ಬಿಜೆಪಿ ಪಶ್ಚಿಮ ಬಂಗಾಳ ಚುನಾವಣೆಯನ್ನು ಅಷ್ಟೊಂದು ಪ್ರತಿಷ್ಟೆಯನ್ನಾಗಿ ಪರಿಗಣಿಸಲು ಆ ರಾಜ್ಯವೊಂದನ್ನು ಗೆಲ್ಲುವ ಉದ್ದೇಶವೊಂದೇ ಇರಲಿಲ್ಲ. 2016ರಲ್ಲಿ ಇದೇ ಐದು ರಾಜ್ಯಗಳಿಗೆ ಏಕಕಾಲಕ್ಕೆ ವಿಧಾನಸಭಾ ಚುನಾವಣೆ ನಡೆದಿತ್ತು. ಆಗ ಬಿಜೆಪಿಯ ಮೊದಲ ಆದ್ಯತೆ ಅಸ್ಸಾಂ ಆಗಿತ್ತು. ಅಸ್ಸಾಂ ಮೂಲಕ ಈಶಾನ್ಯ ಭಾರತದಲ್ಲಿ ಕೇಸರಿ ಭಾವುಟ ಹಾರಿಸುವ ಗುರಿ ಇತ್ತು. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಗೆಲುವಿನ ಅಭಿಯಾನ ಆರಂಭಿಸಬೇಕು, ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಗುರಿ ಮುಟ್ಟುಬೇಕು ಎಂಬ ಪಣ ತೊಟ್ಟಿತ್ತು. ಇದಕ್ಕಾಗಿ ‘ಮೊದಲು ಪಶ್ಚಿಮ ಬಂಗಾಳ, ನಂತರ 2022ರಲ್ಲಿ ಗುಜರಾತ್ ಮತ್ತು ಉತ್ತರ ಪ್ರದೇಶ ಹಾಗೂ 2023ರಲ್ಲಿ ಕರ್ನಾಟಕದ ಮಾರ್ಗವಾಗಿ 2024ರಲ್ಲಿ ದೆಹಲಿ ಗದ್ದುಗೆ ಹಿಡಿಯವ’ ಮಾರ್ಗವನ್ನು ರೂಪಿಸಿಕೊಂಡಿತ್ತು. ಆದರೀಗ ಆರಂಭದಲ್ಲೇ ಪಶ್ಚಿಮ ಬಂಗಾಳದಲ್ಲಿ ಮುಗ್ಗರಿಸಿರುವುದು ಮಾತ್ರವಲ್ಲ, ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಕಹಿ ಅನುಭವವಾಗಿದೆ.
ಉತ್ತರ ಪ್ರದೇಶ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಅತ್ಯಂತ ದೊಡ್ಡ ರಾಜ್ಯ ಎಂಬುದಕ್ಕಿಂತಲೂ ಹೆಚ್ಚಾಗಿ ತನಗೆ ಬೇರೂರಲು ನೆರವಾದ ರಾಜ್ಯ ಎಂಬುದು ಬಿಜೆಪಿಗೆ ಬಹಳ ಮುಖ್ಯವಾದ ಸಂಗತಿ. ಮೊನ್ನೆ ಫಲಿತಾಂಶ ಬಂದ ಐದು ರಾಜ್ಯಗಳ ಪೈಕಿ ಎಲ್ಲವೂ ಹಿಂದಿಯೇತರ ರಾಜ್ಯಗಳು. ಇಲ್ಲಿ ಎಂಥದೇ ಫಲಿತಾಂಶ ಬಂದರೂ ಸುಧಾರಿಸಿಕೊಳ್ಳಬಲ್ಲದು ಬಿಜೆಪಿ. ಆದರೆ ಹಿಂದಿ ಹಾರ್ಟ್ ಲ್ಯಾಂಡ್ ಗಳಲ್ಲಿ ಸೋತರೆ ಬಿಜೆಪಿ ಪಾಲಿಗೆ ನೆಲವೇ ಕುಸಿದಂತಾಗುತ್ತದೆ. ಈಗ ಆಗಿರುವುದು ಅಂಥದೇ ಅನುಭವ.
