ಕರ್ನಾಟಕದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆಗಳಲ್ಲಿ ನಡೆಯುವ ಸಾರ್ವಜನಿಕ ಸಮಾರಂಭಗಳಲ್ಲಿ ಕನ್ನಡವನ್ನು ಕಡೆಗಣಿಸಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಮುಂದೆ ಈ ರೀತಿಯ ಘಟನೆಗಳು ನಡೆದರೆ ಆಗುವ ಅನಾಹುತಗಳಿಗೆ ಆಯಾ ಸಂಸ್ಥೆಗಳೇ ಹೊಣೆಯಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ರಾಜ್ಯದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಾದ ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಹಾಗು ರಾಷ್ಟ್ರೀಯ ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿ 10-10-2021ರಂದು ನಡೆದ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಇಂದು (13-10-2021) ಉಭಯ ಸಂಸ್ಥೆಗಳ ಮುಖ್ಯಸ್ಥರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಹಾಗು ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್ ಅವರಿಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಬರೆದಿರುವ ಖಂಡನಾ ಪತ್ರವನ್ನು ನೀಡಲಾಯಿತು. ಆಗಿರುವ ಪ್ರಮಾದವನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಕಡೆಗಣನೆ ಆಗಿರುವುದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ ನಿರ್ದೇಶಕರು ಇನ್ನುಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನೋಡಿಕೊಳ್ಳುವುದಾಗಿ ವಾಗ್ದಾನ ಮಾಡಿದರು.

ನಿಮ್ಹಾನ್ಸ್ ಸಂಸ್ಥೆಗೆ ನೂರು ಎಕರೆ ಜಾಗ ನೀಡಿ, ಅಡಿಗಲ್ಲು ಹಾಕಿ ಸ್ಥಾಪಿಸಿದ್ದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. 1936ರಲ್ಲಿ ನಿಮ್ಹಾನ್ಸ್ ಸಂಸ್ಥೆಯನ್ನು ಸ್ಥಾಪಿಸಿದಾಗ ಹಿಂದಿ ಎಂಬ ಭಾಷೆಯ ಪರಿಚಯವೇ ಕನ್ನಡಿಗರಿಗೆ ಇರಲಿಲ್ಲ. ಇಂಥ ಸಂಸ್ಥೆಯಲ್ಲಿ ಹಿಂದಿ ನುಡಿಗೆ ಹೆಚ್ಚುಗಾರಿಕೆ ನೀಡಿ, ಕನ್ನಡಕ್ಕೆ ಅಪಮಾನ ಎಸಗಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ದೇಶಕರಿಗೆ ಮನವರಿಗೆ ಮಾಡಿಕೊಡಲಾಯಿತು.
ಅದೇ ರೀತಿ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಜಾಗದಲ್ಲಿ ಖಾಸಗಿ ಸಂಸ್ಥೆಗಳು ಸ್ಥಾಪಿಸುತ್ತಿರುವ ಕೋವಿಡ್ ಫೀಲ್ಡ್ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡ ಬಳಸದೆ ಸರ್ಕಾರದ ಆಡಳಿತ ಭಾಷಾನೀತಿಯನ್ನು ಉಲ್ಲಂಘಿಸಲಾಗಿದೆ. ಇನ್ನುಮುಂದೆ ಇದೇ ರೀತಿ ನಡೆದರೆ ಖಾಸಗಿ ಸಂಸ್ಥೆಗಳ ವಿರುದ್ಧವೂ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಷ ಬಿ.ಎಚ್.ಸತೀಶ್ ಗೌಡ, ಸಾಮಾಜಿಕ ಜಾಲತಾಣ ಮುಖ್ಯಸ್ಥ ದಿನೇಶ್ ಕುಮಾರ್ ಎಸ್.ಸಿ, ಯುವ ಘಟಕದ ರಾಜ್ಯಾಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ಸಾಮಾಜಿಕ ಜಾಲತಾಣ ಬೆಂಗಳೂರು ನಗರ ಅಧ್ಯಕ್ಷ ನಿತೀಶ್ ಮನುಗೌಡ, ವಿಜಯನಗರ ಕ್ಷೇತ್ರ ಘಟಕದ ಅಧ್ಯಕ್ಷ ಬಾಲು, ಯುವ ಘಟಕದ ಬೆಂಗಳೂರು ನಗರ ಅಧ್ಯಕ್ಷ ಕಾರ್ತಿಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.













