ಬಿಜೆಪಿ ಪಕ್ಷದಲ್ಲೇ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ಆಸ್ತಿ ವಿರುದ್ಧ ಜನಜಾಗೃತಿ ಹೆಸರಲ್ಲಿ ಬಂಡಾಯ ನಾಯಕರನ್ನು ಕಟ್ಟಿಕೊಂಡು ಬೀದರ್, ಕಲಬುರಗಿ ಸುತ್ತಾಡಿ ಜನರ ಸಮಸ್ಯೆಗೆ ದನಿಯಾಗಿದ್ರು. ಬಿಜೆಪಿ ನಾಯಕರು ಡಿಸೆಂಬರ್ ಮೊದಲ ವಾರದಲ್ಲಿ ಪ್ರವಾಸಕ್ಕೆ ಸಿದ್ಧತೆ ನಡೆಸಿದ ಬೆನ್ನಲ್ಲೇ ಬಂಡಾಯ ಟೀಂ ಪ್ರವಾಸ ಮುಗಿಸಿದ್ದು ಬಿಜೆಪಿಗೆ ನುಂಗಲಾರದ ತುಪ್ಪ ಎನ್ನುವಂತಾಗಿತ್ತು. ಇದೀಗ ಹೈಕಮಾಂಡ್ ನಾಯಕರು ಯತ್ನಾಳ್ ಟೀಂಗೆ ವಾರ್ನಿಂಗ್ ಮಾಡಿದ್ದು, ಇನ್ನಾದ್ರೂ ಬಂಡಾಯ ನಿಲ್ಲುತ್ತಾ..? ವಿಜಯೇಂದ್ರ ಅಧ್ಯಕ್ಷ ಸ್ಥಾನವನ್ನು ಯತ್ನಾಳ್ ಅಂಡ್ ಗ್ಯಾಂಗ್ ಒಪ್ಪಿಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿಸಿದೆ. ಈ ನಡುವೆ ವಿಜಯೇಂದ್ರ ಆಪ್ತರು ಕೋಲಾರದ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ವಾಗ್ದಾಳಿ ಮಾಡಿದ್ದಾರೆ.
ಬಿ.ವೈ ವಿಜಯೇಂದ್ರ ಮುಂದಿನ ಸಿಎಂ ಆಗಲಿ ಎಂದು ದೇವರಲ್ಲಿ ಅರ್ಚನೆ ಮಾಡಿಸಿದ ರೇಣುಕಾಚಾರ್ಯ ಟೀಂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ಮಾಡಿದೆ. ಕೋಲಾರದ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ರೇಣುಕಾಚಾರ್ಯ, ಬಿ.ಸಿ ಪಾಟೀಲ್, ಕಟ್ಟಾ ಸುಬ್ರಮಣ್ಯ ನಾಯ್ಡು ಮಾತಿನ ಚಾಟಿ ಬೀಸಿದ್ದಾರೆ. ಮಾಜಿ ಶಾಸಕರಾದ ವೈ ಸಂಪಂಗಿ, ಬಿ.ಪಿ ವೆಂಕಟಮುನಿಯಪ್ಪ, ನಾರಾಯಣಸ್ವಾಮಿ, ರಾಜಣ್ಣ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ನೀಡಿದ್ದು, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗಿದೆ.