ಉತ್ತರ ಪ್ರದೇಶದಲ್ಲಿ ನಡೆದ ಗ್ರಾಮ ಪಂಚಾಯತ್, ಗ್ರಾಮ ಪ್ರಧಾನ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷದಿಂದ ಅಧಿಕೃತವಾದ ಅಭ್ಯರ್ಥಿಗಳಿರುವುದಿಲ್ಲ. ಪಕ್ಷದ ಚಿಹ್ನೆಯೂ ಇರುವುದಿಲ್ಲ. ಆದರೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿರುತ್ತಾರೆ. ಹಾಗೆ ನಡೆದ ಚುನಾವಣೆಯಲ್ಲಿ ‘ಮೋದಿ ಬಿಟ್ಟರೆ ಯೋಗಿ’ ಎಂದು ಪಠಿಸುವ ಬಿಜೆಪಿ ಇದೇ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಇಡೀ ಉತ್ತರ ಪ್ರದೇಶದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಇದಕ್ಕೂ ಮಿಗಿಲಾಗಿ ಆ ಪಕ್ಷಕ್ಕೆ ಆತಂಕವಾಗಿರುವುದು ಸಮಾಜವಾದಿ ಪಕ್ಷ (ಎಸ್‌ಪಿ)ವೊಂದೇ ಎಲ್ಲೆಡೆ ಬಿಜೆಪಿಗೆ ಸಡ್ಡುಹೊಡೆದಿದೆ. ಇದು ಏಕೆ ಆತಂಕ ಎಂದರೆ ಸರ್ಕಾರದ ವಿರುದ್ಧ ಅಥವಾ ಬಿಜೆಪಿ ವಿರುದ್ಧ ಮತಗಳು ಎಸ್ ಪಿ, ಬಿಎಸ್ ಪಿ ಹಾಗೂ ಕಾಂಗ್ರೆಸ್ ಎಂದು ಚದುರಿಹೋಗಿಲ್ಲ. ಹಾಗೆ ಚದುರಿದದ್ದರೆ ಅದರ ಲಾಭವೂ ಬಿಜೆಪಿಗೆ ಆಗಿರುತ್ತಿತ್ತು. ಅಂದರೆ ಮತದಾರರು ನಿರ್ದಿಷ್ಟವಾಗಿ ಬಿಜೆಪಿ ವಿರುದ್ಧ ಸೋಲಿಸಬೇಕೆಂದು ಪಣತೊಟ್ಟಿದ್ದಾರೆ ಎನ್ನಬಹುದಾಗಿದೆ.
ಒಟ್ಟಾರೆ ಲೆಕ್ಕದಲ್ಲಿ ತಾವು ಮುಂಚೂಣಿಯಲ್ಲಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಮರ್ಮಾಘಾತವಾಗುವ ಸಂಗತಿಯನ್ನು ಅದರಿಂದ ಮುಚ್ಚಿಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು, ಇಷ್ಟೆಲ್ಲಾ ಪ್ರವರ್ಧಮಾನಕ್ಕೆ ಬಂದಿರುವ ಬಿಜೆಪಿಗೆ ಈಗ ರಾಮನ ಹುಟ್ಟೂರು ಅಯೋಧ್ಯೆಯಲ್ಲಿ ಸೋಲುಂಟಾಗಿದೆ. ಅಯೋಧ್ಯೆಯ 40 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಬಿಜೆಪಿ ಕೇವಲ ಆರು ಸ್ಥಾನಗಳನ್ನು ಗೆದ್ದಿದೆ. ಕಳೆದ ವರ್ಷ ರಾಮಮಂದಿರ ನಿರ್ಮಾಣ ಯೋಜನೆ ಪ್ರಾರಂಭ ಮಾಡಿರುವುದೇ ಸಾಕು, ನಾವು ಗೆದ್ದುಬಿಡುತ್ತೇವೆ ಎಂದುಕೊಂಡಿತ್ತು ಬಿಜೆಪಿ. ಆದರೆ ರಾಮನ ಹುಟ್ಟೂರು ಅಯೋಧ್ಯೆಯಲ್ಲೇ ಸಮಾಜವಾದಿ ಪಕ್ಷ 24 ಸ್ಥಾನಗಳನ್ನು ಗೆದ್ದುಕೊಂಡಿತು. ಬಹುಜನ ಸಮಾಜ ಪಕ್ಷ ಇಲ್ಲಿ ಐದು ಸ್ಥಾನಗಳನ್ಮು ತನ್ನದಾಗಿಸಿಕೊಂಡಿದೆ.
