಾವು ಸಂಪೂರ್ಣ ಸಹಕಾರ ನೀಡಿದ್ದು, ವಿಚಾರಣೆಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೀಗ ಅವರ ಹೊಸ ಮನವಿಯ ಕುರಿತು ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.