ರಾಜ್ಯದಲ್ಲಿ ಸೈಕಲ್ ತುಳಿದು ಬಿಜೆಪಿ ಪಕ್ಷ ಕಟ್ಟಿದ್ದು ಯಡಿಯೂರಪ್ಪ ಹಾಗು ದಿವಂಗತ ಅನಂತ್ ಕುಮಾರ್ ಅವರು. ಭಾರತೀಯ ಜನತಾ ಪಾರ್ಟಿ ಕಟ್ಟಿದವ್ರ ವಿರುದ್ಧವೇ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ ಸ್ವಯಂ ಘೋಷಿತ ಹಿಂದೂ ನಾಯಕ ಎಂದು ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ಯತ್ನಾಳ್‌ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ. ವಕ್ಫ್ ವಿರುದ್ಧ ಹೋರಾಟ ಮಾಡು ಅಂತ ಯಾವುದೇ ರಾಷ್ಟ್ರೀಯ ನಾಯಕರು ಹೇಳಿಲ್ಲ. ಈ ಮೊದಲು ಟಿಪ್ಪು ಖಡ್ಗ ಹಿಡ್ಕೊಂಡು ಒಡಾಡಿದ್ದಾರೆ, ತಾವು ಬಾಯಿ ಬಿಚ್ಚಿದ್ರೆ, ನಾನು ಬಾಯಿ ಬಿಚ್ಚುತ್ತೇವೆ ಎಂದು ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ. ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ ಎಂದಿರುವ ರೇಣುಕಾಚಾರ್ಯ, ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು. ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕೆಲಸ ಮಾಡ್ತಿದ್ದು, ರೇಣುಕಾಚಾರ್ಯ ಲಫಟ ಎಂಬ ಯತ್ನಾಳ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ನೀನೊಬ್ಬ ಗೋಮುಖ ವ್ಯಾಘ್ರ, ನೀನು ಮುಖವಾಡ ಹಾಕಿಕೊಂಡಿದ್ದೀಯ. ನೀನು ಪಕ್ಷದಿಂದ ಸಸ್ಪೆಂಡ್ ಆಗಿದ್ದಾಗ ಇಫ್ತಿಯಾರ್ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಹೇಳ್ತೀಯ, ನಿನಗೆ ಮಾನ ಮರ್ಯಾದೆ ಇದ್ರೆ ಸುಮ್ಮನಿರು. ಬಾಯಿ ಬಿಚ್ಚಿದ್ರೆ ಅಷ್ಟೇ, ನಾವೂ ನಾಟಿ, ನಾನು ಮಾತನಾಡ್ತೀನಿ ಎಂದಿದ್ದಾರೆ.
ಪಕ್ಷದೊಳಗೆ ಇದ್ದು ಒಳಗೊಳಗೆ ಚೂರಿ ಹಾಕೋರು ಇದ್ದಾರೆ ಎಂದು ಕುರಡುಮಲೆ ದೇಗುಲದಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಶಾಲು ಹಾಕ್ಕೊಂಡು ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡ್ತಾರೆ. ಯಾರೇ ಮಾತನಾಡಿದ್ರು, ಅವರದ್ದು ಹೊರಗೆ ತೆಗೀತೀನಿ ಅಂತಾರೆ, ಅದೇನು ಗೊತ್ತು ನಿಮಗೆ, ತಾಕತ್ ಇದ್ದರೆ ತೆಗೀರಿ ಎಂದು ಯತ್ನಾಳ್‌ಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಸವಾಲು ಎಸೆದಿದ್ದಾರೆ. ಬಿಜೆಪಿ ಹೈಕಮಾಂಡ್ ಸುಮ್ಮನಿಲ್ಲ, ಕಾದು ನೋಡುವ ತಂತ್ರ ಅನುಸರಣೆ ಮಾಡ್ತಿದ್ದಾರೆ. ಯತ್ನಾಳ್ ಗೆದ್ದಿದ್ದು ಕಾಂಗ್ರೆಸ್ ನಾಯಕರ ಬೆಂಬಲದಿಂದ, ಅದೊಂದು ಗೆಲುವಲ್ಲ. ಯತ್ನಾಳ್ ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ವಾಗ್ದಾಳಿ ಮಾಡಿದ್ದಾರೆ. ಇನ್ನಾದ್ರೂ ಯತ್ನಾಳ್ ಸುಮ್ಮನಾಗ್ತಾರಾ ತಿರುಗಿ ಬೀಳ್ತಾರಾ ಅನ್ನೋದನ್ನು ಕಾದು ನೋಡ್ಬೇಕು