ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಯುದ್ಧ ಸಂಬಂಧಿ ವಾತಾವರಣ ಮೂಡುತ್ತಿದ್ದಂತೆ ಶೀತಲ ಸಮರದ ನಂತರ ಇದು ಯುರೋಪಿನಲ್ಲಿನ ಅತಿ ದೊಡ್ಡ ಪಡೆಗಳ ಕೇಂದ್ರೀಕರಣವಾಗಿದೆ ಎಂದು ನ್ಯಾಟೋ ಹೇಳಿದೆ. ಇದರ ಬೆನ್ನಲ್ಲೇ ರಷ್ಯಾ ಉಕ್ರೇನ್ ಗಡಿಯಲ್ಲಿ ತನ್ನ ಸೈನ್ಯ ಜಮಾವಣೆ ಮಾಡುವುದನ್ನು ಮುಂದುವರೆಸಿದೆ ಎಂದು North Atlantic Treaty Organization ಮತ್ತು ಯುನೈಟೆಡ್ ಸ್ಟೇಟ್ಸ್ (U.S.) ಬುಧವಾರ ಹೇಳಿಕೊಂಡಿವೆ.
ಉಕ್ರೇನ್ (Ukraine) ಗಡಿಯಿಂದ ರಷ್ಯಾ (Russian) ತನ್ನ ಕೆಲವು ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂಬ ವರದಿಗಳ ಮಧ್ಯೆ ಅವರ ಮೇಲೆ ಈ ಆರೋಪಗಳು ಬಂದಿದ್ದು ಇದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಿಕೆಯ ಸಂಕೇತದಂತೆ ಕಂಡುಬರುತ್ತದೆ.
ಈ ವರ್ಷದ ಆರಂಭದಿಂದಲೇ ರಷ್ಯಾ ಉಕ್ರೇನ್ ಗಡಿಯುದ್ದಕ್ಕೂ ತನ್ನ 1 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಜಮಾವಣೆ ಮಾಡಲು ಪ್ರಾರಂಭಿಸಿತ್ತು. ಸೋವಿಯತ್ ಒಕ್ಕೂಟದಲ್ಲಿ ಒಟ್ಟಿಗೆ ಇದ್ದ ಎರಡು ದೇಶಗಳು ಆನಂತರ ಆತಂರಿಕ ಭಿನ್ನಾಭಿಪ್ರಾಯದಿಂದ ಬೇರೆಯಾಗಿದ್ದವು. ಅಂದಿನಿಂದಲೂ ಎರಡೂ ದೇಶಗಳ ಮಧ್ಯೆ ದ್ವೇಷ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. 2014ರಲ್ಲಿ ಉಕ್ರೇನ್ನ ಕ್ರಿಮಿಯನ್ ಪೆನಿನ್ಸುಲಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡ ನಂತರ ಮತ್ತು ದೇಶದ ಪೂರ್ವ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ನಲ್ಲಿ ಪ್ರತ್ಯೇಕತಾವಾದಿ ದಂಗೆಗಳನ್ನು ರಷ್ಯಾ ಬೆಂಬಲಿಸ ತೊಡಗಿದ ನಂತರ ಎರಡೂ ದೇಶಗಳಲ್ಲಿ ಸಂಘರ್ಷದ ಭೀತಿ ಮತ್ತೆ ತಲೆದೋರಿತು.
ಇದೀಗ ಉಕ್ರೇನ್ ಗಡಿಯಲ್ಲಿ ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸುತ್ತಿದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಹೇಳಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ. NATO ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದ್ದು ಪೂರ್ವ ಮತ್ತು ಮಧ್ಯ ಯುರೋಪ್ಗೆ ಸೈನ್ಯವನ್ನು ಕಳುಹಿಸಲು ಪರಿಗಣಿಸುತ್ತಿದೆ ಎಂದು ಅವರು ಹೇಳಿದ್ದಾರೆ. “ರಷ್ಯಾ ಮಿಲಿಟರಿ ಜಮಾವಣೆಯನ್ನು ಮುಂದುವರೆಸಿದಂತೆ ತೋರುತ್ತದೆ. ಅವರು ಗಡಿಯಲ್ಲಿನ ತಮ್ಮ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ ಮತ್ತು ಮತ್ತು ಇನ್ನಷ್ಟು ಸೈನಿಕ ಪಡೆಗಳು ಉಕ್ರೇನ್ ಗಡಿಯತ್ತ ಚಲಿಸುತ್ತಿದೆ” ಎಂದು ಹೇಳಿದ್ದಾರೆ.
ರಷ್ಯಾದ ಭರವಸೆಗಳು ಮತ್ತು ಕಾರ್ಯಗಳ ನಡುವೆ ವ್ಯತ್ಯಾಸವಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ ಎಂದೂ ದಿ ಗಾರ್ಡಿಯನ್ ವರದಿ ಮಾಡಿದೆ. ಗಡಿಯಿಂದ ರಷ್ಯಾ ತನ್ನ ಸೈನಿಕರನ್ನು ಹಿಂತೆಗೆದುಕೊಳ್ಳುವುದನ್ನು ನಂಬಲಾಗದು ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ, ಶ್ವೇತಭವನದ ಹಿರಿಯ ಆಡಳಿತ ಅಧಿಕಾರಿಯೊಬ್ಬರು ಬುಧವಾರ ಉಕ್ರೇನ್ನೊಂದಿಗಿನ ತನ್ನ ಗಡಿಗೆ ರಷ್ಯಾ 7,000 ಸೈನಿಕರನ್ನು ಕಳುಹಿಸಿದೆ ಎಂದು ಹೇಳಿದ್ದಾರೆ. “ಉಕ್ರೇನ್ ಮೇಲಿನ ಆಕ್ರಮಣವನ್ನು ಸಮರ್ಥಿಸಲು ಅವರು ಯಾವುದೇ ಕ್ಷಣದಲ್ಲಿ ಸುಳ್ಳು ನೆಪವನ್ನು ಮುಂದಿಡಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಬ್ಲಿಂಕೆನ್ ಅವರು ಗುರುವಾರ ಮತ್ತು ಶನಿವಾರದ ನಡುವೆ ಜರ್ಮನಿಯಲ್ಲಿ ನಡೆಯಲಿರುವ ಮ್ಯೂನಿಚ್ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿದ್ದು, ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ನಾಯಕತ್ವವನ್ನು ಅವರು ಒಗ್ಗೂಡಿಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಅಲ್ಲದೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ಭಾರತದ (India) ಬೆಂಬಲವನ್ನು ನಿರೀಕ್ಷಿಸುವುದಾಗಿ ಅಮೆರಿಕ ಬುಧವಾರ ಹೇಳಿದೆ ಎಂದೂ ಪಿಟಿಐ ವರದಿ ಮಾಡಿದೆ.
ಫೆಬ್ರವರಿ 11 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನಡೆದ ಕ್ವಾಡ್ ಮಂತ್ರಿ ಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಶಾಂತಿಯುತ ಪರಿಹಾರಕ್ಕಾಗಿ ನಾಯಕರು ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಗುರುವಾರ ಹೇಳಿದ್ದಾರೆ. ಕ್ವಾಡ್ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ ಅನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಗುಂಪಾಗಿದ್ದು ಅಂತರರಾಷ್ಟ್ರೀಯ ನಿಯಮಾವಳಿಗಳ ಮೇಲೆ ಕಾರ್ಯನಿರ್ವಹಿಸುತ್ತದೆ.