ಮುಂಬೈ: ಮುಂಬೈನ ಪ್ರತಿಷ್ಠಿತ ಕೋಸ್ಟಲ್ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅತಿ ವೇಗವಾಗಿ ಬಂದ ಬಿಎಂಡಬ್ಲ್ಯು (BMW) ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಬ್ಯಾರಿಯರ್‌ಗೆ ಡಿಕ್ಕಿಯಾಗಿ, ಸೇತುವೆಯಿಂದ ನಿರ್ಮಾಣ ಹಂತದಲ್ಲಿದ್ದ ಪಾರ್ಕಿಂಗ್ ತಾಣಕ್ಕೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ಮುಂಜಾನೆ ಸುಮಾರು 5:20ರ ಸುಮಾರಿಗೆ ಮರೀನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು. ಲಾಲಾ ಲಜಪತ್‌ರಾಯ್ ಕಾಲೇಜು ಎದುರಿನ ಲೋಟಸ್ ಜೆಟ್ಟಿ ಬಳಿ ಇದ್ದ ತಿರುವನ್ನು ಚಾಲಕ ಸರಿಯಾಗಿ ಗ್ರಹಿಸದ ಕಾರಣ, ಕಾರು ನಿಯಂತ್ರಣ ಕಳೆದುಕೊಂಡು ಹೊರಭಾಗದ ರೇಲಿಂಗ್‌ಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸೇತುವೆಯ ಮೇಲಿಂದ ಕೆಳಗೆ ನಿರ್ಮಾಣ ಹಂತದಲ್ಲಿದ್ದ ಪಾರ್ಕಿಂಗ್ ಸ್ಥಳಕ್ಕೆ ಬಿದ್ದಿದೆ. ಅಪಘಾತದಲ್ಲಿ ಐಷಾರಾಮಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ನಾಲ್ವರನ್ನೂ ತಕ್ಷಣವೇ ಸ್ಥಳೀಯ ನಾಯರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೂವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತರನ್ನು ಶನಾಯಾ ಗಜ್ಜಲ್ (21), ಆದಿತ್ಯ ಜಕಸಾನಿಯಾ (20) ಮತ್ತು ಧೈರ್ಯ ಸೇಠ್ (17) ಎಂದು ಗುರುತಿಸಲಾಗಿದೆ.ಸುಮಾರು 20 ವರ್ಷ ಪ್ರಾಯದ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (Trauma Ward) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡ ನಾಲ್ವರೂ ಮೂಲತಃ ಗುಜರಾತ್‌ನ ಅಹಮದಾಬಾದ್‌ನವರು ಎಂದು ತಿಳಿದುಬಂದಿದೆ. ಶನಾಯಾ ಮತ್ತು ಆದಿತ್ಯ ಜುಹುವಿನ ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೆ, ಧೈರ್ಯ ಸೇಠ್ ಕುರ್ಲಾದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದನು. ಅಪಘಾತಕ್ಕೀಡಾದ ಬಿಎಂಡಬ್ಲ್ಯು ಕಾರು ಶನಾಯಾ ಗಜ್ಜಲ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಮುಂಬೈನ ಮರೀನ್ ಡ್ರೈವ್ ಮತ್ತು ಬಾಂದ್ರಾ-ವರ್ಲಿ ಸೀ ಲಿಂಕ್‌ನ ವರ್ಲಿ ತುದಿಯನ್ನು ಸಂಪರ್ಕಿಸುವ 10.58 ಕಿ.ಮೀ ಉದ್ದದ ಹೈಸ್ಪೀಡ್ ಕೋಸ್ಟಲ್ ರಸ್ತೆಯಲ್ಲಿ ಈ ದುರಂತ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






