ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಬಿಜೆಪಿಯ ವಿರುದ್ದ ಆಡಳಿತ ವಿರೋಧಿ ಅಲೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಪ್ರಧಾನಿ ಮೋದಿಯವರ ಉತ್ತರ ಪ್ರದೇಶ ಭೇಟಿ, ಒಂದರ ಮೇಲೊಂದರಂತೆ ಹಲವು ಯೋಜನೆಗಳ ಲೋಕಾರ್ಪಣೆ, ಹೊಸ ಯೋಜನೆಗಳ ಘೋಷಣೆ ಹೆಚ್ಚಾಗುತ್ತಲೇ ಇದೆ. ಸ್ಪಷ್ಟವಾಗಿ, ಮತದಾರರ ಗಮನವನ್ನು ಸಿಎಂ ಯೋಗಿ ಆದಿತ್ಯನಾಥ್ ಮೇಲಿನಿಂದ ಮೋದಿಯೆಡೆಗೆ ತಿರುಗಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೇ ಇವೆ.
ಉತ್ತರ ಪ್ರದೇಶದಲ್ಲಿ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿವೆ. ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಾರ್ಟಿ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಈಗಾಗಲೇ ತಮ್ಮ ಮತಬ್ಯಾಂಕಿನ ಒಗ್ಗಟ್ಟಿಗೆ ಪ್ರಚಾರ ಸಭೆಗಳನ್ನು ಆರಂಭಿಸಿದ್ದಾರೆ. ಸರ್ಕಾರವು ಒಂದರ ಮೇಲೊಂದರಂತೆ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಜಕೀಯ ಪಕ್ಷಗಳೊಂದಿಗೆ ಕಾರ್ಯನಿರ್ವಹಿಸುವ ಸಂಸ್ಥೆಗಳು ಕೂಡಾ ಹಿಂಬಾಗಿಲನ ಪ್ರಚಾರವನ್ನು ಈಗಾಗಲೇ ಆರಂಭಿಸಿ ಆಗಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ವಿಪಕ್ಷಗಳು ತಕ್ಕ ಮಟ್ಟಿನ ಯಶಸ್ಸು ಪಡೆದಿವೆ. ಕೇವಲ ಒಂದು ಎರಡು ಘಟನೆಗಳಲ್ಲ, ಬದಲಾಗಿ ಕಳೆದ ಐದು ವರ್ಷಗಳಲ್ಲಿ ನಡೆದಂತಹ ಜನವಿರೋಧಿ, ದಲಿತ ವಿರೋಧಿ, ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಘಟನೆಗಳು ಈಗ ಬಿಜೆಪಿ ಪಾಲಿಗೆ ಮುಳುವಾಗಿವೆ. ಕೇವಲ ಹಿಂದೂ, ಹಿಂದುತ್ವ ಎಂದು ಭಾಷಣ ಬಿಗಿಯುತ್ತಿದ್ದ ಬಿಜೆಪಿಗೆ ರೈತರ ಪ್ರತಿಭಟನೆಯ ಕುರಿತು ಮಾತನಾಡುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ, ಭವಿಷ್ಯದ ಪ್ರಧಾನಿ ಎಂದು ಬಿಜೆಪಿಯ ಪಟಾಲಂ ಹೇಳಿಕೊಳ್ಳುತ್ತಿರುವ ಬೆನ್ನಲ್ಲೇ, ಎಲ್ಲೋ ಉತ್ತರ ಪ್ರದೇಶ ಚುನಾವಣೆ ಯೋಗಿ ನೇತೃತ್ವದಲ್ಲಿ ನಡೆದರೆ ಸೋಲುವ ಸಂಭವವಿದೆ ಎಂಬ ಗುಮಾನಿಯೂ ಬಿಜೆಪಿ ಹೈಕಮಾಂಡ್ ಒಳಗೆ ಹುಟ್ಟಿಕೊಂಡಿದೆ.
