ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗ್ತಿರೋ ಅನ್ಯಾಯದ ಬಗ್ಗೆ ಪ್ರಧಾನಿ ಗಮನ ಸೆಳೆಯುವ ಕೆಲಸ ಮಾಡಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ನಬಾರ್ಡ್ ಸಾಲದಲ್ಲಿ ಶೇಕಡ 58ರಷ್ಟು ಕಡಿತ ಆಗಿದ್ದು, ಕಳೆದ ವರ್ಷ 5600 ಕೋಟಿ ಬಂದಿತ್ತು, ಈ ಬಾರಿ 2,340 ಕೋಟಿ ಅಷ್ಟೇ ಕೊಟ್ಟಿದ್ದು, ಹೆಚ್ಚಳಕ್ಕೆ ಸೂಚಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಕೇಂದ್ರ ಸರ್ಕಾರವೇ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ₹5,300 ಕೋಟಿ ಘೋಷಿಸಿತ್ತು. ವರ್ಷ ಕಲೆದರೂ ಅನುದಾನ ಬಿಡುಗಡೆ ಆಗಿಲ್ಲ. ಅನುದಾನ ಬಿಡುಗಡೆಗೂ ಸೂಚನೆ ಕೊಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇನ್ನು ಕರ್ನಾಟಕದ ಪ್ರಮುಖ ಯೋಜನೆಗಳಾದ ಮೇಕೆದಾಟು ಹಾಗು ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆಯ ಒಪ್ಪಿಗೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆ ಹಾಗು ರೈಲ್ವೆ ಇಲಾಖೆಯ ಯೋಜನೆಗೆ ಸಹಕರಿಸುವಂತೆಯೂ ಸಿಎಂ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ 15ನೇ ಹನಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ಬರಬೇಕಿರುವ ಹೆಚ್ಚುವರಿ ಅನುದಾನ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕಳೆದ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅರ್ಜಿ ಕೊಟ್ಟಿದ್ದೇನೆ ಎಂದಿದ್ದು, ಮಣ್ಣಿನ ಮಕ್ಕಳನ್ನು ಮಾಧ್ಯಮಗಳು ಯಾಕೆ ಪ್ರಶ್ನೆ ಮಾಡಲ್ಲ. ರಾಜ್ಯದ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಬೇಕಾದ ಜವಾಬ್ದಾರಿ ಅವರ ಮೇಲಿಲ್ವಾ..? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗು ಮಾಜಿ ಪ್ರಧಾನಿ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
ನಬಾರ್ಡ್ ಸಾಲದಲ್ಲಿ ಕೇಂದ್ರ ಸರ್ಕಾರ ಕಡಿತ ಮಾಡಿರೋ ಕಾರಣಕ್ಕೆ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾಗಲೇ ಸಿಎಂ ಸಿದ್ದರಾಮಯ್ಯಗೆ ಸ್ಪಷ್ಟನೆ ನೀಡಿದ್ದು, ಕರ್ನಾಟಕ ಮಾತ್ರವಲ್ಲ ಇಡೀ ದೇಶಾದ್ಯಂತ ನಬಾರ್ಡ್ ಸಾಲವನ್ನು ಕಡಿತ ಮಾಡಲಾಗಿದೆ ಎಂದಿದ್ದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಆ ವಿಚಾರ ಹೇಳ್ತಿದ್ದ ಹಾಗೆ ಕೆರಳಿ ಕೆಂಡವಾದ ಸಿಎಂ ಸಿದ್ದರಾಮಯ್ಯ, ಎಲ್ಲಾ ರಾಜ್ಯಗಳಿಗೂ ಕಡಿಮೆ ಮಾಡಿದ್ದಾರೆ ಅಂದರೆ ಅನ್ಯಾಯ ಅಲ್ವಾ..? ಯಾಕೆ ಕಡಿಮೆ ಮಾಡಿದ್ರು..? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ರೈತರಿಗೆ ನಾವು 5 ಲಕ್ಷದ ತನಕ ಸಾಲಕ್ಕೆ ಝೀರೋ ಪರ್ಸೆಂಟ್ ಬಡ್ಡಿ.. 5 ಲಕ್ಷ ಮೇಲ್ಪಟ್ಟ ಸಾಲಕ್ಕೆ ಶೇಕಡ 5ರಷ್ಟು ಬಡ್ಡಿ ದರ. ಹೀಗಿದ್ದಾಗ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತರಿಗೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.