ಇದಲ್ಲದೆ ಸದ್ಯ ಬಿಜೆಪಿ ಎಂದರೆ ನರೇಂದ್ರ ಮೋದಿ ಮತ್ತು ನರೇಂದ್ರ ಮೋದಿ ಎಂದರೆ ಬಿಜೆಪಿ ಎನ್ನುವ ಸಂದರ್ಭದಲ್ಲಿ ಇದೇ ಮೋದಿ ಸಂಸತ್ ಅನ್ನು ಪ್ರತಿನಿಧಿಸುವ ವಾರಣಾಸಿ ಜಿಲ್ಲೆಯಲ್ಲಿ ಕೂಡ ಬಿಜೆಪಿ ಎಡವಿ ಬಿದ್ದಿದೆ. ವಾರಣಾಸಿಯಲ್ಲಿ ಬಿಜೆಪಿಗೆ 40 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಏಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಸಮಾಜವಾದಿ ಪಕ್ಷವು ವಾರಣಾಸಿಯಲ್ಲಿ ಈ 15 ಸ್ಥಾನಗಳನ್ನು ಗೆದ್ದಿದೆ.
ಇನ್ನು ಸಮಾಜವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಲೋಕಸಭೆಗೆ ಪ್ರತಿನಿಧಿಸುವ ಮೈನ್‌ಪುರಿಯಲ್ಲಿ ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿ ಭಾರೀ ಪ್ರಯತ್ನ ಪಟ್ಟಿತ್ತು. ಅದಕ್ಕಾಗಿ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಸೊಸೆ ಸಂಧ್ಯಾ ಯಾದವ್ ಅವರನ್ನೇ ಅಖಾಡಕ್ಕಿಳಿಸಿತ್ತು. ಆದರೆ ಸಮಾಜವಾದಿ ಪಕ್ಷದ ಎದುರು ಬಿಜೆಪಿ ಸೋಲೊಪ್ಪಿಕೊಳ್ಳಲೇಬೇಕಾಗಿದೆ.
ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಅಲ್ಲದೆ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಎಎಪಿ ಬೆಂಬಲಿತ 70 ಅಭ್ಯರ್ಥಿಗಳು ಜಿಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. 200ಕ್ಕೂ ಹೆಚ್ಚು ಎಎಪಿ ಸದಸ್ಯರು ಗ್ರಾಮ ಪ್ರಧಾನ್ ಹುದ್ದೆಗಳನ್ನು ಪಡೆದಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಕಾಂಗ್ರೆಸ್ ಮತಬುಟ್ಟಿಗೆ ಕೈಹಾಕಿದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತಗಳನ್ನು ಸೆಳೆದಿದೆ ಎಂದು ಹೇಳಲಾಗುತ್ತಿದೆ. ಈ ಫಲಿತಾಂಶದಿಂದ ಸ್ಫೂರ್ತಿಗೊಂಡು ಆಮ್ ಆದ್ಮಿ ಪಕ್ಷ ಇನ್ನಷ್ಟು ಸಕ್ರೀಯವಾಗಿ ಕೆಲಸ ಮಾಡಿದರೆ ಮುಂದೆ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಮಾರಕವಾಗುವ ಸಾಧ್ಯತೆಯೂ ಇದೆ. ಹೀಗೆ ಪಶ್ಚಿಮ ಬಂಗಾಳದ ಬಳಿಕ ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಬಿಗ್ ಶಾಕ್ ಉಂಟಾಗಿದೆ.