ದೇಶದಲ್ಲಿ ಇಲ್ಲಿಯವರೆಗೆ ಬಿಜೆಪಿ ಸೋಲುವ ಭಯವಿದ್ದ ರಾಜ್ಯಗಳಲ್ಲಿ ತಕ್ಕ ಮಟ್ಟಿನ ಯಶಸ್ಸು ತಂದುಕೊಟ್ಟಿದ್ದು, ಪ್ರಧಾನಿ ಮೋದಿ ವರ್ಚಸ್ಸು. ಯಾವಾಗ ರಾಜ್ಯ ನಾಯಕರು ವಿಫಲರಾಗುತ್ತಾರೋ ಮೋದಿ ದುತ್ತನೆ ಪ್ರತ್ಯಕ್ಷರಾಗುತ್ತಾರೆ. ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಪ್ರಧಾನಿ ಮೋದಿಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿವೆ. ರಾಜ್ಯ ನಾಯಕರು ನಗಣ್ಯರಾಗಿ ಹೋಗಿದ್ದಾರೆ. ಇದೇ ಪರಿಸ್ಥಿತಿ ಈಗ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಚುನಾವಣಾ ಕಣಕ್ಕೆ ಈಗ ಮೋದಿ ಇಳಿಯಲೇ ಬೇಕಾದ ಅನಿವಾರ್ಯತೆ. ಕೃಷಿ ಕಾಯ್ದೆಗಳನ್ನು ರೈತರ ಮೇಲಿನ ಪ್ರೀತಿಯಿಂದ ಅಥವಾ ರೈತ ಆಂದೋಲನದ ಭಯದಿಂದ ಹಿಂಪಡೆಯಲಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಪ್ರತಿಭಟನಾ ನಿರತ ರೈತರೇ ಸುತರಾಂ ತಯಾರಿಲ್ಲ. ಚುನಾವಣೆ ಸೋಲಿನ ಭಯ, ಎಂತ ನಿರ್ಭಾವುಕ, ಸರ್ವಾಧಿಕಾರಿ ಧೋರಣೆಯ ನಾಯಕನನ್ನೂ ಚಿಂತೆಗೀಡು ಮಾಡಬಲ್ಲದು ಎಂಬುದಕ್ಕೆ ಕೃಷಿ ಕಾಯ್ದೆಗಳ ವಾಪಸಾತಿಯೇ ಉದಾಹರಣೆ.
ಜ್ವಲಂತ ಸಮಸ್ಯೆಗಳ ಮೇಲೆ ವಿಪಕ್ಷಗಳ ಗಮನ:
ಉತ್ತರ ಪ್ರದೇಶದಲ್ಲಿ ಪದೇ ಪದೇ ಘಟಿಸುತ್ತಿರುವ ಅಸಹನೀಯ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಅತಿಯಾದ ಬೆಲೆ ಏರಿಕೆ, ನಿರುದ್ಯೋಗ, ರೈತರ ಮೇಲಿನ ದಬ್ಬಾಳಿಕೆ, ರೈತರ ಮೇಲೆ ಕಾರು ಹರಿಸಿ ನಡೆಸಿರುವ ಕೊಲೆ, ಪೊಲೀಸರ ದೌರ್ಜನ್ಯ ಮುಂತಾದ ಜ್ವಲಂತ ಸಮಸ್ಯೆಗಳು ಪ್ರತಿ ಚುನಾವಣಾ ರ್ಯಾಲಿಯಲ್ಲಿ ಮಾರ್ದನಿಸುತ್ತಿವೆ. ವಿಪಕ್ಷಗಳು ಬಿಜೆಪಿಯ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸುತ್ತಿವೆ. ಜನರ ಗಮನವನ್ನು ಕೋಮು ಆಧಾರಿತ ರಾಜಕಾರಣದಿಂದ ವಿಷಯಾಧಾರಿತ ರಾಜಕಾರಣದತ್ತ ಸೆಳೆಯಲು ಪ್ರಯತ್ನ ಪಡುತ್ತಿವೆ.
ವಿಪಕ್ಷಗಳ ಯತ್ನ ನೀರಿನಲ್ಲಿ ಮಾಡಿದ ಹೋಮದಂತಾಗಲಿಲ್ಲ ಎಂಬುದಂತೂ ಸತ್ಯ. ಇತ್ತೀಚಿಗೆ ಖುಶಿನಗರದಲ್ಲಿ ಏರ್ಪೋರ್ಟ್ ಉದ್ಘಾಟಿಸಲು ಖುದ್ದು ಪ್ರಧಾನಿ ಮೋದಿ ಬಂದಾಗ ಸಮಾರಂಭಕ್ಕೆ ಜನ ಸೇರಿಸಲು ಬಿಜೆಪಿ ನಾಯಕರು ಒದ್ದಾಡಿದ್ದರು. ಬಿಜೆಪಿಯ ಭದ್ರಕೋಟಿ ಎನ್ನಿಸಿಕೊಂಡಿರುವ ಪೂರ್ವಾಂಚಲದಲ್ಲಿ ನಡೆದ ಸಮಾವೇಶಕ್ಕೂ ಜನರ ಪ್ರತಿಕ್ರಿಯೆ ನೀರಸವಾಗಿತ್ತು. ಇದು ನಿಜಕ್ಕೂ ಬಿಜೆಪಿ ಹೈಕಮಾಂಡಿನ ನಿದ್ದೆಗೆಡಿಸಿದೆ. ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಜನರನ್ನು ಕಾರ್ಯಕ್ರಮಕ್ಕೆ ತರುವ ವ್ಯವಸ್ಥೆ ಮಾಡುವ ಮಟ್ಟಕ್ಕೆ ಬಿಜೆಪಿ ನಾಯಕರ ವರ್ಚಸ್ಸು ಕುಸಿದಿದೆ.
