ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಮಹದೇವಪ್ರಕಾಶ್‌ರಿಗೆ ಶೃದ್ಧಾಂಜಲಿ

ಪತ್ರಕರ್ತ, ಪತ್ರಿಕೋದ್ಯಮಿ, ಹಾಲಿ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಈ ಭಾನುವಾರ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕ ಶ್ರೀ ಮಹದೇವಪ್ರಕಾಶ್ ಇಂದು ಕೊರೋನಾ ಸೋಂಕಿಗೆ ಬಲಿಯಾಗಿರುವುದು ಮನಸಿಗೆ ಬಹಳ  ನೋವುಂಟುಮಾಡಿದೆ. 15 ವರ್ಷಗಳ ಹಿಂದೆ ನನ್ನ ಬರಹಗಳನ್ನು ಕಂಡು ತಮ್ಮ ಪತ್ರಿಕೆಯಲ್ಲಿ ಅಂಕಣ ಬರೆಯಲು ಕೋರಿದ ದಿನದಿಂದ ಆರಂಭವಾದ ನನ್ನ ಮತ್ತು ಅವರ ಅವಿನಾಭಾವ ಸಂಬಂಧದ ಕೊಂಡಿ ಇಂದು ಕಳಚಿದಂತಾಗಿದೆ.  ಕಳೆದ ಹಲವು ವರ್ಷಗಳಿಂದ ಮಾಸಿಕವಾಗಿ ಬರುತ್ತಿರುವ ಈ ಭಾನುವಾರ ಪತ್ರಿಕೆ ಮೊದಲು ವಾರಪತ್ರಿಕೆಯಾಗಿ, ಟ್ಯಾಬಲಾಯ್ಡ್ ವಿನ್ಯಾಸದಲ್ಲಿ ಪ್ರಕಟವಾಗುತ್ತಿತ್ತು.  ಕಳೆದ 15 ವರ್ಷ ಇರಬಹುದು (ಸರಿಯಾಗಿ ನೆನಪಿಲ್ಲ), ಒಂದು ಸಂಚಿಕೆಯೂ ನನ್ನ ಲೇಖನ ಇಲ್ಲದೆ ಪ್ರಕಟವಾಗಿಲ್ಲ. ವಾರಪತ್ರಿಕೆ ಇದ್ದಾಗಲೂ ಪ್ರತಿ ವಾರಕ್ಕೊಂದು ಲೇಖನ ಅವರಿಗಾಗಿಯೇ ಬರೆಯುತ್ತಿದ್ದೆ.

ತಿಂಗಳ ಮೊದಲ ವಾರದಲ್ಲಿ ಪತ್ರಿಕೆ ತಲುಪಿದೆಯೇ ಎಂದು ವಿಚಾರಿಸಲು ಫೋನ್ ಮಾಡುತ್ತಿದ್ದ ಪ್ರಕಾಶ್ ಒಂದು ವಾರದ ನಂತರ ಯಾವ ವಿಚಾರವನ್ನು ಬರೆಯಬಹುದು ಎಂದು ಕೂಲಂಕುಷ ಚರ್ಚೆ ನಡೆಸಿ ನನಗೆ ವಿಷಯ ಕೊಡುತ್ತಿದ್ದುದು ವಾಡಿಕೆ. ಕೆಲವೊಮ್ಮೆ ನಾನೇ ವಿಷಯದ ಆಯ್ಕೆ ಮಾಡಿರುವುದೂ ಉಂಟು. ಅವರ ಪತ್ರಿಕೆಯ ಪ್ರತಿಯೊಂದು ಸಂಚಿಕೆಯಲ್ಲೂ ನನ್ನ ಲೇಖನ ಪ್ರಕಟವಾಗುತ್ತಿತ್ತು. ನನ್ನೊಡನೆ ಸತ್ಯಲಿಂಗರಾಜು, ಭಾಸ್ಕರರಾವ್ ಮುಂತಾದವರು ಬರೆಯುತ್ತಿದ್ದರು. ಹತ್ತು ವರ್ಷಗಳ ಹಿಂದೆ ಒಮ್ಮೆ ಮೈಸೂರಿನಲ್ಲಿ ಭೇಟಿಯಾಗಿ ಒಟ್ಟಿಗೆ ಊಟ ಮಾಡಿದ್ದುದೂ ಉಂಟು. ಅದೇ ಮೊದಲ ಮತ್ತು ಕಡೆಯ ಭೇಟಿ. ಅವರ ಕಚೇರಿಗೆ ಹೋಗಬೇಕೆಂಬ ಬಯಕೆ ಈಡೇರಲೇ ಇಲ್ಲ. ಮಹದೇವಪ್ರಕಾಶ್ ಅಪಾರ ರಾಜಕೀಯ ಜ್ಞಾನ ಹೊಂದಿದ್ದರು. ಕರ್ನಾಟಕದ ಇತಿಹಾಸದ ಮತ್ತು ಏಕೀಕರಣದಿಂದ ಇಂದಿನವರೆಗಿನ ಸಮಕಾಲೀನ ರಾಜಕಾರಣದ ಬಗ್ಗೆ ಅವರ  ಜ್ಞಾನ ಅಪಾರ. ಬಸವಣ್ಣನ ಅನುಯಾಯಿ. ಬಸವ ತತ್ವದಲ್ಲಿ ಅಪಾರ ನಂಬಿಕೆ. ಮಾರ್ಕ್ಸ್ ವಾದಿ ಅಲ್ಲದಿದ್ದರೂ ನನ್ನ ಯಾವುದೇ ಲೇಖನಗಳನ್ನು ತಿರಸ್ಕರಿಸುತ್ತಿರಲಿಲ್ಲ. ನನ್ನ ಎಡಪಂಥೀಯ ನಿಲುವುಗಳನ್ನು ನಿರಾಕರಿಸುತ್ತಿರಲಿಲ್ಲ.  ಭಿನ್ನಾಭಿಪ್ರಾಯಗಳನ್ನು ಚರ್ಚಿಸುತ್ತಿದ್ದರು ಆದರೆ ಲೇಖನವನ್ನು ತಿದ್ದುಪಡಿ ಮಾಡಲು ಹೇಳುತ್ತಿರಲಿಲ್ಲ.

