ಮುಂಬರುವ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿ ಅಧಿಕಾರದ ಪಟ್ಟಏರಲು ಬಿಜೆಪಿ ಮತ್ತು ಟಿಎಂಸಿ ಹರಸಾಹಸ ಪಡುತ್ತಿವೆ, ಈಗಾಗಲೇ ಟಿಎಂಸಿ ಪ್ರಬಲ ನಾಯಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ ಎದುರಾಗಿದೆ. ಟಿಎಂಸಿ ನಾಯಕ ದಿನೇಶ್ ತ್ರಿವೇದಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮೇ ನಲ್ಲಿ ನಡೆಯುವ ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿರುವುದು ಟಿಎಂಸಿ ನಾಯಕರಿಗೆ ಆಘಾತದ ಜೊತೆಗೆ ಕುತೂಹಲ ಕೆರಳಿಸಿದೆ. ಫೆಬ್ರವರಿ 12 ರಂದು ರಾಜ್ಯಸಭೆಯಲ್ಲಿ ಟಿಎಂಸಿ ನಾಯಕ ದಿನೇಶ್ ತ್ರಿವೇದಿ ಪ್ರತಿಕ್ರಿಯಿಸಿ “ನನ್ನ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿರುವುದು ನೋಡಲಾಗುತ್ತಿಲ್ಲ, ಈ ಬಗ್ಗೆ ನಾನು ಅಸಹಾಯಕನಾಗಿದ್ದೇನೆ. ಇದು ಪ್ರಜಾಪ್ರಭುತ್ವಕೆ ಅಪಾಯವಾಗಿದೆ. ನಾನು ಈ ಸ್ಥಾನದಲ್ಲಿ ಕುಳಿತುಕೊಂಡು ಏನು ಮಾಡಲಾಗುತ್ತಿಲ್ಲ, ಇಲ್ಲಿ ಕುಳಿತು ಕೊಂಡು ಏನನ್ನು ಮಾಡಲಾಗದಿದ್ದರೆ ರಾಜೀನಾಮೆ ಕೊಡ ಬೇಕೆಂದು ನನ್ನ ಆತ್ಮ ಹೇಳುತ್ತಿದೆ. ಆದ್ದರಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನನ್ನ ಮಾತೃಭೂಮಿಗೆ ಸೇವೆ ಸಲ್ಲಿಸಲು ಇಲ್ಲಿಗೆ ಬಂದಿದ್ದು, ನನ್ನನ್ನು ಇಲ್ಲಿಗೆ ಕಳುಹಿಸಿದ್ದಕ್ಕಾಗಿ ನನ್ನ ಪಕ್ಷಕ್ಕೆ ನಾನು ಅಭಾರಿಯಾಗಿದ್ದೇನೆ. ನನ್ನ ರಾಜ್ಯಕ್ಕಾಗಿ ಇನ್ನು ಮುಂದೆಯೂ ಕೆಲಸ ಮಾಡಲು ಸಿದ್ಧನಾಗಿದ್ದೇನೆಂದು ಎಂದು ಹೇಳುವ ಮೂಲಕ ದಿನೇಶ್ ತ್ರಿವೇದಿ ತನ್ನ ರಾಜೀನಾಮೆ ಪತ್ರವನ್ನು ರಾಜ್ಯಸಭೆಯ ಅಧ್ಯಕ್ಷರಾದ ವೆಂಕಯ್ಯನಾಯ್ಡು ಅವರಿಗೆ ಹಸ್ತಾಂತರಿಸಿದರು.
ಟಿಎಂಸಿ ನಾಯಕ ದಿನೇಶ್ ತ್ರಿವೇದಿ ಅವರ ರಾಜೀನಾಮೆ ನಿರ್ಧಾರ ತಿಳಿದು ಪಕ್ಷದ ನಾಯಕರಿಗೆ ದಿಗ್ಭ್ರಮೆಗೊಳಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ತೃಣ ಮೂಲ ಕಾಂಗ್ರೆಸ್ನ ಹಿರಿಯ ಮುಖಂಡ ಸೌಗತಾ ರಾಯ್ “ತ್ರಿವೇದಿ ಅವರ ರಾಜೀನಾಮೆ ವಿಷಯ ತಿಳಿದು ಬೇಸರವಾಗಿದೆ. ಅವರು ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರು ಪಕ್ಷದ ಕಾರ್ಯವೈಖರಿಯ ಬಗ್ಗೆ ಅತೃಪ್ತರಾಗಿದ್ದಾರೆಂದು ತಿಳಿದಿತ್ತು. ಆದರೆ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ತಿಳಿದಿರಲಿಲ್ಲ ಎಂದಿದ್ದಾರೆ.