ಇದೇ ವೇಳೆ, ಕಾಂಗ್ರೆಸ್ ಹಾಗೂ ಎಸ್.ಪಿ ರ್ಯಾಲಿಗಳಿಗೆ ಜನರ ದಂಡು ಹರಿದು ಬರುತ್ತಿದೆ. ಸ್ವಯಂಪ್ರೇರಿತ ಜನರ ದಂಡು ಹಾಗೂ ಬಲವಂತದಿಂದ ಕಾರ್ಯಕ್ರಮಕ್ಕೆ ಹಾಜರಾದ ಜನರ ನಡುವಿನ ವ್ಯತ್ಯಾಸ ಅರಿಯದೇ ಇರುವಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ. ಪರಿಸ್ಥಿತಿ ಹೀಗಿರುವಾಗ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ಹೊಸ ತಂತ್ರವನ್ನು ರೂಪಿಸಲೇಬೇಕಾದ ಅನಿವಾರ್ಯತೆಯನ್ನು ಹೊಂದಿದ್ದಾರೆ.
“ವಿಪಕ್ಷಗಳು ರಾಜ್ಯದ ಸಮಸ್ಯೆಗಳನ್ನು ಜನರ ಮುಂದಿಡುವಲ್ಲಿ ಸಫಲರಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿರುವುದನ್ನು ವಿವರಿಸುವ ಪ್ರಯತ್ನಗಳು ನಡೆಸಯುತ್ತಿವೆ. ಇದು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದೆ. ಆಡಳಿತ ವಿರೋಧಿ ಅಲೆಯ ನಡುವೆ ಜನರ ಗಮನ ಬೇರೆಡೆ ಸೆಳುವ ಅಗತ್ಯತೆ ಬಿಜೆಪಿಗಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಬಳಿಕ ಪರಿಸ್ಥಿತಿ ಬದಲಾಗುವ ಸಂಭವಗಳಿವೆ. ಪಿಎಂ ರ್ಯಾಲಿಗಳಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗಬಹುದು,” ಎಂದು ಹಿರಿಯ ಪತ್ರಕರ್ತ ಮನೋಜ್ ಕುಮಾರ್ ಸಿಂಗ್ ವಿಶ್ಲೇಷಿಸಿದ್ದಾರೆ.
ಕೃಷಿ ಕಾಯ್ದೆಗಳ ವಿಚಾರದಲ್ಲಿ ಸರ್ಕಾರ ಯೂಟರ್ನ್ ಹೊಡೆದಿದ್ದು, ಬಿಜೆಪಿಯ ಸದ್ಯದ ಅಸಹಾಯಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಆರೇಳು ತಿಂಗಳ ಹಿಂದೆಯೇ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದರೆ, ಬಿಜೆಪಿ ಇದರ ಲಾಭ ಪಡೆಯಬಹುದಿತ್ತು. ಆದರೆ ಈಗ ಇದೊಂದು ಚುನಾವಣಾ ಗಿಮಿಕ್ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಕೇವಲ ಹಿಂದುತ್ವದ ಆಧಾರದಲ್ಲಿ ಜನರನ್ನು ಮರುಳು ಮಾಡಬಹುದು ಎಂದು ಅಂದುಕೊಂಡಿದ್ದ ಬಿಜೆಪಿಯ ವರ್ಚಸ್ಸು ಕುಂದುತ್ತಿರುವುದು ಅರಿವಾಗಿದೆ. ಈ ವರ್ಚಸ್ಸು ವಾಪಸ್ ಪಡೆಯಲು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ಪ್ರಧಾನಿ ಮೋದಿ ರೈತಪರ ನಾಯಕ ಎಂಬುದನ್ನು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೂ ಮಿಗಿಲಾಗಿ, ಯೋಗಿ ಆದಿತ್ಯನಾಥನ್ನು ಬದಿಗೆ ಸರಿಸಿ ಪ್ರಧಾನಿ ಮೋದಿ ವರ್ಚಸ್ಸಿನಿಂದ ಮತ್ತೊಂದು ಚುನಾವಣೇ ಎದುರಿಸಲು ಬಿಜೆಪಿ ಯೋಜನೆ ಹಾಕಿಕೊಂಡಿರುವುದು ಸ್ಪಷ್ಟವಾಗಿದೆ.