ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಕರೆದಿದ್ದ ಮೂರು ದಿನಗಳ ವಿಶೇಷ ಅಧಿವೇಶನ ಆರಂಭದಲ್ಲೇ ಕಾವೇರಿದೆ. ವಿಧಾನ ಪರಿಷತ್ ಕಲಾಪದ ಆರಂಭದಲ್ಲೇ ‘ವಂದೇ ಮಾತರಂ’ ಗೀತೆ ಹಾಡುವ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಸದನದಲ್ಲಿ ಭಾರಿ ಗದ್ದಲ ಕೋಲಾಹಲ ಸೃಷ್ಟಿಯಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ‘ವಂದೇ ಮಾತರಂ’ ಗೀತೆಯನ್ನು ಹಾಡಲಾಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಿ ಮುಕ್ತಾಯಗೊಳಿಸಿದರು. ಆಡಳಿತ ಪಕ್ಷದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸಂಪೂರ್ಣ ಗೀತೆಯನ್ನು ಪೂರ್ಣವಾಗಿ ಹಾಡಲು ಮುಂದಾದರು.

ರಾಷ್ಟ್ರೀಯ ಗೀತೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಅಗೌರವ ತೋರಲಾಗಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ಸದನದಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಇತ್ತ ಕಾಂಗ್ರೆಸ್ ಸದಸ್ಯರೂ ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿದ್ದರಿಂದ ಉಭಯ ಪಕ್ಷಗಳ ನಡುವೆ ತೀವ್ರ ಮಾತಿನ ವಾಕ್ಸಮರ ನಡೆಯಿತು.