“ ನಿಮ್ಮ ಲೇಖನವನ್ನು ಪ್ರಕಟಣೆಯಾದ ನಂತರವೇ ಓದುವುದು ದಿವಾಕರ್ ” ಎಂದು ಹೆಮ್ಮೆಯಿಂದಲೇ  ಹೇಳುತ್ತಿದ್ದರು. ಗಂಟೆಗಟ್ಟಳೆ ವಾದ ವಾಗ್ವಾದ ಮಾಡಿದ ಸಂದರ್ಭಗಳಂತೂ ಅನೇಕ. ಸೈದ್ಧಾಂತಿಕವಾಗಿ ಎಷ್ಟೇ ಭಿನ್ನಾಭಿಪ್ರಾಯ ಹೊಂದಿದ್ದರೂ ಅವರಿಂದ ತಿಳಿದುಕೊಳ್ಳುವ ವಿಚಾರಗಳು ಬಹಳಷ್ಟಿದ್ದವು ಎನ್ನುವುದು ನಿಸ್ಸಂದೇಹ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮಾಧ್ಯಮ ಸಲಹೆಗಾರರಾಗಿ ಆಯ್ಕೆಯಾದಾಗಲೂ ನಮ್ಮಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಅವರ ಸಮರ್ಥನೆ ಬಲವಾಗಿತ್ತು. ಕೊನೆಗೆ ಭ್ರಮನಿರಸನರಾಗಿ ಆ ಹುದ್ದೆಯಿಂದ ಬಿಡುಗಡೆಯಾದ ನಂತರ ಒಮ್ಮೆ ಮಾತನಾಡಿದಾಗ ಅವರ ಅಭಿಪ್ರಾಯಗಳು ಬದಲಾಗಿದ್ದವು. ಪತ್ರಿಕೆಯ ಸಂಪಾದಕೀಯದ ಸ್ವರೂಪವೂ       “ ಮೋದಿ ಪ್ರಭಾವ ”ದಿಂದ ಹೊರಬಂದಂತೆ ತೋರುತ್ತಿತ್ತು. ಈ ರೀತಿಯ ದ್ವಂದ್ವವನ್ನೂ ಅವರಲ್ಲಿ ಕಂಡಿದ್ದೆ. ಚರ್ಚಿಸಿಯೂ ಇದ್ದೆ. ಆರ್ಟಿಕಲ್ 370, ಕಾಶ್ಮೀರ, ಸಿಎಎ, ಎನ್ ಆರ್ ಸಿ ಕುರಿತಂತೆ ನಮ್ಮಿಬ್ಬರ ಅಭಿಪ್ರಾಯಗಳು ಹೊಂದಲೇ ಇಲ್ಲ. ಆದರೂ ನಾನು ಮೋದಿ ಸರ್ಕಾರವನ್ನು ಖಂಡಿಸಿ ಬರೆದ ಲೇಖನಗಳು ಯಥಾವತ್ತಾಗಿ ಪ್ರಕಟಿಸುತ್ತಿದ್ದರು. ಅದು ಪತ್ರಿಕಾ ಧರ್ಮ ಎನ್ನುವುದು ಅವರ ವಾದ.

