ನವದೆಹಲಿ : ರಿಯಾಯಿತಿ ದರದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಗಡುವನ್ನು ನಿಗದಿಪಡಿಸಿದೆ. ಅಕ್ಟೋಬರ್ 1 ರಿಂದ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ಮತ್ತು ಸಬ್ಸಿಡಿ ಹಣ ನೇರವಾಗಿ ಖಾತೆಗೆ ಜಮೆಯಾಗಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯವಾಗಿದೆ.
ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಸೌಲಭ್ಯ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಿಲಿಂಡರ್‌ಗಳನ್ನು ಪೂರ್ಣ ಮಾರುಕಟ್ಟೆ ದರದಲ್ಲೇ ಖರೀದಿಸಬೇಕಾಗುತ್ತದೆ. ವಿಶೇಷವಾಗಿ ಬಾಡಿಗೆದಾರರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಕೊನೆ ಕ್ಷಣದ ಗೊಂದಲ ತಪ್ಪಿಸಲು ಸೆಪ್ಟೆಂಬರ್ 30ರೊಳಗೇ ಈ ಪ್ರಕ್ರಿಯೆ ಮುಗಿಸಿಕೊಳ್ಳಲು ಸೂಚಿಸಲಾಗಿದೆ.

ದೇಶಾದ್ಯಂತ ಈಗಾಗಲೇ ಶೇಕಡಾ 89.9 ರಷ್ಟು, ಅಂದರೆ ಸುಮಾರು 27.43 ಕೋಟಿ ಗ್ರಾಹಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅವರು ಮತ್ತೆ ಯಾವುದೇ ದೃಢೀಕರಣ ಮಾಡುವ ಅಗತ್ಯವಿಲ್ಲ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಹಾಗೂ ಸಾಮಾನ್ಯ ಪಹಲ್ (PAHAL) ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಪ್ರತಿಯೊಬ್ಬ ಗ್ರಾಹಕರಿಗೂ ಈ ನಿಯಮ ಅನ್ವಯಿಸುತ್ತದೆ. ಕೇವಲ ಒಟಿಪಿ (OTP) ಆಧಾರಿತ ಪರಿಶೀಲನೆ ಸಬ್ಸಿಡಿಗೆ ಮಾನ್ಯವಾಗುವುದಿಲ್ಲ; ಬೆರಳಚ್ಚು, ಕಣ್ಣಿನ ಸ್ಕ್ಯಾನ್ (ಐರಿಸ್) ಅಥವಾ ಆಧಾರ್ ಫೇಸ್ ಆರ್‌ಡಿ ಆ್ಯಪ್ ಮೂಲಕ ಮುಖದ ಚಹರೆ ದೃಢೀಕರಿಸುವುದು ಕಡ್ಡಾಯವಾಗಿದೆ.

ಗ್ರಾಹಕರು ತಮ್ಮ ತೈಲ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್‌ಡಿ ಆ್ಯಪ್ ಬಳಸಿ ಮನೆಯಲ್ಲೇ ಕುಳಿತು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು. ಇಲ್ಲವೇ ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿಯ ಮೂಲಕ ಅಥವಾ ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಬಯೋಮೆಟ್ರಿಕ್ ದಾಖಲಿಸಬಹುದು. ಬೆರಳಚ್ಚು ಬಾರದ ಸಂದರ್ಭಗಳಲ್ಲಿ ಮುಖ ಚಹರೆ ಅಥವಾ ಏಜೆನ್ಸಿಯ ನೆರವಿನ ಮೂಲಕ ಪರ್ಯಾಯ ದೃಢೀಕರಣ ಪಡೆಯಲು ಅವಕಾಶವಿದೆ. ಜತೆಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವುದನ್ನು ಡಿಬಿಟಿ ಭಾರತ್ ಪೋರ್ಟಲ್‌ನಲ್ಲಿ ಖಚಿತಪಡಿಸಿಕೊಳ್ಳಬಹುದು ಹಾಗೂ ಸಬ್ಸಿಡಿ ವಿವರಗಳನ್ನು ಉಮಂಗ್ ಆ್ಯಪ್ ಮೂಲಕ ಪರಿಶೀಲಿಸಬಹುದು. ಯಾವುದೇ ಹೆಚ್ಚಿನ ಮಾಹಿತಿ ಅಥವಾ ನೆರವಿಗಾಗಿ 1800-2333-555 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.






