ಭಾನುವಾರ ಉತ್ತರಾಖಂಡದ ಚಮೋಲಿ ಜಿಲ್ಲೆಯಲಿರುವ ಜೋಶಿಮಠ ಎಂಬಲ್ಲಿ ಸಂಭವಿಸಿದ ಹಿಮನದಿ ಸ್ಫೋಟ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರವಾಹದಲ್ಲಿ ಐದು ಸೇತುವೆಗಳು ಕೊಚ್ಚಿ ಹೋಗಿವೆ. ಶೋಧ ಕಾರ್ಯ ಮುಂದುವರೆದಿದ್ದು, ಈವರೆಗೆ ರಕ್ಷಣಾ ತಂಡಗಳು ಹದಿನಾಲ್ಕು ಜನರ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಭೀಕರ ಪ್ರವಾಹದಿಂದಾಗಿ 200 ಜನರು ನಾಪತ್ತೆಯಾಗಿದ್ದು, ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಸಿಲುಕಿದ್ದ 14 ಜನರನ್ನು ITBP ಪಡೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ITBP ಪಶ್ಚಿಮ ವಲಯದ ಎಡಿಜಿ ಮನೋಜ್ ಸಿಂಗ್ ರಾವತ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಗಳ ಕುರಿತು ಖುದ್ದು ಮಾಹಿತಿ ಪಡೆದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ದುರಂತದಲ್ಲಿ ಸಾವನ್ನಪ್ಪಿದ್ದವರ ಕುಟುಂಬಕ್ಕೆ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ 4 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ವಿಪತ್ತಿನಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂತ್ರಸ್ಥರನ್ನು ರಕ್ಷಿಸಲು ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ. ಸೇನೆಯ ಹೆಚ್ಚುವರಿ ಪಡೆಗಳನ್ನು ದೆಹಲಿಯಿಂದ ವಿಮಾನದಲ್ಲಿ ಕಳುಹಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಘಟನೆಯ ಬಳಿಕ ಗಂಗಾ ನದಿಯ ತಟದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಿಮನದಿ ಸ್ಫೋಟದಿಂದಾಗಿ ಒಂದು ಡ್ಯಾಮ್ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಸಮೀಪದಲ್ಲಿಯೇ ಇದ್ದಂತಹ ಜಲವಿದ್ಯುತ್ ಘಟಕವೂ ನಾಶವಾಗಿದೆ. ಈ ಘಟನೆಗೆ ವೈಜ್ಞಾನಿಕ ಕಾರಣವನ್ನು ತಿಳಿಯಲು ಭೂವಿಜ್ಞಾನಿಗಳ ತಂಡವೊಂದು ಸ್ಥಳದಲ್ಲಿ ಬೀಡುಬಿಟ್ಟಿದೆ.