ಕರ್ನಾಟಕದ ಇತಿಹಾಸವನ್ನು ಕುರಿತು ಅವರೇ ಬರೆದಿರುವ ಹಲವು ಸಂಪುಟಗಳು ತಯಾರಿಯಲ್ಲಿದ್ದವು ಅವರ ಸಂಪಾದಕೀಯ ಲೇಖನಗಳ ಸಂಗ್ರಹ ಕೃತಿಗೆ ನನ್ನಿಂದ ಪ್ರವೇಶಿಕೆಯನ್ನೂ ಬರೆಸಿದ್ದರು, “ ನಾ ಕಂಡಂತೆ ಭಾನುವಾರ “ ಎಂಬ ಪುಟ್ಟ ಬರಹವನ್ನು ಕೊಟ್ಟಿದ್ದೆ.  ಮಾಧ್ಯಮ ಸಲಹೆಗಾರ ಹುದ್ದೆಯನ್ನು ಬಿಟ್ಟುಹೊರಬಂದ ನಂತರ ಅವರಲ್ಲಿ ಕೊಂಚ ಭ್ರಮನಿರಸನವಾಗಿತ್ತು ಎನಿಸಿದ್ದಂತೂ ಹೌದು. ವಚನ ಚಳುವಳಿಯ ಬಗ್ಗೆ ಅಪಾರ ವಿದ್ವತ್ ಹೊಂದಿದ್ದ ಪ್ರಕಾಶ್ ಅಷ್ಟೇ ನಿರರ್ಗಳವಾಗಿ ವಚನಗಳನ್ನು ಮಾತುಕತೆಯ ನಡುವೆಯೇ ಹೇಳುತ್ತಿದ್ದುದೂ ಉಂಟು. ರಾಜಕೀಯ ಸಿದ್ಧಾಂತದ ವಿಚಾರದಲ್ಲಿ ಕೊಂಚ ತಟಸ್ಥ ನೀತಿ ಅವರದ್ದಾಗಿತ್ತು. ಜನಾಧಿಪತ್ಯ ಎನ್ನುವ ಪರಿಕಲ್ಪನೆಯನ್ನೂ ಹುಟ್ಟುಹಾಕಿದ್ದರು. ಈ ಪ್ರಯತ್ನದಲ್ಲಿದ್ದುದೂ ಹೌದು. ಚುನಾವಣಾ ಸಮೀಕ್ಷೆಗಳನ್ನು ನಡೆಸುತ್ತಿದ್ದ ಪ್ರಕಾಶ್ ಅವರ ತಂಡದಲ್ಲಿ ನನ್ನನ್ನೂ ಸೇರಿಸಿಕೊಂಡಿದ್ದರು. ಅದಕ್ಕೆ ಕಾರಣ ನಾನು ತಜ್ಞ ಎಂದಲ್ಲ, ಅಭಿಮಾನದಿಂದಷ್ಟೇ.

ಅವರ ರಾಜಕೀಯ ಸೈದ್ಧಾಂತಿಕ ನಿಲುವುಗಳು ಭಿನ್ನ, ಕೆಲವೊಮ್ಮೆ ದ್ವಂದ್ವ. ಇದು ನಮ್ಮಿಬ್ಬರ ನಡುವೆ ಚರ್ಚೆಗಳನ್ನು ಬೆಳೆಸಿದವೇ ಹೊರತು ಗೋಡೆ ನಿರ್ಮಿಸಲಿಲ್ಲ. ಈ ಚರ್ಚೆಗಳಲ್ಲಿ ಅವರಿಂದ ತಿಳಿದುಕೊಂಡ ವಿಚಾರಗಳು ಸಾಕಷ್ಟಿವೆ. ನನಗಿಂತಲೂ ಐದೇ ವರ್ಷ ಹಿರಿಯರು. ಸಾಯುವ ವಯಸ್ಸಂತೂ ಅಲ್ಲ. ಇನ್ನೂ ಇರಬೇಕಿತ್ತು ಎನ್ನಿಸುವ ವ್ಯಕ್ತಿತ್ವ. ಇಂದು ನಮ್ಮನ್ನು ಅಗಲಿದ್ದಾರೆ. ಸಂಪಾದಕ-ಬರಹಗಾರನ ಸಂಬಂಧ ಎಷ್ಟು ಗಾಢವಾಗಿರಬಹುದು ಎಂದು ಆಂದೋಲನ ಪತ್ರಿಕೆಯ ರಾಜಶೇಖರ ಕೋಟಿ ಹೋದಾಗ ಭಾಸವಾಗಿತ್ತು ಈಗ ಮತ್ತೊಮ್ಮೆ ಅದೇ ಭಾವ. 15 ವರ್ಷಗಳ ಪಯಣದಲ್ಲಿ ಅಂಬಿಗನ ನಿರ್ಗಮನ ಸಹಿಸುವುದು ಸುಲಭವಲ್ಲ.

ಹೋಗಿ ಬನ್ನಿ ಪ್ರಕಾಶ್. ನೀವಿತ್ತ ಬೌದ್ಧಿಕ ಸರಕು ಮತ್ತಷ್ಟು ವೃದ್ಧಿಯಾಗಿ ವಿತರಣೆಯಾಗುತ್ತದೆ ಎಂಬ ಭರವಸೆಯ ಮೂಲಕವೇ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...