ಕೋವಿಡ್ ಸೋಂಕಿನಿಂದ ಭಾರತ ತತ್ತರಿಸಿ ಹೋಗಿದ್ದು, ಆಕ್ಸಿಜನ್, ಬೆಡ್‌ಗಳ ಕೊರತೆಯ ಸಮಸ್ಯೆ ಎದುರಾಗಿದೆ. ಇದೀಗಾ ಭಾರತದ ಸಹಾಯಕ್ಕೆ ಅಮೇರಿಕಾ ನೆರವಿಗೆ ಧಾವಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧ ದೈರ್ಯವಾಗಿ ಹೋರಾಡಲು ನಾವು ಭಾರತೀಯರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.
ಭಾರತದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಉಲ್ಬಣಗೊಂಡಿರುವುದರ ಬಗ್ಗೆ ಅಮೇರಿಕಾ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ. ಭಾರತದ ನನ್ನೆಲ್ಲ ಸ್ನೇಹಿತರು ಮತ್ತು ಸಹಭಾಗಿಗಳು ಸೋಂಕಿನ ವಿರುದ್ಧ ದೈರ್ಯವಾಗಿ ಹೋರಾಡಲು, ಅಗತ್ಯವಿರುವ ಎಲ್ಲಾ ಸಾಮಾಗ್ರಿಗಳನ್ನು ಸದ್ಯದಲ್ಲಿಯೇ ಕಳುಹಿಸಲಾಗುವುದು ಎಂದು ಅಮೇರಿಕಾದ ಭದ್ರತಾ ಸಲಹೆಗಾರ ಜೇಕ್ ಸಲ್ಲಿವಾನ್ ಟ್ವೀಟ್ ಮಾಡಿದ್ದಾರೆ.
ಅಮೇರಿಕಾ ಭದ್ರತಾ ಸಲಹೆಗಾರನ ಟ್ವೀಟ್‌ನನ್ನು ಚೆನ್ನೈನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿಯು ಕನ್ನಡ, ಮಲೆಯಾಳಂ, ಮತ್ತು ತಮಿಳಿನಲ್ಲಿ ಅನುವಾದ ಮಾಡಿದೆ. ಹಾಗೆಯೇ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಕೂಡ ಭಾರತದಲ್ಲಿನ ಕೋವಿಡ್ ಸಂಕಷ್ಟದ ಕುರಿತು ಟ್ವೀಟ್ ಮಾಡಿದ್ದು, ಕರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ಸರ್ಕಾರದೊಂದಿಗೆ ನಾವು ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದಲ್ಲಿನ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚುವರಿ ಬೆಂಬಲವನ್ನು ಬಹುಬೇಗ ನಿಯೋಜಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳನ್ನು ತಕ್ಷಣ ಕಳುಹಿಸುವುದಾಗಿ ಅಮೆರಿಕಾ ಏಪ್ರಿಲ್ 25 ರಂದು ತಿಳಿಸಿತ್ತು. ಈ ಸಂಧರ್ಭದಲ್ಲಿ ಭಾರತಕ್ಕೆ ಸಂಪೂರ್ಣ ನೆರವು ನೀಡಲು ಅಮೇರಿಕಾ ಸರ್ಕಾರ ಸದಾ ಸಿದ್ದವಿದೆ, ನಾವು ಕೋವಿಡ್ ಸಮಸ್ಯೆ ಎದುರಿಸಿದಾಗ ಭಾರತ ನಮಗೆ ಬೆಂಬಲ ನೀಡಿತ್ತು. ಈಗ ಭಾರತಕ್ಕೆ ಅಗತ್ಯದ ಸಮಯದಲ್ಲಿ ನಾವು ಸಹಕರಿಸಲ್ಲಿದ್ದೇವೆ ಎಂದು ಅಧ್ಯಕ್ಷ ಜೋ ಬಿಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ. ಹೆಚ್ಚು ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾವಸ್ತು, ಆಕ್ಸಿಜನ್, ವೆಂಟಿಲೇಟರ್ ನೀಡುವುದಾಗಿ ತಿಳಿಸಿದೆ.
ಇಂಗ್ಲೆಂಡ್ ಕೂಡ ಭಾರತದ ನೆರವಿಗೆ ಮುಂದಾಗಿದೆ. 600 ಕ್ಕೂ ಹೆಚ್ಚು ಅಗತ್ಯ ವೈದ್ಯಕೀಯ ಉಪಕರಣಗಳು ಏಪ್ರಿಲ್ 28 ರಂದು ಭಾರತಕ್ಕೆ ತಲುಪಲಿದೆ. ಆಮ್ಲಜನಕವನ್ನು ಹೊರತೆಗೆಯ ಬಲ್ಲ 495 ಆಕ್ಸಿಜನ್ ಕಾಂನ್ಸಂಟ್ರೇಟರ್, 120 ನಾನ್ ಇನ್‌ವೇಸಿವ್ ವೆಂಟಿಲೇಟರ್‌ಗಳು, 20 ಹಸ್ತಚಾಲಿತ ವೆಂಟಿಲೇಟರ್‌ಗಳು ಸೇರಿದಂತೆ 9 ವಿಮಾನಯಾನ ಕಂಟೇನರ್ ಲೋಡ್‌ನಷ್ಟು ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿಕೊಡುವುದಾಗಿ ಇಂಗ್ಲೆಂಡ್ ಸರ್ಕಾರ ತಿಳಿಸಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ನೇಹಿತನಾಗಿ, ಪಾಲುದಾರನ್ನಾಗಿ, ಭಾರತದ ನೆರವಿಗೆ ನಿಲ್ಲುತ್ತೇವೆಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭರವಸೆ ಕೊಟ್ಟಿದ್ದಾರೆ.

